ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರಿಸ್ಥಿತಿಯಲ್ಲಿ 'ಮೀನ್ ವರ್ಲ್ಡ್ ಸಿಂಡ್ರೋಮ್'

Last Updated 7 ಸೆಪ್ಟೆಂಬರ್ 2020, 9:54 IST
ಅಕ್ಷರ ಗಾತ್ರ

ಕೋವಿಡ್ ಮಹಾಮಾರಿಯು ನಮ್ಮೆಲ್ಲರ ಜೀವನವನ್ನು ಅನಿಶ್ಚಿತತೆಯ ಕಡೆಗೆ ತಳ್ಳಿದೆ. ಸಾಮಾನ್ಯ ಜನರಲ್ಲದೆ ಮುಂಚೂಣಿಯಲ್ಲಿರುವ ವಾರಿಯರ್ಸ್‌ಗಳನ್ನು ಸಹ ಆತಂಕಕ್ಕೆ ದೂಡಿದೆ. ಸಮೂಹ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕೋವಿಡ್-19ರ ಬಗೆಗಿನ ಮಾಹಿತಿಗಳು, ಅಂಕಿ–ಅಂಶಗಳು, ಸಾವಿನ ಸಂಖ್ಯೆ ಮುಂತಾದ ಅಂಶಗಳಿಂದ ಎಲ್ಲರ ಮನಸ್ಸು ಆತಂಕಕ್ಕೆ ಒಳಗಾಗಿದೆ. ಟಾಗೆ೯ಟ್ ಟೆಸ್ಟಿಂಗ್‌ನ ಹೆಸರಿನಲ್ಲಿ ಜನಸಾಮಾನ್ಯರನ್ನು ಅನಾವಶ್ಯಕವಾಗಿ ಪರೀಕ್ಷೆಗೆ ಒಳಪಡಿಸಿ ಬೇಡದ ಆತಂಕಗಳನ್ನು ಜನಸಾಮಾನ್ಯರ ಮೇಲೆ ಹೇರುವಂತಾಗಿದೆ. ಮಾನಸಿಕವಾಗಿ ಸಧೃಡವಾಗಿಲ್ಲದವರು, ದುಬ೯ಲರಿಗೆ ಇದರಿಂದ ಮೀನ್‌ ವರ್ಲ್ಡ್ ಸಿಂಡ್ರೋಮ್‌ಗೆ ತುತ್ತಾಗುವಂತಾಗಿದೆ.

ಏನಿದು ಮೀನ್ ವರ್ಲ್ಡ್ ಸಿಂಡ್ರೋಮ್ ( Mean World Syndrome ) ?

ಸಮೂಹ ಮಾಧ್ಯಮಗಳಿಂದ ಅಥವಾ ಡೂಮ್ ಸ್ಕ್ರೋಲಿಂಗ್‌ನಿಂದ ಆತಂಕಕಾರಿ ವಿಷಯಗಳನ್ನು ತಿಳಿದುಕೊಂಡಾಗ ಮನಸ್ಸು ಅನಾವಶ್ಯಕವಾಗಿ ಆತಂಕಕ್ಕೆ ಒಳಗಾಗುತ್ತದೆ. ಇಡೀ ಪ್ರಪಂಚವು ಭಯಾನಕ ಎಂಬ ಭಾವವನ್ನು ಉಂಟುಮಾಡುತ್ತದೆ. ಸುತ್ತಮುತ್ತಲಿನ ಸ್ಥಳ ಜನ ಯಾರೂ ಸುರಕ್ಷಿತವಲ್ಲ ಎಂಬ ಭಾವನೆಯನ್ನು ಮೂಡಿಸುತ್ತದೆ. ಮತ್ತೆ ಮತ್ತೆ ಇಂತಹ ಆತಂಕಕಾರಿ ವಿಷಯಗಳನ್ನು ಅದರ ಬಗ್ಗೆ ಮಾಹಿತಿಯನ್ನು ಕಲೆ ಹಾಕಬೇಕು ಎಂಬಂತಾಗುತ್ತದೆ. ಮನಸ್ಸು ಖಿನ್ನತೆಗೆ ಒಳಗಾಗುತ್ತದೆ. ಕರುಳು ಕಿವುಚುವಂತಹ ಅಸಮಾಧಾನ ಮನಸ್ಸಲ್ಲಿ ಹುಟ್ಟುತ್ತದೆ. ಭವಿಷ್ಯ ಶೂನ್ಯ ಎಂಬ ಭಾವ ಮೂಡುತ್ತದೆ. ನಾವು ನಮ್ಮ ಮನಸ್ಸಿನಲ್ಲಿ ನೈಜವಲ್ಲದ, ಅವಾಸ್ತವಿಕ, ಅನಾರೋಗ್ಯಕರ, ನಕಾರಾತ್ಮಕ ಧೋರಣೆಯನ್ನು ಒಳಗೊಂಡ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇವೆ. ಆತಂಕಕಾರಿ ಮಾನಸಿಕ ಗೀಳಿಗೆ ಒಳಗಾಗುತ್ತೇವೆ. ಮೀನ್ ವರ್ಲ್ಡ್ ಸಿಂಡ್ರೋಮ್ ಎಂದರೆ ನಾವು ಪ್ರಪಂಚವನ್ನು ಪ್ರತಿಕೂಲ, ಕಠಿಣ ಹಾಗೂ ಕ್ರೂರ ಎಂದು ಭಾವಿಸುವುದಾಗಿದೆ.

ಮೀನ್ ವಲ್ಡ್೯ ಸಿಂಡ್ರೋಮ್‌ನಿಂದಾಗುವ ದುಷ್ಪರಿಣಾಮಗಳು;

• ಮನಸ್ಸನ್ನು ಅನಾವಶ್ಯಕ ಆತಂಕ ಹಾಗೂ ಖಿನ್ನತೆಗೆ ಎಡೆಮಾಡುತ್ತದೆ.
• ಮನಸ್ಸಿನಲ್ಲಿ ನಕಾರಾತ್ಮಕ ಧೋರಣೆ ಬೆಳೆಯುವಂತೆ ಮಾಡುತ್ತದೆ.
• ನಾವಲ್ಲದೆ ನಮ್ಮ ಅವಲಂಬಿತರ ಮೇಲೆಯೂ ಸಹ ಅನಾವಶ್ಯಕ ಆತಂಕ ಸೃಷ್ಠಿಸುತ್ತದೆ.
• ಹಠಾತ್ ನಡವಳಿಕೆಗಳಿಗೆ ಪ್ರಚೋದಿಸುತ್ತದೆ.
• ಆತಂಕದ ಪರಿಸ್ಥಿತಿಯಿಂದ ಹೊರಬರಲು ಹಾಗೂ ರಕ್ಷಿಸಿಕೊಳ್ಳಲು ಹಠಾತ್ ಖರೀದಿ ( Impulsive Buying ) ಹಾಗೂ ಆರ್ಥಿಕ ಸಂಕಷ್ಟಕ್ಕೆ ಒಡ್ಡುತ್ತದೆ.

ಇದರಿಂದ ಹೊರಬರಲು ಮಾಡಬಹುದಾದದ್ದೇನು ?

• ಅನಾವಶ್ಯಕವಾಗಿ ಒಂದು ವಿಷಯದ ಬಗ್ಗೆ ಸಮೂಹ ಮಾಧ್ಯಮಗಳಿಂದ ವಿಷಯಗಳನ್ನು ಕಲೆಹಾಕುವುದನ್ನು ದೂರಮಾಡಬೇಕು.
• ಪ್ರಪಂಚ ಬದುಕಲು ಒಂದು ಸುರಕ್ಷಿತ ಜಾಗ ಎಂಬುದನ್ನು ಮನಗೊಳ್ಳಬೇಕು.
• ಈಗಿರುವ ಪರಿಸ್ಥಿತಿಯು ತಾತ್ಕಾಲಿಕ, ಭವಿಷ್ಯದಲ್ಲಿ ಒಳ್ಳೆಯ ದಿನಗಳು ಕಾದಿವೆ ಎಂಬ ಆಶಾಭಾವನೆಯನ್ನು ಮೂಡಿಸಿಕೊಳ್ಳಬೇಕು.
• ಆತ್ಮಸ್ಥೈರ್ಯಕ್ಕೆ ಎಲ್ಲವನ್ನು ಗೆಲ್ಲುವ ಸಂಭಾವ್ಯವಿದೆಯೆಂಬುದನ್ನು ಮನಗೊಳ್ಳಬೇಕು.
• ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಬದಲಾವಣೆಗಳನ್ನು ತಂದುಕೊಳ್ಳುವುದು ಅವಶ್ಯಕ ಎಂಬುದನ್ನು ಅರಿಯಬೇಕು.
• ಸಮೂಹ ಮಾಧ್ಯಮಗಳಿಂದ ಯಾವುದು ನಮಗೆ ಅವಶ್ಯಕ, ಯಾವುದು ಅನಾವಶ್ಯಕ ಎಂಬುದನ್ನು ಮನಗೊಳ್ಳಬೇಕು.
• ಆತಂಕ ಖಿನ್ನತೆಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು.
• ಮನಸ್ಸನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಅವಶ್ಯಕವಿರುವ ವ್ಯಾಯಾಮ, ಧ್ಯಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
• ಉತ್ತಮ ಜೀವನಶೈಲಿ, ಸಕಾರಾತ್ಮಕ ಚಿಂತನೆ, ಆಶಾಭಾವದೊಂದಿಗೆ ಬದುಕಲು ಕಲಿಯಬೇಕು.

ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT