ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಗುಣಮುಖರಲ್ಲಿ ಕಫದ ಸಮಸ್ಯೆ ಹೆಚ್ಚು

ಕೊರೊನಾ ಒಂದಿಷ್ಟು ತಿಳಿಯೋಣ
Last Updated 11 ನವೆಂಬರ್ 2020, 21:05 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ಬಂದ ರೋಗಿಗಳಲ್ಲಿ ಶ್ರವಣ ಸಮಸ್ಯೆಗಳು ಕಂಡುಬಂದ ಉದಾಹರಣೆಗಳು ಇಲ್ಲ. ಹೀಗಾಗಿ ಕಿವಿಗಳ ಮೇಲೆ ಪರಿಣಾಮ ಉಂಟಾಗುತ್ತದೆಯೋ, ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ರುಚಿ ಹೊರಟು ಹೋಗುವ ಸಮಸ್ಯೆ ಇದೆ. ಆದರೆ, ಕೆಲವು ದಿನಗಳಲ್ಲೇ ಇದೂ ಸರಿ ಹೋಗುತ್ತಿದೆ. ಸಾಮಾನ್ಯವಾಗಿ ವೈರಲ್‌ ಫೀವರ್‌ ಬಂದಾಗಲೂ ಈ ಸಮಸ್ಯೆ ಕಂಡುಬರುತ್ತದೆ. ಅದು ಕೂಡ ಕ್ರಮೇಣ ಸರಿಯಾಗುತ್ತದೆ.

ಶೀತ, ಕೆಮ್ಮು, ಗಂಟಲು ನೋವಿನ ಪ್ರಕರಣಗಳೆಲ್ಲವೂ ಕೋವಿಡ್‌ ಆಗಿರುವುದಿಲ್ಲ. ಈ ಲಕ್ಷಣಗಳ ಜೊತೆ ಮೈಕೈ ನೋವು, ಸುಸ್ತು ಇರುವವರಿಗೆ ಕೋವಿಡ್‌ ಟೆಸ್ಟ್‌ ಮಾಡಿಸುವಂತೆ ಕಳುಹಿಸುತ್ತೇವೆ. ಮುಖ ಸೊಟ್ಟಗಾದ 4–5 ಪ್ರಕರಣಗಳು ನನ್ನ ಬಳಿ ಬಂದಿದ್ದವು. ಬೇರೆ ವೈರಲ್‌ ಫೀವರ್‌ ಬಂದಾಗಲೂ ಹೀಗಾಗುತ್ತದೆ. ಅದೂ ಚಿಕಿತ್ಸೆಯ ನಂತರ ಸರಿಹೋಗಿದೆ. ಇದು ಕೋವಿಡ್‌ನಿಂದಲೇ ಎನ್ನಲೂ ಸಾಧ್ಯವಿಲ್ಲ. ಏಕೆಂದರೆ ಹೀಗೆ ಬಂದವರಿಗೆ ಕೋವಿಡ್‌ ಟೆಸ್ಟ್‌ ಮಾಡಿಸಿದಾಗ ಒಂದಿಬ್ಬರಿಗೆ ನೆಗೆಟಿವ್‌ ಎಂದು ಬಂದಿದೆ. ಉಳಿದವರ ವರದಿ ಏನಾಯಿತೆಂದೂ ರೋಗಿಗಳು ತಿಳಿಸಲಿಲ್ಲ. ಹೀಗಾಗಿ ಇದನ್ನು ಕೋವಿಡ್‌ನ ಪರಿಣಾಮ ಎನ್ನಲೂ ಸಾಧ್ಯವಿಲ್ಲ ಎನ್ನುತ್ತಾರೆ ದಾವಣಗೆರೆಯ ಕಿವಿ–ಮೂಗು–ಗಂಟಲು ತಜ್ಞ ಡಾ. ಎ.ಎಂ.ಶಿವಕುಮಾರ್‌.

ಕೋವಿಡ್ ಪೀಡಿತರಾಗಿ ಗುಣಮುಖರಾದವರಿಗೆ ಕಫದ ಸಮಸ್ಯೆ ಕಂಡುಬಂದಿದೆ. ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆನಿಸುತ್ತದೆ ಎಂದು ಹೇಳಿಕೊಂಡು ಹಲವು ರೋಗಿಗಳು ನನ್ನ ಬಳಿ ಬಂದಿದ್ದಾರೆ. ಕೋವಿಡ್‌ ಬಂದವರಿಗೆ ಕಫ ಗಟ್ಟಿಯಾಗುವುದರಿಂದ ಇಂಥ ಪರಿಣಾಮ ಉಂಟಾಗುತ್ತದೆ. ಇವರಿಗೆ ಉಳಿದ ಯಾವ ಲಕ್ಷಣಗಳೂ ಇರುವುದಿಲ್ಲ. ಇಂಥವರಿಗೆ ಕಫ ಕರಗುವ ಚಿಕಿತ್ಸೆ ನೀಡಲಾಗುತ್ತದೆ. ಬೆಳಿಗ್ಗೆ–ಮಧ್ಯಾಹ್ನ–ರಾತ್ರಿ ಹಬೆ ತೆಗೆದುಕೊಳ್ಳುವುದು ಈ ಸಮಯದಲ್ಲಿ ಉತ್ತಮ. ಹಬೆಯು ಕಫವನ್ನು ಕರಗಿಸುವುದರಿಂದ ರೋಗಿಗಳಿಗೆ ಉಸಿರಾಟ ಸರಾಗವಾಗುತ್ತದೆ. ಸಾಮಾನ್ಯ ಶೀತ–ಕೆಮ್ಮು–ಗಂಟಲು ನೋವು ಇರುವವರಿಗೂ ಈ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಕಾಯಂ ಕಫದ ಸಮಸ್ಯೆ ಇರುವವರು ನಿಯಮಿತವಾಗಿ ಈ ಪದ್ಧತಿ ಅನುಸರಿಸುವುದು ಸೂಕ್ತ.

ಕೋವಿಡ್‌ ಗುಣಮುಖರಾದವರಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆಯೂ ಕಂಡುಬಂದಿದೆ. ಕೋವಿಡ್‌ಗೆ ನಿಗದಿತ ಔಷಧ ಇರದ ಕಾರಣ, ಅದಕ್ಕೆ ನೀಡಲಾಗುವ ಮಾತ್ರೆಗಳಿಂದ ಗ್ಯಾಸ್ಟ್ರಿಕ್‌ ಉಂಟಾಗುತ್ತದೆ. ಇದಕ್ಕೂ ಔಷಧ, ಚಿಕಿತ್ಸೆಗಳು ಲಭ್ಯವಿವೆ. ವೈದ್ಯರ ಸಲಹೆ ಪಡೆಯುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT