ಭಾನುವಾರ, ಜನವರಿ 17, 2021
20 °C

ಕೊರೊನಾ ಒಂದಿಷ್ಟು ತಿಳಿಯೋಣ: ‘ಲಸಿಕೆ ಪಡೆಯುವ ಮುನ್ನ, ನಂತರ ಮದ್ಯದಿಂದ ದೂರವಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುವ ಮೊದಲು ಹಾಗೂ ನಂತರ ಮದ್ಯಪಾನದಿಂದ ದೂರ ಇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ರೋಗ ನಿರೋಧಕ ಶಕ್ತಿಯ ಮೇಲೆ ಮದ್ಯವು ತೀವ್ರ ಪರಿಣಾಮ ಬೀರುವುದು ಇದಕ್ಕೆ ಕಾರಣ.

ಜನವರಿ 6ರಂದು ಬಿಬಿಸಿಯಲ್ಲಿ ಪ್ರಸಾರವಾದ ‘ದಿ ಟ್ರಥ್‌ ಅಬೌಟ್‌ ಬೂಸ್ಟಿಂಗ್‌ ಯುವರ್‌ ಇಮ್ಯೂನ್‌ ಸಿಸ್ಟಮ್‌’ ಸಾಕ್ಷ್ಯಚಿತ್ರದಲ್ಲಿ ಈ ಬಗ್ಗೆ ಬೆಳಕು ಚೆಲ್ಲಲಾಗಿದೆ. ತುರ್ತು ಔಷಧ ತಜ್ಞರೊಬ್ಬರೇ ಖುದ್ದಾಗಿ ಮೂರು ಗ್ಲಾಸ್‌ ಮದ್ಯ ಸೇವಿಸುವ ಮುನ್ನ ಹಾಗೂ ನಂತರ ರಕ್ತದ ಮಾದರಿಯನ್ನು ಪರೀಕ್ಷೆಗೆ ನೀಡಿದರು. ಕೇವಲ ಮೂರು ಗ್ಲಾಸ್‌ ಮದ್ಯ ಸೇವನೆಯಿಂದ ರಕ್ತದಲ್ಲಿರುವ ಬಿಳಿ ಲಿಂಫೋಸೈಟ್ ಕಣ (ದುಗ್ಧರಸದಲ್ಲಿರುತ್ತದೆ)ಗಳ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದ್ದು ಕಂಡುಬಂತು. ಈ ಕಣಗಳು ದೇಹದ ಮೇಲೆ ದಾಳಿ ನಡೆಸುವ ವೈರಸ್‌ ಹಾಗೂ ಇನ್ನಿತರ ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ಮಹತ್ವದ ಕೆಲಸ ಮಾಡುತ್ತವೆ. ಮದ್ಯ ಸೇವನೆಯಿಂದಾಗಿ ಈ ಕಣಗಳ ಸಂಖ್ಯೆ ಕಡಿಮೆಯಾಗುವುದರಿಂದ ಅಥವಾ ಧಕ್ಕೆಯಾಗುವುದರಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ.

ಷೋನಲ್ಲಿ ಭಾಗವಹಿಸಿದ್ದ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದ ತಜ್ಞೆ ಪ್ರೊ. ಶೀನಾ ‘ಲಸಿಕೆಗೆ ಉತ್ತಮವಾಗಿ ಪ್ರತಿಕ್ರಿಯಿಸಬೇಕಾದರೆ ನಿಮ್ಮ ದೇಹದ ಪ್ರತಿರಕ್ಷಕ ಗುಣವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವುದಕ್ಕಿಂತ ಕನಿಷ್ಠ ಎರಡು ವಾರ ಮೊದಲು ಹಾಗೂ ನಂತರ 6 ವಾರಗಳ ಕಾಲ ಮದ್ಯ ಸೇವನೆಯಿಂದ ದೂರ ಇರಬೇಕು’ ಎಂದಿದ್ದಾರೆ.

ರಷ್ಯಾದ ಸ್ಪುಟ್ನಿಕ್‌ ಕೋವಿಡ್‌ ಲಸಿಕೆ ತಯಾರಕರಾದ ಅಲೆಕ್ಸಾಂಡರ್‌ ಜಿಂಟ್ಸ್‌ಬರ್ಗ್‌ ಕೂಡ ಇದನ್ನೇ ಹೇಳಿದ್ದರು. ನಿತ್ಯ ಒಂದು ಗ್ಲಾಸ್‌ ಮದ್ಯ ಸೇವಿಸುವವರಿಗೆ ನ್ಯುಮೋನಿಯ ಬರುವ ಸಾಧ್ಯತೆ ಕೂಡ ಜಾಸ್ತಿ ಎಂಬುದು ಈಗಾಗಲೇ ಸಾಬೀತಾಗಿದೆ ಎನ್ನುತ್ತಾರೆ ತಜ್ಞರು.

ಮದ್ಯ ಸೇವಿಸುವವರಲ್ಲಿ ಕೋವಿಡ್‌–19 ಬರುವ ಸಾಧ್ಯತೆಯೂ ಹೆಚ್ಚು, ಇದಕ್ಕೆ ಕಾರಣ ಮದ್ಯವು ದೇಹದ ಪ್ರತಿರಕ್ಷಕ ಗುಣವನ್ನು ದುರ್ಬಲಗೊಳಿಸುವುದು. ಕೇವಲ ಕೊರೊನಾ ಸೋಂಕು ಮಾತ್ರವಲ್ಲ, ಮದ್ಯವ್ಯಸನಿಗಳಿಗೆ ಬೇರೆ ಸಾಂಕ್ರಾಮಿಕ ರೋಗ ತಗಲುವ ಸಾಧ್ಯತೆ ಕೂಡ ಜಾಸ್ತಿ, ಹಾಗೆಯೇ ಚೇತರಿಸಿಕೊಳ್ಳಲು ತೆಗೆದುಕೊಳ್ಳುವ ಸಮಯವೂ ಹೆಚ್ಚು ಎನ್ನುತ್ತಾರೆ ಪ್ರೊ. ಶೀನಾ.

ಸದ್ಯದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಅವಕಾಶ ಇಲ್ಲ ಎಂದು ನಿರ್ಲಕ್ಷ್ಯ ತೋರುವ ಹಾಗಿಲ್ಲ. ತಿಂಗಳುಗಟ್ಟಲೆ ಮದ್ಯದಿಂದ ದೂರವಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಲಸಿಕೆಗೆ ಉತ್ತಮವಾಗಿ ಸ್ಪಂದಿಸಬಹುದು.

ವ್ಯಸನಿಗಳಲ್ಲಿ ರೋಗ ನಿರೋಧಕ ಶಕ್ತಿ ನಿಯಂತ್ರಿಸುವ ಅಂಗ ಯಕೃತ್ತು (ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆ ನಿಯಂತ್ರಿಸಲು ಪ್ರೊಟೀನ್‌ ತಯಾರಿಸುವ ಅಂಗ) ಹಾಗೂ ಹೊಸ ಪ್ರತಿರಕ್ಷಕ ಕೋಶ ತಯಾರಿಸುವ ಅಸ್ಥಿಮಜ್ಜೆಯ ಆಕರಕೋಶಗಳ ಮೇಲೆ ಮದ್ಯವು ದುಷ್ಪರಿಣಾಮ ಬೀರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು