ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ | ಅಂಡಾಶಯದಲ್ಲಿ ನೀರುಗುಳ್ಳೆ ಅಪಾಯವೇ?

Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ನಾನು ಮೂವತ್ತೆರಡು ವರ್ಷದ ವಿವಾಹಿತ ಮಹಿಳೆ. ನನಗೆ ಎಡಹೊಟ್ಟೆಯ ಕೆಳಗೆ ಆಗಾಗ ನೋವು ಕಾಣಿಸುತ್ತದೆ. ವೈದ್ಯರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ ಮಾಡಿಸಿ ಅಂಡಾಶಯದಲ್ಲಿ ನೀರುಗುಳ್ಳೆ ಇದೆ ಎಂದು ಹೇಳಿದ್ದರು ಹಾಗೂ ಮುಟ್ಟಿನ ನಂತರ 28 ದಿನ ತೆಗೆದುಕೊಳ್ಳುವ 3 ತಿಂಗಳಿಗಾಗುವಷ್ಟು ಮಾತ್ರೆಯನ್ನು ಕೊಟ್ಟಿದ್ದಾರೆ. 3 ತಿಂಗಳ ನಂತರ ಮತ್ತೆ ಸ್ಕ್ಯಾನ್‌ ಮಾಡಿಸಿ ಎಂದು ಹೇಳಿದ್ದರು. ನನಗೆ ಇಬ್ಬರು ಮಕ್ಕಳಿದ್ದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆಗಿದೆ. ದಯವಿಟ್ಟು ಇದರಿಂದ ಆಗುವ ತೊಂದರೆ ಹಾಗೂ ಪರಿಹಾರವನ್ನು ತಿಳಿಸಿ?

ಊರು, ಹೆಸರು ಬೇಡ

ನಿಮಗಾಗಿರುವುದು ಅಂಡಾಶಯದ ಸಿಸ್ಟ್ ಅಥವಾ ದ್ರವ ತುಂಬಿದ ನೀರು ಗುಳ್ಳೆಗಳಷ್ಟೇ. ಅಂಡಾಶಯದಲ್ಲಿ ಹೆಣ್ತನದ ಹಾರ್ಮೋನುಗಳು ಉತ್ಪಾದನೆಯಾಗುವುದು, ಅಂಡೋತ್ಪತ್ತಿಯಾಗುವುದು ಹೀಗೆ ಸದಾ ಕಾರ್ಯಚಟುವಟಿಕೆ ನಡೆಯುತ್ತಿರುವುದರಿಂದ ಸಿಸ್ಟ್‌ಗಳಾಗುವುದು ಸಾಮಾನ್ಯ. ಇವುಗಳಿಂದ ಹೆಚ್ಚಿನ ಸಂದರ್ಭದಲ್ಲಿ ಯಾವುದೇ ಅಪಾಯವಾಗುವುದಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ಸಿಸ್ಟ್‌ಗಳು 3ಸೆಂ.ಮೀ ನಿಂದ 7ಸೆಂ.ಮೀ. ತನಕ ದೊಡ್ಡದಾಗಬಹುದು ಅದಕ್ಕಿಂತ ದೊಡ್ಡದಾಗುವುದಿಲ್ಲ. ಈ ಸಿಸ್ಟ್‌ಗಳಲ್ಲಿ ಎರಡು–ಮೂರು ಥರವಿದೆ. ‘ಫಾಲಿಕಲ್ ಸಿಸ್ಟ್’- ಅಂದರೆ ಅಂಡೋತ್ಪತ್ತಿ ಆಗದೇ ಇದ್ದಾಗ ಅಥವಾ ಆದ ಮೇಲೆ ಕೋಶಿಕೆಯಲ್ಲಿನ ದ್ರವ ಹೀರಲ್ಪಡದೇ ಆಗುವ ಸಿಸ್ಟ್. ಹೆಚ್ಚೆಂದರೆ 5ಸೆಂ.ಮೀ ದೊಡ್ಡದಾಗುತ್ತದೆ. ಆದರೆ ಏನು ತೊಂದರೆ ಕೊಡುವುದಿಲ್ಲ. ಕೆಲವೊಮ್ಮೆ ಹಾಗೆಯೇ ಒಡೆದು ಹೋಗಬಹುದು ಮತ್ತು ಸ್ವಲ್ಪ ದೊಡ್ಡ ಸಿಸ್ಟ್ ಇದ್ದಾಗ ಆಗಾಗ್ಗೆ ಕೆಳ ಹೊಟ್ಟೆನೋವು, ಮುಟ್ಟಿನ ರಕ್ತಸ್ರಾವದಲ್ಲಿ ಏರುಪೇರಾಗುವುದು ಮತ್ತು ಲೈಂಗಿಕ ಸಂಪರ್ಕದಲ್ಲಿ ಸ್ವಲ್ಪ ನೋವಾಗುವುದು ಆಗಬಹುದು. ಇದು ನಾಲ್ಕಾರು ತಿಂಗಳಲ್ಲಿ ಹಾಗೆಯೇ ಕರಗಿಹೋಗುತ್ತದೆ. ಲೂಟಿನ್‌ ಸಿಸ್ಟ್‌ಗಳು ಅಂಡೋತ್ಪತ್ತಿಯ ನಂತರ ಉಂಟಾಗುವ ಕಾರ್ಪಸ್ ಲೂಟಿಯಂ ಕರಗದೇ ಸಿಸ್ಟ್ರೀತಿಯಲ್ಲಿ ಹಾಗೆಯೇ ಇರುವುದರಿಂದ ಉಂಟಾಗಬಹುದು. ಇವುಗಳಲ್ಲಿ ರಕ್ತಸ್ರಾವ ಆಗಿ ಕೆಲವೊಮ್ಮೆ ನೋವು ಉಂಟಾಗಬಹುದು. ಪಿಸಿಒಡಿಯಲ್ಲಿ ಕೂಡಾ ಹಲವು ಸಿಸ್ಟ್‌ಗಳಾಗುತ್ತವೆ.

ಅಂಡಾಶಯದ ಕಾರ್ಯಚಟುವಟಿಕೆಗೆ ವಿಶ್ರಾಂತಿ ಕೊಡಲು ಕೆಲವೊಮ್ಮೆ ಸಿಸ್ಟ್‌ಗಳಿದ್ದಾಗ ಮೂರು ತಿಂಗಳು ಒಸಿಪಿಲ್ಸ್‌ಗಳನ್ನು (ಸಂತಾನ ನಿಯಂತ್ರಣದ ಗುಳಿಗೆಗಳು) ಕೊಡುತ್ತಾರೆ. ನಿಮಗೂ ಅದನ್ನೇ ಕೊಟ್ಟಿದ್ದಾರೆ. ನೀವೇನು ಭಯಪಡುವ ಅಗತ್ಯವಿಲ್ಲ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್‌ನಿಂದಲೇ ಅಂಡಾಶಯದ ಸಿಸ್ಟ್‌ಗಳನ್ನು ಪತ್ತೆಹಚ್ಚಿ ಏನಾದರೂ ತೊಂದರೆಯಾದಲ್ಲಿ ಚಿಕಿತ್ಸೆ ಕೊಡಬಹುದು. ನೀವೇನು ಭಯಪಡಬೇಡಿ. ಹೆಚ್ಚಿನ ಸಂದರ್ಭಗಳಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಅಗತ್ಯ ಬಂದರೆ ವೈದ್ಯರ ಸಲಹೆ ಪಡೆಯಿರಿ.

ಒಂದುವೇಳೆ ಸಣ್ಣ ಪುಟ್ಟ ನೀರುಗುಳ್ಳೆಗಳಿಗೆ ನೀವು ಲಾಪ್ರೊಸ್ಕೋಪಿ ಅಥವಾ ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಸಿದರೂ ಮತ್ತೆ ಅಂತಹ ಗುಳ್ಳೆಗಳು ಮರುಕಳಿಸಬಹುದು.ಆದ್ದರಿಂದ ಸರಿಯಾದ ತಜ್ಞರ ಸಲಹೆಯಂತೆ ಮುಂದುವರಿಯಿರಿ.

***

ನನಗೆ ಮದುವೆ ಆಗಿ ನಾಲ್ಕು ತಿಂಗಳು ಕಳೆದಿದೆ. ಮದುವೆಗೆ ಮೊದಲು ಮುಟ್ಟಿನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಸರಿಯಾಗಿ ತಿಂಗಳಿಗೆ ಒಮ್ಮೆ ಮುಟ್ಟಾಗುತ್ತಿತ್ತು. ಆದರೆ ಮದುವೆಯ ನಂತರ ಒಮ್ಮೆ ಎರಡು ತಿಂಗಳು ಐದು ದಿನಗಳ ನಂತರ ಮುಟ್ಟಾಯ್ತು. ಇನ್ನೊಮ್ಮೆ ಒಂದೂವರೆ ತಿಂಗಳಿಗೆ ಆಗುತ್ತಿದೆ. ನಾನು ಗರ್ಭಿಣಿ ಆಗಬಹುದು ಎಂದು ಖುಷಿ ಪಡುವ ಸಮಯದಲ್ಲಿ ಮುಟ್ಟಾಯಿತು. ಯಾಕೆ ಗರ್ಭಿಣಿ ಆಗುತ್ತಿಲ್ಲ ದಯವಿಟ್ಟು ತಿಳಿಸಿ?

ಊರು, ಹೆಸರು ಬೇಡ

ನಿಮಗೆ ಸರಿಯಾಗಿ ಮುಟ್ಟಾಗುತ್ತಿಲ್ಲವೆಂದರೆ ತಿಂಗಳು ತಿಂಗಳು ಸರಿಯಾಗಿ ಅಂಡೋತ್ಪತ್ತಿ ಆಗುತ್ತಿಲ್ಲವೆಂದರ್ಥ. ನಿಮಗೆ ಪಿಸಿಡಿ ಸಮಸ್ಯೆ ಇರಬಹುದು. ಯಾವುದಕ್ಕೂ ನೀವು ಸತಿ–ಪತಿಯರಿಬ್ಬರು ಆರು ತಿಂಗಳುಗಳ ಕಾಲ ನಿಯಮಿತವಾಗಿ ಲೈಂಗಿಕ ಸಂಪರ್ಕದಲ್ಲಿದ್ದೂ ಗರ್ಭಧಾರಣೆಯಾಗದಿದ್ದಲ್ಲಿ ತಜ್ಞವೈದ್ಯರನ್ನು ಸಂಪರ್ಕಿಸಿ, ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಸಮತೂಕ ಹೊಂದಲು ಪ್ರಯತ್ನಿಸಿ. ನಿಮ್ಮ ವಯಸ್ಸು ಎಷ್ಟು ಎಂದು ತಿಳಿಸಿಲ್ಲ. ನಿಮಗೆ 27ಕ್ಕೂ ಹೆಚ್ಚಾಗಿದ್ದರೆ ಅದಷ್ಟು ಬೇಗನೇ ಮಗು ಪಡೆಯಲು ಪ್ರಯತ್ನಿಸಬೇಕು.

***

ನನಗೆ 25ವಯಸ್ಸು. 2021 ಫೆಬ್ರವರಿಯಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಆಯಿತು. ಅದಕ್ಕೂ ಮೊದಲು ಮೂರು ತಿಂಗಳು ನನಗೆ ಮುಟ್ಟಾಗಿರಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಆಗಸ್ಟ್‌ನಲ್ಲಿ ಮುಟ್ಟಾಯಿತು. ನಂತರ ಇದುವರೆಗೂ ಮುಟ್ಟಾಗಿಲ್ಲ. ವೈದ್ಯರನ್ನ ಸಂಪರ್ಕಿಸಿದಾಗ ಹಾರ್ಮೋನ್ ಅಸಮತೋಲನ ಎಂದು ತಿಳಿಸಿದ್ದಾರೆ. ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗುವಾಗ 3 ಯುನಿಟ್ ರಕ್ತ ನೀಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ನನ್ನ ತೂಕ ಹೆಚ್ಚಾಗಿ ಈಗ ನಾನು 60 ಕೆಜಿ ಇದ್ದೇನೆ. ತೂಕ ಹೆಚ್ಚಾಗಿರುವುದೇ ಏನಾದರೂ ಸಮಸ್ಯೆಯೇ

ಹೆಸರು ಊರು, ತಿಳಿಸಿಲ್ಲ

ನಿಮ್ಮ ಎತ್ತರ ಎಷ್ಟೆಂದು ತಿಳಿಸಿಲ್ಲ. ನೀವು ನೂರೈವತ್ತೈದು ಸೆಂ.ಮಿ.ನಷ್ಟು ಎತ್ತರವಿದ್ದು, 60ಕೆ.ಜಿ ತೂಕವಿದ್ದರೆ ತೊಂದರೆಯಿಲ್ಲ. ಇಲ್ಲದಿದ್ದಲ್ಲಿ ನಿಮಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವುದರಿಂದ ಸಮತೂಕವನ್ನು ಕಾಯ್ದುಕೊಳ್ಳಲೇಬೇಕು. ರಕ್ತ ಹಾಕಿಸಿಕೊಳ್ಳುವುದರಿಂದ ನಿಮ್ಮ ರಕ್ತಹೀನತೆ ಸರಿಹೋಗುತ್ತದೆಯೇ ಹೊರತು ತೂಕವೇನು ಹೆಚ್ಚುವುದಿಲ್ಲ. ಅವೆರಡಕ್ಕೆ ಸಂಬಂಧವಿಲ್ಲ. ನಿಮ್ಮ ಆಹಾರಕ್ರಮ ಅಂದರೆ ಹೆಚ್ಚೆಚ್ಚು ತರಕಾರಿ, ಹಣ್ಣುಗಳು, ಬೇಳೆಕಾಳುಗಳ ಬಳಕೆ ಮಾಡಿ ಹಾಗೂ ನಿಯಮಿತವಾಗಿ ಸುಲಭದ ಕೆಲವು ವ್ಯಾಯಾಮಗಳನ್ನು ಮಾಡಿ. ಬಂಜೆತನ ಚಿಕಿತ್ಸಾ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ. ಹೃದ್ರೋಗ ತಜ್ಞರು ನಿಮಗೆ ಮಕ್ಕಳಾಗುವುದರಿಂದ ತೊಂದರೆ ಏನೂ ಆಗುವುದಿಲ್ಲವೆಂದು ತಿಳಿಸಿದ್ದರೆ ನಿಮ್ಮ ಪ್ರಯತ್ನವನ್ನು ಮುಂದುವರಿಸಿ.

***

ಮಗು ಆಗಬೇಕಾದರೆ ಎಷ್ಟು ಬಾರಿ ಲೈಂಗಿಕ ಸಂಪರ್ಕ ನಡೆಸಬೇಕು?

ಹೆಸರು, ಊರು ಬೇಡ

ತಿಂಗಳಿಗೊಮ್ಮೆ ಹೆಣ್ಣಿನಲ್ಲಿ ಒಂದೇ ಒಂದು ಅಂಡೋತ್ಪತ್ತಿಯಾಗುತ್ತದೆ (ಸುಮಾರು ಮುಟ್ಟಿನ ದಿನದಿಂದ 10ರಿಂದ16ದಿನಗಳೊಳಗಾಗಿ) ಪುರುಷರಲ್ಲಿ ವೀರ್ಯಾಣುಗಳು ಸದಾ ಇರುತ್ತವೆ. ಹೆಣ್ಣಿನಲ್ಲಿ ಅಂಡೋತ್ಪತ್ತಿಯಾಗುವ ಆಸುಪಾಸಿನಲ್ಲಿ ಅಂದರೆ 24ರಿಂದ48 ಗಂಟೆಯೊಳಗಾಗಿ ಅಂದರೆ ಋತುಫಲಪ್ರದ ದಿನಗಳಲ್ಲಿ ಲೈಂಗಿಕ ಸಂಪರ್ಕವಾದರೆ ಕೇವಲ ಒಂದೇ ಬಾರಿಗೂ ಕೂಡಾ ಗರ್ಭಧಾರಣೆಯಾಗಬಹುದು. ಹಾಗಾಗಿ ಎಷ್ಟು ಬಾರಿ ಎನ್ನುವುದು ಮುಖ್ಯವಲ್ಲ ಯಾವ ಸಂದರ್ಭದಲ್ಲಿ ಅನ್ನುವುದು ಮುಖ್ಯವಾಗುತ್ತದೆ. ಈ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ತಿಳಿಸಿರುತ್ತೇನೆ.

***

ನನ್ನ ವಯಸ್ಸು 33. ಮದುವೆ ಆಗಿ 3.6 ವರ್ಷ ಆಗಿದೆ. ನನ್ನ ಒಂದು ವೃಷಣ ಆಟ ಆಡುವಾಗ ಚೆಂಡು ಬಿದ್ದು ಹೋಗಿದೆ. ಡಾಕ್ಟರ್ ಬಳಿ ವೀರ್ಯಾಣು ಟೆಸ್ಟ್ ಮಾಡುವಾಗ 27.4 ಎಂಎಲ್ ಇದೆ ಎಂದು ಔಷದಿ ಕೊಟ್ಟಿದ್ದಾರೆ. ನನಗೆ ಮಕ್ಕಳು ಆಗುವುದಿಲ್ಲವೇ?

ಹೆಸರು, ಊರು ತಿಳಿಸಿಲ್ಲ.

ಒಂದು ವೃಷಣಕ್ಕೆ ಪೆಟ್ಟಾಗಿದ್ದರೂ ಇನ್ನೊಂದು ವೃಷಣ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಮಕ್ಕಳಾಗಲು ಏನು ತೊಂದರೆ ಇಲ್ಲ. ನಿಮ್ಮ ಚಿಕಿತ್ಸೆಯನ್ನು ಮುಂದುವರಿಸಿ. ಪೌಷ್ಟಿಕ ಆಹಾರ ಸೇವಿಸಿ. ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಾಶೀಲತೆಯನ್ನು ಹೆಚ್ಚಿಸಲು ಹಲವು ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ತಜ್ಞರು ಅವಶ್ಯವಿದ್ದಾಗ ಅವುಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಭಯಾತಂಕ ಬೇಡ ನಿಮಗೆ ಮಕ್ಕಳಾಗುತ್ತದೆ. ಚಿಕಿತ್ಸೆ ಮುಂದುವರೆಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT