ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ 'ಕೋವಿಶೀಲ್ಡ್‘ ಲಸಿಕೆ ಪ್ರಯೋಗಕ್ಕೆ ಎಸ್‌ಐಐಗೆ ಅನುಮತಿ

Last Updated 4 ಆಗಸ್ಟ್ 2020, 3:31 IST
ಅಕ್ಷರ ಗಾತ್ರ

ನವದೆಹಲಿ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌–19 ಲಸಿಕೆ ‘ಕೋವಿಶೀಲ್ಡ್‌’ನ 2ನೇ ಮತ್ತು 3ನೇ ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಲು‌ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ.

ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಕೋರಿ ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಜುಲೈ 25ರಂದು ಅರ್ಜಿ ಸಲ್ಲಿಸಿತ್ತು. ಲಸಿಕೆ ಉತ್ಪಾದನೆಗೆ ಆಸ್ಟ್ರಾಜೆನೆಕಾ ಜೊತೆ ಸೆರಂ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

ಈ ನಿರ್ಧಾರದಿಂದ ಲಸಿಕೆ ಅಭಿವೃದ್ಧಿ ಕೆಲಸ ವೇಗ ಪಡೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿ, ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಪುಣೆಯ ಬಿ.ಜೆ. ವೈದ್ಯಕೀಯ ಕಾಲೇಜು, ಪಟ್ನಾದ ರಾಜೇಂದ್ರ ಸ್ಮಾರಕ‌ ಸಂಶೋಧನಾ ಸಂಸ್ಥೆ, ಚಂಡೀಗಡದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜೋಧಪುರದ ಏಮ್ಸ್‌, ಗೋರಖಪುರದ ನೆಹರೂ ಆಸ್ಪತ್ರೆ, ವಿಶಾಖಪಟ್ಟಣದ ಆಂಧ್ರ
ವೈದ್ಯಕೀಯ ಕಾಲೇಜು ಸೇರಿದಂತೆ ದೇಶದ 17 ಸಂಸ್ಥೆಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ.

1,600 ವ್ಯಕ್ತಿಗಳ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಯಲಿದ್ದು, 18 ವರ್ಷಕ್ಕಿಂತ ಮೇಲ್ಪಟ್ಟವರು ಚಿಕಿತ್ಸೆಗೆ ಒಳಪಡಲಿದ್ದಾರೆ. 4 ವಾರಗಳಲ್ಲಿ ಎರಡು ಡೋಸ್ ಲಸಿಕೆ ನೀಡಿ ಪರೀಕ್ಷಿಸಲಾಗುತ್ತದೆ.

ಮೈಸೂರಿನಲ್ಲಿ ಲಸಿಕೆ ಟ್ರಯಲ್‌

ಮೈಸೂರು: ಕೋವಿಡ್‌–19 ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ಮೈಸೂರಿನ ಜೆಎಸ್‌ಎಸ್‌ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಅಕಾಡೆಮಿಯನ್ನು ಆಯ್ಕೆ ಮಾಡಿದೆ.

ಈ ವಿಚಾರವನ್ನು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಬಸವನಗೌಡಪ್ಪ ‘ಪ್ರಜಾವಾಣಿ‍’ಗೆ ಖಚಿತಪಡಿಸಿದ್ದು, ಪ್ರಕ್ರಿಯೆ ಇನ್ನೂ ಆರಂಭವಾಗಬೇಕಿದೆ ಎಂದರು.

‘ಕೋವಿಡ್‌ ಬಾಧಿತರನ್ನು ಈ ಪ್ರಕ್ರಿಯೆಗೆ ಒಳಪಡಿಸುವುದಿಲ್ಲ. ಬದಲಾಗಿ ಸೋಂಕು ಬಂದಿರದ, ಆರೋಗ್ಯವಂತ ವ್ಯಕ್ತಿಗಳನ್ನು ಗುರುತಿಸಲಾಗುವುದು. ಅಂಥವರಿಗೆ ಲಸಿಕೆ ನೀಡಿ ಕ್ಲಿನಿಕಲ್‌ ಟ್ರಯಲ್ ಮಾಡಲಾಗುತ್ತದೆ. ಆಗ ಸೋಂಕು ತಗುಲಿದರೂ ದೇಹದಲ್ಲಿರುವ ಪ್ರತಿಕಾಯಗಳು (ಆ್ಯಂಟಿಬಾಡಿ) ಹೋರಾಟ ನಡೆಸಿ ರೋಗ ಬಾರದಂತೆ ತಡೆಯುತ್ತವೆ’ ಎಂದು ಡಾ.ಬಸವನಗೌಡಪ್ಪ ಹೇಳಿದರು. ‘ಕೋವಿಡ್‌ ಔಷಧದ ಟ್ರಯಲ್‌ಗೂ ಅವಕಾಶ ಲಭಿಸಿದೆ. ಇದು ಸೋಂಕು ಉಲ್ಬಣಗೊಳ್ಳದಂತೆ ರಕ್ಷಣೆ ನೀಡುತ್ತದೆ. ಖಾಸಗಿ ಔಷಧ ಕಂಪನಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

ಬೆಳಗಾವಿಯ ಜೀವನ್‌ ರೇಖಾ ಆಸ್ಪತ್ರೆಯಲ್ಲೂ ಇಂಥದ್ದೊಂದು ಪ್ರಕ್ರಿಯೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT