ಶನಿವಾರ, ನವೆಂಬರ್ 28, 2020
17 °C
ಡಾ.ಕೆ.ಎಂ. ಪ್ರಸನ್ನಕುಮಾರ್

ಸಂದರ್ಶನ: ಮಧುಮೇಹ ಆರೈಕೆ, ನಿರ್ವಹಣೆಯಲ್ಲಿ ಪ್ರಗತಿ

ಸಂದರ್ಶನ: ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಡಾ.ಕೆ.ಎಂ. ಪ್ರಸನ್ನಕುಮಾರ್

ಭಾರತದಲ್ಲಿ ಕಳೆದ 25 ವರ್ಷಗಳಲ್ಲಿ ಮಧುಮೇಹಿಗಳ ಸಂಖ್ಯೆಯಲ್ಲಿ ಶೇ 60ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಸೇರಿದಂತೆ ಹಲವು ಅಧ್ಯಯನಗಳ ವರದಿ ತಿಳಿಸುತ್ತವೆ. ಮಧುಮೇಹದ ಆರೈಕೆ ಮತ್ತು ನಿರ್ವಹಣೆಯಲ್ಲಿ (ನಾಳೆ ವಿಶ್ವ ಮಧುಮೇಹ ದಿನ) ಇತ್ತೀಚಿನ ದಿನಗಳಲ್ಲಿ ಆಗಿರುವ ಬದಲಾವಣೆ ಕುರಿತು ಬೆಂಗಳೂರಿನ ಎಂಡೊಕ್ರೈನಾಲಜಿಸ್ಟ್ ಡಾ.ಕೆ.ಎಂ.ಪ್ರಸನ್ನಕುಮಾರ್ ಅವರ ಜತೆ ನಡೆಸಿದ ಸಂದರ್ಶನ ಇಲ್ಲಿದೆ.

ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾರಣಗಳೇನು?

ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ಮಧುಮೇಹಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಧುಮೇಹವನ್ನು ಜೀವನಶೈಲಿಯ ಸಮಸ್ಯೆ ಎಂದೇ ಗುರುತಿಸಲಾಗಿದೆ. ಜಡತ್ವ, ಹೆಚ್ಚಿನ ಕ್ಯಾಲೊರಿಯ ಆಹಾರ ಸೇವನೆ, ವ್ಯಾಯಾಮದ ಕೊರತೆ ಮಧುಮೇಹಕ್ಕೆ ಮುಖ್ಯ ಕಾರಣ. ಅನುವಂಶೀಯತೆಯನ್ನೂ ಅಲ್ಲಗಳೆಯಲಾಗದು. ಸ್ಥೂಲಕಾಯದಿಂದಾಗಿ ಮಕ್ಕಳಲ್ಲೂ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ರಾತ್ರಿಪಾಳಿ, ಒತ್ತಡ–ಆತಂಕದ ಕಾರಣದಿಂದಾಗಿ ಕೆಲವರಿಗೆ ಚಿಕ್ಕವಯಸ್ಸಿನಲ್ಲೇ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಮಧುಮೇಹಿಗಳಿಗೆ ಕೊರೊನಾ ಸೋಂಕು ತಗುಲಿದರೆ ಆಗುವ ಅಪಾಯವೇನು?

ಮಧುಮೇಹ ಮಾತ್ರವಲ್ಲ, ಹೃದ್ರೋಗ, ಉಸಿರಾಟದ ಸಮಸ್ಯೆ ಇದ್ದವರಿಗೆ ಸೋಂಕು ತಗುಲಿದರೆ ಕೋವಿಡ್‌ ಉಲ್ಬಣವಾಗುವ ಸಾಧ್ಯತೆ ಹೆಚ್ಚು. ದೇಹಕ್ಕೆ ವಯಸ್ಸಾದಂತೆ ಅಂಗಾಂಗಗಳಿಗೂ ವಯಸ್ಸಾಗುತ್ತದೆ. ಕಾರ್ಯಕ್ಷಮತೆ ಕ್ಷೀಣಿಸುತ್ತದೆ. ಹಾಗಾಗಿ, ರಕ್ತದೊತ್ತಡ–ಮಧುಮೇಹದಿಂದ ಬಳಲುತ್ತಿರುವ ಹಿರಿಯರು ಜಾಗ್ರತೆ ವಹಿಸಬೇಕು. ಒಂದು ವೇಳೆ ಕೋವಿಡ್ ಬಂದರೂ ಧೃತಿಗೆಡದೇ ಎದುರಿಸಬೇಕು. ಮಧುಮೇಹ ನಿಯಂತ್ರಣದಲ್ಲಿದ್ದರೆ ಸಮಸ್ಯೆ ಇಲ್ಲ. ಮಧುಮೇಹಿಗಳು ಕೋವಿಡ್‌ನಿಂದ ಗುಣಮುಖರಾದ ಉದಾಹರಣೆಗಳೂ ಇವೆ. ಆದರೆ, ಉಸಿರಾಟದ ಸಮಸ್ಯೆ ಇದ್ದವರು ಆಸ್ಪತ್ರೆಗೆ ದಾಖಲಾಗುವುದು ಅತ್ಯಗತ್ಯ.

ಇನ್ಸುಲಿನ್ ಚುಚ್ಚುಮದ್ದು ಬಳಕೆಯಲ್ಲಿ ಬದಲಾವಣೆ ಆಗಿದೆಯೇ?

ಅಮೆರಿಕದಲ್ಲಿ ಈಗಾಗಲೇ ಇನ್‌ಹೇಲ್ಡ್ ಇನ್ಸುಲಿನ್ ಬಂದಿದೆ. ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾದ ನಂತರ ಇದು ಭಾರತದಲ್ಲಿ ಬಳಕೆಗೆ ಬರುವ ಸಾಧ್ಯತೆ ಇದೆ. ಇನ್‌ಹೇಲ್ಡ್ ಇನ್ಸುಲಿನ್ ಬಾಯಿಯ ಮೂಲಕ ತೆಗೆದುಕೊಳ್ಳುವಂಥದ್ದು. ಇದನ್ನು ತೆಗೆದುಕೊಂಡ ಮಾತ್ರಕ್ಕೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎನ್ನಲಾಗದು. ಇದನ್ನು ಊಟಕ್ಕೆ ಮುನ್ನ ತೆಗೆದುಕೊಳ್ಳಬೇಕು. ಇದರ ಜತೆಗೆ ಇನ್ಸುಲಿನ್ ಚುಚ್ಚುಮದ್ದನ್ನೂ ಬಳಸಬೇಕು. ಚುಚ್ಚುಮದ್ದಿನ ಮೂಲಕ ಔಷಧಿ ನೇರವಾಗಿ ರಕ್ತನಾಳಗಳಿಗೆ ಹೋಗುತ್ತದೆ. ಆದರೆ, ಇನ್‌ಹೇಲ್ಡ್ ಇನ್ಸುಲಿನ್ ಹಾಗಲ್ಲ. ಉದಾಹರಣೆಗೆ ಇನ್‌ಹೇಲ್ಡ್ ಇನ್ಸುಲಿನ್‌ನಲ್ಲಿ 10 ಯೂನಿಟ್‌ ಬಳಸಿದರೆ, ಅದರಲ್ಲಿ 2–3ರಷ್ಟು ಯೂನಿಟ್ ಮಾತ್ರ ದೇಹಕ್ಕೆ ಹೋಗುತ್ತದೆ.

ಕೆಲವರಿಗೆ ಪ್ರತಿ 8 ಗಂಟೆ, ಮತ್ತೆ ಕೆಲವರಿಗೆ 24 ಗಂಟೆಗೊಮ್ಮೆ ಇನ್ಸುಲಿನ್ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗಿರುತ್ತದೆ. ಮಧ್ಯವಯಸ್ಕರಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಟೈಪ್–2ಗೆ ಮಾತ್ರೆ ತೆಗೆದುಕೊಳ್ಳಬೇಕಾಗುತ್ತದೆ. ಪ್ಯಾಂಕ್ರಿಯಾಸ್ ತುಂಬಾ ದುರ್ಬಲವಾದಾಗ ಮಾತ್ರೆಗಳು ಕೆಲಸ ಮಾಡುವುದಿಲ್ಲ. ಆಗ ಇನ್ಸುಲಿನ್ ಚುಚ್ಚುಮದ್ದು ಬಳಕೆ ಅನಿವಾರ್ಯ.

ಮಧುಮೇಹ ನಿರ್ವಹಣೆ ಕುರಿತು ನಿಮ್ಮ ಸಲಹೆಗಳೇನು?

ಶಿಸ್ತಿನ ಜೀವನ ನಡೆಸಿ. ವ್ಯಾಯಾಮದಂಥ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಿ. ಜಂಕ್ ಆಹಾರ ಕೈಬಿಡಿ. ಸಮತೋಲನದ ಆಹಾರ ಸೇವಿಸಿ. ಮಧುಮೇಹ ಬಂದರೂ ಗಾಬರಿಯಾಗಬೇಡಿ. ಅದನ್ನು ಸೂಕ್ತವಾಗಿ ನಿರ್ವಹಿಸುವ ಕಲೆ ರೂಢಿಸಿಕೊಳ್ಳಿ. ಮಧುಮೇಹವಿದ್ದರೂ 70–80 ವರ್ಷಗಳ ಕಾಲ ಆರೋಗ್ಯಕರವಾಗಿ ಬದುಕಬಹುದು.

* ಮಧುಮೇಹ ಆರೈಕೆ ಮತ್ತು ನಿರ್ವಹಣೆಯಲ್ಲಿ ಇತ್ತೀಚೆಗೆ ಆಗಿರುವ ಬದಲಾವಣೆಗಳೇನು?

60 ವರ್ಷಗಳ ಹಿಂದೆ ರಕ್ತದಲ್ಲಿ ಸಕ್ಕರೆ ಅಂಶ ಪರೀಕ್ಷಿಸುವುದು ಕಷ್ಟಕರವಾಗಿತ್ತು. ಮೂತ್ರ ಪರೀಕ್ಷೆ ಇಲ್ಲವೇ ರಕ್ತ ಪರೀಕ್ಷೆ ಮಾಡಬೇಕಿತ್ತು. ಇದಕ್ಕಾಗಿ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ, ಈಗ ಮನೆಯಲ್ಲೇ ಬೆರಳಿಗೆ ಪ್ರಿಕ್ ಮಾಡಿ ರಕ್ತದಲ್ಲಿ ಸಕ್ಕರೆಮಟ್ಟ ಪರೀಕ್ಷಿಸಿಕೊಳ್ಳಬಹುದು.

ಇತ್ತೀಚೆಗೆ ಸಕ್ಕರೆ ಮಟ್ಟ ಅಳೆಯಲು ನಿರಂತರ ಮಾನಿಟರಿಂಗ್ ಪರೀಕ್ಷೆಗಾಗಿ ಬಿಲ್ಲೆಯಂಥ ಉಪಕರಣ ಬಂದಿದೆ. ಒಂದು ರೂಪಾಯಿ ನಾಣ್ಯದಷ್ಟು ಅಗಲವಾಗಿರುವ ಈ ಬಿಲ್ಲೆಯನ್ನು ತೋಳಿಗೆ ಅಂಟಿಸಿ 14 ದಿನಗಳ ಕಾಲ ಇರಬಹುದು. ಇದನ್ನು ಧರಿಸಿ ಸ್ನಾನ ಮಾಡಬಹುದು, ಪ್ರಯಾಣಿಸಬಹುದು. ನಿತ್ಯದ ಕೆಲಸಗಳನ್ನೂ ಮಾಡಬಹುದು. ಈ ಬಿಲ್ಲೆ 24 ಗಂಟೆಯಲ್ಲಿ 15 ನಿಮಿಷದ ರಿಯಲ್ ಟೈಮ್ ಅವಧಿಯಲ್ಲಿ ಸಕ್ಕರೆ ಪ್ರಮಾಣ ಎಷ್ಟಿತ್ತು ಎನ್ನುವುದನ್ನು ಸೂಚಿಸುತ್ತದೆ. ನಿರಂತರವಾಗಿ ಮಾನಿಟರಿಂಗ್ ಮಾಡುತ್ತಿರುತ್ತದೆ. ಚಿಕ್ಕಮಕ್ಕಳು, ಗರ್ಭಿಣಿಯರ ಪಾಲಿಗಂತೂ ಈ ಬಿಲ್ಲೆ ವರದಾನ. ಪದೇಪದೇ ಸೂಜಿ ಚುಚ್ಚಿಕೊಂಡು ರಕ್ತ ಪರೀಕ್ಷೆ ಮಾಡಿಸುವ ಪ್ರಮೇಯದಿಂದ ಮುಕ್ತಿ ಪಡೆಯಬಹುದು. ಆಸ್ಪತ್ರೆಗೂ ಅಲೆದಾಡಬೇಕಿಲ್ಲ. ಸಕ್ಕರೆ ಪ್ರಮಾಣ ಆಧರಿಸಿ, ವೈದ್ಯರು ಸೂಚಿಸಿದ ಔಷಧಿಯನ್ನು ತೆಗೆದುಕೊಳ್ಳಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು