ಇಂದಿನ ಜಂಜಾಟದ ಜೀವನದಲ್ಲಿ ಬದುಕಿನ ಆದ್ಯತೆಗಳು ಏರುಪೇರಾಗಿವೆ. ಆಹಾರ, ಆರೋಗ್ಯ, ವ್ಯಾಯಾಮ, ನಿದ್ರೆಯಂತಹ ಮೂಲಭೂತ ಅಗತ್ಯಗಳನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡಗಳು ಹೆಚ್ಚಾಗುತ್ತಿವೆ. ಪರಿಣಾಮವಾಗಿ ಶರೀರವನ್ನು ಕಾಡುವ ಸೋಂಕುಗಳು ಏರುತ್ತಿವೆ. ಹಲವಾರು ಪರೋಪಜೀವಿಗಳು ದೇಹವನ್ನು ಕಾಡಬಹುದಾದರೂ, ಇದರ ಬಹುಭಾಗ ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು. ಇವೆರಡರ ನಡುವೆ ಇರುವ ವ್ಯತ್ಯಾಸಗಳನ್ನು ತಿಳಿದರೆ, ಅವುಗಳ ನಿರ್ವಹಣೆ ಸಮಂಜಸವಾಗುತ್ತದೆ.

ಬ್ಯಾಕ್ಟೀರಿಯಾ ಸ್ವತಂತ್ರ ಪರೋಪಜೀವಿ. ಅಂದರೆ, ಅದು ತನ್ನ ಬೆಳವಣಿಗೆಗಾಗಿ ಅಗತ್ಯವಾದ ಪೋಷಕಾಂಶಗಳು ದೊರೆತರೆ ಸ್ವತಂತ್ರವಾಗಿ ಬದುಕಬಲ್ಲದು. ಇಂತಹ ಪೋಷಕಾಂಶಗಳನ್ನು ನೀಡಿ ಅವುಗಳನ್ನು ಪ್ರಯೋಗಶಾಲೆಯಲ್ಲಿ ಬೆಳೆಸಬಹುದು. ಹೀಗಾಗಿ ಅವು ಅಭಿವೃದ್ಧಿಗೊಳ್ಳಲು ಜೀವಕೋಶಗಳೇ ಬೇಕು ಎನ್ನುವ ಕಡ್ಡಾಯವಿಲ್ಲ. ಜಗತ್ತಿನಲ್ಲಿ ಸಾವಿರಾರು ಬಗೆಯ ಬ್ಯಾಕ್ಟೀರಿಯಾಗಳು ಇವೆಯಾದರೂ, ಅವುಗಳಲ್ಲಿ ಕೆಲವು ಮಾತ್ರ ಮಾನವರಲ್ಲಿ ಸೋಂಕು ಉಂಟುಮಾಡುತ್ತವೆ. ಸೋಂಕು ಉಂಟುಮಾಡದ ಕೋಟ್ಯಂತರ ಬ್ಯಾಕ್ಟೀರಿಯಾಗಳು ನಮ್ಮ ಕರುಳಿನೊಳಗೇ ವಾಸಮಾಡುತ್ತಾ, ನಮ್ಮೊಡನೆ ಸಹಜೀವನವನ್ನು ನಡೆಸುತ್ತಾ, ನಮ್ಮ ದೇಹದ ಕಾರ್ಯಗಳನ್ನು ನಿಯಂತ್ರಿಸುತ್ತಿರುತ್ತವೆ. ನಮ್ಮೊಳಗಿನ ಒಡನಾಡಿ ಬ್ಯಾಕ್ಟೀರಿಯಾಗಳ ಸಂಖ್ಯೆ ನಮ್ಮ ಶರೀರದ ಒಟ್ಟಾರೆ ಎಲ್ಲ ಜೀವಕೋಶಗಳಿಗಿಂತಲೂ ಹೆಚ್ಚು.

ಇದರ ಹೊರತಾಗಿ, ನಮ್ಮ ದೇಹಕ್ಕೆ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳೂ ನೂರಾರು ಬಗೆಯವು. ಇವುಗಳಲ್ಲಿ ಕೆಲವು ತೀವ್ರ ಪ್ರಮಾಣದ ಸೋಂಕು ಉಂಟುಮಾಡಿ, ಶರೀರವನ್ನು ಅಪಾಯಕ್ಕೆ ಸಿಲುಕಿಸಬಲ್ಲವು. ಶರೀರವನ್ನು ಸೇರಿದ ಬ್ಯಾಕ್ಟೀರಿಯಾಗಳು ಮೊದಲು ದೇಹದ ಜೀವಕೋಶಗಳನ್ನು ಹಿಡಿದು, ಪೋಷಕಾಂಶಗಳನ್ನು ಸೆಳೆಯುತ್ತವೆ. ಆನಂತರ ತಮ್ಮ ಸಂಖ್ಯೆಯನ್ನು ವೃದ್ಧಿಸುತ್ತವೆ. ಕೆಲವೇ ಕಾಲದಲ್ಲಿ ಇಂತಹ ಸೋಂಕುಕಾರಕ ಬ್ಯಾಕ್ಟೀರಿಯಾಗಳ ಸಂಖ್ಯೆ ವಿಪರೀತವಾಗುತ್ತದೆ. ಶರೀರದಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಬ್ಯಾಕ್ಟೀರಿಯಾಗಳು ಬಳಸಿಕೊಳ್ಳುವುದರಿಂದ, ಶರೀರಕ್ಕೆ ಸಹಜವಾಗಿ ದೊರೆಯಬೇಕಿದ್ದ ಪೋಷಕಾಂಶಗಳು ತಲುಪದೆ ಅಂಗಗಳು ಸೊರಗುತ್ತವೆ; ಅವುಗಳ ಕೆಲಸ ಕುಂಠಿತವಾಗುತ್ತದೆ. ಬ್ಯಾಕ್ಟೀರಿಯಾ ಉತ್ಪಾದಿಸುವ ವಿಷಕಾರಿವಸ್ತುಗಳಿಂದ ದೇಹಕ್ಕೆ ಬಾಧೆಯಾಗುತ್ತದೆ. ಅಪಾಯಕಾರಿ ಪರೋಪಜೀವಿಯೊಂದು ದೇಹವನ್ನು ಕಂಗೆಡಿಸುತ್ತಿದೆ ಎನ್ನುವ ಸೂಚನೆ ಬಂದ ಕೂಡಲೇ ಶರೀರದ ರಕ್ಷಕವ್ಯವಸ್ಥೆ ಜಾಗೃತವಾಗಿ, ಬ್ಯಾಕ್ಟೀರಿಯಾ ವಿರುದ್ಧ ಹೊಡೆದಾಟಕ್ಕೆ ಸಜ್ಜಾಗುತ್ತದೆ. ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕಿನ ತೀವ್ರತೆಗಿಂತಲೂ ರಕ್ಷಕವ್ಯವಸ್ಥೆಯ ಪ್ರತಿಕ್ರಿಯೆ ದೇಹದ ಪಾಲಿಗೆ ಹೆಚ್ಚು ಭಯಂಕರವಾಗಿರುತ್ತದೆ. ರಕ್ಷಕವ್ಯವಸ್ಥೆಯ ಹುಚ್ಚಾಪಟ್ಟೆ ಕಾದಾಟದಲ್ಲಿ ಶರೀರ ಹೆಚ್ಚು ನಷ್ಟ ಅನುಭವಿಸುವ ಪ್ರಸಂಗಗಳೂ ಇವೆ.

ಬ್ಯಾಕ್ಟೀರಿಯಾ ನಿಗ್ರಹದಲ್ಲಿ ದೇಹದ ರಕ್ಷಕವ್ಯವಸ್ಥೆ ಬಹುತೇಕ ಯಶಸ್ವಿಯಾಗಬಲ್ಲದಾದರೂ, ಕೆಲವೊಮ್ಮೆ ಈ ಸಂಗ್ರಾಮದಲ್ಲಿ ಬ್ಯಾಕ್ಟೀರಿಯಾದ್ದೇ ಮೇಲುಗೈ ಆಗಬಹುದು. ಇಂತಹ ಸಂದರ್ಭಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಆ್ಯಂಟಿಬಯಾಟಿಕ್ ಔಷಧಗಳ ನೆರವು ಬೇಕಾಗುತ್ತದೆ.

ಒಂದೇ ಆ್ಯಂಟಿಬಯಾಟಿಕ್ ಎಲ್ಲ ರೀತಿಯ ಬ್ಯಾಕ್ಟೀರಿಯಾಗಳ ಮೇಲೂ ಪರಿಣಾಮಕಾರಿ ಆಗಲಾರದು. ಒಂದೊಂದು ಬಗೆಯ ಬ್ಯಾಕ್ಟೀರಿಯಾಗೆ ಒಂದೊಂದು ಬಗೆಯ ಆ್ಯಂಟಿಬಯಾಟಿಕ್ ಕೆಲಸ ಮಾಡುತ್ತದೆ. ಆ್ಯಂಟಿಬಯಾಟಿಕ್ಗಳು ಶರೀರದ ಇತರ ಜೀವಕೋಶಗಳ ಮೇಲೆಯೂ ಧಾಳಿ ಮಾಡಿ, ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ. ರೋಗದ ಲಕ್ಷಣಗಳನ್ನು ಗಮನಿಸಿ ವೈದ್ಯರು ಸೂಕ್ತವಾದ ಆ್ಯಂಟಿಬಯಾಟಿಕ್ನ ಅಂದಾಜನ್ನು ಮಾಡಬಹುದು. ತೀವ್ರ ಸೋಂಕುಗಳಲ್ಲಿ ಈ ಅಂದಾಜು ಕೆಲಸಕ್ಕೆ ಬಾರದು. ಆಗ ಮೊದಲು ರೋಗಕಾರಕ ಬ್ಯಾಕ್ಟೀರಿಯಾ ಯಾವುದೆಂದು ಗುರುತಿಸಿ, ಅದಕ್ಕೆ ಯಾವ ಆ್ಯಂಟಿಬಯಾಟಿಕ್ ಕೆಲಸ ಮಾಡುತ್ತದೆ ಎಂಬುದನ್ನು ಪ್ರಯೋಗಾಲಯದ ದುಬಾರಿ ಪರೀಕ್ಷೆಗಳ ಮೂಲಕ ತಿಳಿಯಬೇಕು. ಇದಕ್ಕೆ ಎರಡು-ಮೂರು ದಿನಗಳ ಕಾಲಾವಧಿ ಹಿಡಿಯುತ್ತದೆ. ಬಹಳಷ್ಟು ಬಾರಿ ಚಿಕಿತ್ಸೆಗಿಂತಲೂ ಪರೀಕ್ಷೆಗಳೇ ದುಬಾರಿ. ‘ನಾಲ್ಕಾಣೆ ಕೋತಿಗೆ ಹನ್ನೆರಡಾಣೆ ಬೆಲ್ಲ’ ಎನ್ನುವ ಮಾತಿನಂತಾಗುತ್ತದೆ.

ವೈರಸ್ ಸೋಂಕು ಬ್ಯಾಕ್ಟೀರಿಯಾಗಿಂತ ಭಿನ್ನ. ವೈರಸ್ ಎಂಬುದು ಸ್ವತಂತ್ರ ಜೀವಿಯಲ್ಲ; ಅದು ಜೀವ-ನಿರ್ಜೀವಗಳ ಗಡಿಯಲ್ಲಿರುವುದು. ವೈರಸ್ ಮೂಲತಃ ಪ್ರೋಟೀನ್ ಕೋಟೆಯೊಳಗಿನ ಡಿ.ಎನ್.ಎ., ಇಲ್ಲವೇ ಆರ್.ಎನ್.ಎ. ಎನ್ನುವ ಜೀವದ್ರವ್ಯ. ಪರಕೀಯ ಜೀವಕೋಶದೊಳಗೆ ಪ್ರವೇಶಿಸುವ ವೈರಸ್, ಅಲ್ಲಿಯ ಪೋಷಕಾಂಶಗಳಿಂದ ನೇರವಾಗಿ ಬೆಳೆಯುವುದಿಲ್ಲ. ಬದಲಿಗೆ ತನ್ನ ಪ್ರೋಟೀನ್ ಆವರಣವನ್ನು ಕಳಚಿ, ಡಿ.ಎನ್.ಎ., ಇಲ್ಲವೇ ಆರ್.ಎನ್.ಎ. ಎನ್ನುವ ತನ್ನ ಜೆನೆಟಿಕ್ ದ್ರವ್ಯವನ್ನು ಪರಕೀಯ ಜೀವಕೋಶದ ನ್ಯೂಕ್ಲಿಯಸ್ ಒಳಗೆ ಸೇರಿಸಿ, ಇಡೀ ಕೋಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ತನ್ನ ಪ್ರಭೇದದ ಹೊಸ ವೈರಸ್ಗಳನ್ನು ಉತ್ಪಾದಿಸುವ ಕಾರ್ಖಾನೆ ಆಗುತ್ತದೆ. ಹೀಗೆ ಉತ್ಪತ್ತಿಯಾದ ಹೊಸ ವೈರಸ್ಗಳು ಅಕ್ಕಪಕ್ಕದ ಕೋಶಗಳಿಗೆ ಲಗ್ಗೆ ಇಟ್ಟು ಅದೇ ಪ್ರಕ್ರಿಯೆಯನ್ನು ಮುಂದುವರೆಸುತ್ತವೆ.

ವೈರಸ್ನ ದಾಳಿಗೂ ಶರೀರದ ರಕ್ಷಕವ್ಯವಸ್ಥೆ ಸ್ಪಂದಿಸುತ್ತದೆ; ಬಹುತೇಕ ವೈರಸ್ಗಳನ್ನು ನಿರ್ಮೂಲನ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತರಬಲ್ಲದು. ವೈರಸ್ ಸೋಂಕಿನ ವಿರುದ್ಧ ಆ್ಯಂಟಿಬಯಾಟಿಕ್ ಔಷಧಗಳು ಯಾವುದೇ ಪರಿಣಾಮ ಉಂಟುಮಾಡಲಾರವು. ಬಹಳ ತೀವ್ರವಾದ ವೈರಸ್ ಸೋಂಕಿನಲ್ಲಿ ಮಾತ್ರ ಆ್ಯಂಟಿ-ವೈರಲ್ ಔಷಧಗಳನ್ನು ನೀಡಬೇಕಾಗುತ್ತದೆ. ಬ್ಯಾಕ್ಟೀರಿಯಾಗಳನ್ನು ಪ್ರಯೋಗಾಲಯದಲ್ಲಿ ನೇರವಾಗಿ ಪತ್ತೆ ಮಾಡುವಂತೆ ವೈರಸ್ಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಪರೋಕ್ಷ ವಿಧಾನಗಳು ಮಾತ್ರ ಇವೆ. ಕೆಲವೇ ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಅವನ್ನು ಬಳಸಬೇಕು.

ಸೋಂಕು ಎಂದ ಕೂಡಲೇ ಆ್ಯಂಟಿಬಯಾಟಿಕ್ ಎನ್ನುವುದು ಸರಿಯಲ್ಲ. ವೈರಸ್ ಕಾಯಿಲೆಗಳಲ್ಲಿ ಆ್ಬಂಟಿಬಯಾಟಿಕ್ಗಳ ಪಾತ್ರವೇ ಇಲ್ಲ. ಅಕಾರಣವಾಗಿ ಆ್ಯಂಟಿಬಯಾಟಿಕ್ಗಳನ್ನು ಬಳಸುತ್ತಿದ್ದರೆ ಬ್ಯಾಕ್ಟೀರಿಯಾಗಳು ಅವುಗಳ ವಿರುದ್ಧ ಪ್ರತಿರೋಧ ಬೆಳೆಸಿಕೊಳ್ಳುತ್ತವೆ; ಅದರಿಂದ ಮುಂದೆ ಆ್ಯಂಟಿಬಯಾಟಿಕ್ ಪರಿಣಾಮ ಕಡಿಮೆಯಾಗಿ, ಕಾಯಿಲೆಯ ಚಿಕಿತ್ಸೆಗಳು ಮತ್ತಷ್ಟು ದುಬಾರಿಯೂ, ಕೆಲವೊಮ್ಮೆ ನಿಷ್ಫಲವೂ ಆಗುತ್ತವೆ. ಈ ಎಚ್ಚರವನ್ನು ಮೀರಿದರೆ ಇಡೀ ಮನುಕುಲ ದೊಡ್ಡ ಬೆಲೆಯನ್ನು ತೆರುವಂತಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.