ಸೋಮವಾರ, ಮಾರ್ಚ್ 1, 2021
31 °C

ಆತ್ಮಹತ್ಯೆಯ ಪಾಪಕೂಪಕ್ಕೆ ಬೀಳದಿರಿ

ಡಾ. ಕೆ. ಎಸ್‌. ಮೀನಾ Updated:

ಅಕ್ಷರ ಗಾತ್ರ : | |

Deccan Herald

ನಮ್ಮಲ್ಲಿರುವ 2017ರ ದಾಖಲಾತಿಗಳ ಪ್ರಕಾರ ದಿನಕ್ಕೆ ಐವರು ಬೆಂಗಳೂರಿಗರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮತ್ತೊಂದು ದಾಖಲೆಯ ಪ್ರಕಾರ ಕಳೆದ ಮೂರು ವರ್ಷಗಳಿಂದ ಬೆಂಗಳೂರು ನಗರದಲ್ಲಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದಿದೆ. ಯುವಜನರು ಮತ್ತು ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಕರ್ನಾಟಕ ರಾಜ್ಯದಲ್ಲಿ, 2014ರವರೆಗಿನ ಅಂಕಿ–ಅಂಶಗಳ ಪ್ರಕಾರ, ದಿನಕ್ಕೆ ಸರಾಸರಿ 1.45ರಷ್ಟು ಆತ್ಮಹತ್ಯೆಯ ಪ್ರಕರಣಗಳು ಸಂಭವಿಸುತ್ತವೆ. 

ಯುವಜನರೇ ಹೆಚ್ಚು ಹೆಚ್ಚು ಆತ್ಮಹ್ಯತೆಗೆ ಶರಣಾಗುತ್ತಿರುವುದಕ್ಕೆ ಕಾರಣವೇನು?

ಕುಡಿತ ಮತ್ತು ಇತರ ಮಾದಕವಸ್ತು ವ್ಯಸನ. 

ಮಾನಸಿಕ ಆರೋಗ್ಯದ ಸಮಸ್ಯೆಗಳಾದ ಖಿನ್ನತೆ, ಆತಂಕ ಮತ್ತು ಇತರೆ. ಸಾಂಸರಿಕ ಸಮಸ್ಯೆಗಳಾದ ವೈವಾಹಿಕ ಘರ್ಷಣೆಗಳು, ತಂದೆ–ತಾಯಿಗಳೊಂದಿಗೆ ಘರ್ಷಣೆಗಳು, ಲೈಂಗಿಕ, ದೈಹಿಕ ಅಥವಾ ಮಾನಸಿಕ ನಿಂದನೆಗಳು, ವರದಕ್ಷಿಣೆಯ ಕಿರುಕುಳ, ಮುಂತಾದವು.

ತಂದೆ–ತಾಯಿ, ಶಿಕ್ಷಕರಿಂದ ಹೆಚ್ಚುತ್ತಿರುವ ಮಕ್ಕಳ ಶೈಕ್ಷಣಿಕ ನಿರೀಕ್ಷೆಗಳು. 

ವ್ಯಾವಹಾರಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಒತ್ತಡಗಳು. ಕೆಲಸ ಮಾಡುವ ಸ್ಥಳದಲ್ಲಿ ನಿಂದನೆ. ಹಣಕಾಸಿನ ಜವಾಬ್ದಾರಿ ಮತ್ತು ಹೊರೆ. ಮಾಡುತ್ತಿರುವ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು. ನಿರುದ್ಯೋಗ.

ವೈದ್ಯಕೀಯ ಸಮಸ್ಯೆಗಳಿಂದ ಸಂಭವಿಸಿರುವಂತಹ ಜೀವಕ್ಕೆ ಹಾನಿತರುವಂತಹ ತೊಡಕುಗಳು. ಉದಾಹರಣೆಗೆ: ಶಾಶ್ವತ ಅಂಗವೈಕಲ್ಯ. ಕುಟುಂಬದಲ್ಲಿ ಯಾರಾದರೂ ಈ ಮೊದಲು ಆತ್ಮಹತ್ಯೆ ಮಾಡಿಕೊಂಡಿರುವುದು. ಅದಕ್ಕೆ ಮುಖ್ಯ ಕಾರಣ ಆನುವಂಶಿಕತೆಯೂ ಆಗಿರಬಹುದು.

ಆತ್ಮಹತ್ಯೆಗೆ ಈ ಮೊದಲು ಪ್ರಯತ್ನಿಸಿ ವಿಫಲರಾಗಿರುವವರು ಮತ್ತೆ ಅಂಥ ಕೃತ್ಯಕ್ಕೆ ತೊಡಗಬಹುದು.

ಆತ್ಮಹತ್ಯೆಗೆ ಯತ್ನಿಸುವರಲ್ಲಿ ನಾವು ಗಮನಿಸಬೇಕಾದಂತಹ ಮುಖ್ಯಲಕ್ಷಣಗಳು:

ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಆಗಾಗ ಹೇಳುವುದು.

ತಮ್ಮನ್ನು ತಾವು ಅಪ್ರಯೋಜಕರು ಎಂದುಕೊಳ್ಳುವುದು.

ತಮಗೆ ಬಾಳಿ ಬದುಕಲು ಕಾರಣಗಳಿಲ್ಲ ಎಂದುಕೊಳ್ಳುವುದು.

ತಮ್ಮ ವೈಯಕ್ತಿಕ ಆಸ್ತಿಗಳನ್ನು ಬೇರೆಯವರಿಗೆ ಹಂಚಿಬಿಡುವುದು.

ಆತ್ಮಹತ್ಯೆಯ ವಿವರಗಳನ್ನು ಸಂಗ್ರಹಿಸುವುದು.

ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸುವುದು.  ಮಾದಕವಸ್ತುಗಳ ವ್ಯಸನದಲ್ಲಿ ಮುಳುಗಿರುವುದು.

ಜನರಿಂದ ದೂರವಿರಲು ಬಯಸುವುದು.

ಜೀವನದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುವುದು.

ಎಲ್ಲದಕ್ಕೂ ಸಾವೇ ಪರಿಹಾರ ಎಂಬ ದುಡುಕಿನ ನಿರ್ಧಾರಕ್ಕೆ ಬರಲು ಹಲವಾರು ಕಾರಣಗಳಿರುತ್ತವೆ. ಮೇಲಿನ ಲಕ್ಷಣಗಳಲ್ಲಿ ಯಾವುದಾದರೊಂದು ನಮ್ಮ ಸುತ್ತಮುತ್ತಲಿನವರಲ್ಲಿ ಕಂಡುಬಂದರೂ ನಾವು ಕೂಡಲೇ ಎಚ್ಚರವನ್ನು ವಹಿಸಬೇಕು. ಅಂಥವರೊಂದಿಗೆ ಆತ್ಮೀಯತೆಯಿಂದ ಮಾತನಾಡಬೇಕು. ಅವರ ಸಮಸ್ಯೆಗಳನ್ನು ತಿಳಿದುಕೊಂಡು ಅವನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಆತ್ಮಹತ್ಯೆ – ಎಂಬ ವಿಚಾರದಿಂದ ಅವರ ಮನಸ್ಸನ್ನು ಕೂಡಲೇ ಹೊರತರಬೇಕು. ಅವರ ಅಸಹಾಯಕತೆ, ವಿಷಾದಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅವಕ್ಕೆ ಸರಿಯಾಗಿ ಸ್ಪಂದಿಸಿ ಅವರಿಗೆ ಧೈರ್ಯವನ್ನು ತುಂಬಬೇಕು. ಅವರೊಂದಿಗೆ ನಿರಂತರ ಒಡನಾಟವನ್ನು ಇಟ್ಟುಕೊಳ್ಳಬೇಕು. ಅವರು ಏಕಾಂಗಿಯಲ್ಲ, ಅವರಿಗೆ ಸಹಾಯ ಮಾಡಲು ಹಲವರು ಇದ್ದಾರೆ – ಎಂಬ ವಾಸ್ತವವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಸದಭಿರುಚಿಯ ಹವ್ಯಾಸಗಳ ಕಡೆಗೆ ಅವರನ್ನು ತಿರುಗಿಸಬೇಕು. ಅವರೊಂದಿಗೆ ನಡೆಸುವ ಚಿಕ್ಕ ಸಂಭಾಷಣೆಯೂ ಅವರನ್ನು ಬದಲಿಸಬಹುದು. ಉದಾ:  ‘ನೀನು ಈಗ ಚೆನ್ನಾಗಿದ್ದೀಯ ತಾನೇ?’ ಇಂಥದೊಂದು ಸಣ್ಣ ಮಾತು ಕೂಡ ಅವರಿಗೆ ನೆರವಾಗಬಲ್ಲದು.

ಜೀವನದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಹತಾಶರಾಗಿರವವರ ಸಹಾಯಕ್ಕೆ ಸರಿಯಾದ ಸಮಯದಲ್ಲಿ ಧಾವಿಸಿದರೆ ಮುಂದೆ ನಡೆಯಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ.

ಆತ್ಮಹತ್ಯೆಯ ಲಕ್ಷಣ ಕಂಡು ಬಂದರೆ ಮಾಡಬೇಕಾದದ್ದು...

 ಅಂತಹವರ ಭಾವನೆಗಳನ್ನು ಗೌರವಿಸಿ ಮತ್ತು ಅಂಗೀಕರಿಸಿ.

ಅವರಿಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿವೆಯಾ? ಎಂದು ನೇರವಾಗಿ ಕೇಳಿ ತಿಳಿದುಕೊಳ್ಳಿ.

ಅವರಲ್ಲಿ ಆತ್ಮಹತ್ಯೆಯ ಆಲೋಚನೆಗಳಿವೆ ಎಂದು ಅವರನ್ನು ದೂರಮಾಡಬೇಡಿ. 

ಅವರಿಗೆ ತಮ್ಮ ಜೀವನಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳ ಬಗ್ಗೆ ಉಪದೇಶಗಳನ್ನು ತಾವಾಗಿಯೇ ಕೇಳುವವರೆಗೂ ನೀಡಬೇಡಿ.

ಅವರು ಮಾತನಾಡುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀವು ಅವರನ್ನು ತಡೆಯುವ ಪ್ರಯತ್ನ ಅಥವಾ ಅವರು ಉತ್ತಮವಾಗಿದ್ದಾರೆಂಬ ಭಾವನೆ ತರುವಂತಹ ಪ್ರಯತ್ನ ಮಾಡಬೇಡಿ.

ಬದಲಾಗಿ ನೀವು ಅವರಿಗೆ ಸಹಕರಿಸಿ ಮತ್ತು ಅವರ ಈಗಿನ ಪರಿಸ್ಥಿತಿ ತಮಗೆ ಎಷ್ಟು ಕಷ್ಟಕರವಾದದ್ದು ಎಂಬುದನ್ನು ತಿಳಿಸಿ.

ಅವರಲ್ಲಿ ತಮ್ಮ ಸಮಸ್ಯೆಗಳಿಂದ ಹೊರಬರಲು ಮಾನಸಿಕ ತಜ್ಞರ ಸಂದರ್ಶನ ಹಾಗೂ ಕುಟುಂಬದವರು ಸಹಾಯ ನೀಡಬಹುದು.

ಅವರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಧೃಡವಾಗಿದ್ದಲ್ಲಿ ಮತ್ತು ಈಗಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆಂದು ತಿಳಿದರೆ ಅಂಥವರನ್ನು ತುರ್ತಾಗಿ ಮಾನಸಿಕ ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು.

ಒಂದು ಬಾರಿ ಚಿಕಿತ್ಸೆ ಪ್ರಾರಂಭವಾದ ಬಳಿಕ ಅದನ್ನು ಅವರು ಸಂಪೂರ್ಣ ಗುಣಮುಖರಾಗುವವರೆಗೂ ಮುಂದುವರಿಸುವುದು ಬಹಳ ಮುಖ್ಯ. ಏಕೆಂದರೆ, ಒಂದು ಬಾರಿ ಆತ್ಮಹತ್ಯೆಯ ಆಲೋಚನೆಯನ್ನು ಮಾಡಿದವರಲ್ಲಿ ಅದನ್ನು ಪುನಃ ಪ್ರಯತ್ನಿಸುವ ಸಾಧ್ಯತೆ ಹೆಚ್ಚಾಗಿರುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.