ಮಂಗಳವಾರ, ಜೂನ್ 28, 2022
28 °C

ಪೂರಕ ಪೌಷ್ಟಿಕಾಂಶ ಅತಿ ಬಳಕೆ ಬೇಡ

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಸೌಮ್ಯ ಸ್ವರೂಪದ ಕೊರೊನಾ ಸೋಂಕಿತರಿಗೆ ಜ್ವರ ತಗ್ಗಿಸುವ ಔಷಧದ ಜೊತೆಗೆ ಒಂದಿಷ್ಟು ಸತು (ಜಿಂಕ್) ಮತ್ತು ಸಿ ಜೀವಸತ್ವಗಳಂತಹ ಪೂರಕ ಪೋಷಕಾಂಶಗಳನ್ನು ಕೊಡಲಾಗುತ್ತಿದೆಯಷ್ಟೆ. ಆದರೆ ಬಹಳಷ್ಟು ಮಂದಿ ಕೊರೊನಾದಿಂದ ಗುಣಮುಖರಾದ ಮೇಲೆಯೂ ಹಲವು ತಿಂಗಳುಗಳ ಕಾಲ ಈ ಗುಳಿಗೆಗಳನ್ನು ಮುಂದುವರೆಸಿದ್ದಾರೆ. ಅವುಗಳ ನಿಯಮಿತ ಬಳಕೆ ಕೊರೊನಾದಿಂದ ತಮ್ಮನ್ನು ರಕ್ಷಿಸಬಲ್ಲದು ಎಂದೇ ತಿಳಿದಿದ್ದಾರೆ. ಅದು ಪರೋಕ್ಷವಾಗಿ ನಿಜವೆನಿಸಿದರೂ ಸದೃಢ ಶರೀರವನ್ನು ಹೊಂದಿರುವ ಆರೋಗ್ಯವಂತರಿಗೆ ಅದರ ಅಗತ್ಯ ಇರುವುದಿಲ್ಲ. ಶರೀರದ ಕಾರ್ಯಕ್ಷಮತೆಗೆ ಮತ್ತು ಉತ್ತಮ ರೋಗನಿರೋಧಕ ವ್ಯವಸ್ಥೆಗೆ ಪೌಷ್ಟಿಕಾಂಶಗಳು ಅತ್ಯಗತ್ಯ. ಆದರೆ ಕೃತಕವಾಗಿ ತಯಾರಾದ ಇವುಗಳ ಅತಿಯಾದ ಬಳಕೆಯೂ ಒಳ್ಳೆಯದಲ್ಲ ಎನ್ನುತ್ತವೆ ಅಧ್ಯಯನಗಳು.

ಈ ಪೂರಕ ಪೌಷ್ಟಿಕಾಂಶಗಳು ಯಾರಿಗೆ ಅಗತ್ಯ?

* ಗರ್ಭಿಣಿಯಾಗ ಬಯಸುವ ಮಹಿಳೆಯರು ಹುಟ್ಟಲಿರುವ ಮಗುವಿನ ನರವ್ಯೂಹದ ಸಮರ್ಪಕ ಬೆಳವಣಿಗೆಗಾಗಿ ಫೋಲಿಕ್ ಆ್ಯಸಿಡ್ ಪೂರಕಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

* ಗರ್ಭಿಣಿಯರು ಹಾಗೂ ಎದೆಹಾಲುಣಿಸುವ ತಾಯಂದಿರಲ್ಲಿ ಹೆಚ್ಚುವರಿ ಶಕ್ತಿ ಹಾಗೂ ಪೋಷಕಾಂಶಗಳ ಅಗತ್ಯ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಪೂರಕಗಳನ್ನು ಸೇವಿಸುವುದು ಅತ್ಯಗತ್ಯ.

* ಹಿರಿಯ ನಾಗರಿಕರಲ್ಲಿ ವಯೋಸಹಜ ಕಾರಣಗಳಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಸಮರ್ಪಕವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಸಮರ್ಥವಾಗಿರುತ್ತದೆ. ಇವರಲ್ಲಿ ಪೂರಕ ಪೋಷಕಾಂಶಗಳ ಬಳಕೆ ಒಮ್ಮೊಮ್ಮೆ ಬೇಕೆನಿಸಬಹುದು.

* ಆ್ಯಂಟಿಬಯೋಟಿಕ್ ಔಷಧಗಳ ಬಳಕೆಯ ನಂತರ. ಯಾವುದೇ ಸೋಂಕಿನ ಕಾಯಿಲೆಯ ಶಮನಕ್ಕಾಗಿ ಸೂಚಿಸುವ ಆ್ಯಂಟಿಬಯೋಟಿಕ್ ಔಷಧಗಳು ಒಮ್ಮೊಮ್ಮೆ ಕರುಳಿನಲ್ಲಿರುವ ಸ್ನೇಹಪರ ಸೂಕ್ಷ್ಮಾಣುಗಳ ನಾಶಕ್ಕೂ ಕಾರಣವಾಗಬಹುದು. ಈ ಸೂಕ್ಷ್ಮಾಣುಗಳು ಪೌಷ್ಟಿಕಾಂಶಗಳ ಹೀರಿಕೊಳ್ಳುವಿಕೆಗೆ ಅತ್ಯಗತ್ಯ. ಹಾಗಾಗಿ ಆ ಸಂದರ್ಭಗಳಲ್ಲಿ ಶರೀರಕ್ಕೆ ಪೂರಕಗಳು ಬೇಕೆನಿಸಬಹುದು.

* ಸಸ್ಯಾಹಾರಿಗಳಲ್ಲಿ ಪ್ರಾಣಿಜನ್ಯ ಆಹಾರದಿಂದ ಮಾತ್ರವೇ ಪ್ರಮುಖವಾಗಿ ಲಭ್ಯವಿರುವ ಪೋಷಕಾಂಶಗಳ ಕೊರತೆ ಕಂಡು ಬಂದಾಗ ಕೆಲವೊಮ್ಮೆ ವೈದ್ಯರು ಸೂಚಿಸಬಹುದು. ಉದಾಹರಣೆಗೆ ವಿಟಮಿನ್ ಬಿ-12.

* ಪೋಷಕಾಂಶಗಳ ಕೊರತೆಯಿಂದಾಗಿ ಆರೋಗ್ಯ ಸಮಸ್ಯೆಗಳು ಕಾಡಿದಾಗ.

* ನವಜಾತ ಶಿಶುಗಳಲ್ಲಿ. ಯಕೃತ್ತಿನ ಪೂರ್ಣಪ್ರಮಾಣದ ಕಾರ್ಯಕ್ಷಮತೆ ಸಿದ್ಧಿಸುವವರೆಗೂ ಕೆಲವೊಮ್ಮೆ ‘ಕೆ’ ಜೀವಸತ್ವ ಬೇಕಾಗಬಹುದು.

* ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನಿಗಳು ಸರಿಯಾದ ಆಹಾರಕ್ರಮವನ್ನು ಅನುಸರಿಸದೇ ಇರುವುದರಿಂದ ಅವರಲ್ಲಿ ಪೂರಕ ಪೋಷಕಾಂಶಗಳು ಬೇಕಾಗಬಹುದು.

* ಶಸ್ತ್ರಚಿಕಿತ್ಸೆ, ಸುಟ್ಟಗಾಯ ಅಥವಾ ಇತರ ತೀವ್ರ ಸ್ವರೂಪದ ಕಾಯಿಲೆಗಳಿಂದ ಚೇತರಿಸಿಕೊಳ್ಳುವಾಗ.

* ಏಡ್ಸ್ ಕಾಯಿಲೆಯಿಂದ ಬಳಲುವವರಿಗೆ. ಪೂರಕ ಪೋಷಕಾಂಶಗಳು ಗುಳಿಗೆ, ಪುಡಿ, ದ್ರವ ಮೊದಲಾದ ರೂಪದಲ್ಲಿ ಔಷಧ ಅಂಗಡಿಗಳಲ್ಲಿ ದೊರಕುತ್ತವೆ. ಇವು ಸೂಕ್ತಪ್ರಮಾಣದಲ್ಲಿ ನಿಗದಿತ ಪೌಷ್ಟಿಕಾಂಶವನ್ನಷ್ಟೇ ಹೊಂದಿರುತ್ತವೆ. ಶರೀರಕ್ಕೆ ಅವಶ್ಯಕತೆಯಿದ್ದಾಗ ಪೂರಕ ಪೋಷಕಾಂಶಗಳು ನಿಜಕ್ಕೂ ಪರಿಣಾಮಕಾರಿ. ಆದರೆ, ವೈದ್ಯರು ಯಾವುದೋ ಸಂದರ್ಭದಲ್ಲಿ ಸೂಚಿಸಿದ ಪೂರಕ ಔಷಧಗಳನ್ನೇ ಮುಂದುವರೆದು ಬಳಸುವುದು ಕೆಲವೊಮ್ಮೆ ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು.

ಅಡ್ಡಪರಿಣಾಮಗಳೇನು?

* ಅಗತ್ಯಕ್ಕಿಂತಲೂ ಹೆಚ್ಚಾದ ಮೆಗ್ನಿಸಿಯಂನಿಂದಾಗಿ ಭೇದಿಯಾಗಬಹುದು.

* ಅಗತ್ಯಕ್ಕಿಂತಲೂ ಹೆಚ್ಚಾದ ಫಾಸ್ಫರಸ್‍ನಿಂದಾಗಿ ಭೇದಿ, ವಾಕರಿಕೆ ಮತ್ತು ವಾಂತಿಯಾಗಬಹುದು

* ಅತಿಯಾದ ಕಬ್ಬಿಣಾಂಶದ ಗುಳಿಗೆಗಳ ಬಳಕೆಯಿಂದ ಮಲಬದ್ಧತೆ, ವಾಕರಿಕೆ, ವಾಂತಿಯಾಗುವುದಲ್ಲದೆ ಕರುಳುಗಳಲ್ಲಿ ಸತುವಿನ ಹೀರಿಕೊಳ್ಳುವಿಕೆಯೂ ಕುಂಠಿತಗೊಳ್ಳಬಹುದು.

* ಸತು (ಜಿಂಕ್) ಅಗತ್ಯಕ್ಕಿಂತಲೂ ಹೆಚ್ಚಾದಾಗ ವಾಕರಿಕೆ, ವಾಂತಿ, ರೋಗನಿರೋಧಕ ವ್ಯವಸ್ಥೆಯ ಶಿಥಿಲಗೊಳ್ಳುವುದು ಹಾಗೂ ಆಹಾರದಲ್ಲಿನ ತಾಮ್ರದ ಅಂಶದ ಹೀರಿಕೊಳ್ಳುವಿಕೆಯಲ್ಲಿ ವ್ಯತ್ಯಾಸವಾಗಬಹುದು.

* ಸೆಲೆನಿಯಂ ಎಂಬ ಪೋಷಕಾಂಶವು ಹೆಚ್ಚಾದಾಗ, ಅದು ಉಗುರು ಮತ್ತು ಕೂದಲನ್ನು ಟೊಳ್ಳಾಗಿಸಬಲ್ಲದು. ಅಲ್ಲದೆ ಕೈ ಮತ್ತು ಕಾಲುಗಳ ನರಗಳಲ್ಲಿ ತೊಂದರೆ ಉಂಟುಮಾಡಬಹುದು.

ನೆನಪಿಡಿ

* ಕೃತಕವಾಗಿ ತಯಾರಿಸಲ್ಪಟ್ಟ ಪೋಷಕಾಂಶಗಳಿಗಿಂತ ನಿಸರ್ಗದತ್ತ ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳು ಸಮರ್ಪಕವಾಗಿ ಕರುಳುಗಳಲ್ಲಿ ಹೀರಲ್ಪಡುತ್ತವೆ ಹಾಗೂ ದೇಹದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಕ್ಷಮತೆ ತೋರುತ್ತವೆ.

* ಕೃತಕವಾಗಿ ತಯಾರಿಸಲ್ಪಟ್ಟದ್ದು ಕೇವಲ ನಿಗದಿತ ಪೋಷಕಾಂಶವನ್ನು ಮಾತ್ರವೇ ಹೊಂದಿರುತ್ತದೆ. ಆದರೆ ನೈಸರ್ಗಿಕವಾದ ಹಾಗೂ ತಾಜಾತನದಿಂದ ಕೂಡಿದ ಆಹಾರವು ವಿವಿಧ ಬಗೆಯ ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗಿ, ಗರಿಷ್ಠ ಮಟ್ಟದಲ್ಲಿ ಶರೀರಕ್ಕೆ ಬಳಕೆಯಾಗುತ್ತವೆ.

* ಸಾಮಾನ್ಯವಾಗಿ ನಮ್ಮ ಶರೀರಕ್ಕೆ ಅಗತ್ಯವಾದ ಎಲ್ಲ ಪೌಷ್ಟಿಕಾಂಶಗಳು ನಾವು ಸೇವಿಸುವ ಆಹಾರದಿಂದ ನಮಗೆ ಲಭ್ಯ. ಆದ್ದರಿಂದ ಸರಿಯಾದ ಆಹಾರಕ್ರಮವನ್ನು ರೂಢಿಸಿಕೊಂಡರೆ, ಅಂದರೆ ಜೀವಸತ್ವಗಳು ಮತ್ತು ಖನಿಜಾಂಶಗಳು ಹೇರಳವಾಗಿರುವ ಹಣ್ಣು, ತರಕಾರಿ, ಸೊಪ್ಪು, ಹಾಲು, ಮೊಟ್ಟೆ, ಮೊಳಕೆ ಬರಿಸಿದ ಕಾಳುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸಿದರೆ ಕೃತಕವಾಗಿ ತಯಾರಿಸಲ್ಪಟ್ಟ ಪೂರಕ ಪೌಷ್ಟಿಕಾಂಶಗಳ ಅಗತ್ಯ ಖಂಡಿತ ಇರುವುದಿಲ್ಲ.

(ಲೇಖಕಿ: ವೈದ್ಯೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು