ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಿಪಾಕ್ಸ್ ವೈರಸ್ ಬಗ್ಗೆ ಆತಂಕ ಬೇಡ, ಜಾಗೃತಿ ಇರಲಿ

ಅಕ್ಷರ ಗಾತ್ರ

ಕೋವಿಡ್‌ ಬಳಿಕ ಜನರಲ್ಲಿ ಹೆಚ್ಚು ಆತಂಕಕ್ಕೆ ದೂಡಿರುವ ಮತ್ತೊಂದು ವೈರಸ್‌ ಎಂದರೆ ಮಂಕಿಪಾಕ್ಸ್‌.. 16 ರಾಷ್ಟ್ರಗಳಲ್ಲಿ ಮಂಕಿಪಾಕ್ಸ್‌ನಿಂದ ಜನರು ಬಳಲುತ್ತಿದ್ದಾರೆ. ಇದು ಝೂನೋಸಿಸ್‌ ವೈರಸ್‌ ಆಗಿದ್ದು, ಪ್ರಾಣಿಯಿಂದ ಮನುಷ್ಯನಿಗೆ ಹರಡಲಿದೆ. ಈ ರೋಗ ಲಕ್ಷಣಗಳು ಸಿಡುಬಿನ ರೀತಿಯಲ್ಲೇ ಕಂಡು ಬಂದರೂ, ಸಿಡುಬಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು, ಈ ವೈರಸ್‌ ಶೀಘ್ರದಲ್ಲೇ ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಮಂಕಿಪಾಕ್ಸ್ ಸಾಮಾನ್ಯವಾಗಿ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಉಷ್ಣವಲಯದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿಯೇ ಕೆಲ ಪ್ರಕರಣ ಕಂಡು ಬಂದಿರುವುದರಿಂದ ಎಲ್ಲರೂ ಈ ವೈರಸ್‌ ಬಗ್ಗೆ ಜಾಗೃತರಾಗಿರುವುದು ಓಳಿತು. ಈ ಬಗ್ಗೆ ವೈದ್ಯರ ಸಲಹೆ ಇಲ್ಲಿದೆ.

ಮಂಕಿಪಾಕ್ಸ್‌ ಹೇಗೆ ಹರಡಲಿದೆ?
ಮಂಕಿಪಾಕ್ಸ್‌ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ವೈರಸ್‌ ಆಗಿದ್ದು, ಕಾಡುಗಳ ಸಮೀಪ ವಾಸವಿರುವವರಿಗೆ ಈ ವೈರಸ್‌ ಸುಲಭವಾಗಿ ತಾಗುತ್ತದೆ. ಹೀಗಾಗಿ ಕಾಡುಪ್ರಾಣಿಗಳ ಜೊತೆಗೆ ಸಂಪರ್ಕ ಹೊಂದುವಾಗ ಎಚ್ಚರಿಕೆ ವಹಿಸಬೇಕು, ಮಾಂಸಹಾರ ಸೇವನೆ ವೇಳೆಯೂ ಚೆನ್ನಾಗಿ ಬೇಯಿಸಿ ತಿನ್ನುವುದು ಹೆಚ್ಚು ಸುರಕ್ಷಿತ.

ಮನುಷ್ಯನಿಂದ ಹರಡಲಿದೆಯೇ?
ಮಂಕಿಪಾಕ್ಸ್ ವೈರಸ್ ಮಾನವನಿಂದ ಮನುಷ್ಯನಿಗೆ ಹರಡುವುದು ಅಪರೂಪವಾದರೂ, ಇದು ನಿಕಟ ಚರ್ಮದ ಸಂಪರ್ಕ, ಗಾಳಿಯ ಹನಿಗಳು, ದೈಹಿಕ ದ್ರವಗಳು ಮತ್ತು ವೈರಸ್-ಕಲುಷಿತ ವಸ್ತುಗಳ ಮೂಲಕ ಹರಡುವ ಸಾಧ್ಯತೆಯನ್ನು ತಳ್ಳೀ ಹಾಕುವಂತಿಲ್ಲ. ಬಾಯಿಯಲ್ಲಿನ ಸಾಂಕ್ರಾಮಿಕ ಹುಣ್ಣುಗಳು, ಗಾಯಗಳು ಮತ್ತು ಹುಣ್ಣುಗಳು ಲಾಲಾರಸದ ಮೂಲಕ ವೈರಸ್ ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ಲಕ್ಷಣ ಇರುವ ಜನರೊಂದಿಗೆ ಸಂಪರ್ಕ ಮಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯ.

ರೋಗಲಕ್ಷಣಗಳು
ಮಂಕಿಪಾಕ್ಸ್‌ ತಗುಲಿದ ವ್ಯಕ್ತಿಗೆ ದೇಹದ ಮೇಲೆ ರಾಶಸ್‌ ಆಗಲಿದ್ದು, ನಂತರ ಅದು ದದ್ದುಗಳಾಗಿ ಮಾರ್ಪಾಟ್ಟು, ಅದರಲ್ಲಿ ನೀರು ತುಂಬಿಕೊಳ್ಳಲಿದೆ. ಈ ವೈರಸ್‌ ತಗುಲಿದ 6 ರಿಂದ 13 ದಿನಗಳ ಅವಧಿಯಲ್ಲಿ ರೋಗ ಲಕ್ಷಣಗಳು ಗೋಚರಿಸಲಿವೆ. ವೈರಸ್ ಸೋಂಕಿತ ವ್ಯಕ್ತಿಯು ಸಾಮಾನ್ಯವಾಗಿ ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು, ಸುಸ್ತು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಚರ್ಮದ ದದ್ದು, ಗಾಯಗಳಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಗುಳ್ಳೆಗಳಲ್ಲಿ ಹಳದಿ ಮಿಶ್ರಿತ ದ್ರವ ತುಂಬಿರುತ್ತದೆ, ಈ ಗುಳ್ಳೆಯನ್ನು ನಾವಾಗೇ ಹೊಡೆಯಲು ಹೋದರೆ ಅದು ದೇಹದ ಇತರ ಭಾಗಗಳಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ಗುಳ್ಳೆ ತಾನಾಗಿಯೇ ಮಾಗಿ, ಒಣಗುವವರೆಗೂ ಅದನ್ನು ಮುಟ್ಟದೇ ಸ್ವಚ್ಛವಾಗಿಟ್ಟಕೊಳ್ಳಬೇಕು. ಈ ಗುಳ್ಳೆಗಳು ಹೆಚ್ಚಾಗಿ ತುಟಿ, ಮುಖ, ಜನನಾಂಗ, ಕಣ್ಣುಗಳ ಮೇಲೆ ಕಾಣಿಸಿಕೊಳ್ಳತ್ತವೆ.

ಯಾರಿಗೆ ಹೆಚ್ಚು ಅಪಾಯ?
ಈ ವೈರಸ್‌ ಕಾಡುಗಳಲ್ಲಿ ಪ್ರಾಣಿಗಳೊಂದಿಗೆ ಸಂಪರ್ಕ ಹೊಂದಿದ್ದರೆ ಅಥವಾ ಕಾಡು ಪ್ರಾಣಿಗಳ ಅರೆಬೆಂದ ಮಾಂಸ ತಿನ್ನುವವರಿಗೆ ವೇಗವಾಗಿ ಹರಡುತ್ತದೆ. ಜೊತೆಗೆ ಈ ಸೋಂಕಿಗೆ ಒಳಗಾದವ್ಯಕ್ತಿಯ ಜೊತೆ ನಿಕಟ ಸಂಪರ್ಕ ಹೊಂದಿದವರಿಗೂ ಹರಡುವ ಸಾಧ್ಯತೆ ಇದೆ. ಸಿಡುಬಿನ ಲಸಿಕೆ ಪಡೆದ ವ್ಯಕ್ತಿಗಳಿಗೆ ಈ ಸೋಂಕು ಬರುವುದು ಕಡಿಮೆ. ಇನ್ನು, ಸಿಡುಬು ಲಸಿಕೆ ಹಾಕದ ಮಕ್ಕಳು, ಯುವಜನರು, ನವಜಾತ ಶಿಶುಗಳು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳು ಈ ಕಾಯಿಲೆಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ವೈರಸ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯ ಕಾರ್ಯಕರ್ತರು ಸಹ ವೈರಸ್‌ಗೆ ಗುರಿಯಾಗುವ ಸಾಧ್ಯತೆ ಇದೆ. ಇವರು ಹೆಚ್ಚು ಎಚ್ಚರಿಕೆಯಿಂದರಬೇಕು.

ಈ ವೈರಸ್‌ಗೆ ಚಿಕಿತ್ಸೆ ಏನು?
ಪ್ರಸ್ತುತ ಮಂಕಿಪಾಕ್ಸ್‌ಗೆ ಯಾವುದೇ ನಿಖರ ಚಿಕಿತ್ಸೆ ಇಲ್ಲ. ಆದರೆ, ಕೆಲವು ಮುನ್ನೆಚ್ಚರಿಕೆ ಹಾಗೂ ಸಿಡುಬಿಗೆ ನೀಡುವ ಚಿಕಿತ್ಸೆಯನ್ನೇ ಈ ವೈರಸ್‌ಗೂ ನೀಡಲಾಗುತ್ತಿದೆ. ಇದರ ಜೊತೆಗೆ ಕೆಲವು ಅಂಶಗಳನ್ನು ಪಾಲಿಸುವ ಮೂಲಕ ಮಂಕಿಪಾಕ್ಸ್‌ನನ್ನು ನಿರ್ವಹಿಸಬಹುದು.
• ದೇಹದ ಮೇಲಾದ ನೀರು ತುಂಬಿದ ಗುಳ್ಳೆಗಳನ್ನು ಒಣಗಲು ಬಿಡಿ, ಅಗತ್ಯವಿದ್ದಲ್ಲಿ ಆ ಜಾಗವನ್ನು ವಾತಾವರಣದಿಂದ ರಕ್ಷಿಸಲು ತೇವಾಂಶವುಳ್ಳ ಡ್ರೆಸಿಂಗ್‌ನಿಂದ ಅದನ್ನು ಮುಚ್ಚುವುದು.
• ಬಾಯಿ ಅಥವಾ ಕಣ್ಣುಗಳಲ್ಲಿ ಯಾವುದೇ ಹುಣ್ಣುಗಳನ್ನು ಮುಟ್ಟಬಾರದು.
• ಬಾಯಿಹುಣ್ಣು, ಕಣ್ಣಿನ ಹುಣ್ಣಿಗೆ ಮೌತ್‌ವಾಶ್‌ ಹಾಗೂ ಕಣ್ಣೀನ ಹನಿಗಳನ್ನು ವೈದ್ಯರ ಶಿಫಾರಸಿನ ಮೇರೆಗೆ ಬಳಸುವುದು
ಸಿಡುಬು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾದ ಆಂಟಿವೈರಲ್ ವ್ಯಾಕ್ಸಿನಿಯಾ ಇಮ್ಯೂನ್ ಗ್ಲೋಬ್ಯುಲಿನ್ (VIG) ಅನ್ನು ಮಂಕಿ ಪಾಕ್ಸ್‌ನ ತೀವ್ರತರವಾದ ಪ್ರಕರಣಗಳಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.
ಇನ್ನು, ವೈರಸ್ ಹರಡುವುದನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ಜಾಗೃತಿ. ವೈರಸ್‌ ಹರಡುವುದನ್ನು ತಡೆಗಟ್ಟಲು ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಬೇಕು.

ಲೇಖಕರು:ಡಾ. ಪೃತ್ತು ನರೇಂದ್ರ ಧೇಕ್ನೆ, ಸಲಹೆಗಾರ -ಸಾಂಕ್ರಾಮಿಕ ರೋಗಗಳು, ಫೋರ್ಟಿಸ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT