ಬುಧವಾರ, ಜನವರಿ 22, 2020
19 °C

ದಾಳಿಂಬೆ, ಪಪ್ಪಾಯ, ಸೀಬೆಕಾಯಿ, ಬಾಳೆಹಣ್ಣಿನಲ್ಲಿದೆ ಚಳಿಗಾಲದ ಆರೋಗ್ಯದ ಗುಟ್ಟು

ಸಂದರ್ಶನ: ಶ್ವೇತಾ ಜಿ. Updated:

ಅಕ್ಷರ ಗಾತ್ರ : | |

Prajavani

ಹಿತ್‌ಭುಕ್; ಋತ್‌ಭುಕ್; ಮಿತ್‌ಭುಕ್– ಭಾರತದ ಪುರಾತನ ವೈದ್ಯ ಪದ್ಧತಿ ಆಯುರ್ವೇದದಲ್ಲಿ ಇದರ ಸಾರಾಂಶ ತಿಳಿಸಲಾಗಿದೆ. ಋತುಗಳಿಗೆ ಅನುಗುಣವಾಗಿ ಹಿತವಾದ, ಮಿತವಾದ ಆಹಾರ, ಸರ್ವರೋಗಕ್ಕೂ, ಸರ್ವಋತುಗಳಿಗೂ ಮದ್ದು. ಚಳಿಗಾಲದಲ್ಲಿ ಹಲವು ಬಗೆಯ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಈ ಕಾಲದಲ್ಲಿ ಯಾವ ರೀತಿಯ ಆಹಾರ ಸೇವಿಸಬೇಕು, ಆರೋಗ್ಯ ಮತ್ತು ಚರ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ. ಕೆ.ಎಲ್. ವಿಶ್ವನಾಥ್ ಅವರ ಜೊತೆಗಿನ ಮಾತುಕತೆ ಇಲ್ಲಿದೆ.

* ಚಳಿಗಾಲದಲ್ಲಿ ನಾವು ಎದುರಿಸುವ ಸವಾಲುಗಳೇನು?

ಚಳಿಗಾಲದಲ್ಲಿ ವಿವಿಧ ಸೋಂಕುಗಳಿಗೆ ತುತ್ತಾಗುವ ಸಂಭವ ಹೆಚ್ಚು. ಪ್ರತಿನಿತ್ಯದ ಆಹಾರ ಸೇವನೆ ಜೊತೆಗೆ ಚರ್ಮ ರಕ್ಷಣೆ ಹೇಗೆ ಎಂಬುದನ್ನು ತಿಳಿದುಕೊಂಡರೆ ಚಳಿಗಾಲವನ್ನು ಹಾಯಾಗಿ ಕಳೆಯಬಹುದು.

* ಚಳಿಗಾಲದ ಆಹಾರ ಪದ್ಧತಿ ಹೇಗಿದ್ದರೆ ನಮ್ಮ ಆರೋಗ್ಯಕ್ಕೆ ಉತ್ತಮ?

ಚಳಿಗಾಲವು ತಂಪಾದ ವಾತಾವರಣದ ಜೊತೆಗೆ ಹಲವಾರು ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ. ಇದನ್ನು ತಪ್ಪಿಸಲು ನಮ್ಮ ದೇಶದ ಸಾಂಪ್ರದಾಯಕ ಆಹಾರ ಪದಾರ್ಥಗಳು ಔಷಧಿಯಂತೆ ನಮಗೆ ಸಹಕಾರಿಯಾಗಿವೆ. ನಮ್ಮ ಆಹಾರ ಪದಾರ್ಥಗಳಲ್ಲೇ ನಾವು ಆರೋಗ್ಯ ವೃದ್ಧಿಸಿಕೊಳ್ಳಬಹುದು. ಚಳಿಗಾಲದಲ್ಲಿ ಜೀವಸತ್ವ ಸಿ ಇರುವ ಹಣ್ಣು, ತರಕಾರಿ, ಸೊಪ್ಪುಗಳಂತಹ ಆಹಾರ ಸೇವನೆಯಿಂದ ದೇಹದ ನಿರ್ಜಲೀಕರಣ ದೂರವಾಗುವುದರ ಜೊತೆಗೆ ಚರ್ಮದ ಬಣ್ಣ ಸುಧಾರಿಸುವಲ್ಲಿಯೂ ಸಹಕಾರಿ. ಈ ಸಮಯದಲ್ಲಿ ಹೆಚ್ಚಾಗಿ ನಾರು ಹಾಗೂ ನೀರಿನಾಂಶವಿರುವ ಪದಾರ್ಥಗಳ ಸೇವನೆ ಅಗತ್ಯ.

* ಚಳಿಗಾಲದಲ್ಲಿ ಚರ್ಮಕ್ಕಾಗುವ ಹಾನಿಗಳೇನು ?

ಹವಾಮಾನ ಬದಲಾವಣೆ ಆರೋಗ್ಯದಲ್ಲಿ ಏರು-ಪೇರು ಹಾಗೂ ನಮ್ಮ ತ್ವಚೆಯ ಮೇಲೆ ಪರಿಣಾಮ ಬೀರುವುದು ಸಹಜ. ಚರ್ಮದ ಆರೈಕೆಗೆ ಕೇವಲ ಕ್ರೀಮ್ ಮತ್ತು ಸೋಪ್‌ ಬಳಕೆ ಮುಖ್ಯವಾಗುವುದಿಲ್ಲ. ಚಳಿಗಾಲದಲ್ಲಿ ಚರ್ಮ ಬಿರುಕು, ತುರಿಕೆ, ಚರ್ಮ ಕೆಂಪಾಗುವುದು, ಬೊಬ್ಬೆಗಳು ಹಾಗೂ ದದ್ದುಗಳಾಗುವುದನ್ನು ತಡೆಗಟ್ಟಿ ಚರ್ಮದ ಆರೋಗ್ಯ ಕಾಪಾಡುವುದು ದೊಡ್ಡ ಸವಾಲು ಎನಿಸುತ್ತದೆ. ಇದರಿಂದ ಮುಕ್ತಿ ಹೊಂದಲು ನಮ್ಮ ಆಹಾರ ಪದಾರ್ಥಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.

* ಚರ್ಮದ ಆರೋಗ್ಯಕ್ಕೆ ಉಪಯುಕ್ತವಾದ ಆಹಾರ ಪದಾರ್ಥಗಳಾವವು ?

ಚರ್ಮದ ಆರೋಗ್ಯಕ್ಕೆ ಸೇವಿಸಲೇಬೇಕಾದ ಪ್ರಮುಖವಾದ ಹಣ್ಣೆಂದರೆ ಪಪ್ಪಾಯ. ಇದರಲ್ಲಿ ಜೀವಸತ್ವ ಎ ಇದ್ದು, ಕಣ್ಣಿನ ರಕ್ಷಣೆಗೆ ಸಹಕಾರಿ. ಈ ಹಣ್ಣಿನಲ್ಲಿರುವ ನೀರಿನಾಂಶವು ಚರ್ಮವನ್ನು ತುಂಬಾ ನಯ ಹಾಗೂ ಮೃದುವಾಗಿರುವಂತೆ ನೋಡಿಕೊಳ್ಳುವುದರ ಜೊತೆಗೆ ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿದ್ದು, ಇದು ಚರ್ಮ ಕೆಂಪಾಗುವುದು, ತುರಿಕೆ, ಉರಿಯೂತ ಮುಂತಾದ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿ. ಜೇನುತುಪ್ಪವನ್ನು ತುಟಿ ಒಡೆದಿರುವುದಕ್ಕೆ, ಉರಿಯೂತ ಮತ್ತು ಚರ್ಮ ಕೆಂಪಾಗಿರುವ ದೇಹದ ಭಾಗಗಳಿಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಉಗುರು ಬೆಚ್ಚನೆ ನೀರಿನಿಂದ ತೊಳೆದರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಬಾದಾಮಿ, ಸ್ಟ್ರಾಬೆರಿ, ಪಾಲಕ್, ಬೀಟ್‌ರೂಟ್ ಚರ್ಮಕ್ಕೆ ಎದುರಾಗುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಕಾರ್ಬೊಹೈಡ್ರೇಟ್ ಹೆಚ್ಚಾಗಿದ್ದು, ದೇಹಕ್ಕೆ ಪುಷ್ಟಿ ಕೊಡುತ್ತವೆ.

ಇದನ್ನೂ ಓದಿ: ಚಳಿಗಾಲದ ಸಮಸ್ಯೆಗಳಿಗೆ ವೈದ್ಯರ ಸಲಹೆ

* ಚಳಿಗಾಲದಲ್ಲಿ ಸಿಗುವ ಹಣ್ಣುಗಳಾವವು? ಅವುಗಳ ಸೇವನೆ ಎಷ್ಟು ಅವಶ್ಯಕ?

ಚಳಿಗಾಲದಲ್ಲಿ ದೊರೆಯುವ ಹಣ್ಣುಗಳ ಸೇವನೆ ಬಹುಮುಖ್ಯ. ದಾಳಿಂಬೆ ನಮಗೆ ಹೆಚ್ಚು ದೊರೆಯುತ್ತದೆ. ಇದು ದೇಹದ ಬಿಳಿರಕ್ತಕಣಗಳು ಆರೋಗ್ಯವಾಗಿರುವಂತೆ ಮಾಡುತ್ತದೆ. ಆಮ್ಲೀಯ ಗುಣವಿರುವ ಕಿತ್ತಳೆ ಹಣ್ಣು ಚರ್ಮದ ಸಮಸ್ಯೆ ದೂರ ಮಾಡಿ, ಚರ್ಮದ ಹೊಳಪನ್ನು ಕಾಪಾಡುತ್ತದೆ. ಜೊತೆಗೆ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಪ್ಪಿಸುತ್ತದೆ. ಬಾಳೆಹಣ್ಣಿನಲ್ಲಿ ಜೀವಸತ್ವ ಸಿ ಇದ್ದು, ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಚಿಕ್ಕವಯಸ್ಸಿನಲ್ಲಿ ಸೀಬೆಕಾಯಿ ಜೊತೆಗೆ ಉಪ್ಪು-ಖಾರ ತಿನ್ನುವ ನೆನಪು ಈಗಲೂ ಇರಬಹುದು. ಇದರಲ್ಲಿ ಜೀವಸತ್ವ ಸಿ ಇದ್ದು, ತ್ವಚೆಯ ಹೊಳಪಿಗೆ ಸಹಕಾರಿ. ಆದರೆ ಮಿತವಾದ ಸೇವನೆ ಉತ್ತಮ ಆರೋಗ್ಯಕ್ಕೆ ನಾಂದಿ.

* ಚಳಿಗಾಲದಲ್ಲಿ ತಗಲುವ ಸೋಂಕಿನಿಂದ ಮುಕ್ತಿ ಹೇಗೆ?

ಚಳಿಗಾಲದಲ್ಲಿ ಧೂಳಿರುವ ಪ್ರದೇಶಗಳಿಗೆ ಹೋಗುವಾಗ, ಕರವಸ್ತ್ರ ಅಥವಾ ಮಾಸ್ಕ್‌ಗಳಿಂದ ಸಂರಕ್ಷಣೆ ಮಾಡಿಕೊಳ್ಳಬೇಕು. ಸೂಕ್ಷ್ಮ ಜೀವಿಗಳು ಮೂಗಿನ ಮೂಲಕ ಶ್ವಾಸಕೋಶ ಸೇರಿ ನಮ್ಮ ಆರೋಗ್ಯ ಹಾಳು ಮಾಡುತ್ತವೆ. ಉತ್ತಮ ರಕ್ಷಣೆ ಮೂಲಕ ಸೋಂಕು ತಡೆಗಟ್ಟಬಹುದು. ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಅಗತ್ಯ. ಮನೆಯ ಸುತ್ತಮುತ್ತ ನಿಂತ ನೀರಲ್ಲಿ ಸೊಳ್ಳೆ ಬೆಳೆದು ಡೆಂಗಿಯಂತಹ ಮಾರಕ ರೋಗಗಳಿಗೆ ನಮ್ಮನ್ನೊಡ್ಡುತ್ತವೆ. ರೋಗದ ಪ್ರಥಮ ಹಂತದಲ್ಲೇ ವೈದ್ಯರ ಸಹಾಯ ಪಡೆದು ನಿವಾರಿಸಿಕೊಳ್ಳಬಹುದು.

* ಜೇನುಮೇಣದ ಪ್ರಾಮುಖ್ಯತೆ ತಿಳಿಸಿ?

ಜೇನುಮೇಣ ಇದೊಂದು ಆಯುಷ್ ಔಷಧಿ. ಜೇನು ಮೇಣವನ್ನು ಚೆನ್ನಾಗಿ ಕಾದ ಕೊಬ್ಬರಿ ಎಣ್ಣೆಗೆ ಹಾಕಿ, ಕರುಗುವವರೆಗೂ ಕಾಯಬೇಕು. ಜೇನುಮೇಣ ಹಾಗೂ ಕೊಬ್ಬರಿ ಎಣ್ಣೆ ಪ್ರಮಾಣ 1:2 ರಷ್ಟಿರಬೇಕು. ಅದಕ್ಕೆ ಸ್ವಲ್ಪ ಅರಿಸಿನ ಬೆರೆಸಿ. ನಂತರ ತಂಪಾಗಿಸಿದರೆ ಜೇನುಮೇಣದ ಮುಲಾಮು ತಯಾರಾಗುತ್ತದೆ. ಚರ್ಮದ ಯಾವುದೇ ಒಡಕಿಗೆ ಇದನ್ನು ಹಚ್ಚಬಹುದು. ಕಾಲುಹಿಮ್ಮಡಿ ಒಡೆಯುವುದು, ಕಾಲು ಬೆರಳಿನ ನಡುವೆ ಫಂಗಸ್ ಆಗುವುದನ್ನು ತಪ್ಪಿಸುತ್ತದೆ. ಎಲ್ಲಾ ಗ್ರಂಧಿಗೆ ಅಂಗಡಿಯಲ್ಲಿ ದೊರೆಯುತ್ತದೆ. ಚಳಿಗಾಲದಲ್ಲಿ ಇದರ ಉಪಯೋಗ ಬಹಳ ಮುಖ್ಯ.

ಚಳಿಗಾಲದಲ್ಲಿ ತಂಪಾದ ವಾತಾವರಣ ಇರುವುದರಿಂದ, ನೀರು ಕುಡಿಯುವುದು ಕಡಿಮೆ. ಹೀಗಾಗಿ ದೇಹದಲ್ಲಿ ನಿರ್ಜಲೀಕರಣವಾಗುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಈ ಕಾಲದಲ್ಲಿ ಹೆಚ್ಚು ನೀರು ಸೇವನೆ ಅಗತ್ಯ. ಹಣ್ಣಿನ ರಸ ಹಾಗೂ ಮಜ್ಜಿಗೆಯನ್ನು ದಿನನಿತ್ಯದ ಆಹಾರ ಪದ್ಧತಿಗಳಲ್ಲಿ ರೂಢಿಸಿಕೊಳ್ಳಬೇಕು. ಸಾಧ್ಯವಾದಷ್ಟು ಸೌಮ್ಯವುಳ್ಳ ಹೆಚ್ಚು ಸುಗಂಧಗಳಿಲ್ಲದ ಸೋಪ್‌ ಬಳಕೆ ಮಾಡುವುದು ಒಳ್ಳೆಯದು. ಚರ್ಮವನ್ನು ಒಣಗದಂತೆ ನೋಡಿಕೊಳ್ಳುವುದರ ಜೊತೆಗೆ ಆಗಾಗ ಎಣ್ಣೆಸ್ನಾನ ಮಾಡಬೇಕು. ಸ್ನಾನಕ್ಕೆ ಹೆಚ್ಚು ಸುಡುವ ಬಿಸಿನೀರು ಬಳಸಬಾರದು. ಋತುಗಳಿಗೆ ಅನುಗುಣವಾಗಿ ಪ್ರಕೃತಿ ನೀಡುವ ಆಹಾರಗಳನ್ನು ಸಾಧ್ಯವಾದಷ್ಟೂ ಸೇವಿಸಿ.

ಸಂಬಾರು ಪದಾರ್ಥ ಸೇವನೆ ಎಷ್ಟು ಮುಖ್ಯ?

ಸಂಬಾರು ಪದಾರ್ಥವಾದ ನಕ್ಷತ್ರ ಮೊಗ್ಗಿನಲ್ಲಿ ಜೀವಸತ್ವ ಎ ಮತ್ತು ಸಿ ಇದ್ದು, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದಲ್ಲಿ ಆಹಾರ ಪದಾರ್ಥಗಳು ವರ್ಣಮಯವಾಗಿ ಕಾಣಲು ಕೇಸರಿ ಉಪಯೋಗ ಮಾಡಲಾಗುತ್ತದೆ. ಹಾಲಿನಲ್ಲಿ ಕೇಸರಿ ಬೆರೆಸಿ ಸೇವಿಸುವುದರಿಂದ ಶೀತದ ಲಕ್ಷಣಗಳು ದೂರವಾಗುವುದರ ಜೊತೆಗೆ ಮನಸ್ಸು ಆಹ್ಲಾದ ಎನಿಸುತ್ತದೆ. ಅರಿಸಿನಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ. ಚಳಿಗಾಲದಲ್ಲಿ ನೀರು, ಹಾಲು ಅಥವಾ ಚಹದ ಜೊತೆ ಬೆರೆಸಿ ಕುಡಿಯಬಹುದು. ಕರಿಮೆಣಸು ಹೆಚ್ಚು ರೋಗನಿರೋಧಕ ಶಕ್ತಿ ಒದಗಿಸುವುದಲ್ಲದೆ ಚಯಾಪಚಯ ಕ್ರಿಯೆಗೂ ಸಹಕಾರಿ. ಲವಂಗವು ಉರಿಯೂತ, ನಂಜು ನಿರೋಧಕ, ಹಲ್ಲು ನೋವಿನ ಸಮಸ್ಯೆ ಹೊಡೆದೋಡಿಸುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು