ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ಡಿಜಿಟಲ್‌ ಡಿಟಾಕ್ಸ್

ಡಾ. ಅರ್ಜುನ ಶ್ರೀವತ್ಸ
Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಇದು ಗ್ಯಾಜೆಟ್‌ಗಳ ಯುಗ. ಒಂದ್ಹೊತ್ತು ಊಟ ತಪ್ಪಿಸಿದರೂ ಗ್ಯಾಜೆಟ್‌ಗಳ ಬಳಕೆಯನ್ನು ತಪ್ಪಿಸಲಾಗದು ಎನ್ನುವಷ್ಟರ ಮಟ್ಟಿಗೆ ಗ್ಯಾಜೆಟ್‌ಗಳು ನಮ್ಮ ಮನಸ್ಸು, ದೇಹ ಹಾಗೂ ಆರೋಗ್ಯವನ್ನು ಆಳುತ್ತಿವೆ.

ಅಧ್ಯಯನ ಏನು ಹೇಳುತ್ತೆ?

‌16ರಿಂದ 64 ವರ್ಷದವರಲ್ಲಿ ಶೇ 96ರಷ್ಟು ಮಂದಿ ತಮ್ಮದೇ ಮೊಬೈಲ್‌ ಫೋನ್‌ ಹೊಂದಿದ್ದಾರೆ. ಅವರಲ್ಲಿ ಬಹುತೇಕರು ಸ್ಮಾರ್ಟ್‌ ಫೋನ್‌ಗಳ ಒಡೆಯರಾಗಿದ್ದಾರೆ. 9 ರಿಂದ 13 ವರ್ಷದೊಳಗಿನ ಮಕ್ಕಳು ಡೆಸ್ಕ್‌ಟಾಪ್‌, ಸ್ಮಾರ್ಟ್‌ಪೋನ್‌ಗಳನ್ನು ಬಳಸುತ್ತಿದ್ದಾರೆ. ನಿತ್ಯ 4 ಗಂಟೆಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಗ್ಯಾಜೆಟ್‌ ಬಳಕೆಯಿಂದ ಶ್ರವಣ ಹಾಗೂ ದೃಷ್ಟಿ ಸಾಮರ್ಥ್ಯಕ್ಕೆ ತೊಂದರೆಯಾಗಬಹುದು. ಆರು ಗಂಟೆಗಳಿಗಿಂತ ಹೆಚ್ಚು ಬಳಕೆ ಮಾಡಿದರೆ ನಿದ್ರೆ, ಕುತ್ತಿಗೆ ಹಾಗೂ ಭುಜದ ಸಮಸ್ಯೆಯನ್ನು ತಂದೊಡ್ಡಬಹುದು. ಗ್ಯಾಜೆಟ್‌ಗಳ ವ್ಯಾಪಕ ಬಳಕೆಯಿಂದಾಗಿ ಮಿದುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜತೆಗೆ ಸೃಜನಶೀಲ ಯೋಚನೆಗಳಿಗೂ ಅಡ್ಡಿ ಉಂಟು ಮಾಡುತ್ತಿದೆ.

ಮಿದುಳಿನ ರಚನೆ ಮತ್ತು ಕಾರ್ಯ

ನ್ಯುರೋಪ್ಲಾಸ್ಟಿಸಿಟಿ ಎನ್ನುವುದು ಮಿದುಳಿನ ಹೊಂದಿಕೊಳ್ಳುವ ಸಾಮರ್ಥ್ಯ. ಇದು ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಂದ ಪ್ರಭಾವಿತಗೊಂಡರೆ ಚಿಂತನಾ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಗೇಮಿಂಗ್‌ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಿಂದ ತ್ವರಿತ ಮಾಹಿತಿ ಪಡೆಯುವುದಕ್ಕಷ್ಟೆ ಆದ್ಯತೆ ನೀಡುವಂತೆ ಆಗಬಹುದು. ಅಪಾರ ಶಕ್ತಿ ಹೊಂದಿರುವ ಮಿದುಳಿನ ಸಂಶೋಧನಾ ಸಾಮರ್ಥ್ಯವೇ ಕ್ಷೀಣಗೊಳ್ಳಬಹುದು. ಜತೆಗೆ ವ್ಯಸನಕಾರಿ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಕಣ್ಣಿಗೂ ತೊಂದರೆ

ದೇಹದ ಜೈವಿಕ ಗಡಿಯಾರವನ್ನು ನಿಯಂತ್ರಿಸಲು ನೈಸರ್ಗಿಕ ಬೆಳಕು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ದೇಹದ ಎಲ್ಲ ಚಟುವಟಿಕೆಗಳನ್ನು ಒಂದು ಮಟ್ಟದಲ್ಲಿ ಇದು ನಿಯಂತ್ರಿಸುತ್ತದೆ. ಜತೆಗೆ ದೈಹಿಕ ಚಟುವಟಿಕೆಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳುತ್ತದೆ. ಆದರೆ, ಕೃತಕ ಬೆಳಕಿಗೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಅದರಲ್ಲಿಯೂ ಎಲ್‌ಇಡಿಗಳಿಂದ ನೀಲಿ ಬೆಳಕಿನ ಪ್ರಭಾವದಿಂದ ನಿದ್ರಾಹೀನತೆ ಕಾಡಬಹುದು. ನೀಲಿ ಬೆಳಕನ್ನು ಹೊರಸೂಸುವ ಎಲ್‌ಇಡಿಗಳು ಕಣ್ಣಿನ ಆರೋಗ್ಯ ಮತ್ತು ಮಿದುಳಿನ ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಬಹುದು.

ತೊಂದರೆಯೇನು?

ಮಿದುಳು ತನ್ನ ರಚನೆಯಲ್ಲಿ ಬೆಳವಣಿಗೆ ಹೊಂದುತ್ತಲೇ ಇರುವ ಒಂದು ಅಂಗ. ನಿರಂತರವಾಗಿ ನರ ಸಂಪರ್ಕವನ್ನು ಸಾಧಿಸುತ್ತ ತನ್ನ ಬೆಳವಣಿಗೆಯ ಹಾದಿಯನ್ನು ಕಂಡುಕೊಳ್ಳುತ್ತಿರುತ್ತದೆ. ಡಿಜಿಟಲ್‌ ಗೀಳಿನಿಂದಾಗಿ ಈ ಪ್ರಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಿದುಳು ತನ್ನ ಅನುಭವವನ್ನು ಒಟ್ಟುಗೊಡಿಸಿಕೊಂಡು ಅನ್ವೇಷಣೆಯ ಹಾದಿಯಲ್ಲಿರುತ್ತದೆ. ಆದರೆ ಮಿದುಳನ್ನು ಆನ್‌ಸ್ಕ್ರೀನ್‌ ಪ್ರಕ್ರಿಯೆಗೆ ಹೊಂದಿಸಿಬಿಟ್ಟರೆ, ಅದು ಹೆಚ್ಚು ಕ್ರಿಯಾಶೀಲವಾಗಿರದೇ, ಬೆಳವಣಿಗೆ ಹೊಂದುವುದರಿಂದ ವಂಚಿತಗೊಳ್ಳುತ್ತದೆ.

ಮಿದುಳಿನ ಬೆಳವಣಿಗೆಗೆ ಉತ್ತಮ ನಿದ್ರೆ ಬಹಳ ಪ್ರಯೋಜನಕಾರಿ. ಮಲಗುವ ಮುನ್ನ ಸ್ಮಾರ್ಟ್‌ಫೋನ್‌, ಲ್ಯಾಪ್‌ಟ್ಯಾಪ್‌ನಿಂದ ಹೊರ ಹೊಮ್ಮುವ ನೀಲಿ ಬೆಳಕು ದೇಹದಲ್ಲಿ ಮೆಲಟೋನಿನ್‌ ಮಟ್ಟವನ್ನು ಕಡಿಮೆ ಮಾಡುವ ಮೂಲಕ ನಿದ್ರೆಗೆ ಭಂಗ ತರುತ್ತದೆ. ‌ರಾತ್ರಿ ಇಡೀ ಮೊಬೈಲ್‌ಗೆ ಜೋತು ಬೀಳುವವರಿಗೆ ಕ್ರಮೇಣ ನಿದ್ರಾಹೀನತೆ ಕಾಡಬಹುದು.

ಆರ್‌ಇಎಂ ಅಂದರೆ ರ್‍ಯಾಪಿಡ್‌ ಐ ಮೂವ್‌ಮೆಂಟ್‌ ನಿದ್ರೆಯಲ್ಲಿರುವ ಅತ್ಯುತ್ತಮ ಹಂತ. ಈ ಸಂದರ್ಭದಲ್ಲಿ ಕನಸುಗಳು ಬೀಳುವ ಹಂತ. ಗ್ಯಾಜೆಟ್‌ಗಳ ಬಳಕೆಯಿಂದಾಗಿ ಅತಿಯಾದ ಕಣ್ಣಿನ ಚಲನೆ, ಮಿದುಳಿನ ಚಟುವಟಿಕೆಯಿಂದಾಗಿ ಈ ಹಂತದ ನಿದ್ರೆಗೆ ಭಂಗವಾಗಬಹುದು.

ತೊಂದರೆಗಳೇನು?
ಅತಿಯಾದ ಗ್ಯಾಜೆಟ್‌ ಬಳಕೆಯಿಂದಾಗಿ ಸ್ಮರಣಾ ಶಕ್ತಿ ಕಡಿಮೆಯಾಗಬಹುದು. ನಿದ್ರಾಹೀನತೆ ಉಂಟಾಗಬಹುದು. ಮಿದುಳಿನ ಆರೋಗ್ಯದಲ್ಲಿಯೂ ವ್ಯತ್ಯಯ ಉಂಟಾಗಬಹುದು.

ಗ್ಯಾಜೆಟ್‌ಗಳ ಬಳಕೆಯಿಂದ ಹೊಸ ವರ್ಚುಯಲ್‌ ಜಗತ್ತು ಸೃಷ್ಟಿಯಾಗುವುದರಿಂದ ಮಿದುಳು ವಾಸ್ತವದ ಬದುಕಿಗೆ ಹೊಂದಿಕೊಳ್ಳುವುದು ಕಷ್ಟವಾಗಬಹುದು.

ಅತಿಯಾದ ಬಳಕೆಯಿಂದ ಆತಂಕ, ಖಿನ್ನತೆ ಮತ್ತು ಒತ್ತಡ ಹೆಚ್ಚುತ್ತದೆ. ಜತೆಗೆ ದೃಷ್ಟಿ ಸಮಸ್ಯೆಗಳು, ನಿಲ್ಲುವ, ಕೂರುವ ಭಂಗಿಯಲ್ಲಿನ ದೋಷಗಳಿಂದ ದೇಹದಲ್ಲಿ ವಿವಿಧ ಸಮಸ್ಯೆ ಉಂಟಾಗಬಹುದು. ಗ್ಯಾಜೆಟ್‌ ಬಳಕೆಯಿಂದ ಮಕ್ಕಳ ಮಿದುಳಿನ ಬೆಳವಣಿಗೆಯಲ್ಲಿ ತೊಂದರೆಯಾಗಬಹುದು. ಶೈಕ್ಷಣಿಕವಾಗಿ ಮುಂದುವರಿಯಲು ಹಲವು ಸವಾಲುಗಳು ಎದುರಾಗಬಹುದು. ವ್ಯಾಯಾಮವಿಲ್ಲದೇ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.

ಗ್ಯಾಜೆಟ್‌ಗಳನ್ನು ಹೇಗೆ ಬಳಸುತ್ತೇವೆ ಎನ್ನುವುದರ ಮೇಲೆ ಅವುಗಳ ಪರಿಣಾಮ ನಿರ್ಧಾರಗೊಳ್ಳುತ್ತದೆ. ಮಾನಸಿಕ, ದೈಹಿಕ ಆರೋಗ್ಯದ ಅಂಶಗಳನ್ನು ಯಥೇಚ್ಛವಾಗಿ ನೀಡುವ ಡಿಜಿಟಲ್‌ ಲೋಕದಲ್ಲಿ ಎಷ್ಟು ಹೊತ್ತು ಇರಬೇಕು ಎಂಬುದನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ.

ಡಿಜಿಟಲ್‌ ಲೋಕದ ಜತೆ ಸಂಪರ್ಕ ಏರ್ಪಟ್ಟರೆ ಓಡುತ್ತಿರುವ ಜಗತ್ತಿನ ಜತೆ ಹೆಜ್ಜೆ ಹಾಕುವುದು ಸುಲಭ. ಎಂಥಹುದೇ ಕಾರ್ಯವನ್ನು ಬಹು ಸುಲಭವಾಗಿ ಮಾಡಲು ಡಿಜಿಟಲ್‌ ಸಂಪರ್ಕ ಬಹಳ ಮುಖ್ಯ. ಅದರ ಜತೆಗೆ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಇಟ್ಟುಕೊಳ್ಳಬೇಕು.

ಗೀಳಾದರೆ ಏನು ಮಾಡಬೇಕು
ಎಲೆಕ್ಟ್ರಾನಿಕ್‌ ಸಾಧನಗಳು, ಡಿಜಿಟಲ್‌ನಿಂದ ಆಗಾಗ್ಗೆ ಹೊರಬಂದು ವಾಸ್ತವದಲ್ಲಿ ಹೆಚ್ಚು ತಿಳಿಯಾಗಿ ಬದುಕುವುದು ಮುಖ್ಯ. ಆಗಾಗ್ಗೆ ಡಿಜಿಟಲ್ ಡಿಟಾಕ್ಸ್‌ ಮಾದರಿಯನ್ನು ಅನುಸರಿಸಲು ಮರೆಯದಿರಿ.


* ಕುಟುಂಬ ಹಾಗೂ ಸ್ನೇಹಿತರೊಂದಿಗೆ ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಳ್ಳಿ. ಬಲವಾದ ಸಂಬಂಧಗಳು ಹಾಗೂ ಕೌಟುಂಬಿಕ ಬೆಂಬಲ ಇಂಥ ಗೀಳಿನಿಂದ ಹೊರಬರಲು ಅವಶ್ಯಕ .

* ಸ್ಕ್ರೀನ್‌ ಫ್ರೀ ಮೀಲ್ಸ್‌: ಯಾವುದೇ ಮೊಬೈಲ್‌ ಹಾಗೂ ಇತರೆ ಗ್ಯಾಜೆಟ್‌ಗಳ ಸಂಪರ್ಕವಿಲ್ಲದೇ ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿ.


* ಆಗಾಗ ಹೆಚ್ಚು ಹೆಚ್ಚು ಹರಟೆ ಹೊಡೆಯಿರಿ. ಪ್ರಕೃತಿಯೊಂದಿಗೆ ಬೆಸೆಯುವಂಥ ಯೋಜನೆಗಳನ್ನು ಹಾಕಿ. ತಿಂಗಳಲ್ಲಿ ಒಂದು ದಿನ ಮಟ್ಟಿಗೆ ಪ್ರವಾಸ ಹೋಗಿ ಬನ್ನಿ. ಅಲ್ಲಿಯೂ ಮೊಬೈಲ್‌ ಮತ್ತು ಇತರೆ ಗ್ಯಾಜೆಟ್‌ಗಳಿಂದ ದೂರ ಉಳಿಯುವುದಕ್ಕೆ ಆದ್ಯತೆ ಕೊಡಿ. ಶ್ರೀ

* ಒಟ್ಟಿಗೆ ಆಟವಾಡಿ: ಮಕ್ಕಳ ಆಸಕ್ತಿಗಳನ್ನು ಅರ್ಥ ಮಾಡಿಕೊಂಡು ಅವರ ಸ್ಕ್ರೀನ್‌ ಟೈ ಅನ್ನು ಕಡಿಮೆ ಮಾಡಿ. ಮಕ್ಕಳಿಗೆ ಖುಷಿ ಎನಿಸುವ ಆಟಗಳನ್ನೇ ನೀಡಿ.

* ಸ್ಕ್ರೀನ್‌ ಟೈಂಗೆ ಹೇರಿ ಮಿತಿ: ಮಕ್ಕಳಾಗಲಿ, ದೊಡ್ಡವರಾಗಲಿ ಸ್ಕ್ರೀನ್‌ ಟೈಂಗೆ ಮಿತಿ ಹಾಕಿ. ಅದನ್ನು ಕ್ರಮಬದ್ಧವಾಗಿ ಜಾರಿಗೆ ತನ್ನಿ.

–ಡಾ. ಅರ್ಜುನ ಶ್ರೀವತ್ಸ, ನರವಿಜ್ಞಾನ ವಿಭಾಗದ ಮುಖ್ಯಸ್ಥ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT