ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀತಲ ಪೆಟ್ಟಿಗೆಯಲ್ಲಿ ತಾಯ್ತನದ ನಿರೀಕ್ಷೆಯಲ್ಲಿ..

ಹೆಚ್ಚುತ್ತಿರುವ ‘ಎಗ್‌ ಫ್ರೀಜಿಂಗ್‌’
Last Updated 16 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮುಂಬೈನ 34ರ ಹರೆಯದ ಅವಿವಾಹಿತೆ, ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ ರೋಶನಿ ಪಟೇಲ್‌ (ಹೆಸರು ಬದಲಾಯಿಸಲಾಗಿದೆ) ಈ ಕೋವಿಡ್‌ ಸಂದರ್ಭದಲ್ಲಿ ವಿಚಿತ್ರವಾದ, ಆದರೆ ಮಹತ್ವವಾದ ನಿರ್ಧಾರ ಕೈಗೊಂಡಳು. ಅಲ್ಲಿಯ ಫಲವಂತಿಕೆ ಕೇಂದ್ರದ ತಜ್ಞರ ಸಲಹೆ ಪಡೆದು ಹಾರ್ಮೋನ್‌ ಉತ್ಪಾದನೆ ಉತ್ತೇಜಿಸುವಂತಹ ಚುಚ್ಚುಮದ್ದು ತೆಗೆದುಕೊಂಡಳು; ಬಿಡುಗಡೆಗೆ ಸಿದ್ಧವಾದ ಅಂಡಾಣುಗಳನ್ನು ವೈದ್ಯಕೀಯ ಪ್ರಕ್ರಿಯೆ ಮೂಲಕ ಹೊರತೆಗೆದು ಅದನ್ನು ‘ಅಂಡಾಣು ಕಾಪಿಡುವ ಕೇಂದ್ರ (ಎಗ್‌ ಫ್ರೀಜಿಂಗ್‌ ಕೇಂದ್ರ)’ದಲ್ಲಿ ಕಾದಿರಿಸಿದಳು. ಇದಕ್ಕಾಗಿ ಆಕೆ ಇದುವರೆಗೆ ಖರ್ಚು ಮಾಡಿದ್ದು ಸುಮಾರು ಎರಡೂವರೆ ಲಕ್ಷ ರೂಪಾಯಿ.

ಇದು ರೋಶನಿಯೊಬ್ಬಳ ಕತೆ ಮಾತ್ರವಲ್ಲ, ಈ ಕೋವಿಡ್‌–19 ಸಂದರ್ಭದಲ್ಲಿ ಅಂಡಾಣುಗಳನ್ನು ಶೀತಲ ಕೇಂದ್ರಗಳಲ್ಲಿ ಕಾದಿರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಾನಗರಗಳಲ್ಲಿ ವೀರ್ಯಾಣು ಬ್ಯಾಂಕ್‌ಗಳು ಸಾಕಷ್ಟಿದ್ದರೂ ಅಂಡಾಣುಗಳನ್ನು ಈ ರೀತಿ ಕಾದಿರಿಸುವ ಕೇಂದ್ರಗಳು ಬೆರಳೆಣಿಕೆಯಲ್ಲಿವೆ. ಹೆಚ್ಚಾಗಿ ಕ್ಯಾನ್ಸರ್‌ ಅಥವಾ ಲೂಪಸ್‌ನಂತಹ ಕೆಲವು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವವರು ಆರೋಗ್ಯ ಸುಧಾರಿಸಿದ ನಂತರ ಮಗುವನ್ನು ಪಡೆಯುವ ಸಲುವಾಗಿ ಈ ರೀತಿ ಅಂಡಾಣುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾದಿರಿಸುವ ಪರಿಪಾಠವಿತ್ತು. ಆದರೆ ಈಗ ಕೋವಿಡ್‌ ತಂದಿರುವ ಆತಂಕ, ಅನಿಶ್ಚಿತ ಪರಿಸ್ಥಿತಿಯಿಂದಾಗಿ ಉಳ್ಳವರು ಇಂತಹ ವಿಧಾನಗಳ ಮೊರೆ ಹೋಗುತ್ತಿರುವುದು ಸ್ಪಷ್ಟ.

ರೋಶನಿಯನ್ನು ಈ ಬಗ್ಗೆ ಪ್ರಶ್ನಿಸಿದರೆ, ‘ಓದು, ಉದ್ಯೋಗ ಎಂದು ಈಗಾಗಲೇ 34 ದಾಟಿಬಿಟ್ಟಿದ್ದೇನೆ. ಕಳೆದ ವರ್ಷ ನಾನು ಮೆಚ್ಚಿದ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ ಕೋವಿಡ್‌ನಿಂದಾಗಿ ಆತ ಉದ್ಯೋಗ ಕಳೆದುಕೊಂಡಿದ್ದು, ಮದುವೆಯಾಗಲು ಒಪ್ಪುತ್ತಿಲ್ಲ. ಸದ್ಯ ಇನ್ನೊಬ್ಬನನ್ನು ಹುಡುಕುವ ಮನಸ್ಥಿತಿಯಲ್ಲಿ ನಾನಿಲ್ಲ. ನನಗೂ ವಯಸ್ಸಾಗುತ್ತಿದೆ. ಸಹೋದರ ತಾನು, ತನ್ನ ಸಂಸಾರ ಎಂದು ಆರಾಮಾಗಿದ್ದಾನೆ. ನಾನೇನು ಮಾಡಲಿ ಹೇಳಿ? ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಂಡಾಣು ಫ್ರೀಜ್‌ ಮಾಡಿಸಿದ್ದೇನೆ’ ಎನ್ನುತ್ತಾಳೆ.

ಅಂಡಾಣು ಕಾದಿರಿಸುವವರು ಯಾರು?

ಇದುವರೆಗೆ ನಲ್ವತ್ತರ ಅಂಚಿನಲ್ಲಿರುವವರು, ಎಲ್ಲಾ ಬಗೆಯ ಚಿಕಿತ್ಸೆಯ ನಂತರವೂ ಮಕ್ಕಳಾಗದೇ ನಿರಾಶೆ ಹೊಂದಿದವರು ಫಲವಂತಿಕೆ ಚಿಕಿತ್ಸಾ ಕೇಂದ್ರಗಳಲ್ಲಿ ಐವಿಎಫ್‌ಗೆಂದು ಇಂತಹ ಪ್ರಕ್ರಿಯೆ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಮದುವೆಯಾಗದ, ಮೂವತ್ತೈದರ ಆಜೂಬಾಜು ಇರುವಂತಹ ಹೆಣ್ಣುಮಕ್ಕಳು ಕೂಡ ಐವಿಎಫ್‌ ಕೇಂದ್ರ, ಅಂಡಾಣು ಕಾದಿರಿಸುವ ಕೇಂದ್ರಗಳನ್ನು ಎಡತಾಕುವುದು ಜಾಸ್ತಿಯಾಗಿದೆ ಎನ್ನುತ್ತಾರೆ ನನ್ನ ಸಹೋದ್ಯೋಗಿಗಳು. ದೆಹಲಿ, ಮುಂಬೈ, ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ತಮ್ಮ ಉದ್ಯೋಗ, ಹಣ ಗಳಿಕೆಗೆ ಹೆಚ್ಚು ಗಮನ ನೀಡಿದ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿ ಇದೆ. ಅದರಲ್ಲೂ ಮನರಂಜನೆ, ಫ್ಯಾಷನ್‌, ಹಣಕಾಸು ವಲಯಗಳಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳು ಸದ್ಯಕ್ಕೆ ತಮ್ಮ ವೃತ್ತಿಯ ಬಗ್ಗೆ, ಮದುವೆ, ಸಂಸಾರದ ಕುರಿತು ಆತಂಕಗೊಂಡಿರುವುದು ಸಹಜ. ಸಿನಿಮಾ, ಟಿವಿ ಧಾರಾವಾಹಿ ಎಂದು ಮನರಂಜನೆ ಉದ್ಯಮದಲ್ಲಿರುವ ಸೆಲೆಬ್ರಿಟಿಗಳೂ ಕೂಡ ರಿಪ್ರೊಡಕ್ಟಿವ್‌ ಕೇಂದ್ರಗಳಿಗೆ ಎಡತಾಕುವುದು ಗುಟ್ಟಾಗೇನೂ ಉಳಿದಿಲ್ಲ.

ಕಳೆದ 10–15 ವರ್ಷಗಳಿಂದ ಈ ಅಂಡಾಣು ಕಾದಿರಿಸುವಿಕೆ ತಂತ್ರಜ್ಞಾನದಲ್ಲಿ ಅಗಾಧ ಬೆಳವಣಿಗೆ ಸಾಧಿಸಲಾಗಿದೆ. ಇದರ ಪ್ರಕ್ರಿಯೆಯೂ ಸರಳ. 15 ದಿನಗಳಿಗಿಂತ ಮುಂಚೆ ಹಾರ್ಮೋನ್‌ ಉತ್ತೇಜಿಸುವ ಚುಚ್ಚುಮದ್ದು ನೀಡಲಾಗುವುದು. ಇದರಿಂದ ಅಂಡಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳವಣಿಗೆ ಹೊಂದುತ್ತವೆ. ನಂತರ ಸ್ಕ್ಯಾನಿಂಗ್‌ ಮೂಲಕ ಅಂಡಾಣು ಬೆಳವಣಿಗೆ ಗಮನಿಸಿ ಸೂಜಿಯನ್ನು ಜನನಾಂಗದ ಮೂಲಕ ಹಾಯಿಸಿ ಅಂಡಾಶಯದಿಂದ ಅಂಡಾಣುಗಳನ್ನು ಹೊರ ತೆಗೆಯಲಾಗುವುದು. ಉತ್ತಮ ಫಲಿತಾಂಶಕ್ಕಾಗಿ 15– 20 ಅಂಡಾಣುಗಳನ್ನು 3–4 ಸೈಕಲ್‌ಗಳಲ್ಲಿ ಸಂಗ್ರಹಿಸಲಾಗುವುದು. ಇವೆಲ್ಲ ಪ್ರಕ್ರಿಯೆಗೆ ಅಂದಾಜು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚು ತಗುಲಬಹುದು. ನಂತರ ಶೀತಲ ಪೆಟ್ಟಿಗೆಗಳಲ್ಲಿ ಸಂಗ್ರಹಿಸಲು ಪ್ರತ್ಯೇಕವಾಗಿ ವೆಚ್ಚ ಭರಿಸಬೇಕು. ದೀರ್ಘಾವಧಿ ಇಡುವುದಾದರೆ ಖರ್ಚು ಹೆಚ್ಚು. ಇದು ವರ್ಷಕ್ಕೆ ₹ 50 ಸಾವಿರದಿಂದ ಒಂದು ಲಕ್ಷದವರೆಗೂ ಇದೆ. ಕೆಲವು ಕೇಂದ್ರಗಳು ₹ 20– 30 ಸಾವಿರ ವಿಧಿಸುವುದೂ ಇದೆ. ಕೆಲವು ಕೇಂದ್ರಗಳು ಪ್ಯಾಕೇಜ್ ಕೂಡ ನೀಡುತ್ತವೆ.

ವಿದೇಶಗಳಲ್ಲಿ ಇದೊಂದು ಉದ್ಯಮ

ಭಾರತದಲ್ಲೇ ಈ ವಿದ್ಯಮಾನವಿರುವಾಗ, ಅಮೆರಿಕ, ಯೂರೋಪ್‌ನ ದೇಶಗಳಲ್ಲಿ ಇದು ಹೇಗಿರಬೇಡ! ಅಲ್ಲಿ ಮಹಿಳೆಯರು ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಉನ್ನತ ಸ್ಥಾನದ ಮಹತ್ವಾಕಾಂಕ್ಷೆಯ ಜೊತೆಗೆ ಸರಿಯಾದ ಸಂಗಾತಿ ಸಿಗುವವರೆಗೂ ಕಾಯುವ ಪರಿಪಾಠವಿದೆ. ಆದರೆ ಮಕ್ಕಳು ಬೇಕು ಎಂಬ ಆಸೆ ಬಹುತೇಕ ಎಲ್ಲರಲ್ಲೂ ಇರುವುದು ಸಹಜವೇ. ಹೀಗಾಗಿ ಅಂಡಾಣು ಕಾದಿರಿಸುವ ಮಹಿಳೆಯರ ಸಂಖ್ಯೆ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗೆಯೇ ಇದೊಂದು ಉದ್ಯಮವಾಗೂ ಹೊರಹೊಮ್ಮಿದೆ. ಜೊತೆಗೆ ಗೂಗಲ್‌, ಆ್ಯಪಲ್‌, ಫೇಸ್‌ಬುಕ್‌ನಂತಹ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಅಂಡಾಣು ಕಾದಿರಿಸುವಿಕೆಯನ್ನು ಪ್ಯಾಕೇಜ್‌ ಭಾಗವಾಗಿ ನೀಡುತ್ತಿವೆ. ಮಕ್ಕಳನ್ನು ಹೊಂದುವ ತಮ್ಮ ಸಾಮರ್ಥ್ಯವನ್ನು ತ್ಯಾಗ ಮಾಡದೆ ವೃತ್ತಿಯಲ್ಲಿ ಎಲ್ಲಾ ರೀತಿಯ ಸಾಧನೆ ಮಾಡುವುದಕ್ಕೆ ಇದೊಂದು ಕೊಡುಗೆ ಎಂಬುದು ಹಲವರ ತರ್ಕ.

ಅಂಡಾಣು ಮಾತ್ರವಲ್ಲ, ಅಂಡಾಶಯದ ಭಾಗವನ್ನು ಕೂಡ ಶೀತಲೀಕರಿಸಿ ಕಾದಿರಿಸುವ ತಂತ್ರಜ್ಞಾನವೂ ಬಂದಿದ್ದು, ಇದು ಭಾರತದಲ್ಲಿ ಅಷ್ಟು ಅಭಿವೃದ್ಧಿ ಹೊಂದಿಲ್ಲ.

‘ಅಂಡಾಣು ಕಾದಿರಿಸಿದ ನಂತರ ಒತ್ತಡ ಸಾಕಷ್ಟು ಕಮ್ಮಿಯಾಗಿದೆ. ಸಂಗಾತಿ ಸಿಗದಿದ್ದರೂ ವೀರ್ಯ ದಾನ ಪಡೆದು ಮಗು ಮಾಡಿಕೊಳ್ಳಬಹುದು ಎಂಬ ಪ್ಲ್ಯಾನ್‌ ಬಿ ಕೂಡ ಇದೆ’ ಎನ್ನುವ ರೋಶನಿ ಮಾತಿನಲ್ಲಿ ಆತ್ಮವಿಶ್ವಾಸ ತುಂಬಿ ತುಳುಕುತ್ತಿತ್ತು.

ಹಾಗಂತ ಅಂಡಾಣು ಕಾದಿರಿಸಿದರೂ ಮುಂದೆ ಅದರಿಂದ ತಾಯ್ತನದ ಸುಖ ಅನುಭವಿಸುವ ಸಾಧ್ಯತೆ ನೂರಕ್ಕೆ ನೂರು ಗ್ಯಾರಂಟಿ ಏನಿಲ್ಲ. ಆದರೆ ನೈಸರ್ಗಿಕವಾಗಿ ಪಡೆಯುವ ಅವಕಾಶವಿಲ್ಲದಿದ್ದಾಗ ಇದೊಂದು ವಿಧಾನವನ್ನು ಯತ್ನಿಸಬಹುದು ಎಂಬ ಆಶಾಕಿರಣವೇ ಸಾಕು ಎಂಬ ಭಾವನೆ ಹಲವರಲ್ಲಿದೆ.

ಅಂಡಾಣುವನ್ನು ಕಾದಿರಿಸುವ ಮುನ್ನ ತಜ್ಞರ ಜೊತೆ ಮಾತನಾಡುವುದು ಸೂಕ್ತ. ವಯಸ್ಸು ಜಾಸ್ತಿಯಾದಷ್ಟೂ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುವುದಲ್ಲದೇ, ಮುಂದೆ ಇದನ್ನು ಬಳಸಿ ಮಗು ಪಡೆಯುವ ಸಾಧ್ಯತೆಯೂ ಕಡಿಮೆಯಾಗುತ್ತ ಹೋಗುತ್ತದೆ. 35 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಇದನ್ನು ಕಾದಿರಿಸುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT