ಭಾನುವಾರ, ಸೆಪ್ಟೆಂಬರ್ 20, 2020
24 °C

ಖಾಸಗಿ ಕಂಪನಿ ಮೋಸದ ಭಯ

ಸುನೀತಾ ರಾವ್‌ Updated:

ಅಕ್ಷರ ಗಾತ್ರ : | |

Prajavani

* ನನಗೆ 23 ವರ್ಷ. ನನಗೆ ಖಾಸಗಿ ಕೆಲಸಗಳಲ್ಲಿ ನಂಬಿಕೆ ಬರುತ್ತಿಲ್ಲ. ಏಕೆಂದರೆ ಖಾಸಗಿ ಕೆಲಸವೇನೋ ಸಿಗುತ್ತದೆ. ಆದರೆ ಸಂಬಳದ್ದೇ ಆತಂಕ. ಎಲ್ಲಿ ನನಗೆ ಮೋಸ ಮಾಡುತ್ತಾರೋ ಎನ್ನುವ ಚಿಂತೆ ಕಾಡುತ್ತಿದೆ. ಕಷ್ಟಪಟ್ಟು ಕೆಲಸ ಮಾಡಿ ಸಂಬಳ ಬಾರದಿದ್ದರೆ ಜೀವ ಹೋದ ಹಾಗೆ ಆಗುತ್ತದೆ. ಈ ಥರ ಯೋಚನೆ ನನ್ನ ಜೀವನದ ಆಸೆಯನ್ನೇ ಮರೆತಂತೆ ಆಗಿದೆ. ಎಲ್ಲಿ ನಾನು ಹುಚ್ಚನೋ, ಭಿಕ್ಷುಕನೋ ಆಗುತ್ತೇನೋ ಎಂಬ ಆತಂಕ, ಅನುಮಾನ ಮೂಡುತ್ತಿದೆ. ಜೀವನವನ್ನೇ ಕಳೆದುಕೊಳ್ಳುತ್ತೇನೇನೋ ಎಂಬ ನೆಗೆಟಿವ್ ಯೋಚನೆ ತಲೆಯಲ್ಲಿ ತುಂಬಿದೆ.

- ಹೆಸರು, ಊರು ಬೇಡ

ಖಾಸಗಿ ಕೆಲಸ ಎಂದ ಮೇಲೆ ಕೆಲವು ತೊಂದರೆಗಳಿರುವುದು ಸಾಮಾನ್ಯ. ಆದರೆ ಅದರ ಅರ್ಥ ನೀವು ಮೋಸಕ್ಕೆ ಒಳಗಾಗುತ್ತೀರಿ ಎಂದಲ್ಲ. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಿ, ಕೆಲಸಕ್ಕೆ ಪ್ರಯತ್ನ ಮಾಡುತ್ತಿರಿ. ಅದರೊಂದಿಗೆ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕರೆ ಆ ಕೆಲಸಕ್ಕೆ ಸೇರಿ. ಸುಮ್ಮನೆ ಕುಳಿತು ಖಾಸಗಿ ಕಂಪನಿಗಳ ಕೆಲಸಗಳ ಬಗ್ಗೆ ಋಣಾತ್ಮಕವಾಗಿ ಯೋಚಿಸುತ್ತಾ ಕುಳಿತರೆ ನೀವು ನಿರುದ್ಯೋಗಿಯಾಗುತ್ತೀರಿ. ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಧನಾತ್ಮಕ ಮನಸ್ಸಿನಿಂದ ದಿಟ್ಟ ಹೆಜ್ಜೆ ಇರಿಸಿ. ಸಮಯ ಕಳೆದಂತೆ ನಿಮಗೆ ಆತ್ಮವಿಶ್ವಾಸ ಮೂಡುತ್ತದೆ. ಜೊತೆಗೆ ನೀವು ಇಲ್ಲಿಯವರೆಗೆ ಯೋಚಿಸಿದ ಹಾಗೆ ಅದು ಕೆಟ್ಟದ್ದಲ್ಲ ಎಂಬುದು ಅರಿವಾಗುತ್ತದೆ. ಒಳ್ಳೆಯ ಉದ್ಯೋಗದಲ್ಲಿರುವ ಸ್ನೇಹಿತರ ಜೊತೆ ಬೆರೆಯಿರಿ. ಅದನ್ನು ಬಿಟ್ಟು ನಿಮಗೆ ಋಣಾತ್ಮಕ ಚಿಂತನೆಯನ್ನು ಮನಸ್ಸಿಗೆ ತುಂಬುವುದು ಅಥವಾ ನಿಮಗೆ ಋಣಾತ್ಮಕ ಸಲಹೆ ನೀಡುವ ಸ್ನೇಹಿತರ ಜೊತೆ ಬೆರೆಯಬೇಡಿ. ಎಲ್ಲರೂ ಸರ್ಕಾರಿ ಕೆಲಸ ಪಡೆಯಲು ಸಾಧ್ಯವಿಲ್ಲ ಮತ್ತು ಖಾಸಗಿ ಕೆಲಸದಲ್ಲಿ ಎಲ್ಲರೂ ಸಮಸ್ಯೆಯನ್ನು ಎದುರಿಸುತ್ತಾರೆ ಎಂದು ಅರ್ಥವಲ್ಲ. ಹೀಗಾಗಿ ನಿಮ್ಮ ಮನಸ್ಸನ್ನು ಶಾಂತವಾಗಿರಿಸಿ, ನಿಮ್ಮ ಆತಂಕವನ್ನು ಕಡಿಮೆ ಮಾಡಿಕೊಳ್ಳಿ. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನೀವು ಋಣಾತ್ಮಕ ಯೋಚನೆಯಿಂದ ದೂರ ಉಳಿದು ಶಾಂತರಾಗಬಹುದು.

* ನಾನು ಬ್ರಾಹ್ಮಣ ಯುವಕ. ನಾನು ಒಬ್ಬ ಮುಸ್ಲಿಂ ಹುಡುಗಿಯನ್ನು 2 ವರ್ಷದಿಂದ ಪ್ರೀತಿಸುತ್ತಿದ್ದೇನೆ. ಇಬ್ಬರಿಗೂ ಮದುವೆಯಾಗಲು ಒಪ್ಪಿಗೆ ಇದೆ. ಆದರೆ ಇಬ್ಬರ ಮನೆಯಲ್ಲೂ ಒಪ್ಪಿಗೆ ಇಲ್ಲ. ಎಲ್ಲಾದರೂ ಹೋಗಿ ಮದುವೆಯಾಗೋಣ ಎಂದರೆ ಅವಳು ಒಪ್ಪುತ್ತಿಲ್ಲ. ನನಗೆ ನೀನೂ ಬೇಕು, ನನ್ನ ಕುಟುಂಬವೂ ಬೇಕು ಎನ್ನುತ್ತಿದ್ದಾಳೆ. ನನಗೆ ಅವಳನ್ನು ಬಿಡಲು ಆಗುತ್ತಿಲ್ಲ. ವಿಚಿತ್ರ ಹಿಂಸೆಯಾಗುತ್ತಿದೆ. ಅಕಸ್ಮಾತ್ ನಾನವಳನ್ನು ಮದುವೆ ಆದರೆ ಅವಳ ಕಡೆಯವರು ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಕೊಡುತ್ತಾರೆ ಎಂಬ ಭಯವೂ ಕಾಡುತ್ತಿದೆ. ದಿನವಿಡೀ ಆತಂಕ ಕಾಡುತ್ತದೆ.

- ಜಮದಗ್ನಿ, ಊರು ಬೇಡ

ಅಂತರ್ ಧರ್ಮೀಯ ಮದುವೆ ಎನ್ನುವುದು ತುಂಬಾ ಸೂಕ್ಷ್ಮವಾದ ವಿಚಾರ. ಇಂದಿಗೂ ಕೂಡ ಅನೇಕ ಸಮುದಾಯಗಳಲ್ಲಿ ಪ್ರೇಮ ವಿವಾಹಕ್ಕೆ ಒಪ್ಪಿಗೆ ನೀಡುವುದಿಲ್ಲ. ಯಾಕೆಂದರೆ ಸಾಂಸ್ಕೃತಿಕ ಭಿನ್ನಾಭಿಪ್ರಾಯ, ಆಹಾರ, ಜೀವನಶೈಲಿ, ಭಾಷೆ ಈ ಎಲ್ಲವೂ ಒಂದು ಸಮುದಾಯದಿಂದ ಇನ್ನೊಂದು ಸಮುದಾಯಕ್ಕೆ ಭಿನ್ನವಾಗಿರುತ್ತದೆ. ಪೋಷಕರಾಗಿ ಅವರು ಇದನ್ನು ಒಪ್ಪಿಕೊಳ್ಳುವುದು ತುಂಬಾ ಕಷ್ಟ. ಅವರು ನಿಮಗಿಂತ ಹೆಚ್ಚಿನ ತಲೆಮಾರುಗಳನ್ನು ನೋಡಿರುತ್ತಾರೆ. ಹೀಗಾಗಿ ಅವರ ಅನುಭವಗಳು ಗಣನೆಗೆ ಬರುತ್ತವೆ. ಮದುವೆ ಎನ್ನುವುದು ಕೇವಲ ಗಂಡು ಹಾಗೂ ಹೆಣ್ಣಿನ ನಡುವೆ ಆಗುವುದಲ್ಲ. ಮನೆಯವರು ಇದರಲ್ಲಿ ಭಾಗಿಯಾಗಬೇಕು. ಹೀಗಾಗಿ ಅವರು ಒಪ್ಪುವುದು ತುಂಬಾ ಕಷ್ಟ. ಇಲ್ಲಿಯವರೆಗೆ ನೀವು ಯೋಚಿಸಿರುವುದು ನೀವು ಎಲ್ಲವನ್ನೂ ಬಿಟ್ಟು ದೂರ ಹೋಗುತ್ತೀರೆಂದು. ಆದರೆ ನಾಳೆ ನಿಮ್ಮ ಮಕ್ಕಳಿಗೆ ಕುಟುಂಬ ಬೇಕು. ಅಜ್ಜಿ ಅಜ್ಜ ಬೇಕು.

ಮದುವೆ ಎನ್ನುವುದು ಎರಡೂ ಕಡೆಯ ಪೋಷಕರು ಒಪ್ಪಿದಾಗಲಷ್ಟೇ ನಡೆಯಲು ಸಾಧ್ಯ. ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಈಗ ನಿಮಗೆ ಪರಿಸ್ಥಿತಿಯ ಅರಿವಾಗುವುದಿಲ್ಲ. ಆದರೆ ನೀವಿಬ್ಬರೂ ಒಟ್ಟಿಗೆ ಬದುಕಲು ಆರಂಭಿಸಿದ ಮೇಲೆ ನಿಮಗೆ ಅರಿವಾಗುತ್ತದೆ. ನಿಮ್ಮಿಬ್ಬರ ನಡುವೆ ಸಾಂಸ್ಕೃತಿಕ ವಿಭಿನ್ನತೆ ಬಹಳವೇ ಇದೆ.

* ನಾನು ಬಿ.ಎ., ಬಿ.ಎಡ್‌. ಮಾಡಿದ್ದೇನೆ. ನನಗೆ 26 ವರ್ಷ. ಕೆಲಸವಿಲ್ಲ. ಮನೆಯಲ್ಲಿ ಮದುವೆ ಮಾಡಬೇಕು ಎಂದು ಗಂಡು ಹುಡುಕುತ್ತಿದ್ದಾರೆ. ಆದರೆ ಯಾರೂ ನನ್ನನ್ನು ಇಷ್ಟಪಡುತ್ತಿಲ್ಲ. ಇದರಿಂದ ನನಗೆ ತುಂಬಾನೇ ಬೇಸರವಾಗಿದೆ. ನನಗೆ ಥೈರಾಯ್ಡ್‌ ಸಮಸ್ಯೆಯಿದೆ. ಅದರಿಂದ ತುಂಬಾ ದಪ್ಪ ಆಗಿದ್ದೇನೆ. ಈಗ ನನಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.

- ಹೆಸರು, ಊರು ಬೇಡ

ಈಗ ನೀವು ಕೆಲಸಕ್ಕೆ ಅರ್ಜಿ ಹಾಕಿ. ಸದ್ಯಕ್ಕೆ ಅದುವೇ ನಿಮ್ಮ ‌ಗುರಿಯಾಗಿರಲಿ. ನಿಮ್ಮ ವಿದ್ಯಾರ್ಹತೆಗೆ ಖಂಡಿತ ನಿಮಗೆ ಶಾಲೆಯಲ್ಲಿ ಕೆಲಸ ಸಿಗುತ್ತದೆ. ಅದರ ಜೊತೆ ಜೊತೆಗೆ ಥೈರಾಯ್ಡ್‌ ಇರುವ ಕಾರಣದಿಂದ ನಿಮ್ಮ ತೂಕ ಹೆಚ್ಚಾಗಿದೆ ಎಂಬುದು ನನಗೆ ಅರ್ಥವಾಗಿದೆ. ಆದರೆ ಪ್ರತಿದಿನ ಯೋಗ ಹಾಗೂ ವ್ಯಾಯಾಮ ಮಾಡುವುದರಿಂದ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅದರೊಂದಿಗೆ ನೀವು ಆರೋಗ್ಯಪೂರ್ಣರಾಗಿ ಖುಷಿಯಿಂದ ಇರಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.