ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ತಿಳಿಯೋಣ | ಗ್ಯಾಸ್ಟ್ರೈಟಿಸ್: ಕೋವಿಡ್‌ನ ಮಂದ ಲಕ್ಷಣ

Last Updated 17 ಜನವರಿ 2021, 19:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಧುನಿಕ ಆಹಾರ ಪದ್ಧತಿ, ಜೀವನ ಶೈಲಿಯಲ್ಲಿಯ ದೋಷಗಳಿಂದ ಎಲ್ಲಾ ವಯಸ್ಸಿನವರಲ್ಲಿ ಗ್ಯಾಸ್ಟ್ರೈಟಿಸ್ (ಜಠರದ ಉರಿ) ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಕೋವಿಡ್‌ ಸಂದರ್ಭದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವೂ ಇದೆ. ಗ್ಯಾಸ್ಟ್ರೈಟಿಸ್ ಉಲ್ಬಣಕ್ಕೂ ಕೋವಿಡ್‌ಗೂ ನೇರ ಸಂಬಂಧವಿಲ್ಲ. ಆದರೆ, ಕೋವಿಡ್‌ನ ಕೆಲವು ಮಂದ ಲಕ್ಷಣಗಳಲ್ಲಿ ಹೊಟ್ಟೆ ಉರಿಯೂ ಒಂದು.

ಸಾಮಾನ್ಯವಾಗಿ ಕೊರೊನಾ ವೈರಸ್‌ ಶ್ವಾಸಕೋಶದ ಮೇಲೆ ಹೆಚ್ಚಿನ ದಾಳಿ ಮಾಡುತ್ತದೆ. ಶ್ವಾಸಕೋಶದ ಮೂಲಕ ದೇಹದ ಇತರ ದುರ್ಬಲ ಅಂಗಗಳ ಮೇಲೂ ದಾಳಿ ಮಾಡುತ್ತದೆ. ಇದರಿಂದ ಕೆಲವರಿಗೆ ವಾಂತಿ, ಬೇಧಿ ಆಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದರೆ, ಗ್ಯಾಸ್ಟ್ರೈಟಿಸ್ ಸಮಸ್ಯೆ ಎದುರಿಸುತ್ತಿರುವವರು ಕೋವಿಡ್‌ನ ಮಂದ ಲಕ್ಷಣಗಳನ್ನು ಗ್ರಹಿಸದೆ ಔಷಧ ತೆಗೆದುಕೊಳ್ಳುತ್ತಾರೆ. ಸಮಸ್ಯೆ ಉಲ್ಬಣವಾಗಿ ಆಸ್ಪತ್ರೆಗಳಿಗೆ ಬರುವ ಶೇ 20ರಷ್ಟು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ಸುಶ್ರುತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಪ್ರೋಸ್ಕೋಪಿ ಮತ್ತು ಎಂಡೋಸ್ಕೋಪಿ ತಜ್ಞ ಡಾ. ಕೆ.ಜಿ. ಬ್ಯಾಕೋಡಿ.

ಸಾಮಾನ್ಯ ಹೊಟ್ಟೆ ಉರಿ, ಎದೆ ಉರಿ ಕಾಣಿಸಿಕೊಂಡು ವಾಂತಿ, ಬೇಧಿ ಎದುರಿಸುತ್ತಿರುವವರಿಗೆ ಸಿಟಿ ಸ್ಕ್ಯಾನ್‌, ರಕ್ತ ಪರೀಕ್ಷೆ ಅಥವಾ ಸ್ವ್ಯಾಬ್‌ ಪರೀಕ್ಷೆ ಮಾಡಿಸಲಾಗುತ್ತದೆ.

ಕೋವಿಡ್‌ ಲಕ್ಷಣಗಳನ್ನು ಪರಿಗಣಿಸದೆ ನಿರ್ಲಕ್ಷ್ಯ ತೋರುವಹಲವರು ವೈದ್ಯರ ಸಲಹೆ ಪಡೆಯದೆ ಸ್ವಯಂ ಔಷಧೋಪಚಾರ ಮಾಡಿಕೊಳ್ಳುತ್ತಿದ್ದಾರೆ. ಆ್ಯಂಟಿ ಬಯಾಟಿಕ್‌, ನೋವು ನಿವಾರಕ, ಸ್ಟೆರಾಯ್ಡ್‌ನಂತಹ ಔಷಧವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ. ಇದೂ ಅಪಾಯಕಾರಿ. ಆದ್ದರಿಂದ ಕೋವಿಡ್‌ನ ಯಾವ ಲಕ್ಷಣ ಕಂಡು ಬಂದರೂ ಬಿಸಿ ನೀರು, ಬಿಸಿ ಆಹಾರ ಸೇವನೆ ಮಾಡಿ. ವೈದ್ಯರ ಸಲಹೆ ಕಡ್ಡಾಯವಾಗಿ ಪಡೆಯಿರಿ ಎನ್ನುತ್ತಾರೆ ಡಾ. ಬ್ಯಾಕೋಡಿ.

ಯಾವುದೇ ವೈರಸ್‌ನ ಆಯುಸ್ಸು ಬಿಸಿ ತಾಪಮಾನ ಇದ್ದೆಡೆ ತುಂಬ ಕಡಿಮೆ ಇರುತ್ತದೆ. ಆದರೆ ತಂಪು ಸ್ಥಳದಲ್ಲಿ ದೀರ್ಘಕಾಲ ಬದುಕಿರುತ್ತದೆ. ಗ್ಯಾಸ್ಟ್ರೈಟಿಸ್ ಆದಾಗ ಫ್ರಿಡ್ಜ್‌ನಲ್ಲಿಡುವ ತಂಪು ಪಾನೀಯಗಳನ್ನೋ, ಐಸ್‌ಕ್ರೀಂನಂತಹ ಪದಾರ್ಥಗಳನ್ನು ಸೇವಿಸುವುದು ಯುವಜನರಲ್ಲಿ ಸಾಮಾನ್ಯ. ಕೋವಿಡ್‌ ಸಂದರ್ಭದಲ್ಲಿ ಇಂತಹದ್ದಕ್ಕೆ ಕಡಿವಾಣ ಹಾಕಲೇಬೇಕು.

ವೈರಸ್‌ ನಿಗ್ರಹಕ್ಕೆ ಆರೋಗ್ಯಕರ ಜೀವನ ಶೈಲಿಯೇ ಮದ್ದು. ಬಿಸಿ ಆಹಾರ ಸೇವನೆಗೆ ಆದ್ಯತೆ ನೀಡಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಕೋವಿಡ್‌ ನಿಯಮ ಪಾಲಿಸಿ ಎಂದು ಅವರು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT