ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸೆ ಬರದೇ ಬೇಸರ ಕಾಡುತ್ತಿದೆಯೇ ? ಇಲ್ಲಿದೆ ಪರಿಹಾರ!

Last Updated 21 ಡಿಸೆಂಬರ್ 2019, 9:19 IST
ಅಕ್ಷರ ಗಾತ್ರ

23 ವರ್ಷದ ಸರ್ಕಾರಿ ನೌಕರ. ನನಗೆ ಮೀಸೆ ಸರಿಯಾಗಿ ಬರುತ್ತಿಲ್ಲ. ಅದು ಕೆಂಪಾಗಿರುವುದರಿಂದ ದೂರದಿಂದ ಕಾಣಿಸುತ್ತಿಲ್ಲ. ಗಡ್ಡ ಬರುತ್ತಿದೆ. ಎಲ್ಲರ ಮೀಸೆ ನೋಡಿದಾಗ ಇದು ಲೈಂಗಿಕ ಸಮಸ್ಯೆನಾ ಎಂದು ಭಯವಾಗುತ್ತದೆ. ಹಾರ್ಮೋನ್‌ ಸಮಸ್ಯೆಯಾಗಿದ್ದರೆ ಎಲ್ಲಿ ಚಿಕಿತ್ಸೆ ಸಿಗುತ್ತದೆ?
–ಹೆಸರು, ಊರು ಇಲ್ಲ

ಉತ್ತರ: ನಿಮಗೆ ಲೈಂಗಿಕ ಆಸಕ್ತಿಯಿದ್ದು ಶಿಶ್ನದ ಉದ್ರೇಕವಾಗುತ್ತಿದ್ದರೆ ಯಾವುದೇ ಸಮಸ್ಯೆಗಳಿಲ್ಲ. ಮೀಸೆಗೂ ಲೈಂಗಿಕತೆಗೂ ಸಂಬಂಧವಿಲ್ಲ. ಮುಖದ ಮೇಲೆ ಕೂದಲು ಬರುವುದು ಗಂಡು-ಹೆಣ್ಣುಗಳನ್ನು ಗುರುತಿಸುವುದಕ್ಕೆ ಪ್ರಕೃತಿ ಮಾಡಿರುವ ವ್ಯವಸ್ಥೆ. ಅನಗತ್ಯವಾದ ಹಾರ್ಮೋನ್‌ಗಳನ್ನು ಸೇವಿಸಿ ದೇಹಮನಸ್ಸುಗಳ ಮೇಲೆ ಒತ್ತಡ ಹಾಕಿಕೊಳ್ಳಬೇಡಿ. ಬೇಕಿದ್ದರೆ ಗಡ್ಡಮೀಸೆಗಳನ್ನು ಬೋಳಿಸಿಕೊಂಡು ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು. ನಿಮ್ಮ ಸಂಪೂರ್ಣ ವ್ಯಕ್ತಿತ್ವದ ಗುರುತನ್ನು ಮೀಸೆಯಲ್ಲಿ ಇಡದೆ ಬೇರೆಬೇರೆ ಆಸಕ್ತಿಗಳನ್ನು ಬೆಳೆಸಿಕೊಳ್ಳಿ. ಸರಳತೆ, ಕಾರ್ಯಕ್ಷಮತೆ, ಸ್ನೇಹ, ಪ್ರಾಮಾಣಿಕತೆಗಳಿಂದ ಸುತ್ತಲಿನವರನ್ನು ಸೆಳೆಯಿರಿ. ಆಗ ಮೀಸೆ ಇಲ್ಲದಿರುವುದು ನಿಮಗೆ ಸಮಸ್ಯೆಯಾಗಿ ಕಾಡುವುದಿಲ್ಲ.

*
ನಾನೊಬ್ಬ ವಿಚ್ಛೇದಿತನನ್ನು ಪ್ರೀತಿಸುತ್ತಿದ್ದೇನೆ. ಅವರ ಮೊದಲ ಹೆಂಡತಿ ಮನೆಯಲ್ಲಿ ಹೊಂದಿಕೊಳ್ಳಲಾಗದೆ 2 ತಿಂಗಳಲ್ಲಿ ವಿಚ್ಛೇದನ ಪಡೆದುಕೊಂಡಳು. ಹುಡುಗನ ಮನೆಯವರು ಬೇರೆ ಧರ್ಮದವರು ಮತ್ತು ನಾನು ಪರಿಶಿಷ್ಟ ಜಾತಿಯವಳಾದ್ದರಿಂದ ಮದುವೆಯಾದರೆ ಸಾಯುತ್ತೇವೆಂದು ಅವರ ಪೋಷಕರು ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಮನೆಯಲ್ಲಿ ಇನ್ನೂ ತಿಳಿಸದಿದ್ದರೂ ಅಂತರ್ಜಾತೀಯ ವಿವಾಹಕ್ಕೆ ತಂದೆ ಒಪ್ಪುತ್ತಾರೆ. ಹುಡುಗನಿಗೆ ನನ್ನನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಲು ಇಷ್ಟವಿಲ್ಲ. ಇದಕ್ಕೆ ಪರಿಹಾರ ತಿಳಿಸಿ.
–ಹೆಸರು, ಊರು ಇಲ್ಲ

ಉತ್ತರ: ನಿಮ್ಮಿಬ್ಬರ ಪ್ರೀತಿಯು ಪ್ರಾಮಾಣಿಕವಾದದ್ದು ಎಂದುಕೊಳ್ಳೋಣ. ಆದರೆ ಜಾತಿಧರ್ಮಗಳನ್ನು ಮೀರಲಾಗದಿದ್ದಾಗ ಪ್ರೀತಿ ದೀರ್ಘಕಾಲ ಹೇಗೆ ಬಾಳಬಲ್ಲದು? ತಂದೆತಾಯಿಗಳನ್ನು ಒಪ್ಪಿಸುವುದು ಅಥವಾ ಅವರ ಕಟ್ಟುಪಾಡುಗಳಿಂದ ಹೊರಬಂದು ನಿಮ್ಮನ್ನು ವರಿಸುವುದು ಹುಡುಗನ ಜವಾಬ್ದಾರಿಯಲ್ಲವೇ? ಪೋಷಕರ ಮಾತನ್ನು ಮೀರಲಾಗದವರಿಗೆ ದೃಢವಾದ ವ್ಯಕ್ತಿತ್ವ ಇರುತ್ತದೆಯೇ? ಪೋಷಕರ ಒತ್ತಡಕ್ಕೆ ಮಣಿಯುವ ಹುಡುಗನ ಸ್ವಭಾವದಿಂದಾಗಿಯೇ ಮೊದಲ ಹೆಂಡತಿ ವಿಚ್ಛೇದನ ನೀಡಿರಬಹುದೇ? ಸ್ವಂತಿಕೆಯಿಲ್ಲದವರನ್ನು ಯಾವ ಭರವಸೆಯೊಂದಿಗೆ ಮದುವೆಯಾಗುತ್ತೀರಿ? ಹುಡುಗನ ಪೋಷಕರು ನಿಮ್ಮ ಮದುವೆಗೆ ಒಪ್ಪಿಕೊಂಡರೂ ನೀವು ಕೂಡ ಮೊದಲ ಹೆಂಡತಿಯಂತೆಯೇ ಅವರ ಒತ್ತಡಕ್ಕೆ ಮಣಿದು ಅಸುಖಿಗಳಾಗುವ ಸಾಧ್ಯತೆಗಳೇ ಹೆಚ್ಚು. ನಿಮಗೆ ಸರಿಯೆನಿಸುವ ನಿರ್ದಿಷ್ಟ ಸಮಯದೊಳಗೆ ಪೋಷಕರನ್ನು ಒಪ್ಪಿಸುವ ಜವಾಬ್ದಾರಿಯನ್ನು ಹುಡುಗನಿಗೆ ಕೊಡಿ. ಅವರಿಗೆ ಸಾಧ್ಯವಾಗದಿದ್ದರೆ ಸಂಬಂಧದಿಂದ ಹೊರಬಂದು ನಿಮ್ಮ ಜೀವನದ ದಾರಿ ಹುಡುಕಿಕೊಳ್ಳಿ. ತಾತ್ಕಾಲಿಕವಾಗಿ ನೋವಿನ ವಿಷಯವಾದರೂ ಇದರಿಂದ ನಿಮಗೆ ಜೀವನಪರ್ಯಂತದ ಸಮಾಧಾನವಿರುತ್ತದೆ.

*
ವಯಸ್ಸು 21. ಎಂ.ಟೆಕ್‌. ಮುಗಿಸಿದ್ದೀನಿ. ಐಎಎಸ್‌ ಮಾಡಬೇಕೆಂದಿದ್ದೇನೆ. ತಂದೆಯವರು ಉದ್ಯೋಗವಿಲ್ಲದ ಸೋದರಮಾವನ ಜೊತೆ ಮದುವೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಅವರಿಗೂ ಮದುವೆ ಇಷ್ಟವಿಲ್ಲ. ಉದ್ಯೋಗ ಮಾಡಿ ಅವನನ್ನು ನೀನು ನೋಡ್ಕೋಬೇಕು ಅಂತ ತಂದೆ ಹೇಳುತ್ತಾರೆ. ಇದು ಸರಿಯೇ? ನೀವೇ ಪರಿಹಾರ ಹೇಳಿ.
–ಹೆಸರಿಲ್ಲ,ವಿಜಯಪುರ


ಉತ್ತರ:ಪತ್ರದ ಧ್ವನಿಯನ್ನು ನೋಡಿದರೆ ತಂದೆಯನ್ನು ವಿರೋಧಿಸಿ ನಿಮ್ಮ ಆಯ್ಕೆಗಳ ಹಿಂದೆ ಹೋಗಲು ಭಯಪಡುತ್ತಿದ್ದೀರಿ ಎನಿಸುತ್ತದೆ. ಈ ಭಯವೇ ನಿಮ್ಮನ್ನು ಅಸಹಾಯಕರನ್ನಾಗಿ ಮಾಡುತ್ತಿದೆ. ನಿಮ್ಮ ರಕ್ಷಣೆಯನ್ನು ನೀವೇ ಮಾಡಿಕೊಳ್ಳುವ ಗಟ್ಟಿತನ ಬೆಳೆಸಿಕೊಳ್ಳಬೇಕಾಗಿದೆ. ತಂದೆಯವರು ಆಜ್ಞೆಯನ್ನು ಮೀರುವುದು ಎಂದರೆ ಅವರನ್ನು ಅಗೌರವಿಸುವುದು, ತಿರಸ್ಕರಿಸುವುದು ಎಂದಾಗಬೇಕಿಲ್ಲ. ನನಗೆ ನಿಮ್ಮ ಬಗ್ಗೆ ಪ್ರೀತಿ, ಗೌರವಗಳಿದ್ದರೂ ನಿಮ್ಮ ಆಯ್ಕೆಯನ್ನು ಒಪ್ಪಲಾರೆ ಎಂದು ದೃಢವಾಗಿ ಹೇಳಲೇಬೇಕು. ಮೊದಲು ಉದ್ಯೋಗವೊಂದನ್ನು ಹುಡುಕಿಕೊಂಡು ಆರ್ಥಿಕವಾಗಿ ಸ್ವತಂತ್ರರಾಗಿ. ನಂತರ ನಿಮ್ಮ ಕನಸುಗಳನ್ನು ನಿಧಾನವಾಗಿ ಬೆನ್ನುಹತ್ತಲು ಸಾಧ್ಯವಿದೆ. ತಕ್ಷಣದ ಕಷ್ಟಗಳನ್ನು ಎದುರಿಸಲು ಹಿಂಜರಿದು ನಿಮ್ಮ ಆಯ್ಕೆಗಳನ್ನು ಬಿಟ್ಟುಕೊಟ್ಟರೆ ಜೀವನಪರ್ಯಂತದ ಬೇಸರಕ್ಕೆ ಮುನ್ನುಡಿ ಹಾಕಿಕೊಳ್ಳುತ್ತೀರಿ.

*
25ರ ಯುವಕ. ಮದುವೆ ಆಗಿದೆ. ಲೈಂಗಿಕಕ್ರಿಯೆ ಮೈಲಿಗೆ ಎಂಬ ಭಾವನೆ ಇದೆ. ಹಗಲಿನಲ್ಲಿ ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ನಾನ ಮಾಡಲೇಬೇಕಾ? ಇದು ಮೈಲಿಗೆನಾ? ಈ ಸಮಸ್ಯೆಯಿಂದ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ. ಪರಿಹಾರ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ

ಉತ್ತರ: ದೇವರ ವರವಾದ ಸೃಷ್ಟಿಕ್ರಿಯೆ ಮೈಲಿಗೆಯಾಗುವುದು ಹೇಗೆ ಸಾದ್ಯ? ಲೈಂಗಿಕಕ್ರಿಯೆಗೆ ಮೊದಲು ಮತ್ತು (ಪತ್ನಿಯ ಜೊತೆ ಮಿಲನದ ಆನಂದವನ್ನು ಹಂಚಿಕೊಂಡ) ನಂತರ ಲೈಂಗಿಕ ಅಂಗಾಂಗಗಳನ್ನು ಶುದ್ಧಿಮಾಡಿಕೊಳ್ಳುವುದು ಆರೋಗ್ಯಕರ. ಮಿಲನದ ನಂತರ ಸ್ನಾನ ಮಾಡಬೇಕು ಎನ್ನುವುದು ನಿಮಗೆ ಬಾಲ್ಯದಿಂದ ಬಂದಿರುವ ಮಡಿಮೈಲಿಗೆಯ ನಂಬಿಕೆ ಮಾತ್ರ. ಇದು ನಿಮ್ಮಿಬ್ಬರ ಮಿಲನಸುಖಕ್ಕೆ ಮಿತಿಯಾಗಬಹುದು. ಸ್ನಾನ ಮಾಡುವುದು ಸಾಧ್ಯವಿಲ್ಲದಿದ್ದಾಗ ಇಬ್ಬರಿಗೂ ಆಸಕ್ತಿಯಿದ್ದರೂ ದೂರಾಗುತ್ತೀರಿ. ಇದರಿಂದ ಇಬ್ಬರಿಗೂ ಬೇಸರವಾಗುತ್ತದೆ. ಅವೈಜ್ಞಾನಿಕವಾದ ಇಂತಹ ನಂಬಿಕೆಗಳಿಂದ ನಿಧಾನವಾಗಿ ಹೊರಬಂದು ದಾಂಪತ್ಯದ ಅನ್ಯೋನ್ಯತೆಯನ್ನು ಹೆಚ್ಚಿಸಿಕೊಳ್ಳಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT