ಸೋಮವಾರ, ಜೂನ್ 27, 2022
24 °C

ಜಿಮ್‌: ಖುಷಿಯ ಜೊತೆ ಇರಲಿ ಎಚ್ಚರ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಕಾರಣದಿಂದ ಜಿಮ್‌ಗಳು, ಸಿನಿಮಾ ಹಾಲ್‌ಗಳು ಹಾಗೂ ಮಾಲ್‌ಗಳಿಗೆ ಬೀಗ ಜಡಿಯಲಾಗಿತ್ತು. ಮಾಲ್‌ಗಳು ಪುನರಾರಂಭಗೊಂಡಿದ್ದು, ಅನ್‌ಲಾಕ್‌ 3ರ ಪ್ರಕ್ರಿಯೆಯಲ್ಲಿ ಜಿಮ್ ತೆರೆಯಲು ಅವಕಾಶ ಸಿಕ್ಕಿದೆ. ಆದರೆ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಜಿಮ್‌ಗಳನ್ನು ತೆರೆಯಬೇಕಾಗುತ್ತದೆ.

‘ಜಿಮ್‌ಗಳು ಮುಚ್ಚಿರುವ ಕಾರಣದಿಂದ ಹಲವರು ಆನ್‌ಲೈನ್‌ನಲ್ಲಿ‌ ಸಲಹೆ ಪಡೆಯುವ ಮೂಲಕ ಮನೆಯಲ್ಲೇ ಫಿಟ್‌ನೆಸ್‌ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಆದರೂ ನನ್ನಂತಹ ಕೆಲವರಿಗೆ ಇದು ಸರಿ ಹೊಂದುತ್ತಿಲ್ಲ. ಅಲ್ಲದೇ ಜಿಮ್‌ನಲ್ಲಿ ಹೋಗಿ ಕಸರತ್ತು ಮಾಡಿದ ಭಾವನೆ ಮೂಡುತ್ತಿಲ್ಲ. ಆ ಕಾರಣಕ್ಕೆ ಜಿಮ್‌ ತೆರೆಯುವುದನ್ನು ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಹರ್ಷ.

ಕೆಲ ತಿಂಗಳಿಂದ ಜಿಮ್‌ಗೆ ಹೋಗದೇ ಬೇಸರಗೊಂಡಿದ್ದ ನೀವು ಜಿಮ್‌ ಬಾಗಿಲು ತೆರೆದ ಖುಷಿಗೆ ಸುರಕ್ಷತಾ ಕ್ರಮಗಳನ್ನು ಮರೆಯುವ ಹಾಗಿಲ್ಲ. ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದ ಕಾರಣ ಜಿಮ್‌ನಲ್ಲಿ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.

ನಿಗದಿಪಡಿಸಿದ ಸಮಯವನ್ನು ಪಾಲಿಸಿ
ಜಿಮ್‌ನಲ್ಲಿ ಜನಸಾಂದ್ರತೆ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಸುರಕ್ಷತೆಯ ದೃಷ್ಟಿಯಿಂದ ನಿಮಗೆಂದೇ ಒಂದು ಸಮಯವನ್ನು ನಿಗದಿಪಡಿಸಿರಬಹುದು. ಆ ಕಾರಣಕ್ಕೆ ನಿಮ್ಮ ಸಮಯಕ್ಕೆ ಸರಿಯಾಗಿ ಜಿಮ್‌ಗೆ ಹೋಗಿ ನಿಮ್ಮ ಸಮಯ ಮುಗಿದ ತಕ್ಷಣ ಮರಳಿ ಬನ್ನಿ. ಜಿಮ್‌ನಲ್ಲಿ ಹೆಚ್ಚು ಜನ ಕಾಣಿಸಿದರೆ ನಿಮ್ಮ ವಾಹನದಲ್ಲಿ ಅಥವಾ ದೂರದಲ್ಲಿ ಎಲ್ಲಾದರೂ ಕಾದು ಜನ ಕಡಿಮೆಯಾದ ಹೋಗುವುದು ಉತ್ತಮ.

ಅಗತ್ಯ ವಸ್ತುಗಳನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ
ಮನೆಯಿಂದಲೇ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಿ. ಮನೆಯಿಂದಲೇ ಜಿಮ್‌ ಬಟ್ಟೆಗಳನ್ನು ಧರಿಸಿಕೊಂಡು ಹೋಗಿ. ಅಲ್ಲಿ ಹೋಗಿ ಬಟ್ಟೆ ಬದಲಾಯಿಸುವುದು ಸರಿಯಲ್ಲ. ಯಾಕೆಂದರೆ ಬಾಗಿಲ ಹಿಡಿಕೆಯಿಂದ ಹಿಡಿದು ಕೊಠಡಿಯವರೆಗೆ ಪದೇ ಪದೇ ಬೇರೆಯವರು ಮುಟ್ಟಿರುತ್ತಾರೆ. ಸಾಧ್ಯವಾದರೆ ಮ್ಯಾಟ್‌ ಕೂಡ ನಿಮ್ಮ ಮನೆಯಿಂದಲೇ ತೆಗೆದುಕೊಂಡು ಹೋಗಿ.

ಸ್ಯಾನಿಟೈಸರ್ ಬಳಕೆ ಕಡ್ಡಾಯ
ಜಿಮ್‌ ಉಪಕರಣಗಳನ್ನು ಮುಟ್ಟವಾಗ ಕೈಗವಸು ಧರಿಸಿಲ್ಲದಿದ್ದರೆ ಪ್ರತಿಬಾರಿ ಬಳಸಿದ ನಂತರ ಸ್ಯಾನಿಟೈಸರ್ ಉಪಯೋಗಿಸಿ. ಉಪಕರಣಗಳನ್ನು ಬಳಸಿದ ನಂತರ ಸ್ಯಾನಿಟೈಸರ್ ಬಳಸದೇ ನೇರವಾಗಿ ಮುಖ ಹಾಗೂ ಮೂಗನ್ನು ಮುಟ್ಟಬೇಡಿ. ಸಣ್ಣ ಸ್ಯಾನಿಟೈಸರ್ ಬಾಟಲ್‌ ಸದಾ ನಿಮ್ಮೊಂದಿಗಿರಲಿ.

ವರ್ಕೌಟ್‌ ಮಾಡುವಾಗ ಮಾಸ್ಕ್ ಧರಿಸದಿರಿ
ಮಾಸ್ಕ್‌ ಧರಿಸುವುದು ಕಡ್ಡಾಯ. ಆದರೆ ಜಿಮ್‌ನಲ್ಲಿ ಕಸರತ್ತು ಮಾಡುವಾಗ ಮಾಸ್ಕ್ ಧರಿಸದೇ ಇರುವುದು ಉತ್ತಮ. ಯಾಕೆಂದರೆ ಇದರಿಂದ ಆಮ್ಲಜನಕ ದೇಹವನ್ನು ಸೇರಲು ಅಡ್ಡಿಯಾಗಬಹುದು. ಇದರಿಂದ ನಿಮ್ಮ ಹೃದಯ ಬಡಿತ ಹೆಚ್ಚಬಹುದು. ಆಗ ಉಸಿರಾಟಕ್ಕೆ ತೊಂದರೆಯಾಗಿ ತಲೆಸುತ್ತುವುದು, ಲಘು ತಲೆನೋವು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜಿಮ್‌ನಲ್ಲಿ ಮಾಸ್ಕ್ ಧರಿಸಿ ಕಸರತ್ತು ಮಾಡುವ ಮೊದಲು ನಿಮ್ಮ ದೇಹಸ್ಥಿತಿಯ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ. 

*
ಸರ್ಕಾರ ಜಿಮ್ ತೆರೆಯಲು ಅನುಮತಿ ನೀಡಿದ್ದಕ್ಕೆ ಸಂತೋಷವಿದೆ. ಕರ್ನಾಟಕದ ಎಲ್ಲಾ ಜಿಮ್ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬುದು ನನ್ನ ಮನವಿ.
-ಎ.ವಿ. ರವಿ, ಕರ್ನಾಟಕ ಜಿಮ್, ಫಿಟ್‌ನೆಸ್ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು