ಸೋಮವಾರ, ಆಗಸ್ಟ್ 8, 2022
22 °C

ಆರೋಗ್ಯ: ಹವ್ಯಾಸಗಳು ಚಟಗಳಾಗದಿರಲಿ

ರಮ್ಯಾ ಶ್ರೀಹರಿ Updated:

ಅಕ್ಷರ ಗಾತ್ರ : | |

Prajavani

ದಿನನಿತ್ಯದ ಒತ್ತಡವನ್ನು ಸಹಿಸಲು ಸಾಧ್ಯವಾಗಿಸುವಂತಹ, ಚೇತೋಹಾರಿಯಾದ ಚಟುವಟಿಕೆಯೊಂದು ಎಲ್ಲರಿಗೂ ಬೇಕು. ಪ್ರತಿದಿನದ ಏಕತಾನತೆಯನ್ನು ಮೀರುವುದು, ಹಾಗೆಯೇ ಪ್ರತಿದಿನದ ಬದಲಾವಣೆಗಳನ್ನು ಒಪ್ಪಿಕೊಳ್ಳುವುದು; ಇವೆರಡಕ್ಕೂ ಸಹಕಾರಿಯಾದ ಚಟುವಟಿಕೆಗಳನ್ನು ಉತ್ತಮ ಹವ್ಯಾಸಗಳು ಎನ್ನಬಹುದು. ದಿನದಿನವೂ ಒಂದೇ ರೀತಿಯಾಗಿ ಬದುಕುವುದು ಎಷ್ಟು ಕಷ್ಟವೋ, ಅಷ್ಟೇ ಕಷ್ಟ ಪ್ರತಿದಿನವೂ ಊಹಿಸದ ಸನ್ನಿವೇಶ, ಸವಾಲು, ರೂಪಾಂತರಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು. ಹಾಗಾಗಿಯೇ ನಮ್ಮ ಹವ್ಯಾಸಗಳು ಅಥವಾ ಅಭ್ಯಾಸಗಳು ನಮ್ಮನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಸಮತೋಲನದಲ್ಲಿಡುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ.

ಬೆಳಗಿನ ನಡಿಗೆಯಿರಬಹುದು, ಸಂಜೆಯ ಸುತ್ತಾಟವಿರಬಹುದು ಅಥವಾ ಮಧ್ಯಾಹ್ನದ ಒಂದೆರಡು ಗಂಟೆಯ ನಮ್ಮಿಷ್ಟದ ಕೆಲಸ ಮಾಡುವ ಸಮಯವಿರಬಹುದು, ಅಭ್ಯಾಸವೊಂದು ತಪ್ಪಿಹೋದಾಗ ಆಗುವ ಅಲ್ಲೋಲಕಲ್ಲೋಲವು ನಮ್ಮ ಇಡೀ ದಿನವನ್ನೇ ಹಾಳುಮಾಡಿಬಿಡುತ್ತದೆ. ಹಾಗೆಂದು ಒಂದೇ ಒಂದು ದಿನವೂ ಸ್ವಲ್ಪವೂ ದಿನಚರಿ ತಪ್ಪದೆ ನಡೆಯುತ್ತಿರಬೇಕೆಂಬ ನಿರೀಕ್ಷೆಯು ವಾಸ್ತವಕ್ಕೆ ದೂರವಾದುದಷ್ಟೇ ಅಲ್ಲ, ಒತ್ತಡ ತರುವಂತಹದ್ದೂ ಹೌದು.

ಬದುಕಿಗೆ ಪ್ರೀತಿಯಿಂದ ಅಂಟಿಕೊಳ್ಳಲು, ಜೀವನದಲ್ಲಿ ಆಸಕ್ತಿಯನ್ನು ಉಳಿಸಿಕೊಳ್ಳಲು, ವರ್ತಮಾನದಲ್ಲಿ ಸಮಾಧಾನವನ್ನು, ಭವಿಷ್ಯದ ಬಗೆಗೆ ಭರವಸೆಯನ್ನು ಗಳಿಸಿಕೊಳ್ಳಲು ಕೆಲವು ‘ರಿಚುವಲ್‘(ritual)ಗಳು/ ಆಚರಣೆಗಳು ಅನಿವಾರ್ಯವಾಗಿಬಿಡುತ್ತವೆ. ಬೆಳಗ್ಗೆದ್ದು ಇಡೀ ದಿನ ಮಾಡಬೇಕಾದ ಕೆಲಸಗಳ ಬಗೆಗೆ ಅಥವಾ ಆಶಯಗಳ ಕುರಿತು ಬರೆದಿಡುವುದಿರಬಹುದು, ಸ್ನೇಹಿತರೊಟ್ಟಿಗಿನ ಸಂಜೆಯ ಚಹಾ ಕುಡಿಯುವುದಿರಬಹುದು, ಪ್ರಾರ್ಥನೆ–ಪೂಜೆಗಳಿರಬಹುದು, ವಾರಕ್ಕೊಮ್ಮೆ ಮನೆ ಶುಚಿಗೊಳಿಸುವುದಿರಬಹುದು – ಒಟ್ಟಿನಲ್ಲಿ ರಿಚುವಲ್‌ಗಳು ನಾವು ಯಾರೆಂದು ನಮಗೇ ನೆನಪಿಸುತ್ತಿರುತ್ತವೆ. ನಮ್ಮ ಆಳವಾದ ಆಕಾಂಕ್ಷೆಗಳು, ಜೀವನದೃಷ್ಟಿ ಎಲ್ಲವೂ ಇಂತಹ ಅಭ್ಯಾಸಗಳಲ್ಲಿ ಅಡಕವಾಗಿದ್ದು, ಸೂಚ್ಯವಾಗಿ ನಮ್ಮನ್ನು ನಮಗೇ ತೋರುವ ಕನ್ನಡಿಯಂತೆ ಕೆಲಸ ಮಾಡುತ್ತಿರುತ್ತದೆ. ನಿಯಮಿತವಾದ ಅಭ್ಯಾಸಗಳು ಹೊರಗಿನ ಒತ್ತಡ, ಸಂಘರ್ಷಗಳು ನಮ್ಮನ್ನು ಕಂಗೆಡಿಸಿದಾಗ ಪ್ರಶಾಂತವಾದ ಸುರಕ್ಷಿತ ತಾಣವೊಂದು ನಮ್ಮೊಳಗೇ ಇದ್ದು, ಬೇಕೆನಿಸಿದಾಗಲೆಲ್ಲಾ ಆ ತಾಣಕ್ಕೆ ತೆರಳಿ ದಣಿವಾರಿಸಿಕೊಳ್ಳಬಹುದೆಂಬ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ.

ಆದರೆ ಇಂತಹ ಒಳಲೋಕವೊಂದು ನಮ್ಮನ್ನು ನಮ್ಮ ಸುತ್ತಲಿನ ಪ್ರಪಂಚದಿಂದ, ಸಹಜೀವಿಗಳಿಂದ, ದಿನನಿತ್ಯದ ಆಗುಹೋಗುಗಳಿಂದ, ಜವಾಬ್ದಾರಿಗಳಿಂದ ಬೇರ್ಪಡಿಸುವಂತಾಗಿಬಿಟ್ಟರೆ ಹವ್ಯಾಸಗಳ ಮೂಲ ಉದ್ದೇಶವೇ ವಿಫಲವಾಗಿಬಿಡುತ್ತದೆ. ಉದಾಹರಣೆಗೆ: ಓದುವುದು ಅತ್ಯುತ್ತಮ ಹವ್ಯಾಸವಾಗಿದೆಯಾದರೂ ಅದು ಯಾವುದೇ ಬೌದ್ಧಿಕ ಬೆಳವಣಿಗೆಗಾಗಲೀ, ಆಂತರಿಕ ಸಮೃದ್ಧಿಗಾಗಲೀ ಕಾರಣವಾಗದೆ, ಕೇವಲ ಕಾಲಹರಣವೋ ಮನೋರಂಜನೆಯೋ, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮಾರ್ಗವೋ, ಒಳಗಿನ ತೊಳಲಾಟವನ್ನು ಮರೆಯುವ, ಮರೆಮಾಚುವ ಸಾಧನವೋ ಆಗಿಬಿಟ್ಟರೆ ಅದು ಹವ್ಯಾಸ ಎನಿಸಿಕೊಳ್ಳುವ ಬದಲು ‘ಚಟ’ ಎನಿಸಿಕೊಳ್ಳುತ್ತದೆ.

ಯಾವುದೇ ಚಟುವಟಿಕೆಯಾದರೂ ಅದರ ಉದ್ದೇಶ ಮತ್ತು ಅದು ನಮ್ಮ ಒಟ್ಟು ವ್ಯಕ್ತಿತ್ವ, ಜೀವನದ ಅರ್ಥಪೂರ್ಣತೆ – ಇವುಗಳ ಮೇಲೆ ಬೀರುವ ಪರಿಣಾಮಗಳನ್ನು ಆಗಾಗ ಮನನ ಮಾಡಿಕೊಳ್ಳುತ್ತಲೇ ಅದರಲ್ಲಿ ತೊಡಗಿಕೊಳ್ಳಬೇಕೆ ಹೊರತು ಕೇವಲ ಅದು ತಾತ್ಕಾಲಿಕವಾಗಿ ನೀಡುವ ಸುಖಕ್ಕಾಗಿಯೋ ಅಥವಾ ಕಷ್ಟಗಳನ್ನು ಮರೆಸುವ ಅರಿವಳಿಕೆಯಂತೆಯೋ ಹವ್ಯಾಸಗಳನ್ನು ಉಪಯೋಗಿಸಬಾರದು. ಹವ್ಯಾಸ ಅರ್ಥಪೂರ್ಣವಾದ ಉದ್ದೇಶಗಳೆಡೆಗೆ ನಮ್ಮನ್ನು ಪ್ರಚೋದಿಸುವಂತಿರಬೇಕು. ಮನದಲ್ಲಿ ಉತ್ಸಾಹ ತುಂಬಿ ಒತ್ತಡಗಳನ್ನು, ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ನಮ್ಮನ್ನು ತಯಾರಾಗಿಸಬೇಕು ಹೊರತು ಹವ್ಯಾಸವೆಂಬ ಚಟುವಟಿಕೆಯೇ ಗೀಳಾಗಿ ಚಟುವಟಿಕೆಯಾಚೆಗಿನ ಅದರ ಉದ್ದೇಶವೇ ಗೌಣವಾಗಿಬಿಡುವಂತಾಗಬಾರದು.

ಬದುಕನ್ನು ಆಸ್ವಾದಿಸುವುದಕ್ಕೆ, ಜೀವನದ ಸಾರ್ಥಕತೆಗೆ ನಮಗೆ ಸ್ನೇಹ–ಸಂಬಂಧಗಳು ಅತ್ಯಾವಶ್ಯಕ. ಆದರೆ ಹೊರ ಜಗತ್ತಿನ ಸಂಬಂಧಗಳ ಸುಳಿಯಲ್ಲಿ ಸಿಲುಕಿ ನಮಗೆ ನಮ್ಮೊಂದಿಗೇ ಇರುವ ಸಂಬಂಧ ಮರೆಯುವಂತಾದರೆ ಅಂತಹ ಸಂಬಂಧಗಳೇಕೆ ಬೇಕು? ಹವ್ಯಾಸಗಳ ಹೆಸರಿನಲ್ಲಿ ಸ್ನೇಹ, ಬಾಂಧವ್ಯ ಎನ್ನುವ ಮೋಹಕ್ಕೆ ಸಿಲುಕಿ ಕೆಲವೊಮ್ಮೆ ನಮ್ಮನ್ನು ನಾವೇ ಬಿಟ್ಟುಕೊಡಬೇಕಾದಂತಹ ಪ್ರಸಂಗಗಳೂ ಬರಬಹುದು. ಸ್ನೇಹಿತರೊಂದಿಗೆ ವಾರಾಂತ್ಯದಲ್ಲಿ ಕಡ್ಡಾಯವಾಗಿ ಹೊರಡುವ ಪ್ರವಾಸಗಳು, ಔತಣಕೂಟಗಳು ಅಭ್ಯಾಸವಾದ ಹೊಸತರಲ್ಲಿ ಆತ್ಮೀಯತೆ ಹೆಚ್ಚಿಸುವುದರಿಂದ ಆಹ್ಲಾದಕಾರಿಯಾಗಿರುತ್ತವೆ. ನಂತರದ ದಿನಗಳಲ್ಲಿ ಸಂಬಂಧಗಳು ತಂದೊಡ್ಡುವ ಬಿಕ್ಕಟ್ಟುಗಳನ್ನು ವಿವೇಕದಿಂದ ನಿರ್ವಹಿಸಲು ಸಾಧ್ಯವಾಗದಿದ್ದರೆ ಅತ್ತ ಪ್ರವಾಸ, ಪಾರ್ಟಿ ಮುಂತಾದ ಅಭ್ಯಾಸಗಳನ್ನು ಬಿಡಲೂ ಆಗದೆ, ಎಲ್ಲರನ್ನೂ ಮೆಚ್ಚಿಸುವ ಸಾಹಸದಲ್ಲಿ ನಮ್ಮ ನೆಮ್ಮದಿಯನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹವ್ಯಾಸಗಳು/ ಅಭ್ಯಾಸಗಳು ನಾವು ಯಾರೊಂದಿಗೆ ಬೆರೆಯುತ್ತೇವೆ, ಎಂತಹವರೊಂದಿಗೆ ಬಾಂಧವ್ಯ ಹೊಂದಲು ತಯಾರಾಗುತ್ತಿದ್ದೇವೆ ಎನ್ನುವುದನ್ನು ನಿರ್ದೇಶಿಸುವ ಕಾರಣ ನಮ್ಮ ಹವ್ಯಾಸಗಳೊಟ್ಟಿಗೆ ಬರುವ ಜನರ ಒಡನಾಟದ ಕುರಿತು ಎಚ್ಚರವಾಗಿರಬೇಕು. ವಿವೇಚನೆಯಿಲ್ಲದ ಜನರ ಸಹವಾಸದಲ್ಲಿ ಹವ್ಯಾಸಗಳು ಚಟಗಳಾಗಿ ಬದಲಾಗಲು ಹೆಚ್ಚಿನ ಸಮಯವೇನೂ ಬೇಕಾಗುವುದಿಲ್ಲ.

ಹವ್ಯಾಸಗಳು ಚಟಗಳಂತಾಗದಿರಲು ಕೆಲವು ವಿಚಾರಗಳ ಕಡೆಗೆ ಗಮನ ನೀಡಬೇಕು
* ನಮ್ಮ ಹವ್ಯಾಸಗಳು ನಮ್ಮತನದ ಅಭಿವ್ಯಕ್ತಿಗೆ, ನಮ್ಮ ಆಂತರಿಕ ಮೌಲ್ಯಗಳಿಗೆ ಸರಿಹೊಂದುವಂತಿರಬೇಕು. ಉದಾ: ಜನರ ಸಹವಾಸವನ್ನು ಇಷ್ಟಪಡದವರು ಸುಮ್ಮನೆ ತೋರಿಕೆಗಾಗಿ ಗುಂಪು ಚಟುವಟಿಕೆಗಳನ್ನು ಮಾಡಲು ಉತ್ಸುಕರಾಗಿರುವವರಂತೆ ನಟಿಸುವುದರಿಂದೇನು ಪ್ರಯೋಜನ?

* ನಮ್ಮ ಅಭ್ಯಾಸಗಳು ಸಮಯದೊಂದಿಗಿನ ನಮ್ಮ ಸಂಬಂಧವನ್ನು ನಿರ್ಧರಿಸುತ್ತವೆ. ದಿನದ ಕೇವಲ ಅರ್ಧಗಂಟೆಯಾದರೂ ಸರಿ ತನ್ಮಯತೆಯಿಂದ ಪ್ರತಿಕ್ಷಣವೂ ವರ್ತಮಾನದಲ್ಲಿರುವಂತಹ ಚಟುವಟಿಕೆಗಳನ್ನು ಮಾಡುವುದರಿಂದ ದಿನದ ಮಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಪ್ರೇರಣೆಯುಂಟಾಗುತ್ತದೆ.

* ನಮ್ಮ ಹವ್ಯಾಸಗಳು/ಅಭ್ಯಾಸಗಳು/ಆಚರಣೆಗಳು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು ನಾವೇ ಅವುಗಳ ನಿಯಂತ್ರಣದಲ್ಲಿರಬಾರದು. ಅವು ನಮಗೆ ಸಂತಸ ತರಬೇಕು. ಕಾರಣಾಂತರಗಳಿಂದ ಆ ಹವ್ಯಾಸದಲ್ಲಿ ತೊಡಗಿಕೊಳ್ಳಲಾಗದೆ ಇದ್ದಾಗ ಅದರ ನೆನಪೇ ಉಲ್ಲಾಸ ತರುವಂತಿರಬೇಕೆ ಹೊರತು ನಮ್ಮಿಷ್ಟದ ಚಟುವಟಿಕೆಯನ್ನು ಮಾಡಲಾಗದ್ದಕ್ಕೆ ಚಡಪಡಿಕೆ, ಹಪಾಹಪಿ, ಅತೃಪ್ತಿ, ಅಪೂರ್ಣತೆಯನ್ನು ತಂದುಕೊಡಬಾರದು. ನಮ್ಮ ಜೀವನದ ಸಂತೋಷ, ಸಂತೃಪ್ತಿ ಎಲ್ಲವೂ ಒಂದು ನಿರ್ದಿಷ್ಟ ಹವ್ಯಾಸದ ಮೇಲೆ ಅವಲಂಬಿತವಾಗಿರುವುದು ಸಲ್ಲದು.

* ನಮ್ಮ ಸುತ್ತಲಿನ ಪ್ರಪಂಚದ ವೈಶಾಲ್ಯವನ್ನು, ಸಮಾಜದ ವೈವಿಧ್ಯವನ್ನು, ಜೀವನದ ಸಮಗ್ರತೆಯನ್ನು ಗಣನೆಗೇ ತಂದುಕೊಳ್ಳದೆ ನಮ್ಮದೇ ಚಿಕ್ಕ ಪ್ರಪಂಚದಲ್ಲಿ ಬಚ್ಚಿಟ್ಟುಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಸುವ ಚಟುವಟಿಕೆಗಳು ಹವ್ಯಾಸಗಳಲ್ಲ ಅವು ಚಟಗಳು. ಒಳಗಿನ ಬೆಳಕನ್ನು, ಅದರ ಪ್ರಖರತೆಯನ್ನು ಕುಗ್ಗಿಸುವ ಚಟುವಟಿಕೆಗಳು ಅದೆಷ್ಟೇ ಆಕರ್ಷಿಸಿದರೂ ಕೊನೆಗೆ ಅನಾರ್ಥಕಾರಿಯೇ ಆಗುವುದರಿಂದ ಮೊದಲೇ ಜಾಗೃತರಾಗಿರುವುದು ಲೇಸು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು