ಸೋಮವಾರ, ಏಪ್ರಿಲ್ 6, 2020
19 °C

ಋತುಮಾನಕ್ಕೆ ತಕ್ಕಂತೆ ಇರಲಿ ಕೂದಲ ರಕ್ಷಣೆ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಚ ಳಿಗಾಲ ಕಳೆದು ಬೇಸಿಗೆ ಕಾಲಿರಿಸಿದೆ. ಋತುಮಾನಗಳು ಬದಲಾದಾಗ ಪ್ರಕೃತಿಯಲ್ಲಿ ಬದಲಾವಣೆ ಕಾಣಿಸುವಂತೆ ಮನುಷ್ಯನ ದೇಹಪ್ರಕೃತಿಯಲ್ಲೂ ಮಾರ್ಪಾಡುಗಳಾಗುತ್ತವೆ. ಈ ವ್ಯತ್ಯಾಸವಾಗುವ ಋತುಮಾನಕ್ಕೆ ತಕ್ಕಂತೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಅದರಲ್ಲೂ ಚರ್ಮ ಹಾಗೂ ಕೂದಲಿನ ರಕ್ಷಣೆ ಹೆಣ್ಣುಮಕ್ಕಳಿಗೆ ಸವಾಲೇ ಸರಿ. ಬೇಸಿಗೆಯಲ್ಲಿ ನಮ್ಮ ಕೇಶಸೌಂದರ್ಯವನ್ನು ರಕ್ಷಿಸಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ. 

‘ಡೀಪ್ ಕಂಡಿಷನಿಂಗ್’ ಚಿಕಿತ್ಸೆ
ಬೇಸಿಗೆ ಆರಂಭವಾಗುತ್ತಿದ್ದಂತೆ ಕೂದಲು ಹಾಗೂ ನೆತ್ತಿಯ ಭಾಗ ಒಣಗಲು ಆರಂಭವಾಗುತ್ತದೆ. ಅಲ್ಲದೇ ಬುಡದಿಂದ ದುರ್ಬಲಗೊಂಡು ಉದುರಲು ಆರಂಭವಾಗುತ್ತದೆ. ಆ ಕಾರಣಕ್ಕೆ ಕೂದಲು ಒಣಗಿ ಒರಟಾಗುವುದನ್ನು ತಪ್ಪಿಸಲು, ಕೂದಲಿಗೆ ಮರುಜೀವ ನೀಡಲು ‘ಡೀಪ್ ಕಂಡಿಷನಿಂಗ್’ ಚಿಕಿತ್ಸೆ ತುಂಬಾ ಉಪಯುಕ್ತ. ಇದರಿಂದ ಕೂದಲಿನಲ್ಲಿ ತೇವಾಂಶವೂ ಉಳಿಯುತ್ತದೆ.

ಆಗಾಗ ಪ್ಯಾಕ್‌ ಹಾಕಿಕೊಳ್ಳಿ. ಕರಿಬೇವು ಹಾಗೂ ನೆನೆಸಿದ ಮೆಂತ್ಯೆಯನ್ನು ರುಬ್ಬಿ ತಲೆಗೆ ಹಚ್ಚಿಕೊಳ್ಳಿ. ಅರ್ಧ ತಾಸು ಬಿಟ್ಟು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಂಡರೆ ಕೂದಲಿಗೆ ಹೊಳಪು ಬರುವುದಲ್ಲದೆ, ಕೂದಲಿನ ಬುಡದಲ್ಲಿ ತೇವಾಂಶ ಉಳಿಯುತ್ತದೆ.

ರಾಸಾಯನಿಕ ರಹಿತ ಶಾಂಪೂ ಬಳಸಿ
ಬೇಸಿಗೆಯಲ್ಲಿ ಕಡಿಮೆ ಅಥವಾ ತೀವ್ರತರವಲ್ಲದ ರಾಸಾಯನಿಕಯುಕ್ತ ಶಾಂಪೂ ಬಳಕೆ ತುಂಬಾನೇ ಸೂಕ್ತ. ಕೂದಲಿಗೆ ಹಾನಿ ಮಾಡುವ ರಾಸಾಯನಿಕ ಹಾಗೂ ಸೋಡಿಯಂ ಲಾರಿಲ್ ಸಲ್ಫೇಟ್ (ಎಸ್‌ಎಲ್‌ಎಸ್‌) ಅಂಶ ಇರುವ ಶಾಂಪೂ ಬಳಕೆ ಬೇಡ. ಎಸ್‌ಎಲ್‌ಎಸ್‌ ಅಂಶ ಮುಕ್ತವಾಗಿರುವ ಶಾಂಪೂ ದುರ್ಬಲವಾಗಿರುತ್ತದೆ ಹಾಗೂ ಇದು ಕೂದಲಿನ ಬುಡದಲ್ಲಿನ ನೈಸರ್ಗಿಕ ಎಣ್ಣೆ ಅಂಶ ಕಡಿಮೆಯಾಗದಂತೆ ಕೂದಲನ್ನು ಸ್ವಚ್ಛಗೊಳಿಸುತ್ತದೆ.

ಅತಿಯಾದ ಬಿಸಿ ನೀರನ್ನು ಬಳಸಬೇಡಿ
ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿನೀರನ್ನು ತಲೆ ಸ್ನಾನಕ್ಕೆ ಬಳಸಬೇಡಿ. ಇದರಿಂದ ಕೂದಲಿಗೆ ಹಾನಿಯಾಗುತ್ತದೆ. ತಲೆ ಸ್ನಾನಕ್ಕೆ ಮುನ್ನ ಸೀರಮ್ ಬಳಸುವುದು ಅವಶ್ಯ. ಇದರಿಂದ ಕೂದಲಿಗೆ ನೇರವಾಗಿ ಬಿಸಿನೀರಿನ ಶಾಖ ತಾಗುವುದಿಲ್ಲ. ಜೊತೆಗೆ ಬಿಸಿನೀರಿನ ಶಾಖದಿಂದಾಗುವ ಹಾನಿಯನ್ನು ತಪ್ಪಿಸಬಹುದು.

ಶಾಂಪೂ ಬಳಸಿ ತಲೆ ಸ್ನಾನ ಮಾಡುವಾಗ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರು ಬಳಸಿ. ತಲೆ ಸ್ನಾನಕ್ಕೆ ಮುನ್ನ ಕೊಬ್ಬರಿ ಎಣ್ಣೆಯನ್ನು ಕೂದಲಿನ ಬುಡಕ್ಕೆ ಚೆನ್ನಾಗಿ ಉಜ್ಜಿಕೊಳ್ಳಿ.

ಲೋಳೆಸರ ಹಚ್ಚಿ
ಕೂದಲ ಬುಡಕ್ಕೆ ವಾರಕ್ಕೊಮ್ಮೆ ಲೋಳೆಸರದ ತಿರುಳನ್ನು ಹಚ್ಚುವುದರಿಂದ ಕೂದಲ ಬುಡ ಗಟ್ಟಿಯಾಗಿರುವುದಲ್ಲದೇ ತೇವಾಂಶದಿಂದ ಕೂಡಿರುತ್ತದೆ. ಅಲ್ಲದೇ ಇದು ಕೂದಲಿನ ಬುಡವನ್ನು ಸದೃಢಗೊಳಿಸುತ್ತದೆ. ಲೋಳೆಸರದ ತಿರುಳನ್ನು ಕೂದಲು ಹಾಗೂ ಕೂದಲಿನ ಬುಡಕ್ಕೆ ಹಚ್ಚಿಕೊಂಡು 30 ನಿಮಿಷಗಳ ನಂತರ ರಾಸಾಯನಿಕ ಮುಕ್ತ ಶಾಂಪೂವಿನಿಂದ ಕೂದಲನ್ನು ತೊಳೆಯಬೇಕು.

ಜೋರಾಗಿ ಉಜ್ಜಬೇಡಿ
ದುರ್ಬಲವಾದ ಅಥವಾ ಎಸ್‌ಎಲ್‌ಎಸ್ ರಹಿತ ಶಾಂಪೂ ಕಡಿಮೆ ನೊರೆಯನ್ನು ಹೊಂದಿರುತ್ತದೆ. ನೊರೆ ಬರುತ್ತಿಲ್ಲ ಎಂಬ ಕಾರಣಕ್ಕೆ ಕೂದಲನ್ನು ಜೋರಾಗಿ ಉಜ್ಜಬೇಡಿ. ಹೆಚ್ಚು ನೊರೆ ಬರಬೇಕು ಎಂದರೆ ಶಾಂಪೂವಿನ ಬದಲು ಹೆಚ್ಚು ನೀರು ಬಳಸಿ. ಜೊತೆಗೆ ಒದ್ದೆ ಕೂದಲಿದ್ದಾಗ ಕೂದಲಿಗೆ ಜುಟ್ಟು ಹಾಕಿಕೊಳ್ಳುವುದನ್ನು ನಿಲ್ಲಿಸಿ. ಇದರಿಂದ ಕೂದಲ ಉದುರುವುದು ಹೆಚ್ಚುತ್ತದೆ.

ಉತ್ತಮ ಆಹಾರಕ್ರಮ ಪಾಲಿಸಿ
ದೇಹದಲ್ಲಿನ ಟಾಕ್ಸಿನ್ ಅಂಶವನ್ನು ಹೊರಹಾಕಲು ಆಗಾಗ ನೀರು ಕುಡಿಯುತ್ತಿರಿ. ಇದರಿಂದ ದೇಹದಲ್ಲಿ ನೀರಿನಂಶದ ಕೊರತೆ ಕಾಡುವುದಿಲ್ಲ. ವಿಟಮಿನ್ ಅಂಶ ಹೆಚ್ಚಿರುವ ಹಣ್ಣುಗಳನ್ನು ತಿನ್ನಿ. ಜೊತೆಗೆ ಕೂದಲಿಗೆ ಅಗತ್ಯವಿರುವ ಪೋಷಕಾಂಶಗಳಿರುವ ಆಹಾರ ಸೇವಿಸಿ. ಮೆಂತ್ಯೆ, ಸಬ್ಬಸಿಗೆ, ಪಾಲಕ್‌ನಂತಹ ಹಸಿರು ಸೊಪ್ಪು, ಬ್ರೊಕೊಲಿ, ಕ್ಯಾಬೇಜ್‌, ಕ್ಯಾರೆಟ್‌ ಮೊದಲಾದ ತರಕಾರಿ ತಿನ್ನಿ.

ಅತಿ ನೇರಳೆ ಕಿರಣಗಳಿಂದ ರಕ್ಷಿಸಿ
ಬೇಸಿಗೆ ಆರಂಭವಾಗುತ್ತಿದ್ದಂತೆ ಸೂರ್ಯನ ಕಿರಣಗಳು ಸೌಂದರ್ಯವನ್ನು ಹಾಳುಗೆಡವುತ್ತವೆ. ಅತಿಯಾಗಿ ಸೂರ್ಯನ ಬಿಸಿಲಿಗೆ ಕೂದಲನ್ನು ಒಡ್ಡುವುದರಿಂದ ಕೂದಲು ಹಾಗೂ ಕೂದಲಿನ ಬುಡ ಒಣಗುತ್ತದೆ. ಹಾಗಾಗಿ ಬಿಸಿಲಿನಲ್ಲಿ ಹೊರ ಹೋ‌ಗುವಾಗ ಸಾಧ್ಯವಾದಷ್ಟು ಛತ್ರಿ, ಟೋಪಿ ಅಥವಾ ಸ್ಕಾರ್ಪ್‌ ಬಳಸಿ. ರೇಷ್ಮೆಯ ಸ್ಕಾರ್ಪ್‌ ಬಳಸುವುದರಿಂದ ಕೂದಲು ತುಂಡಾಗುವುದನ್ನು ನಿಯಂತ್ರಿಸಬಹುದು.

**

ಬಹಳ ದಿನಗಳವರೆಗೆ ಕೂದಲಿಗೆ ಕತ್ತರಿ ಹಾಕದಿದ್ದರೆ ಕೂದಲ ತುದಿ ಸೀಳಲು ಆರಂಭವಾಗುತ್ತದೆ. ಅತಿಯಾಗಿ ಕೂದಲನ್ನು ಒಣಗಿಸಿಕೊಳ್ಳುವುದು ಕೂಡ ಕೂದಲ ಸೀಳುವಿಕೆಗೆ ಕಾರಣವಾಗಬಹುದು. ಕೂದಲಿಗೆ ಎಣ್ಣೆ ಹಾಕಿ ಮಸಾಜ್‌ ಮಾಡದಿದ್ದರೆ, ಅಗತ್ಯವಿರುವಷ್ಟು ನೀರು ಸೇವಿಸದಿದ್ದರೆ, ಬಿಸಿ ನೀರಿನಲ್ಲಿ ಕೂದಲು ತೊಳೆದರೆ ಕೂಡ ಕೂದಲಿನ ತುದಿ ಸೀಳಿ ಕೂದಲು ತುಂಡಾಗಲು ಶುರುವಾಗುತ್ತದೆ. ಹಾಗಾಗಿ ಆಗಾಗ ಕೂದಲಿನ ತುದಿಗೆ ಕತ್ತರಿ ಹಾಕುತ್ತಿರಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)