ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯಿದೋಣಿ | ಅಪಾಯ ಕಡೆಗಣಿಸಿ ಕರ್ತವ್ಯ

Last Updated 4 ಏಪ್ರಿಲ್ 2020, 4:05 IST
ಅಕ್ಷರ ಗಾತ್ರ
ADVERTISEMENT
""

ನಾನು ಕ್ಯಾನ್ಸರ್‌ ಶಸ್ತ್ರಚಿಕಿತ್ಸಾ ತಜ್ಞ. ಸಂಶೋಧಕ ಮತ್ತು ಸಾರ್ವಜನಿಕ ಆರೋಗ್ಯ ತಜ್ಞನೂ ಹೌದು. ಈಗಿನ ನಿರ್ಣಾಯಕ ಸಂದರ್ಭದಲ್ಲಿ, ಸೋಂಕು ತಡೆಯುವುದಕ್ಕೆ ಮತ್ತು ಜನರನ್ನು ಸುರಕ್ಷಿತವಾಗಿ ಇರಿಸುವುದಕ್ಕೆಆರೋಗ್ಯ ಕ್ಷೇತ್ರದ ನಾವೆಲ್ಲರೂ ದಿನ 24 ಗಂಟೆಯೂ ದುಡಿಯುತ್ತಿದ್ದೇವೆ.

ಎಲ್ಲರೂ ಕೊರೊನಾ ಬಗ್ಗೆ ಚಿಂತಿತರಾಗಿದ್ದರೂ ಹೆರಿಗೆ, ದೀರ್ಘಕಾಲದ ಕಾಯಿಲೆಗಳೇನೂ ನಿಂತಿಲ್ಲ. ಯಾರು ಕೋವಿಡ್‌ ಬಾಧಿತರು ಎಂಬುದೇ ಅರಿವಿಲ್ಲದಿರುವುದರಿಂದ ನಾವು ಎದುರಿಸುತ್ತಿರುವ ಅಪಾಯ ಈಗ ಹೆಚ್ಚು. ಕಲಬುರ್ಗಿಯ ರೋಗಿಯೊಬ್ಬರು ನನ್ನನ್ನು ಭೇಟಿಯಾಗಲು ಕಳೆದ ವಾರ ಬಂದಿದ್ದರು. ಕಲಬುರ್ಗಿಯಲ್ಲಿ ಕೋವಿಡ್‌ನ ಹಲವು ಪ್ರಕರಣಗಳು ದೃಢಪಟ್ಟಿದ್ದರಿಂದಾಗಿ, ‘ನಾವೇನು ಮಾಡೋಣ?’ ಎಂದು ನರ್ಸ್‌ ಕೇಳಿದರು. ‘ಎಂದಿನಂತೆ, ಅವರನ್ನು ಭೇಟಿಯಾಗೋಣ’ ಎಂದೆ ನಾನು.

ಹೌದು, ಅವರಿಗೆ ಕೋವಿಡ್‌ ಇರಲೂಬಹುದು. ಆದರೆ, ಅವರನ್ನು ಹಿಂದಕ್ಕೆ ಕಳಿಸಲಾಗದು. ಜನರಿಗೆ ಚಿಕಿತ್ಸೆ ನೀಡುವುದೇ ನಮ್ಮ ಮೂಲ ಕರ್ತವ್ಯ. ನಮಗೆ ಸೋಂಕು ತಗುಲದಂತೆ ದುಪ್ಪಟ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಾಮಾನ್ಯ ದಿನಗಳಲ್ಲಿ ಮನೆಗೆ ಹಿಂದಿರುಗಿದಾಗ ನಾನು ಮತ್ತು ನನ್ನ ನಾಲ್ಕು ವರ್ಷದ ಮಗ ಗಟ್ಟಿ ಅಪ್ಪುಗೆಗಾಗಿ ಪರಸ್ಪರರತ್ತ ಧಾವಿಸುತ್ತಿದ್ದೆವು. ಈಗ ಮಗನನ್ನು ಕಂಡರೆ ನಾನು ಓಡಿ ಹೋಗುತ್ತೇನೆ. ವೈದ್ಯಕೀಯ ವೃತ್ತಿಯಲ್ಲಿರುವ ಬಹುಪಾಲು ಜನರಂತೆ ನಾನು ಕೂಡ ಕುಟುಂಬದ ಜತೆ ಸಮಯ ಕಳೆಯಲು ಆಗುತ್ತಿಲ್ಲ. ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಯಾಕೆಂದರೆ, ನಮಗೆ ಗೊತ್ತಿಲ್ಲದಂತೆ ಕುಟುಂಬವನ್ನು ನಾವು ಅಪಾಯಕ್ಕೆ ಒಡ್ಡಿದರೆ?

ವೈದ್ಯರಷ್ಟೇ ಅಲ್ಲ, ನರ್ಸ್‌ಗಳು, ಪ್ರಯೋಗಾಲಯ ತಂತ್ರಜ್ಞರು, ನಿರ್ವಹಣಾ ಸಿಬ್ಬಂದಿ... ಎಲ್ಲರೂ ಶ್ಲಾಘನೀಯವಾಗಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯೊಬ್ಬರು ಸಂತೋಷದಿಂದಲೇ ಆಸ್ಪತ್ರೆಯ ನೆಲವನ್ನು ಶುಚಿಗೊಳಿಸುತ್ತಿರುವುದನ್ನು ಈಚೆಗೆ ನೋಡಿದೆ. ‘ಏನಮ್ಮಾ, ನಿಮಗೆ ಭಯವಾಗುತ್ತಿಲ್ಲವೇ’ ಎಂದು ಪ್ರಶ್ನಿಸಿದೆ. ‘ಇಲ್ಲ, ನಾನು ನನ್ನ ಕೆಲಸ ಮಾಡುತ್ತಿದ್ದೇನೆ’ ಎಂದು ಆಕೆ ನಗುತ್ತಲೇ ಹೇಳಿದರು. ಗಂಟೆಗೊಮ್ಮೆ ಗುಡಿಸಿ ಸಾರಿಸುತ್ತಾ ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಇವರು ಸಹ ಕೊರೊನಾ ವಿರುದ್ಧ ಹೋರಾಡುವ ಯೋಧರೇ ಆಗಿದ್ದಾರೆ.

ಪರಿಸ್ಥಿತಿಯನ್ನು ಅರಿತುಕೊಂಡು ಸಾಮಾಜಿಕ ಅಂತರವನ್ನು ಎಲ್ಲರೂ ಕಾಯ್ದುಕೊಳ್ಳಬೇಕು. ಶೇ 5ರಷ್ಟು ಮಂದಿ ನಿರ್ಲಕ್ಷ್ಯ ತೋರಿದರೂ ಸೋಂಕು ಸಮುದಾಯಕ್ಕೆ ಹಬ್ಬುತ್ತದೆ. ಹಾಗೇನಾದರೂ ಆದರೆ, ಇತರ ರಾಷ್ಟ್ರಗಳಲ್ಲಿ ಆಗಿರುವಂತೆ ನಮ್ಮಲ್ಲೂ ಪರಿಸ್ಥಿತಿಯು ಕೈಮೀರಿ ಹೋಗುತ್ತದೆ. ಅಂಥ ದುರಂತವನ್ನು ಎದುರಿಸಲು ನಮ್ಮ ಆರೋಗ್ಯ ಕ್ಷೇತ್ರವು ಸನ್ನದ್ಧವಾಗಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತೀಯ ಆರೋಗ್ಯ ಸೇವೆಯು 147ನೇ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಇಟಲಿಯ ಪರಿಸ್ಥಿತಿಯನ್ನೊಮ್ಮೆ ನೋಡಿ! ರೋಗವನ್ನು ತಡೆಯುವುದೇ ನಮ್ಮ ಮುಂದಿರುವ ಏಕೈಕ ದಾರಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರಿಂದ ಮಾತ್ರ ಅದು ಸಾಧ್ಯ.

ಭಾರತದಲ್ಲಿ ಸೋಂಕು ದೃಢಪಟ್ಟವರ ಮತ್ತು ಮೃತರ ಸಂಖ್ಯೆಯು ಏರಿಕೆಯಾಗುತ್ತಲೇ ಇದೆ. ಸೋಂಕಿತರ ಸಂಖ್ಯೆಯು 80,000 ದಾಟಿದರೆ ನಾವು ಸೋತೆವೆಂದೇ ಅರ್ಥ. ಕುಟುಂಬದವರನ್ನು ಭೇಟಿಯಾಗದೆ, ದಿನದ 24 ಗಂಟೆಯೂ ಬಿಡುವಿಲ್ಲದೆ ದುಡಿಯುವ ಮೂಲಕ ಆರೋಗ್ಯ ಕ್ಷೇತ್ರವು ತನ್ನ ಎಲ್ಲಾ ಸಾಮರ್ಥ್ಯವನ್ನು ಬಳಸಿ ಕೊರೊನಾ ವಿರುದ್ಧ ಹೋರಾಡುತ್ತಿದೆ. ವೈದ್ಯಕೀಯ ವೃತ್ತಿಗೆ ಕಾಲಿರಿಸುವ ಸಂದರ್ಭದಲ್ಲಿ ನಾವೆಲ್ಲರೂ ‘ರೋಗಿಯ ಜತೆಗಿರುತ್ತೇವೆ’ ಎಂದು ಪ್ರಮಾಣ ಮಾಡಿದ್ದೆವು. ಹಾಗಾಗಿ, ಈಗ ನಾವು ನಿಮಗಾಗಿ ಇದ್ದೇವೆ, ನಿಮ್ಮ ಜತೆಗೇ ಇದ್ದೇವೆ.

***

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ‘ಪ್ರಜಾವಾಣಿ’ಗಾಗಿ ಹಾಯಿದೋಣಿಯ ಈ ಕಥೆಗಳನ್ನು ‘ಬೀಯಿಂಗ್ ಯು’ ಕಟ್ಟಿಕೊಡುತ್ತಿದೆ...

ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT