ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ ನವೀಕರಣ: ಈ 5 ಅಂಶಗಳು ಗಮನದಲ್ಲಿರಲಿ

ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಸಿಇಒ ರಾಕೇಶ್ ಜೈನ್ ಅವರ ಲೇಖನ
Published 3 ಜೂನ್ 2023, 7:21 IST
Last Updated 3 ಜೂನ್ 2023, 7:21 IST
ಅಕ್ಷರ ಗಾತ್ರ

ರಾಕೇಶ್ ಜೈನ್

ಕುಟುಂಬದ ಒಳಿತಿಗಾಗಿ ಆರೋಗ್ಯ ವಿಮೆ ಖರೀದಿ ಮಾಡುವುದು ಅತ್ಯಂತ ಉತ್ತಮ ಕೆಲಸ. ಆದರೆ, ಆರೋಗ್ಯ ವಿಮೆ ಖರೀದಿಸುವ ಸಮಯದಲ್ಲಿ ನಿಮ್ಮ ವಿಮಾ ಪಾಲಿಸಿಯು ನಿಮಗೆ ನಿರಂತರ ಕವರೇಜ್ ಕೊಡಬೇಕು ಮತ್ತು ಊರ್ಜಿತವಾಗಿರಬೇಕು ಎಂಬುದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಾಗಿ ನೀವು ಪಾಲಿಸಿ ಅವಧಿ ಮುಗಿಯುವುದಕ್ಕೂ ಮೊದಲೇ ನವೀಕರಿಸಬೇಕು. ಬಹುತೇಕ ವಿಮಾ ಕಂಪನಿಗಳು ಆನ್‌ಲೈನ್ ಸೌಲಭ್ಯವನ್ನು ನೀಡಿರುವುದರಿಂದ, ನವೀಕರಿಸುವ ಇಡೀ ಪ್ರಕ್ರಿಯೆ ಅತ್ಯಂತ ತ್ವರಿತವಾಗಿದೆ, ಅನುಕೂಲಕರವೂ ಆಗಿದೆ.

ನಿಮ್ಮ ಆರೋಗ್ಯ ವಿಮೆಯನ್ನು ನವೀಕರಿಸುವಾಗ ನೀವು ಗಮನದಲ್ಲಿ ಇಟ್ಟುಕೊಳ್ಳಬೇಕಿರುವ ಐದು ಸಂಗತಿಗಳು ಇಲ್ಲಿವೆ.

1) ಪಾಲಿಸಿಯನ್ನು ಸಕಾಲದಲ್ಲಿ ನವೀಕರಿಸಿ: ಈಗಾಗಲೇ ಜಾರಿಯಲ್ಲಿ ಇರುವ ಪಾಲಿಸಿ ಅವಧಿ ಮೀರುವ ಮೊದಲೇ ನಿಮ್ಮ ಪಾಲಿಸಿ ನವೀಕರಿಸಿ. ಯಾವುದೇ ಕಾರಣದಿಂದ, ಅವಧಿಗೆ ಮೊದಲು ನವೀಕರಿಸಲು ಆಗದಿದ್ದರೆ ಸಾಮಾನ್ಯವಾಗಿ 30 ದಿನಗಳ ಹೆಚ್ಚುವರಿ ಅವಧಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಪಾಲಿಸಿಯನ್ನು ನವೀಕರಿಸಿದರೆ, ನಿಮಗೆ ಸಿಗುವ ಪ್ರಯೋಜನಗಳು ಹಾಗೆಯೇ ಮುಂದುವರಿಯುತ್ತವೆ. ಆದರೆ, ಈ ಅವಧಿಯಲ್ಲಿ ಅಂದರೆ, ಪಾಲಿಸಿ ಮುಕ್ತಾಯವಾದಾಗಿನಿಂದ ಪಾಲಿಸಿ ನವೀಕರಿಸುವ ದಿನಾಂಕದವರೆಗೆ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪಾಲಿಸಿಯ ರಕ್ಷೆ ಸಿಗುವುದಿಲ್ಲ.

ಜಾರಿಯಲ್ಲಿ ಇರುವ ಆರೋಗ್ಯ ವಿಮೆಯು ರದ್ದಾಯಿತು ಎಂದಾದರೆ ಸಮಸ್ಯೆಗಳು ತಪ್ಪಿದ್ದಲ್ಲ. ಅದರಲ್ಲೂ, ವೈದ್ಯಕೀಯ ತುರ್ತಿನ ಸನ್ನಿವೇಶಗಳನ್ನು ಈಗಾಗಲೇ ಅನುಭವಿಸಿರುವವರಿಗೆ ಇದರ ಅಪಾಯಗಳು ಏನು ಎಂಬುದು ಗೊತ್ತಿರುತ್ತವೆ. ವಿಮಾ ಕಂಪನಿಗಳು ಪಾಲಿಸಿ ನವೀಕರಣದ ಕೊನೆಯ ದಿನಾಂಕವನ್ನು ನೆನಪಿಸುತ್ತವೆಯಾದರೂ, ಕೊನೆಯ ದಿನಾಂಕಕ್ಕೂ ಮೊದಲೇ ಪಾಲಿಸಿಯನ್ನು ನವೀಕರಣ ಮಾಡಿಕೊಳ್ಳುವುದು ಒಳಿತು.

2) ವಿಮೆ ಮೊತ್ತ ಹೆಚ್ಚಳದ ಆಯ್ಕೆ: ಪ್ರತಿ ವರ್ಷವೂ ವೈದ್ಯಕೀಯ ವೆಚ್ಚ ಹೆಚ್ಚಳವಾಗುತ್ತದೆ. ಅದೇ ರೀತಿ, ನಿಮ್ಮ ಪಾಲಿಸಿ ನವೀಕರಿಸುವ ಮೊದಲು ನಿಮ್ಮ ವಿಮೆ ಮೊತ್ತವನ್ನು ಒಮ್ಮೆ ಪರಿಶೀಲಿಸಬಹುದು. ಅಗತ್ಯವಿದೆ ಎಂದಾದರೆ, ಪಾಲಿಸಿ ನವೀಕರಿಸುವ ಸಮಯದಲ್ಲಿ ವಿಮೆ ಮೊತ್ತವನ್ನು ನೀವು ಹೆಚ್ಚಳ ಮಾಡಿಕೊಳ್ಳಬಹುದು. ಅದಲ್ಲದೆ, ನಿಮ್ಮ ಮೂಲ ಪಾಲಿಸಿಯ ಮೇಲೆ ಟಾಪ್ ಅಪ್ ಅಥವಾ ಸೂಪರ್ ಟಾಪ್ ಅಪ್ ಆಯ್ಕೆ ಪಡೆದು ಕೂಡ ವಿಮೆ ರಕ್ಷೆಯ ಮೊತ್ತವನ್ನು ಹೆಚ್ಚಳ ಮಾಡಲೂಬಹುದು.

3) ಕುಟುಂಬದ ಸದಸ್ಯರನ್ನು ಸೇರಿಸಿ: ನವೀಕರಿಸುವ ಸಮಯದಲ್ಲಿ ನಿಮ್ಮ ಪ್ರಸ್ತುತ ಪಾಲಿಸಿಗೆ ಕುಟುಂಬದ ಹೊಸ ಸದಸ್ಯರನ್ನು ಸೇರಿಸುವ ಅವಕಾಶ ಕೂಡ ಇರುತ್ತದೆ. ನಿಮ್ಮ ಪಾಲಕರು, ಸಂಗಾತಿ ಅಥವಾ ಮಕ್ಕಳನ್ನು ಆರೋಗ್ಯ ವಿಮೆಯ ವ್ಯಾಪ್ತಿಗೆ ಸೇರಿಸಲು ಬಯಸಿದರೆ, ವಿಮೆ ನವೀಕರಣಕ್ಕೂ ಮೊದಲು ಆ ಕೆಲಸ ಮಾಡಬಹುದು. 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿರುವ ಸದಸ್ಯರನ್ನು ಸೇರಿಸುವ ಮೂಲಕ ಹಲವು ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯಬಹುದು.

4) ಪೋರ್ಟ್ ಬಗ್ಗೆ ಆಲೋಚಿಸಿ: ನಿಮ್ಮ ಪ್ರಸ್ತುತ ವಿಮಾ ಕಂಪನಿಯ ಸೇವೆಗಳ ಬಗ್ಗೆ ನಿಮಗೆ ಸಮಾಧಾನ ಇಲ್ಲದಿದ್ದರೆ ಅಥವಾ ನಿಮ್ಮ ಪಾಲಿಸಿಯಲ್ಲಿ ಇನ್ನೂ ಹೆಚ್ಚಿನ ಸೇವೆಗಳು ಬೇಕಿದ್ದು, ಅದು ನಿಮ್ಮ ಪಾಲಿಸಿಯಲ್ಲಿ ಇಲ್ಲದಿದ್ದರೆ, ನವೀಕರಣದ ಸಮಯದಲ್ಲಿ ಆರೋಗ್ಯ ವಿಮೆಯ ಸೇವೆಯನ್ನು ಒದಗಿಸುವ ಇತರ ಕಂಪನಿಗೆ ನಿಮ್ಮ ವಿಮೆ ಪಾಲಿಸಿಯನ್ನು ಬದಲಾಯಿಸಿಕೊಳ್ಳಬಹುದು (ಪೋರ್ಟ್ ಮಾಡಿಕೊಳ್ಳಬಹುದು).

ಹೀಗೆ ಪೋರ್ಟ್ ಮಾಡಿದಾಗ ನೀವು ಈಗಾಗಲೇ ಗಳಿಸಿರುವ ಪ್ರಯೋಜನಗಳು ಇಲ್ಲವಾಗುವುದಿಲ್ಲ. ನಿಮ್ಮ ಪಾಲಿಸಿ ಅವಧಿ ಮೀರುವ ಮೊದಲು, ನೀವು ಹೊಸದಾಗಿ ಖರೀದಿಸಲು ಬಯಸಿರುವ ಪಾಲಿಸಿಯನ್ನು ನೀಡುವ ವಿಮಾ ಕಂಪನಿಯನ್ನು ಸಂಪರ್ಕಿಸಬೇಕು.

5) ಮೊಬೈಲ್ ಆ್ಯಪ್‌ನಿಂದ ಅನುಕೂಲ: ವಿಮೆ ಕ್ಲೇಮ್ ಪ್ರಕ್ರಿಯೆ ಮತ್ತು ಇತ್ಯರ್ಥದ ವಿಚಾರದಲ್ಲಿ ಮೊಬೈಲ್ ಆ್ಯಪ್‌ಗಳಿಂದ ಅನುಕೂಲ, ವೇಗ ಮತ್ತು ಪಾರದರ್ಶಕತೆ ಹೆಚ್ಚಾಗಿದೆ. ಹೀಗಾಗಿ, ನಿಮ್ಮ ಪ್ರಸ್ತುತ ವಿಮಾ ಕಂಪನಿಯು ಬಳಕೆದಾರ ಸ್ನೇಹಿ ಆ್ಯಪ್‌ಅನ್ನು ತ್ವರಿತ ಮತ್ತು ಪಾರದರ್ಶಕ ಕ್ಲೇಮ್ ಇತ್ಯರ್ಥಕ್ಕಾಗಿ ಹೊಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕ್ಲೇಮ್ ಸೂಚನೆಗೆ ದಾಖಲೆಗಳನ್ನು ಅಪ್‌ಲೋಡ್ ಮಾಡುವುದು, ಕ್ಲೇಮ್ ಇತ್ಯರ್ಥವು ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದು, ಪಾಲಿಸಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ವಿಶ್ಲೇಷಿಸುವುದು ಮತ್ತು ನಿಮ್ಮ ಪ್ರಸ್ತುತ ಪಾಲಿಸಿಯ ಸುಲಭ ನವೀಕರಣ ಇತ್ಯಾದಿ ಕೆಲವು ಪ್ರಮುಖ ಅನುಕೂಲಗಳು ಆ್ಯಪ್‌ನಲ್ಲಿ ಇರಬೇಕು.

-ಲೇಖಕ ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT