ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಗೀಳು.. ಅದು ಕೀಳೆಂದು ಕಡೆಗಣಿಸದಿರಿ!

ಇದಕ್ಕೆ ವಯೋಮಿತಿ ಇಲ್ಲ. ಮಕ್ಕಳಿಂದ ವೃದ್ಧರವರೆಗೂ ಗೀಳು ರೋಗ ಆವರಿಸಬಹುದು.
Published 16 ಜನವರಿ 2024, 0:01 IST
Last Updated 16 ಜನವರಿ 2024, 0:01 IST
ಅಕ್ಷರ ಗಾತ್ರ

ಇದು ಸರ್ಕಾರಿ ಕಚೇರಿಯ ಹಣಕಾಸು ಅಧಿಕಾರಿಯೊಬ್ಬರ ಕತೆ..

ದಿನವೂ ಬಸ್ಸಿನಲ್ಲಿ ಕಚೇರಿಗೆ ತೆರಳುತ್ತಿದ್ದ ಅವರಿಗೆ ಮಾರ್ಗ ಮಧ್ಯೆ ಸಿಗುವ ಬೃಹತ್ ಕಟ್ಟಡವೊಂದರ 32 ಕಿಟಕಿ ಎಣಿಸುವುದು ರೂಢಿಗತ ಅಭ್ಯಾಸ. ಆ ಒಂದು ದಿನ ಅವರ ಎಣಿಕೆ 28 ಆಗುವಷ್ಟರಲ್ಲಿ ಬಸ್ ಮುಂದಕ್ಕೆ ಹೋಗಿಯಾಗಿತ್ತು. ಹಾಗೇ ಕಚೇರಿ ತಲುಪಿದ ಅವರು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾದರು. ಅಲ್ಲಿ ಹಿಗ್ಗಾಮುಗ್ಗಾ ಬೈಸಿಕೊಂಡ ಅವರಿಗೆ ಥಟ್ಟನೆ ಮನದೊಳಗೆ ಮೂಡಿದ್ದು ‘ಓಹ್ ಇವತ್ತು ಕಿಟಕಿಯ ಎಣಿಕೆ ತಪ್ಪಿದ್ದೆ ಹೀಗಾಯ್ತು’. ವಾರದ ನಂತರ ಇಂತಹುದೇ ಘಟನೆಯೊಂದು ಪುನರಾವರ್ತನೆಯಾಯಿತು. ಆಗ ಅವರು ಕಿಟಕಿ ಎಣಿಸದಿದ್ದರೆ ಅವಘಡ ನಡೆಯುವುದು ಪಕ್ಕಾ ಎಂದು ತರ್ಕವಿಲ್ಲದ ಕುತರ್ಕಕ್ಕೆ ಜೋತುಬಿದ್ದರು.

ಶರವೇಗದಲ್ಲಿ ಸಾಗುವ ಬಸ್, ಎಣಿಸಿ ಮುಗಿಯದ ಕಿಟಕಿಗಳು.. ಅರ್ಧದಾರಿಯಲ್ಲಿ ಬಸ್‌ ಇಳಿದು ಮತ್ತೊಂದು ಬಸ್ ಹತ್ತಿ ಮೂಲ ಸ್ಥಳಕ್ಕೆ ಬರುವುದು ಮತ್ತೆ ಬಸ್ ಏರಿ ಹೊರಡುವುದು, ಹೀಗೆ ದಿನಕ್ಕೆ ನಾಲ್ಕಾರು ಬಾರಿ ಬಸ್ ಹತ್ತಿಳಿದು ಬಸವಳಿದರೂ ಮುಗಿಯದ ಎಣಿಕೆ, ಎದೆಯಲ್ಲಿ ತಳಮಳ, ಕಚೇರಿಗೆ ಹೋಗಲು ತಡವಾಗಿ ರಜೆ ಹಾಕುವುದು ಮಾಮೂಲಾಯಿತು.

ತಿಂಗಳು ಕಳೆದ ಮೇಲೆ ಕೆಲಸಕ್ಕೆ ಕಾಯಂ ರಜೆ ಮಾಡುವ ಪರಿಸ್ಥಿತಿ ಬಂತು. ಅವರ ಕುಟುಂಬದವರು ಚಿಂತಿತರಾಗಿ ಆಸ್ಪತ್ರೆಗೆ ಕರೆತಂದಾಗಲೇ ಗೊತ್ತಾಗಿದ್ದು ಇದು ಒಸಿಡಿ (obsessive-compulsive disorder) ಅಂದರೆ ‘ಗೀಳು ರೋಗ’ ಎಂದು.

ಹೀಗೆ ನೈಜ ಘಟನೆಯ ಉದಾಹರಣೆಯೊಂದಿಗೆ ಮಾತಿಗಿಳಿದರು ಮಂಗಳೂರಿನ ಮನೋವೈದ್ಯ ಡಾ. ರವೀಶ್ ತುಂಗಾ.

ಪ್ರತಿ ವ್ಯಕ್ತಿಯಲ್ಲಿ ಸುಪ್ತವಾಗಿರುವ ಗೀಳು ಸಾಂದರ್ಭಿಕವಾಗಿ ವ್ಯಕ್ತಗೊಳ್ಳುತ್ತದೆ. ಅನುಮಾನ, ಆಲೋಚನೆಗಳು ಮನುಷ್ಯನ ಸಹಜ ಗುಣ. ಮನೆಗೆ ಚಾವಿ ಹಾಕಿರುವ ಬಗ್ಗೆ, ಗ್ಯಾಸ್ ಆಫ್ ಮಾಡಿರುವ ಬಗ್ಗೆ ಎರಡೆರಡು ಬಾರಿ ಪರಿಶೀಲಿಸಿ ದೃಢಪಡಿಕೊಳ್ಳುತ್ತೇವೆ. ಆದರೆ, ದೃಢಪಟ್ಟ ಮೇಲೆ ಕೂಡ ಅದೇ ವಿಚಾರ ವ್ಯಕ್ತಿಯನ್ನು ಆವರಿಸಿಕೊಂಡರೆ ಅದು ‘ಗೀಳು ರೋಗ’.

ದೈನಂದಿನ ಒತ್ತಡವೇ ಈ ರೋಗಕ್ಕೆ ಮೂಲ. ಯೋಚನೆ, ಭಾವನೆ, ವರ್ತನೆ ಎಂಬ ತ್ರಿಕೋನ ರೇಖೆಗಳು ವಕ್ರಗೊಂಡಾಗ, ಗೀಳೆಂಬ ಹುಳ ಮನಸ್ಸಿನ ಸುತ್ತ ಗುಂಯ್ ಗುಡಲಾರಂಭಿಸುತ್ತದೆ. ಅತ್ಯಂತ ಶಿಸ್ತು, ಅಚ್ಚುಕಟ್ಟು ಜೀವನ ಕ್ರಮ ರೂಢಿಸಿಕೊಂಡವರಲ್ಲಿ ಅವರಿಗೆ ಅರಿವಿಲ್ಲದಂತೆ ಒತ್ತಡ ಸೃಷ್ಟಿಯಾಗಿ ಗೀಳು ಕಾಡಬಹುದು.

ಅತಿಯಾದ ಗೀಳಿನಿಂದ ಉದ್ಯೋಗ ಕಳೆದುಕೊಂಡವರು ಇದ್ದಾರೆ. ಇದಕ್ಕೆ ವಯೋಮಿತಿ ಇಲ್ಲ. ಮಕ್ಕಳಿಂದ ವೃದ್ಧರವರೆಗೂ ಗೀಳು ರೋಗ ಆವರಿಸಬಹುದು. ಸ್ವಚ್ಛತೆಯ ಭ್ರಮೆಯಲ್ಲಿ ಇಡೀ ದಿನ ಕೈ ತೊಳೆಯುತ್ತಲೇ ಇರುವುದು, ಟ್ಯಾಂಕ್ ನೀರು ಖಾಲಿಯಾದರೂ ಸ್ನಾನ ಮುಗಿಸದಿರುವುದು, ಒಂದಕ್ಷರ ತಪ್ಪಾದರೂ ಪುಟ ಹರಿದು ಮತ್ತೆ ಬರೆಯುವುದು ಹೀಗೆ ಮನಸ್ಸಿಗೆ ಸಮಾಧಾನ ಸಿಗದೆ, ಮಾಡಿದ ಕೆಲಸವನ್ನೇ ಪುನಃ ಪುನಃ ಮಾಡುತ್ತಿರುವುದು ಗೀಳು ರೋಗದ ಲಕ್ಷಣ.

ಗುಣಪಡಿಸಲು ಸಾಧ್ಯವೇ?

ಹಲವರು ಇದು ರೋಗವೆಂದು ಗೊತ್ತಿಲ್ಲದೆ ನಿರ್ಲಕ್ಷಿಸುತ್ತಾರೆ. ರೋಗ ಉಲ್ಬಣಾವಸ್ಥೆ ತಲುಪಿದರೆ ಖಿನ್ನತೆಗೆ ಜಾರಬಹುದು, ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭಗಳೂ ಇರುತ್ತವೆ. ಆರಂಭಿಕ ಹಂತದಲ್ಲಿ ಚಿಕಿತ್ಸೆ ದೊರೆತರೆ, ಮೂರು ವಾರಗಳಲ್ಲಿ ರೋಗಿಗಳು ಸಹಜ ಸ್ಥಿತಿಗೆ ಮರಳುತ್ತಾರೆ. ಬಾಣಂತಿಯರಲ್ಲೂ ಈ ಲಕ್ಷಣ ಕಾಣಿಸಿಕೊಳ್ಳಬಹುದು. ಈ ರೀತಿಯ ವರ್ತನೆ ಕಂಡಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿದರೆ ಹಿತ.

ಒಸಿಡಿ ಕಾಯಿಲೆಗೆ ಯಾವ ಅಡ್ಡ ಪರಿಣಾಮ ಇಲ್ಲದ ಅತ್ಯುತ್ತಮ ಚಿಕಿತ್ಸೆಗಳಿವೆ. ಎಸ್‌ಎಸ್‌ಆರ್‌ಐ (selective serotonin reuptake inhibitors) ಮೂಲಕ ಗುಣಪಡಿಸಲು ಸಾಧ್ಯವಿದೆ. ರೋಗಿಗೆ ಔಷಧ ಮಾತ್ರೆಗಳ ಜೊತೆಗೆ ಕುಟುಂಬದ ಪ್ರೀತಿ, ಸಾಂತ್ವನವೂ ಬೇಕಾಗುತ್ತದೆ.

ಕೌನ್ಸೆಲಿಂಗ್ ಜೊತೆಗೆ ವರ್ತನೆ ಚಿಕಿತ್ಸೆ (ಬಿಹೇವಿಯರ್ ಥೆರಪಿ) ನೀಡಿ, ವರ್ತನೆಯಲ್ಲಿ ಬದಲಾವಣೆ ತರುವುದು, ಇಆರ್‌ಪಿ (ಎಕ್ಸಪೋಷರ್ ಆ್ಯಂಡ್ ರಿವರ್ಸ್ ಪ್ರಿವೆನ್ಶನ್) ಅಂದರೆ ಇಷ್ಟವಾಗದ ಕೆಲಸದ ಮೂಲಕವೇ ಮನಸ್ಸನ್ನು ಸಹಜ ಸ್ಥಿತಿಗೆ ತರುವುದು, ಹೀಗೆ, ಹಲವಾರು ಚಿಕಿತ್ಸಾ ಮಾದರಿಗಳು ಇವೆ. ಒಸಿಡಿ ಗುಣಪಡಿಸಬಹುದಾದ ಕಾಯಿಲೆ. ಆದರೆ, ನಿರ್ಲಕ್ಷಿಸಿದರೆ ಅಪಾಯ ಎನ್ನುತ್ತಾರೆ ಡಾ. ತುಂಗಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT