ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ: ಚುಳ್ ಎನ್ನುವ ಹಲ್ಲುಗಳು!

Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಚಳಿಗಾಲದಲ್ಲಿ ಹಲ್ಲಿನಲ್ಲಿ ನೋವು ಅಥವಾ ಜುಂ ಎನ್ನುವ ಅನುಭವ ಬಹಳಷ್ಟು ಜನರಲ್ಲಿ ಕಂಡುಬರುತ್ತದೆ. ಅದಕ್ಕೆ ಮುಖ್ಯವಾದ ಕಾರಣಗಳು ಹೀಗಿವೆ.

ಹಲ್ಲು ಎನಾಮೆಲ್, ಡೆಂಟೀನ್ ಮತ್ತು ತಿರುಳು ಎಂಬ ಪದರಗಳಿಂದ ಕೂಡಿದೆ. ಪ್ರತಿ ಪದರದ ರಚನೆ ಮತ್ತು ಕೆಲಸಗಳು ಭಿನ್ನವಾಗಿವೆ. ಹೊರಗಿನ ತಣ್ಣನೆ ಗಾಳಿ ಬಾಯಿಯನ್ನು ಹೊಕ್ಕು ಹಲ್ಲಿನ ವಿವಿಧ ಪದರಗಳನ್ನು ಸಂಕುಚನಗೊಳಿಸುತ್ತದೆ. ಹಲ್ಲಿನ ಗಟ್ಟಿ ಹೊರಪದರ ಎನಾಮೆಲ್ ಮತ್ತು ಒಳಗಿನ ಮೆದುಪದರ ಡೆಂಟೀನ್ ಸಂಕುಚನಗೊಳ್ಳುವ ಸಮಯದಲ್ಲಿ ವ್ಯತ್ಯಾಸವಿದೆ. ಇದು ಹಲ್ಲಿನ ಮೇಲೆ ಒತ್ತಡ ಬೀರಿ ನೋವಿನ ಅನುಭವವನ್ನು ಉಂಟುಮಾಡುತ್ತದೆ.

ಚಳಿ ಇದ್ದಾಗ ನಾಲಿಗೆ ಬಿಸಿಬಿಸಿಯಾದ ಆಹಾರವನ್ನು ಬಯಸುತ್ತದೆ. ಹೀಗೆ ಬಾಯಿಗೆ ರುಚಿ ನೀಡಿ ಉಷ್ಣತೆ ಹೆಚ್ಚಿಸುವುದು ನಿಜವಾದರೂ ಹೊರಗಿನ ವಾತಾವರಣಕ್ಕೆ ವಿರುದ್ಧವಾದ ಈ ಬಿಸಿಯಿಂದ ಹಲ್ಲಿನ ಒಳಪದರದ ನರತಂತುಗಳು ಪ್ರಚೋದನೆಗೆ ಒಳಗಾಗುತ್ತವೆ. ಇದು ಜುಂ ಅಥವಾ ನೋವಿನ ರೂಪದಲ್ಲಿ ಪ್ರಕಟವಾಗುತ್ತದೆ.

ನೆಗಡಿಯಾಗಿ ಸೈನುಸೈಟಿಸ್ ತೊಂದರೆ ಇರುವವರಲ್ಲಿ ಕೆನ್ನೆ, ಹಣೆ ಭಾರವೆನಿಸುವುದರ ಜತೆ ಹಲ್ಲುನೋವು ಇರುತ್ತದೆ. ಸೈನುಸೈಟಿಸ್ ಕಡಿಮೆಯಾದಂತೆ ಹಲ್ಲುನೋವು ತಾನಾಗಿ ಕಡಿಮೆಯಾಗುತ್ತದೆ. ಕೆಲವರಲ್ಲಿ ಮೊದಲಿನಿಂದಲೂ ಹಲ್ಲಿನ ದವಡೆಗಳಲ್ಲಿ (ಟೆಂಪರೋಮ್ಯಾಂಡಿಬುಲಾರ್ ಜಾಯಿಂಟ್) ಸಮಸ್ಯೆ ಇರುತ್ತದೆ. ಚಳಿಗಾಲದಲ್ಲಿ ಅದು ಹೆಚ್ಚಾಗುವ ಸಾಧ್ಯತೆ ಹೆಚ್ಚು.

ಹೊರಗೆ ತೀರಾ ಚಳಿ ಇರುವಾಗ ದೇಹದೊಳಗೆ ಉಷ್ಣತೆ ಹೆಚ್ಚಿಸಲು ಮಾಂಸಖಂಡಗಳು ತೀವ್ರವಾಗಿ ಕೆಲಸ ಮಾಡುತ್ತವೆ. ಮುಖದ ಸ್ನಾಯುಗಳು ಇದಕ್ಕೆ ಹೊರತಲ್ಲ. ಇವುಗಳ ಚಟುವಟಿಕೆಯಿಂದ ಹಲ್ಲುಗಳು ಸತತವಾಗಿ ಕಟಕಟ ಎಂದು ಒಂದನ್ನೊಂದು ಘರ್ಷಿಸುತ್ತವೆ. ಇದರಿಂದ ಹಲ್ಲಿನ ಗಟ್ಟಿ ಮೇಲ್ಪದರ ಸವೆದು ರಕ್ಷಣೆ ಇಲ್ಲವಾಗುತ್ತದೆ. ಹೊರಗಿನ ಗಾಳಿ ತೀವ್ರವಾಗಿ ಹಲ್ಲನ್ನು ಬಾಧಿಸುತ್ತದೆ. ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆ ಮತ್ತು ಜನರು ಒಳಗಿರುವುದೇ ಹೆಚ್ಚು. ಹಲ್ಲನ್ನು ಬಲಶಾಲಿಯಾಗಿಡಲು ವಿಟಮಿನ್ ಡಿ ಅಗತ್ಯ. ಸೂರ್ಯನ ಬಿಸಿಲು ಇದರ ಅತ್ಯುತ್ತಮ ಮೂಲ. ಅದಿಲ್ಲದೇ ಇದ್ದಾಗ ವಿಟಮಿನ್ ಡಿ ಕೊರತೆಯಿಂದ ಹಲ್ಲುಗಳು ದುರ್ಬಲವಾಗುತ್ತವೆ. ಹಲ್ಲು ಮುರಿಯುವ, ಬಿರುಕು ಬಿಡುವ ಸಾಧ್ಯತೆ ಹೆಚ್ಚು.

ಚಳಿಗಾಲದಲ್ಲಿ ಸಾಧಾರಣವಾಗಿ ಆಹಾರ ಸೇವನೆ ಹೆಚ್ಚು. ಹೀಗಾಗಿ ಹಲ್ಲುಗಳು ಹಾಳಾದರೆ ಎಂಬ ಭಯದಿಂದ ಅದನ್ನು ತಡೆಯಲು ಹೆಚ್ಚು ಸಲ, ಜೋರಾಗಿ ಹಲ್ಲುಗಳನ್ನು ಉಜ್ಜುವುದೂ ಸಾಮಾನ್ಯ. ಇದು ಹಲ್ಲಿನ ಮೇಲ್ಪದರದ ಸವೆತಕ್ಕೆ ಕಾರಣವಾಗುತ್ತದೆ. ಇದರಿಂದ ಜುಂ ಎನ್ನುವ ಅಸಹನೀಯ ಅನುಭವವೂ ಸಾಮಾನ್ಯ.

ಪರಿಹಾರಗಳು

lಮೂಗಿನಿಂದ ಉಸಿರಾಡಬೇಕು. ಬಾಯಿಯಿಂದ ಉಸಿರಾಡಿದಲ್ಲಿ ಶುಷ್ಕ ಬಾಯಿ ಉಂಟಾಗಿ ವಸಡಿನ ಉರಿಯೂತ, ಹಲ್ಲಿನ ಹುಳುಕು ಆಗುವ ಸಾಧ್ಯತೆಯೂ ಹೆಚ್ಚು.

lಸರಿಯಾದ ಕ್ರಮದಲ್ಲಿ ಹಲ್ಲುಜ್ಜುವಿಕೆ; ದಿನಕ್ಕೆರಡು ಬಾರಿ ಮೂರು ಬಾರಿ ಹಲ್ಲುಜ್ಜಿದರೆ ಸಾಕು. ಅನಗತ್ಯ ರಭಸ ಕೂಡದು. ಎರಡು ತಿಂಗಳಿಗೊಮ್ಮೆ ಬ್ರಶ್ ಬದಲಿಸಿ. ಮೃದುವಾದ ಎಳೆಗಳುಳ್ಳ ಹಲ್ಲಿನ ಬ್ರಶ್ ಬಳಕೆ ಸೂಕ್ತ. ಹಲ್ಲುಜ್ಜಿದ ನಂತರ ವಸಡಿನ ಭಾಗವನ್ನು ಮಸಾಜ್ ಮಾಡಬೇಕು. ನಾಲಿಗೆಯನ್ನು ಶುಚಿಗೊಳಿಸಬೇಕು.

lದಂತವೈದ್ಯರ ಸಲಹೆಯ ಮೇರೆಗೆ ಫ್ಲೋರೈಡ್‍ಯುಕ್ತ ಟೂತ್ ಪೇಸ್ಟ್ , ಮೌತ್ ವಾಶ್ ಬಳಕೆ.

lಸಿಹಿತಿಂಡಿಗಳ ಸೇವನೆ ಮಿತವಾಗಿರಲಿ. ಆಹಾರದಲ್ಲಿ ವಿಟಮಿನ್ ಡಿ ಹೆಚ್ಚಿರುವ ಅಣಬೆ, ಮೀನು, ಮೊಟ್ಟೆ, ಹಾಲು-ಮೊಸರು ಮುಂತಾದವು ಒಳಗೊಂಡಿರಲಿ.

lಓಡಾಡುವಾಗ, ವ್ಯಾಯಾಮ ಮಾಡುವಾಗ ಆದಷ್ಟೂ ತಣ್ಣಗಿನ ಗಾಳಿ, ಬಾಯಿ ಸೇರದಂತೆ ಎಚ್ಚರ ವಹಿಸಿ, ತಲೆ-ಬಾಯಿಗೆ ಬೆಚ್ಚಗಿನ ಹೊದಿಕೆ ಧರಿಸುವುದು ಒಳ್ಳೆಯದು.

lಚಳಿಗಾಲದಲ್ಲೂ ಶುದ್ಧನೀರು ದೇಹಕ್ಕೆ ಬೇಕು. ನೀರಿನ ಪ್ರಮಾಣ ಕಡಿಮೆಯಾದರೆ ಜೊಲ್ಲುರಸದ ಪ್ರಮಾಣವೂ ಕಡಿಮೆಯಾಗುತ್ತದೆ. ಅದರಿಂದ ಹಲ್ಲು ಹುಳುಕಾಗಿ ನೋವು ಕಾಣಿಸಿಕೊಳ್ಳಬಹುದು.

ಯಾವುದೇ ರೀತಿಯ ಹಲ್ಲುನೋವು ಬಂದಾಗ ಅದಕ್ಕೆ ನಿಖರ ಕಾರಣ ಪತ್ತೆ ಹಚ್ಚುವುದು ಮುಖ್ಯ. ಈ ನಿಟ್ಟಿನಲ್ಲಿ ನೋವು ಹೇಗೆ, ಯಾವಾಗ, ಎಷ್ಟು ಸಮಯ ಇರುತ್ತದೆ ಎಂಬ ಮಾಹಿತಿಯೊಡನೆ ದಂತವೈದ್ಯರ ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT