ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಣಿದ ದೇಹಕ್ಕೆ ಶಕ್ತಿಯ ಸಂಚಯನ

Last Updated 29 ಆಗಸ್ಟ್ 2022, 22:30 IST
ಅಕ್ಷರ ಗಾತ್ರ

ದಣಿವು ಸಹಜವೋ ಅಸಹಜವೋ ಶಾರೀರಿಕ ಶ್ರಮದಿಂದ ದೇಹವು ದಣಿಯುವುದು ಸಹಜ. ಒಂದಿಲ್ಲೊಂದು ಚಟುವಟಿಕೆಗಳಲ್ಲಿಯೇ ತೊಡಗಿಕೊಂಡಿರುವ ಮನಸ್ಸು-ಇಂದ್ರಿಯಗಳೂ ದಣಿಯುತ್ತವೆ; ಇದರಿಂದ ದೇಹಕ್ಕೂ ಆಯಾಸವಾಗುವುದು. ಇಂತಹ ಬಳಲಿಕೆಗೆ ನಿತ್ಯವೂ ರಾತ್ರಿಯ ಸಹಜ, ಸಕಾಲನಿದ್ರೆ ಆರಾಮದಾಯಕ. ಹೀಗೆ ಶಕ್ತಿ ಕುಂದುವುದು, ನಿದ್ರೆಯಿಂದ ದೇಹಬಲವನ್ನು ಪಡೆಯುವುದು ಸ್ವಾಸ್ಥ್ಯ ಲಕ್ಷಣ. ಇದು ಆರೋಗ್ಯವಂತರಿಗೆ ಸಹಜಕ್ರಿಯೆ.

ಅನಾರೋಗ್ಯವಾದಾಗಲೂ ದೇಹವು ಬಳಲುತ್ತದೆ. ಚಿಕಿತ್ಸೆಯಿಂದ ಸಹಜಶಕ್ತಿಯನ್ನು ಪಡೆದುಕೊಳ್ಳುವುದು, ಕಾಯಿಲೆಯು ಗುಣಮುಖದತ್ತ ಸಾಗುತ್ತಿರುವುದರ ಲಕ್ಷಣ. ಯಾವುದೇ ಬಗೆಯ ದೈಹಿಕ, ಮಾನಸಿಕ ಮತ್ತು ಇಂದ್ರಿಯಗಳ ಚಟುವಟಿಕೆಗಳನ್ನು ಮಾಡದಿದ್ದಾಗಲೂ, ಸುಮ್ಮನೆ ಕುಳಿತುಕೊಂಡಿದ್ದಾಗಲೂ ಸುಸ್ತಾಗುತ್ತಿದ್ದರೆ ಇದು ರಸಕ್ಷಯ, ರಕ್ತದುಷ್ಟಿ, ಮೇದೋದುಷ್ಟಿ, ಶುಕ್ರಕ್ಷಯ, ಓಜೋಕ್ಷಯ, ಪ್ರಮೇಹ, ತೃಷ್ಣಾರೋಗ, ಶ್ವಾಸರೋಗದಂತಹ ಅನಾರೋಗ್ಯದ ಲಕ್ಷಣ. ನಿಖರವಾದ ಚಿಕಿತ್ಸೆಯಿಂದ ಸರಿಹೋಗಬಹುದು.

ಮಹಾನಗರಗಳಲ್ಲಿ ಅಪಾಯಕಾರಿ ಮಟ್ಟಕ್ಕೆ ತಲುಪಿರುವ ವಾತಾವರಣದಲ್ಲಿ ದಣಿಯುತ್ತೇವೆ. ದೂರಪ್ರಯಾಣ ಸಾಮಾನ್ಯವಾಗಿದೆ. ಕೆಲಸದೊತ್ತಡ, ಹಲವನ್ನು ನಿರ್ವಹಿಸುವ ಗಡಿಬಿಡಿಯ ಜೀವನದಿಂದಾಗಿ ಬಳಲುತ್ತೇವೆ. ನಿಸ್ಸತ್ವ ಆಹಾರದಿಂದಲೂ ನಮ್ಮ ಸಹಜಶಕ್ತಿ ಕುಂದುತ್ತಿದೆ, ದಣಿವು ನಮ್ಮನ್ನು ಆವರಿಸುತ್ತಿದೆ. ಬಿಡುವು ಇಲ್ಲದೆ ದುಡಿಯುವುದು ಮತ್ತು ದಣಿಯುವುದು ಇಂದಿನ ಬದುಕಿನ ಅನಿವಾರ್ಯತೆ ಎಂಬಂತಾಗಿದೆ. ಯಾವ ರೀತಿಯಲ್ಲಿ ದಣಿವಾಗಿದೆಯೋ ಹಾಗೆ ಶಕ್ತಿವ್ಯಯವಾಗಿರುತ್ತದೆ, ಅದರಂತೆ ದಣಿವನ್ನು ನಿವಾರಿಸಿಕೊಳ್ಳಬೇಕು.

ವಿಶ್ರಾಂತಿ ಹೀಗಿರಲಿ

ಎಲ್ಲಾ ದಣಿವಿನಲ್ಲೂ, ವಿರಮಿಸುವುದು ದೇಹದ ಚೇತರಿಕೆಗೆ ಸಹಾಯಕ. ಆದರೆ, ವಿಶ್ರಮಿಸುವ ವಿಧಾನ ಬೇರೆ. ನಡೆದು, ಓಡಿ, ಸೈಕಲ್-ತುಳಿದು, ಕಾಲಿನ ವ್ಯಾಯಾಮದಿಂದ, ನಿಂತು ಕೆಲಸ ಮಾಡುವುದರಿಂದ ಆಯಾಸವಾದಾಗ ಸ್ವಲ್ಪ ಕಾಲ ಕಾಲು ಚಾಚಿಕೊಂಡು ಕೂರುವುದು ಆರಾಮದಾಯಕ. ಈ ಸಂದರ್ಭಗಳಲ್ಲಿ ರಕ್ತದ ಹರಿವು ಕಾಲಿನೆಡೆಗೆ ಹೆಚ್ಚಿರುತ್ತದೆ. ಕಾಲು, ಸೊಂಟ, ಬೆನ್ನು ಸೋತಿರುತ್ತದೆ. ಕೂತಾಗ ರಕ್ತವು ಸಹಜಸ್ಥಿತಿಗೆ ಮರಳುತ್ತದೆ.

ಮೈ ಬೆವರುವಷ್ಟು ವ್ಯಾಯಾಮ, ಭಾರ ಹೊರುವುದು, ದೂರಪ್ರಯಾಣ, ಶಾರೀರಿಕ ಶ್ರಮವಾದಾಗ ಕೈಕಾಲು-ಮೈ ಚಾಚಿಕೊಂಡು ಸಮತಲದ ಮೇಲೆ ಮಲಗುವುದು - ‘ಶವಾಸನ’ವು ಸೂಕ್ತ. ಹೃದಯಗತಿಯನ್ನು ತಗ್ಗಿಸಿ, ಉಸಿರಾಟ, ರಕ್ತಸಂಚಾರವನ್ನು ಸಹಜಗೊಳಿಸುವುದು. ಶವಾಸನದಲ್ಲಿ ಉಸಿರಿನ ಸ್ಥಿತಿಯನ್ನು, ಗತಿಯನ್ನು, ಏರಿಳಿತವನ್ನು ಗಮನಿಸುವುದು - ಹೃದಯ, ಶ್ವಾಸಕೋಶಗಳ ಕಾರ್ಯವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.

ರಾತ್ರಿಯ ಶುರುವಿನಲ್ಲಿ ಸುಮಾರು ಒಂಬತ್ತು-ಹತ್ತು ಗಂಟೆಯೊಳಗೆ ಮಲಗುವುದು, ಮುಂಜಾನೆ ಎಚ್ಚರಾದ ಮೇಲೆ ಏಳುವುದು ಆರೋಗ್ಯದಾಯಕ. ನಿದ್ರೆಯಷ್ಟು ಸರ್ವಾಂಗಗಳನ್ನೂ ಪೋಷಿಸುವ ವಿಶ್ರಾಂತ ವಿಧಾನ ಮತ್ತೊಂದಿಲ್ಲ. ಬೇಸಿಗೆಯಲ್ಲಿ ದಣಿವಾದಾಗ ಹಗಲು ಕೂಡ ಖಾಲಿ ಹೊಟ್ಟೆಯಲ್ಲಿ ತಂಗಾಳಿಯಲ್ಲಿ ಕೊಂಚಕಾಲ ನಿದ್ರಿಸುವುದು ಉತ್ತಮ.

ಅಭ್ಯಂಜನಗಳು

ಶರೀರಕ್ಕೆ ಜಿಡ್ಡಿನ ಸಂಗ ಶಕ್ತಿದಾಯಕ. ಜಿಡ್ಡು, ಆಂತರಿಕ-ಬಾಹ್ಯಪ್ರಯೋಗದಿಂದ ಜೀವಕೋಶಗಳ ನಡುವೆ ಬೆಸೆಯುವ ಕೆಲಸವನ್ನು ಮಾಡುತ್ತದೆ, ಸವಕಳಿಯನ್ನು ತಡೆಯುತ್ತದೆ. ಅಂದರೆ ‘ವಾತದೋಷ’ವನ್ನು ಸರಿಪಡಿಸುತ್ತದೆ. ನರಗಳ ಮೇಲಿನ, ಮೂಳೆಗಳ, ಸಂಧಿಗಳ ಸುತ್ತಲಿನ, ಚರ್ಮ-ಹೃದಯ-ಜಠರ-ಕರುಳು – ಹೀಗೆ ಎಲ್ಲಾ ಅಂಗಾಂಗಗಳ ಪಸೆಯ ಪದರವು ರಕ್ಷಾಕವಚದಂತೆ ಕೆಲಸಮಾಡುತ್ತದೆ. ನಿತ್ಯವೂ ಎಣ್ಣೆ, ತುಪ್ಪದಂತಹ ಜಿಡ್ಡನ್ನು ತಲೆ, ಕಿವಿ, ಮೂಗಿನ ಹೊಳ್ಳೆ, ಪಾದ, ಸಂಧಿಗಳು, ಇಡೀ ಶರೀರಕ್ಕೂ ಪಸರುವಂತೆ ಸವರಿಕೊಳ್ಳುವುದು ಶ್ರಮನಿವಾರಕ. ದಣಿದ ದೇಹಕ್ಕೆ ಬೆಚ್ಚಗಿನ ಎಣ್ಣೆಯ ಅಭ್ಯಂಜನ ಶೀತಗಾಲದಲ್ಲಿ ಹೊಂದುತ್ತದೆ. ಬೇಸಿಗೆಯಲ್ಲಿ ತುಪ್ಪ ಅಥವಾ ಬೆಣ್ಣೆಯ ‘ಸಂವಾಹನ’ ಸೂಕ್ತ. ಒತ್ತಡ ಹೇರದೆ ಮೃದುವಾಗಿ ಮೈಬಿಸಿಯೇರದಂತೆ ಸವರಿಕೊಳ್ಳುವುದು ‘ಸಂವಾಹನ’ ಎಂದು ಕರೆಸಿಕೊಳ್ಳುತ್ತದೆ. ಪಾದಗಳಿಗೆ ಎಣ್ಣೆ/ ತುಪ್ಪವನ್ನು ಸವರಿಕೊಳ್ಳುವುದು, ರಾತ್ರಿ ಮಲಗುವ ಮುನ್ನ ಮಾಡಿದರೆ ಇಡೀ ದಿನದ ದಣಿದ ದೇಹವನ್ನು ಗಾಢನಿದ್ರೆಯ ಮೂಲಕ ಸರಿಪಡಿಸುತ್ತದೆ. ತಲೆಗೆ ನೆನೆಯುವಷ್ಟು ಎಣ್ಣೆಯನ್ನು ಹಾಕಿಕೊಳ್ಳುವುದು ಕಣ್ಣು, ಕಿವಿಗಳ ಸತತ ಉಪಯೋಗದಿಂದಾದ, ಗಾಳಿಯಲ್ಲಿ ಮೈ ಒಡ್ಡಿ, ಪ್ರಯಾಣಿಸಿದಾಗಿನ ಆಯಾಸವನ್ನು ತತ್‌ಕ್ಷಣ ನಿವಾರಿಸುತ್ತದೆ. ಮೊಬೈಲ್, ಕಂಪ್ಯೂಟರ್, ಟ್ರಾಫಿಕ್, ಉಚ್ಚಶಬ್ದಗಳ ಗಿಜಿಬಿಜಿಯಿಂದಾದ ದಣಿವನ್ನು, ಇಂದ್ರಿಯಗಳಿಗೆ ಶಕ್ತಿಯನ್ನು ತುಂಬುವುದರ ಮೂಲಕ ಕಾಪಾಡುತ್ತದೆ. ಪಾದಗಳನ್ನು ಎಣ್ಣೆಯಲ್ಲಿ ಮುಳುಗಿಸಿಟ್ಟುಕೊಂಡು ತೊಳೆದುಕೊಳ್ಳುವ ವಿಧಾನಕ್ಕೆ ‘ಪಾದಾವಗಾಹ’ ಎನ್ನುವರು. ಇದು ಕಾಲಿನ ದಣಿವನ್ನು ತ್ವರಿತವಾಗಿ ಸರಿಪಡಿಸಿ ಬಲಪಡಿಸುತ್ತದೆ.

ಸ್ನಾನ ಹೀಗಿರಲಿ

ತಲೆ-ಮೈಗೆ ನೀರಿನ ಸ್ಪರ್ಶದಿಂದ ಸಿಗುವ ನವಚೈತನ್ಯವೇ ಬೇರೆ. ಮೈಬೆವರುವಷ್ಟು ಶ್ರಮಪಡುವವರು, ಬೇಸಿಗೆಯಲ್ಲಿ ತಣ್ಣೀರಿನ ಸ್ನಾನದ ಪ್ರಯೋಜನವನ್ನು ಪಡೆಯಬಹುದು. ‘ಪರಿಷೇಕಸ್ನಾನ’ (ಶವರ್ ಬಾತ್), ಧುಮುಕುವ ಜಲಪಾತದ ಧಾರೆ, ಜಿನುಗುವ ಮಳೆಯಂತಹ ಸಿಂಚನ, ಕೆರೆ-ತೊರೆ-ತೆರೆದ ಬಾವಿಯಲ್ಲಿ ಮುಳುಗುವ ‘ಅವಗಾಹ’ ಸ್ನಾನ, ತೀರ್ಥದ ಪ್ರೋಕ್ಷಣೆಯಂತಹ ನೀರಿನ ಸ್ಪರ್ಶ – ಹೀಗೆ ಸ್ನಾನದ ಹಲವು ಬಗೆಯಿಂದ ದೇಹಕ್ಕೆ ಚೈತನ್ಯ ದೊರಕುತ್ತದೆ. ನಿತ್ಯವೂ ಸ್ನಾನ ಮಾಡುವುದು ಸ್ವಚ್ಛತೆಗಾಗಿ ಮಾತ್ರವಲ್ಲ ದೇಹ ಮತ್ತು ಇಂದ್ರಿಯಗಳ ಮನೆಯಾದ ಶಿರಸ್ಸಿಗೆ ಬಲವನ್ನು ನೀಡುವುದೂ ಆಗಿದೆ. ಆಲಸ್ಯ ನಿವಾರಿಸಿ, ಶ್ರಮವನ್ನು ಕಳೆಸಿ ದೃಢದೇಹವನ್ನು ನೀಡುವ ಸ್ನಾನ, ನಿತ್ಯಕರ್ಮ. ನಿತ್ಯವೂ ಮೈಗೆ ಬಿಸಿ-ಬೆಚ್ಚಗಿನ ನೀರು, ತಲೆಗೆ ತಣ್ಣೀರು-ಹೂಬಿಸಿ ನೀರು ಉತ್ತಮ. ತಲೆಗೆ ಬಿಸಿನೀರಿನ ಸ್ನಾನ ಇಂದ್ರಿಯಗಳ ದಣಿವಿಗೆ ಕಾರಣ.

ಹಸಿರಿನ ನಡುವೆ ತಂಗಾಳಿಯಲ್ಲಿ ಅಡ್ಡಾಡಿ

ಚಿಂತೆ-ಚಿಂತನೆಗಳಿಂದ ದಣಿದ ಮನಸ್ಸಿಗೆ, ಒಂದೇ ಕೆಲಸದಲ್ಲಿ ಮುಳುಗಿ ಮುರುಟಿದ ಇಂದ್ರಿಯಗಳಿಗೆ ವಾತಾವರಣದ ಬದಲಾವಣೆ ಬಲದಾಯಕ. ಎಲೆ-ಟೊಂಗೆಗಳ ತೊನೆಸುವ ತಂಗಾಳಿ, ಹೂ-ಮೊಗ್ಗು-ಚಿಗುರುಗಳ ವರ್ಣಮಯ ಪರಿಸರ, ಹಕ್ಕಿಗಳ ಕಲರವ ಮನಸ್ಸಿನ-ಇಂದ್ರಿಯಗಳ ದಣಿವಿಗೆ ಔಷಧರಹಿತ ಚಿಕಿತ್ಸೆ. ಕ್ಲೇಶಕಳೆಯಿಸಿ ಮನೋಹರವಾದ ಶಕ್ತಿದಾಯಕ ಚಟುವಟಿಕೆ. ಗೋಡೆಗಳ ನಡುವೆಯೇ ಹೆಚ್ಚುಹೊತ್ತು ಕಳೆಯುವುದರಿಂದಾಗುವ ಏಕತಾನದ ದಣಿವಿಗೆ ಈ ಅಡ್ಡಾಟ ಪರಿಹಾರ. ಬಿಸಿಲುಗಾಲದಲ್ಲಿ ಬೆಳದಿಂಗಳಿನಲ್ಲಿ ಸಮಯ ಕಳೆಯುವುದು ಚೇತೋಹಾರಿ.

ಸ್ನೇಹಕೂಟಗಳು ದಣಿವು ನಿವಾರಕಗಳು

ಸ್ನೇಹಕ್ಕೆ ಕರಗುವ ಮರುಗುವ ಜೀವವಿಲ್ಲ. ಜೊತೆಗೂಡಿದರೆ ಜೀವನಪಥ ನಿರಾಯಾಸ ಎನಿಸುತ್ತದೆಯಲ್ಲವೇ? ಸ್ನೇಹದ ಎಳೆಯೊಂದು ನೆಪವೊಂದರಿಂದ ಕೂಡುವುದು ಯಾವುದ್ಯಾವುದೋ ಕೂಟಗಳಲ್ಲಿ. ಸವಿಭೋಜನ, ಸವಿನೋಟ, ಸವಿಶ್ರವಣ, ಸ್ನೇಹಿತರೊಂದಿಗೆ ಮತ್ತಷ್ಟು ಸವಿತರುತ್ತದೆ. ಸಿಹಿ-ಆಹಾರ, ಮಾತು, ಯೋಚನೆ, ಒಡನಾಟದಷ್ಟು ದೇಹಕ್ಕೆ – ಜೀವಕ್ಕೆ ಶಕ್ತಿನೀಡುವುದು ಮತ್ತೇನಿದೆ. ಮಧುರಂ ಅಖಿಲಂ...

ಶಕ್ತಿದಾಯಕ ಆಹಾರ-ಪಾನೀಯಗಳು

ಮೈಥುನದ ನಂತರದ ದಣಿವಿಗೆ ಹಾಲನ್ನು ಕುಡಿಯುವುದು ಕ್ಷಣದಲ್ಲೇ ಶಕ್ತಿಕಾರಕ. ದೈಹಿಕಾಯಾಸ, ಸತತವಾಗಿ ಮಾತಾಡಿ, ಪ್ರಯಾಣಿಸಿ, ಆಟ-ವ್ಯಾಯಾಮಗಳಿಂದ - ಎಲ್ಲಾ ದೈಹಿಕದಣಿವಿನಲ್ಲಿ ಹಾಲಿನ ಸೇವನೆ ಅಥವಾ ಹಾಲಿನ ಪಾಯಸ, ಖೀರು, ಹಾಲು-ಅನ್ನ, ಹಾಲಿನ ಸಜ್ಜಿಗೆಯಂತಹ ಸಿಹಿಗಳು ಶಕ್ತಿಕಾರಕ. ಬೇಸಿಗೆಯಲ್ಲಿ ದಣಿದು ಬಾಯಾರಿಕೆಯಾಗಿದ್ದರೆ ದ್ರಾಕ್ಷಿ, ಖರ್ಜೂರ, ಅಂಜೂರ, ಮಾವು, ದಾಳಿಂಬೆ, ಕಿತ್ತಳೆಯಂತಹ ವಿವಿಧ ಹಣ್ಣುಗಳ ರಸ-ಪಾನಕಗಳು ಉತ್ತಮ. ಸತತವಾಗಿ ದೈಹಿಕ ದುಡಿಮೆಯುಳ್ಳವರು ಬೇಯಿಸಿದ ಮಾಂಸರಸವನ್ನು ಆಹಾರವಾಗಿ ಸೇವಿಸುವುದು ಉಪಯುಕ್ತ. ಮದ್ಯಪಾನಿಗಳು ಸೂಕ್ತವಾದ ಆಹಾರದೊಟ್ಟಿಗೆ ಮಿತಿಯಲ್ಲೇ ಮೃದು ಮದ್ಯವನ್ನು ಸೇವಿಸುವುದೂ ಶಕ್ತಿದಾಯಕ.

ದೈಹಿಕಶ್ರಮವನ್ನು ಅನುಸರಿಸಿ ಆಹಾರ, ನಿದ್ರೆ, ಅಭ್ಯಂಜನ, ಸ್ನಾನ, ಚಟುವಟಿಕೆಗಳಿಂದ ಮತ್ತೆ ದೇಹವನ್ನು ಸಶಕ್ತಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT