ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Monsoon Health Tips | ಮುಂಗಾರಿನಲ್ಲಿ ಆಗದಿರಲಿ ಆರೋಗ್ಯದ ಏರುಪೇರು

Published 19 ಜೂನ್ 2023, 15:22 IST
Last Updated 19 ಜೂನ್ 2023, 15:22 IST
ಅಕ್ಷರ ಗಾತ್ರ

ಡಾ. ಶ್ರೀನಿವಾಸ ಹರಪನಹಳ್ಳಿ ಜೂನ್ ತಿಂಗಳುಆರಂಭವಾಗುತ್ತಿದ್ದಂತೆಯೇ ಸೃಷ್ಟಿಗೆ ಹೊಸ ಜೀವಕಳೆ ಬರುತ್ತದೆ. ಬೇಸಿಗೆಯ ಬೇಗುದಿಯನ್ನು ಕಡಿಮೆ ಮಾಡಿಕೊಳ್ಳಲು ಭೂಮಿ ಕೂಡ ಹಾತೊರೆಯುತ್ತದೆ. ಇದು ಬೆವರು ಸುರಿಸಿ ದಣಿದ ತನು-ಮನಗಳಿಗೆ ಮುಂಗಾರಿನ ಸೇಚನ ನೀಡುವ ಸಮಯ. ವಾತಾವರಣದಲ್ಲಾಗುವ ಬದಲಾವಣೆ ಈ ಸಮಯದಲ್ಲಿ ಸಹಜ ಕೂಡ. ಇದೇ ಸಮಯದಲ್ಲಿ ಒಂದೆಡೆ ಕೃಷಿ ಚಟುಚಟಿಕೆಗಳು ಗರಿಗೆದರಿದರೆ ಮತ್ತೊಂದೆಡೆ ಚಿಣ್ಣರ ಶಾಲಾರಂಭದ ಕಲರವ ಕೇಳುತ್ತದೆ.

ಮುಂಗಾರಿನ ಸಮಯ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗುತ್ತದೆ. ಬರಿದಾಗಿದ್ದ ಕೆರೆ-ನದಿಗಳು ನಿಧಾನವಾಗಿ ಮೈದುಂಬುತ್ತವೆ. ಬರಡಾಗಿದ್ದ ನೆಲ ಹಸುರಿನಿಂದ ಕಂಗೊಳಿಸಲಾರಂಭಿಸುತ್ತದೆ. ಇವು ಕೆಲವು ಜೀವಜಂತುಗಳ ಹೊಸತಳಿಗಳಿಗೂ ಕಾರಣವಾಗುತ್ತವೆ. ಇವು ಕೆಲವೊಮ್ಮೆ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮವನ್ನುಂಟು ಮಾಡುತ್ತವೆ. ಆದ್ದರಿಂದ ಮುಂಗಾರು ಮಳೆಯ ಅವಧಿಯಲ್ಲಿ ನಾವು ನಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ನಮ್ಮಲ್ಲಿ ಬಹುತೇಕ ಕಡೆ ಕುಡಿಯುವ ನೀರಿನ ಮೂಲ ಕೆರೆ-ನದಿಗಳ ಮೂಲಕ ಶೇಖರಿಸಿಟ್ಟ ಸಂಗ್ರಹಾಲಯದ ನೀರಾಗಿರುತ್ತದೆ. ಅದನ್ನು ಕೊಳವೆಗಳ ಮೂಲಕವೋ ಅಥವಾ ಟ್ಯಾಂಕರ್ ಮೂಲಕವೋ ಮನೆಮನೆಗೂ ತಲುಪುತ್ತದೆ. ಇನ್ನು ಕೆಲವೊಂದು ಕಡೆ ಭಾವಿ ಅಥವಾ ಸಿಹಿನೀರಿನ ಬೋರ್‌ವೆಲ್‌ಗಳೂ ಇರಬಹುದು. ಹೊಸ ಮಳೆಯಾದ ಸ್ವಲ್ಪ ಸಮಯದ ನಂತರ ನಾವು ಕುಡಿಯುವ ನೀರಿನ ರುಚಿ ಮತ್ತು ಬಣ್ಣದಲ್ಲಿ ಕೊಂಚ ಬದಲಾವಣೆಯನ್ನು ಕಾಣಬಹುದು. ಅದಕ್ಕೆ ಮುಖ್ಯ ಕಾರಣ ನೀರಿನ ಲವಣಾಂಶಗಳಲ್ಲಿ ಆಗಿರುವ ಕೆಲವು ಬದಲಾವಣೆಗಳು.

ಕುಡಿಯುವ ನೀರು ಕಲುಷಿತಗೊಂಡಾಗ ಅಥವಾ ಸಂಸ್ಕರಿಸದ ನೀರನ್ನು ಕುಡಿದಾಗ ಅದು ಕೆಲವೊಮ್ಮೆ ಹೊಟ್ಟೆನೋವು, ಭೇದಿಯಂತಹ ತೊಂದರೆಯನ್ನು ಉಂಟುಮಾಡಬಹುದು. ಕಾಲರಾ, ಕಾಮಾಲೆಯಂತಹ ರೋಗಗಳೂ ಈ ಸಂದರ್ಭಗಳಲ್ಲೇ ಹರಡುತ್ತವೆ. ಆದ್ದರಿಂದ ಈ ಸಮಯದಲ್ಲಿ ಕುಡಿಯುವ ನೀರನ್ನು ಚೆನ್ನಾಗಿ ಕುದಿಸಿ ಶೇಖರಿಸಿಟ್ಟುಕೊಳ್ಳಬೇಕು.

ಆ ಮುಂಗಾರಿನ ಸಮಯದಲ್ಲಿ ಬಿಸಿಲಿನ ಝಳ ಕಡಿಮೆಯಾಗಿ ವಾತಾವರಣ ತಂಪಾಗುತ್ತದೆ. ಸತತವಾಗಿ ಮಳೆ ಸುರಿಯುತ್ತಿರುವಾಗ ಬೀಸುವ ಗಾಳಿಯಲ್ಲಿನ ತೇವಾಂಶ ಕೂಡ ತಂಪಾಗುವುದರಿಂದ ನಮಗೆ ಶೀತಗಾಳಿಯ ಅನುಭವವಾಗುತ್ತದೆ. ನಮ್ಮ ಪರಿಸರದಲ್ಲಿರುವ ವೈರಸ್‌ಗಳು ಸತತ ಬದಲಾವಣೆ (ಮ್ಯುಟೇಷನ್) ಹೊಂದುತ್ತಿರುವುದರಿಂದ ನಾವು ಹೊಸ ವೈರಸ್‌ಗಳ ಸಂಪರ್ಕಕ್ಕೆ ಬರುತ್ತೇವೆ. ಹಾಗಾಗಿ ಹೆಚ್ಚಿನವರಲ್ಲಿ ಕೆಮ್ಮು, ನೆಗಡಿ, ಜ್ವರದಂತಹ ಕಾಯಿಲೆಗಳು ಈ ಸಮಯದಲ್ಲಿ ಕಂಡುಬರುತ್ತವೆ. ಚಿಕ್ಕಮಕ್ಕಳಲ್ಲಿ ಮತ್ತು ವಯೋವದ್ಧರಲ್ಲಿ ರೋಗನಿರೋಧಕ ಶಕ್ತಿ ಕೊಂಚ ಕಡಿಮೆ ಇರುವುದರಿಂದ ಈ ಕಾಯಿಲೆಗಳು ಹೆಚ್ಚಾಗಿ ಇವರನ್ನೇ ಕಾಡುತ್ತವೆ. ಅನೇಕ ಮಕ್ಕಳಲ್ಲಿ ಶಾಲೆ ಪ್ರಾರಂಭವಾದ ಕೆಲವು ದಿನಗಳಲ್ಲಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ನೆಗಡಿ, ಜ್ವರಗಳು ಹರಡುತ್ತವೆ. ಹೀಗೆಂದು ಇವೇನೂ ಮಹಾ ತೊಂದರೆಯನ್ನು ನೀಡುವ ಕಾಯಿಲೆಯೇನಲ್ಲ. ಕೆಲವು ದಿನಗಳ ಮಾತ್ರೆ ಮತ್ತು ವಿಶ್ರಾಂತಿಯಿಂದ ಇದನ್ನು ಗುಣಪಡಿಸಬಹುದು. ಹೀಗಿದ್ದರೂ ರೋಗನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಗಳನ್ನು ಸೋಂಕಿತರಿಂದ ದೂರವಿಡುವುದು ಒಳ್ಳೆಯದು. ಈ ಸಮಯದಲ್ಲಿ ಬೆಚ್ಚನೆಯ ಬಟ್ಟೆ ಧರಿಸಿ ತಲೆ-ಕಿವಿಗಳನ್ನು ಶೀತಗಾಳಿಗೆ ಒಡ್ಡದಂತೆ ರಕ್ಷಿಸಿಕೊಳ್ಳುವುದರಿಂದ ಮತ್ತು ಸೋಂಕಿತರ ಕಫ, ಕೆಮ್ಮಿನಿಂದ ದೂರವಿರುವುದರಿಂದ ಬಹುತೇಕ ಮಟ್ಟಿಗೆ ನಾವು ಈ ಕಾಯಿಲೆಗಳಿಂದ ಪಾರಾಗಬಹುದು.

ಮಳೆಗಾಲದಲ್ಲಿ ಮನೆಯ ಅಕ್ಕಪಕ್ಕದಲ್ಲಿ ನೀರು ಶೇಖರವಾಗಬಹುದು. ರಸ್ತೆಯಲ್ಲಿನ ಗುಂಡಿಗಳು, ಚರಂಡಿಗಳಲ್ಲಿ ಕೂಡ ನೀರು ಶೇಖರವಾಗಬಹುದು. ಇದರ ಜೊತೆಗೆ ಹೂಕುಂಡಗಳಲ್ಲಿ, ಮಾಳಿಗೆಯ ತುದಿಯಲ್ಲಿ ಬಾಲ್ಕನಿಯಲ್ಲಿ ಕೂಡ ನೀರು ನಿಲ್ಲಬಹುದು. ಇವೆಲ್ಲವೂ ಸೊಳ್ಳೆಗಳ ಕಾಟಕ್ಕೆ ಆಹ್ವಾನವಿತ್ತಂತೆ. ಮಲೇರಿಯಾ, ಡೆಂಗೆ ಮತ್ತು ಚಿಕನ್‌ಗುನ್ಯಾದಂತಹ ರೋಗಗಳು ಹರಡುವುದು ಈ ಸಮಯದಲ್ಲೇ. ಆದ್ದರಿಂದ ಮುಂಗಾರು ಶುರುವಾಗುತ್ತಿದ್ದಂತೆ ಮನೆಯಲ್ಲಿನ ಹೂಕುಂಡಗಳು, ನೀರಿನ ತೊಟ್ಟಿಗಳು ಮತ್ತು ಸುತ್ತಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಬಹುಮುಖ್ಯ.

ಮಳೆಯಲ್ಲಿ ನೆನೆದ ಹಣ್ಣು-ತರಕಾರಿಗಳು ಬೇಗನೆ ಕೊಳೆಯಲಾರಂಭಿಸುತ್ತವೆ. ಕೊಳೆತ ಆಹಾರದಲ್ಲಿ ಬೆಳೆಯುವ ಕೆಲವು ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಸೇರಿದಾಗ ಅನಾರೋಗ್ಯ ಉಂಟಾಗುತ್ತದೆ. ಆದ್ದರಿಂದ ಇವುಗಳನ್ನು ಚೆನ್ನಾಗಿ ತೊಳೆದು, ಸ್ವಚ್ಛಗೊಳಿಸಿ ಸಾಧ್ಯವಾದಷ್ಟೂ ತಾಜಾಸ್ಥಿತಿಯಲ್ಲಿ ಕಾಯ್ದಿಟ್ಟುಕೊಳ್ಳಬೇಕು. ಆಹಾರವನ್ನು ಚೆನ್ನಾಗಿ ಬಿಸಿಮಾಡಿ, ತಾಜಾ ಇರುವಾಗಲೇ ಸೇವಿಸುವುದು ಇದಕ್ಕೆ ಉತ್ತಮ ಪರಿಹಾರ. ಅದೇ ರೀತಿ ರಸ್ತೆಬದಿಯ ಫಾಸ್ಟ್ ಫುಡ್ ತಿನ್ನುವಾಗಲೂ ತುಂಬ ಎಚ್ಚರವನ್ನು ವಹಿಸಬೇಕು.

ಇದಲ್ಲದೆ ತಂಪಾದ ವಾತಾವರಣದಲ್ಲಿ ದೇಹದ ಮಾಂಸಖಂಡಗಳಲ್ಲಿ ಕೊಂಚ ಸೆಡೆತವಿರುತ್ತದೆ. ಇದು ಹಿರಿಯರಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಆದ್ದರಿಂದ ಕೂಡುವಾಗ, ಏಳುವಾಗ ಅಥವಾ ನಡೆಯುವಾಗ ಸ್ನಾಯುಗಳಲ್ಲಿ ಮತ್ತು ಸಂದುಗಳಲ್ಲಿ ಬಿಗಿತವುಂಟಾಗಬಹುದು. ಒಮ್ಮೆಲೇ ಭಂಗಿ ಬದಲಿಸಿದಾಗ ಅಸಾಧ್ಯ ನೋವು ಕಾಣಿಸಬಹುದು. ಆದ್ದರಿಂದ ನಾವು ನಮ್ಮನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಮತ್ತು ನಿಧಾನವಾಗಿ ಕೈ–ಕಾಲುಗಳನ್ನು ಬಿಡಿಸಿ ಸೆಡೆತವನ್ನು ಕಡಿಮೆಮಾಡಿಕೊಳ್ಳುವುದು ಬಹುಮುಖ್ಯ.

ಬಿಸಿಬಿಸಿ ಕುರುಕುಲು ತಿಂಡಿಗಳನ್ನು ಮೆಲ್ಲುತ್ತ ಟೀ-ಕಾಫಿ, ಕಷಾಯಗಳನ್ನು ಆಸ್ವಾದಿಸಲು ಮಳೆಗಾಲಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ಭೋರ್ಗರೆವ ಜಲಪಾತಗಳು, ತುಂಬಿ ಹರಿಯುವ ನದಿಗಳು ಮತ್ತು ಎಲ್ಲೆಡೆ ಹಸಿರುಚಾದರವನ್ನು ಹೊತ್ತು ಕಂಗೊಳಿಸುತ್ತಿರುವ ವಸುಂಧರೆಯನ್ನು ನೋಡಿ ಹರ್ಷಪಡಲು ಮಳೆಗಾಲವೇ ಚೆನ್ನ. ಆದರೆ ಮಳೆ ತರುವ ಕೆಲ ಅನಾರೋಗ್ಯಕಾರಿ ಅಂಶಗಳನ್ನೂ ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅಂದರೆ ಮಾತ್ರ ಈ ಅವಧಿಯನ್ನು ನಾವು ಕ್ಷೇಮವಾಗಿ ಕಳೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT