ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮಗೂ ಹಠಾತ್‌ ತಲೆಸುತ್ತುವಿಕೆ ಇದೆಯೇ? ಅದು ವರ್ಟಿಗೊ ಆಗಿರಬಹುದು ಎಚ್ಚರ!

ಡಾ ಪಿ.ಆರ್‌. ಕೃಷ್ಣನ್, ಹಿರಿಯ ಸಲಹೆಗಾರರು, ನ್ಯೂರಾಲಜಿ, ಫೋರ್ಟಿಸ್ ಆಸ್ಪತ್ರೆ
Published 8 ಜನವರಿ 2024, 12:01 IST
Last Updated 8 ಜನವರಿ 2024, 12:01 IST
ಅಕ್ಷರ ಗಾತ್ರ

ಕೆಲವರು ಬೆಳಿಗ್ಗೆ ಎದ್ದ ಕೂಡಲೇ ಅಥವಾ ಕುಳಿತಲ್ಲಿಯೇ ಇದ್ದಕ್ಕಿಂದ್ದಂತೆ ತಲೆಸುತ್ತುವಿಕೆಯನ್ನು ಅನುಭವಿಸುತ್ತಾರೆ. ಕೆಲವು ಸೆಕೆಂಡ್‌ಗಳವರೆಗೆ ಈ ಅನುಭವವಾಗುತ್ತದೆ ಅಥವಾ ತಾವು ಇರುವ ಜಾಗವೇ ಸುತ್ತುತ್ತಿರುವ ಅನುಭವವೂ ಆಗಬಹುದು. ಇದು ಸಾಮಾನ್ಯವೆಂದು ನೀವು ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಅಪಾಯಕ್ಕೆ ಗುರಿಯಾಗಬಹುದು. ಹೌದು, ಈ ರೀತಿಯ ಹಠಾತ್‌ ತಲೆ ತಿರುಗುವಿಕೆ ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೆ ಅದು ವರ್ಟಿಗೊ ಸಮಸ್ಯೆ ಆಗಿರಬಹುದು ಎಚ್ಚರ. ಏನಿದು ವರ್ಟಿಗೊ, ಯಾರಲ್ಲಿ ಇದು ಕಂಡು ಬರಲಿದೆ. ಇದಕ್ಕೆ ಪರಿಹಾರವೇನು ಎಂಬುದರ ಕುರಿತು ವೈದ್ಯರು ವಿವರಿಸಿದ್ದಾರೆ.

ಏನಿದು ವರ್ಟಿಗೊ?

ವರ್ಟಿಗೊ ಸಮಸ್ಯೆ ಬಂದರೆ ತಲೆಸುತ್ತುವಿಕೆ, ವಾಕರಿಕೆ ಬರುವುದು, ಈ ಸಮಸ್ಯೆ ಮೂಲ ಕಿವಿ. ಹೌದು, ಸಾಮಾನ್ಯವಾಗಿ ‘ಬುನೈನ್ ಪ್ಯಾರಾಕ್ಸಿಮಲ್‌ ಪೊಸಿಷನಲ್‌ ವರ್ಟಿಗೊ (ಬಿಪಿಪಿವಿ)’ (Benign Paroxysmal Positional Vertigo) ಎಂಬ ಒಳಗಿವಿಯ ಸಮಸ್ಯೆಯಿಂದ ಈ ವರ್ಟಿಗೊ ಸಮಸ್ಯೆ ಕಾಡಲಿದೆ. ಈ ಸಮಸ್ಯೆ ಇದ್ದವರಿಗೆ ಆಗಾಗ್ಗೆ ತಲೆಸುತ್ತುವಿಕೆ ಅಥವಾ ಅವರು ಇರುವ ಪ್ರದೇಶವೇ ಸುತ್ತುತ್ತಿರುವ ರೀತಿ ಹಾಗೂ ಕೆಲವೊಮ್ಮೆ ವಾಕರಿಕೆಯನ್ನು ಸಹ ಅನುಭವಿಸುತ್ತಾರೆ. ಈ ಅನುಭವ ಸಾಮಾನ್ಯವಾಗಿ ಒಂದು ನಿಮಿಷಕ್ಕಿಂತ ಹೆಚ್ಚು ಕಾಡುವುದಿಲ್ಲ ಮತ್ತು ಹಠಾತ್ ಅಥವಾ ಒಂದು ನಿರ್ದಿಷ್ಟ ಭಂಗಿಯಲ್ಲಿ ತಲೆಯ ಚಲನೆ ವರ್ಟಿಗೊವನ್ನುಂಟು ಮಾಡುತ್ತದೆ. ಇದಷ್ಟೇ ಅಲ್ಲದೆ, ಇನ್ನಷ್ಟು ಕಾರಣಗಳಿಂದ ಸಹ ಈ ವರ್ಟಿಗೊ ಸಮಸ್ಯೆ ಕಾಡಬಹುದು. ಈ ವರ್ಟಿಗೊ ಸಮಸ್ಯೆ ಹೆಚ್ಚಾಗಿ ಮಹಿಳೆಯರು ಹಾಗೂ ವಯಸ್ಸಾದವರಲ್ಲಿ ಕಂಡು ಬರಲಿದ್ದು, ಕೆಲವೊಮ್ಮೆ ವಯಸ್ಕರಲ್ಲೂ ಸಹ ಕಾಣಿಸಬಹುದು.

ಕಾರಣಗಳೇನು?

ಸಾಮಾನ್ಯವಾಗಿ ಕಿವಿಯಲ್ಲಿನ ದ್ರವದಲ್ಲಿ ಅಸಮತೋಲನ ಕಾಡಿದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಥವಾ ಕಿವಿಯಲ್ಲಿ ಸೋಂಕು, ಕಿವಿ ನೋವು, ಕಿವಿಸೋರುವಿಕೆಯಿಂದಲೂ ತಲೆಸುತ್ತುವಿಕೆ ಕಾಣಿಸಿಕೊಳ್ಳಲಿದೆ. ಇನ್ನೂ ಕೆಲವರಿಗೆ ಮೈಗ್ರೇನ್‌ ಸಮಸ್ಯೆ ಹೆಚ್ಚಿದ್ದಾಗ ವರ್ಟಿಗೊ ಕಾಣಿಸಬಹುದು. ಮೆದುಳಿನ ಸಮಸ್ಯೆಗಳಾದ ಸೋಂಕು, ಮೆದುಳಿನ ಗೆಡ್ಡೆ, ಮೆದುಳಿನ ಗಾಯ ಅಥವಾ ಸ್ಟ್ರೋಕ್ ಸಂಭವಿಸಿದಾಗ ಈ ರೀತಿಯ ತಲೆ ಸುತ್ತು ಕಾಣಿಸಿಕೊಳ್ಳಬಹುದು. ದೇಹದಲ್ಲಿನ ರಕ್ತದೊತ್ತಡ ಅತಿಯಾದಾಗ ಅಥವಾ ಲೋ ಬಿಪಿಯಾದಾಗ ತಲೆಸುತ್ತು ಉಂಟಾಗುತ್ತದೆ. ಈ ಎಲ್ಲಾ ಕಾರಣದಿಂದ ತಲೆ ತಿರುಗುವಿಕೆ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಇದರಿಂದ ವಾಕರಿಕೆ, ಕಣ್ಣು ಮಂಜಾಗುವ ಸಮಸ್ಯೆಯೂ ಕಾಡಬಹುದು. ಇದಲ್ಲದೆ, ಪಾರ್ಶ್ವವಾಯು, ಗರ್ಭಕಂಠದ ಸ್ಪಾಂಡಿಲೋಸಿಸ್, ಮಲ್ಟಿಪಲ್ ಸ್ಕ್ಲೆರೋಸಿಸ್ ಮುಂತಾದ ನರ ವೈಜ್ಞಾನಿಕ ಸಮಸ್ಯೆಗಳು ಕೇಂದ್ರೀಯ ವರ್ಟಿಗೊವನ್ನು ಉಂಟು ಮಾಡುತ್ತವೆ.

ವರ್ಟಿಗೊ ತಡೆಗಟ್ಟುವಿಕೆ

ವರ್ಟಿಗೊ ಸಮಸ್ಯೆಯಿಂದ ತಲೆ ತಿರುಗುವಿಕೆಯನ್ನು ತಡೆಗಟ್ಟಲು ಒಂದಷ್ಟು ಸಲಹೆಯನ್ನು ಪಾಲಿಸುವುದು ಒಳಿತು.

* ನಿಮ್ಮ ತಲೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಠಾತ್ತನೆ ಸರಿಸಬೇಡಿ.

* ಕಿವಿ ಶುಚಿಗೊಳಿಸಲು ಚೂಪಾದ ವಸ್ತುಗಳು, ಇಯರ್‌ ಬಡ್ಸ್‌ ಬಳಸಬೇಡಿ. ಯಾವುದೇ ವಸ್ತುವಾಗಲಿ ಕಿವಿಯ ಆಳದವರೆಗೂ ಹಾಕಬೇಡಿ. ಇದರಿಂದ ಕಿವಿಗೆ ಹಾನಿಯಾಗಬಹುದು.

* ವೇಗವಾಗಿ ಸುತ್ತುವ ಆಟಗಳನ್ನು ಕಡಿಮೆ ಮಾಡಿ.

* ಆಳವಾದ ಡೈವಿಂಗ್ ಅಥವಾ ದೀರ್ಘಕಾಲದವರೆಗೆ ಈಜುವಾಗ ಸದಾ ನಿಮ್ಮ ಕಿವಿಯನ್ನು ಮುಚ್ಚಿಕೊಳ್ಳಿ. ಏಕೆಂದರೆ ನೀರಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಒಳಗಿನ ಕಿವಿ ಸೋಂಕಿಗೆ ತುತ್ತಾಗಬಹುದು.

* ನೀವು ಗರ್ಭಕಂಠದ ಸ್ಪಾಂಡಿಲೋಸಿಸ್ ಹೊಂದಿದ್ದರೆ ನಿಗದಿತ ಚಿಕಿತ್ಸೆಯನ್ನು ಅನುಸರಿಸುವ ಮೂಲಕ ನಿಮ್ಮ ಗರ್ಭಕಂಠದ ಬೆನ್ನುಮೂಳೆಯ ಬಗ್ಗೆ ಕಾಳಜಿವಹಿಸಿ.

ಚಿಕಿತ್ಸೆ ಏನು?

ವರ್ಟಿಗೊದ ಕಾರಣವನ್ನು ನಿರ್ಧರಿಸಲು ರೇಡಿಯೊ ಇಮೇಜಿಂಗ್ ಪರೀಕ್ಷೆಗಳನ್ನು ನಡೆಸಬಹುದು. ಸಿಟಿ ಸ್ಕ್ಯಾನ್ (ಹೆಡ್), ಎಂಆರ್‌ಐ ಸ್ಕ್ಯಾನ್ ಪರೀಕ್ಷೆಗಳಿಂದ ಕಾರಣ, ಕಿವಿಯ ಒಳಗಿನ ಸಮಸ್ಯೆಗಳು ಅಥವಾ ಗರ್ಭಕಂಠದ ಸ್ಪಾಂಡಿಲೋಸಿಸ್, ಮೆದುಳಿನ ಗೆಡ್ಡೆ, ಇತ್ಯಾದಿಗಳಂತಹ ಇತರ ತಲೆ ಮತ್ತು ಕುತ್ತಿಗೆ ಸಮಸ್ಯೆಗಳು ಏನೆಂದು ತಿಳಿಸಲಿವೆ. ತಲೆ ತಿರುಗುವಿಕೆ ಪ್ರಮಾಣ ಹೆಚ್ಚಿದ್ದರೆ ನಿರ್ಲಕ್ಷಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT