ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಷೇಮ ಕುಶಲ | ವ್ಯಾಯಾಮ: ಹೃದಯಕ್ಕೆ ಕೊಡುಗೆ

Published : 13 ಆಗಸ್ಟ್ 2024, 2:00 IST
Last Updated : 13 ಆಗಸ್ಟ್ 2024, 2:00 IST
ಫಾಲೋ ಮಾಡಿ
Comments

ಹೃದಯದ ಸಮಸ್ಯೆ ಇರುವವರು ವ್ಯಾಯಾಮ ಮಾಡಬಹುದೇ? ಹಾಗಿದ್ದಲ್ಲಿ ಎಷ್ಟು ವ್ಯಾಯಾಮ ಮಾಡಬಹುದು? ಎಂತಹ ವ್ಯಾಯಾಮ ಮಾಡಬಹುದು? ಇದು ಬಹುತೇಕರನ್ನು ಕಾಡುವ ಪ್ರಶ್ನೆ. ಇದಕ್ಕೆ ಉತ್ತರವನ್ನು ಅರಿಯಲು ಮೊದಲು ಹೃದ್ರೋಗದ ಬಗ್ಗೆ ಕೆಲವು ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಬೇಕು.

ಹೃದ್ರೋಗಗಳಲ್ಲಿ ಹಲವಾರು ವಿಧಗಳು ಇವೆಯಾದರೂ ಬಹಳ ಜನರ ಸಮಸ್ಯೆ ಹೃದಯಾಘಾತದ್ದು. ಹೃದಯಕ್ಕೆ ರಕ್ತಸರಬರಾಜು ಮಾಡುವ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯಾದಾಗ ರಕ್ತದ ಹರಿವಿಗೆ ಅಡಚಣೆಯಾಗುತ್ತದೆ. ಇದು ಒಂದು ಪ್ರಮಾಣವನ್ನು ಮೀರಿದಾಗ ಹೃದಯದ ಮಾಂಸಖಂಡಗಳಿಗೆ ರಕ್ತದ ಪೂರೈಕೆ ಇಲ್ಲದಂತಾಗಿ, ಅವು ನಶಿಸುತ್ತವೆ. ಇದೇ  ಹೃದಯಾಘಾತ.

ಈ ಪ್ರಕ್ರಿಯೆಯಲ್ಲಿ ಎಷ್ಟು ಪ್ರಮಾಣದ ಮಾಂಸಖಂಡಗಳು ಗಾಸಿಯಾಗಿವೆ? ಅದು ಪುನಃ ಕೆಲಸ ಮಾಡಲು ಸಮರ್ಥವಾಗುತ್ತದೆಯೇ ಅಥವಾ ಶಾಶ್ವತವಾಗಿ ಇಲ್ಲದಂತಾಗಿದೆಯೇ? ಹೃದಯಾಘಾತದ ನಂತರ ಉಳಿದಿರುವ ಪ್ರಮಾಣದ ಮಾಂಸಖಂಡ ಶರೀರ ಶ್ರಮವನ್ನು ಎಷ್ಟು ಮಟ್ಟಿಗೆ ಸಹಿಸಬಲ್ಲದು? ಇಂತಹ ಪ್ರಶ್ನೆಗಳನ್ನು ಆಧರಿಸಿ ಹೃದಯತಜ್ಞರು ಆಯಾ ರೋಗಿ ಮಾಡಬಹುದಾದ ವ್ಯಾಯಾಮದ ಮಟ್ಟವನ್ನು ನಿರ್ಧರಿಸುತ್ತಾರೆ. ವ್ಯಾಯಾಮದ ವಿಷಯವಾಗಿ ಕಟ್ಟುನಿಟ್ಟಾಗಿರುವ ರೋಗಿಗಳಿಗೆ ಹೃದಯಾಘಾತದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ವೈದ್ಯರ ಸುಪರ್ದಿಯಲ್ಲಿ ಹೃದಯದ ಸ್ಥಿತಿ-ಗತಿಗಳನ್ನು ಅಳೆಯುತ್ತಾ ವ್ಯಾಯಾಮ ಮಾಡಿಸಿ, ಅವರು ಎಷ್ಟು ಪ್ರಮಾಣದ, ಯಾವ ರೀತಿಯ, ಎಷ್ಟು ಕಾಲಾವಧಿಯ ವ್ಯಾಯಾಮಕ್ಕೆ ಅರ್ಹರಾಗಿದ್ದಾರೆ ಎಂದು ಕೂಡ ತಿಳಿಯಬಹುದು.

ಯಾವುದೇ ಬಗೆಯ ಹೃದ್ರೋಗಿಗಳಿಗೂ ನಿಯಮಿತ ವ್ಯಾಯಾಮ ಔಷಧಗಳಷ್ಟೇ ಮಹತ್ವದ್ದು. ತನಗೆ ಹೃದಯದ ಕಾಯಿಲೆಯಿದೆ ಎನ್ನುವುದು ಕೊರಗೂ ಆಗಬಾರದು; ವ್ಯಾಯಾಮ ಮಾಡದಿರಲು ನೆಪವೂ ಆಗಬಾರದು. ‘ಕೂರುವುದು ಆಧುನಿಕ ಧೂಮಪಾನ’ ಎನ್ನುವ ಮಾತಿದೆ. ಯಾವುದೇ ಚಟುವಟಿಕೆಯಿಲ್ಲದೆ ಕೂರುವುದರಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು ಧೂಮಪಾನದಿಂದ ಆಗುವಷ್ಟೇ ತೀವ್ರವಾದುವು ಎಂದು ಅಧ್ಯಯನಗಳು ತೋರಿವೆ. ಹೃದಯದ ಕಾಯಿಲೆಯ ಯಾವುದೇ ಮಟ್ಟದಲ್ಲೂ ನಿಯಮಿತ ವ್ಯಾಯಾಮ ಬಹಳ ಮುಖ್ಯ. ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ, ದೇಹದ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮಗಳನ್ನು ಶಕ್ತ್ಯಾನುಸಾರ ಪ್ರತಿದಿನವೂ ತಪ್ಪದೆ ಮಾಡುವುದು ಸರಿಯಾದ ವಿಧಾನ. ವ್ಯಾಯಾಮದ ಮುನ್ನ ಸ್ನಾಯುಗಳನ್ನು ಕ್ರಮವಾಗಿ ಹಿಗ್ಗಿಸುವ ಚಲನೆಗಳು; ವ್ಯಾಯಾಮದ ನಂತರ ಶರೀರಕ್ಕೆ ನೀಡಬೇಕಾದ ವಿಶ್ರಾಂತಿ ಬಹಳ ಮುಖ್ಯ. ಉಸಿರುಗಟ್ಟಿ ಮಾಡುವ ಯಾವುದೇ ವ್ಯಾಯಾಮವೂ ಹೃದ್ರೋಗಿಗಳಿಗೆ ಸೂಕ್ತವಲ್ಲ.

ಹೃದ್ರೋಗಿಗಳ ವ್ಯಾಯಾಮದ ಪ್ರಕ್ರಿಯೆಯಲ್ಲಿ ಮುಖ್ಯವಾದದ್ದು ಎಷ್ಟು ಪ್ರಮಾಣದಲ್ಲಿ ಮಾಡಬೇಕು ಎಂಬುದಕ್ಕಿಂತಲೂ ನಿಯಮಿತವಾಗಿ, ರೂಢಿ ತಪ್ಪದಂತೆ, ನಿಧಾನವಾಗಿ ಪ್ರಮಾಣವನ್ನು, ಗತಿಯನ್ನು ಹೆಚ್ಚಿಸುತ್ತಾ ಮಾಡುವುದು. ಆರಂಭದಲ್ಲಿ ಸರಳವಾದ ದೀರ್ಘ ಶ್ವಾಸದೊಡನೆ ಮಾಡುವ ಚುರುಕು ನಡಿಗೆ ಸೂಕ್ತ. ಕಾಲಕ್ರಮೇಣ ಯೋಗ ಮತ್ತು ಪ್ರಾಣಾಯಾಮ; ಈಜು; ಬೈಸಿಕಲ್ ಸವಾರಿ; ಸೂರ್ಯನಮಸ್ಕಾರ – ಇಂತಹ ಯಾವುದಕ್ಕಾದರೂ ವ್ಯಾಯಾಮವನ್ನು ವಿಸ್ತರಿಸಬಹುದು. ಏಕತಾನತೆ ಕಾಡದಂತೆ ವಿಧಾನಗಳನ್ನು ಆಗಾಗ್ಗೆ ಬದಲಿಸುತ್ತಾ ವಿವಿಧ ಬಗೆಯ ವ್ಯಾಯಾಮ ಶೈಲಿಗಳನ್ನು ರೂಢಿಸಿಕೊಳ್ಳುಬಹುದು. ಕೆಲಸದ ಒತ್ತಡ ಅಥವಾ ಸಮಯದ ಅಭಾವ ವ್ಯಾಯಾಮದಿಂದ ದೂರವಿರಲು ನೆಪ ಆಗಬಾರದು. ಯಾವುದೇ ಕಾರಣಕ್ಕೆ ನಿಯಮಿತ ವ್ಯಾಯಾಮ ಸಾಧ್ಯವಿಲ್ಲ ಎನ್ನುವವರು ದಿನನಿತ್ಯದ ಜೀವನಶೈಲಿಯನ್ನೇ ಮಾರ್ಪಾಡು ಮಾಡಿಕೊಳ್ಳಬೇಕು. ಬಸ್ಸಿನ ಪಯಣಿಗರು ಒಂದೆರಡು ನಿಲ್ದಾಣಗಳ ಮುನ್ನವೇ ಇಳಿದು ಅಲ್ಲಿಂದ ಗಮ್ಯಕ್ಕೆ ನಡೆಯಬಹುದು. ಸ್ವಂತ ವಾಹನ ಬಳಸುವವರು ಹದಿನೈದು ನಿಮಿಷ ಮೊದಲೇ ಕಚೇರಿಗೆ ತಲುಪಿ, ಕೆಲಸಕ್ಕೆ ಧಾವಿಸುವ ಮುನ್ನ ಕಟ್ಟಡದ ಸುತ್ತಮುತ್ತಲ ನಡಿಗೆಯ ಹಾದಿಯಲ್ಲಿ ಒಂದೆರಡು ಸುತ್ತು ಹಾಕಬಹುದು. ಕಚೇರಿಯಲ್ಲೂ ಲಿಫ್ಟ್ ಬದಲಿಗೆ ನಿಧಾನವಾಗಿ ಮೆಟ್ಟಿಲನ್ನೋ ಇಳಿಜಾರನ್ನೋ ಬಳಸಿ ಹತ್ತಿಳಿಯಬಹುದು. ಕೆಲಸದ ನಡುವೆ ಸಮಯ ದೊರೆತಾಗ ಕಚೇರಿಯಲ್ಲೇ ನಡೆದು ನಾಲ್ಕು ಸುತ್ತು ಹಾಕಬಹುದು. ಮನೆಯ ಆಜೂಬಾಜೂ ಅಂಗಡಿಗಳಿಂದ ಅವಶ್ಯಕ ವಸ್ತುಗಳನ್ನು ತರಲು ವಾಹನದ ಬದಲಿಗೆ ನಡೆದು ಹೋಗಬಹುದು. ಇವೆಲ್ಲಾ ನಿಯಮಿತ ಸಮಯಕ್ಕೆ ಮಾಡುವ ಕ್ಲುಪ್ತ ವ್ಯಾಯಾಮದಷ್ಟು ಪ್ರಯೋಜನಕಾರಿ ಅಲ್ಲದಿದ್ದರೂ, ನಿಷ್ಕ್ರಿಯತೆಗಿಂತ ಹಲವಾರು ಪಟ್ಟು ಉತ್ತಮ. ಹೀಗೆ ಶರೀರದ ಚಲನೆಯನ್ನು ಕಾಪಿಟ್ಟುಕೊಳ್ಳುವುದು ಮುಂದೆ ವ್ಯಾಯಾಮಪದ್ಧತಿಯನ್ನು ಬಳಸಿಕೊಳ್ಳುವ ಸ್ಫೂರ್ತಿ ಕೂಡ ಆಗಬಲ್ಲದು.

ಕೇವಲ ಹೃದ್ರೋಗ ಪೀಡಿತರು ಮಾತ್ರ ಎಂದಲ್ಲ; ಅಧಿಕ ರಕ್ತದೊತ್ತಡದ ಸಮಸ್ಯೆ ಅನುಭವಿಸುವವರು ಕೂಡ ವ್ಯಾಯಾಮದ ಮಹತ್ವವನ್ನು ಕಡೆಗಣಿಸಬಾರದು. ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ ಎಲ್ಲ ರೀತಿಯ ವ್ಯಾಯಾಮಗಳೂ ಬಹಳ ಸಹಕಾರಿ. ನಿಯಮಿತ ವ್ಯಾಯಾಮದಿಂದ ಶರೀರದ ಮಾಂಸಖಂಡಗಳ ಬಿಗುವು ಸಡಿಲಗೊಳ್ಳುತ್ತದೆ. ಇದರಿಂದ ರಕ್ತನಾಳಗಳ ಮೇಲಿನ ಹೆಚ್ಚಿನ ಒತ್ತಡ ಕಳೆದು ರಕ್ತಸಂಚಾರ ಸರಾಗವಾಗುತ್ತದೆ. ವ್ಯಾಯಾಮದ ಮೂಲಕ ಹೆಚ್ಚಿನ ರಕ್ತ ಸಂಚರಿಸಿ, ಹೃದಯದ ಸ್ನಾಯುಗಳು ಶಕ್ತಿಯುತವಾಗಿ, ಅಧಿಕ ಕಾರ್ಯಕ್ಷಮತೆ ಲಭಿಸುತ್ತದೆ. ಇದರಿಂದ ರಕ್ತವನ್ನು ಒತ್ತುವ ಹೃದಯದ ಸಾಮರ್ಥ್ಯ ವೃದ್ಧಿಸುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಮಿತ ವ್ಯಾಯಾಮದಿಂದ ನಿಯಂತ್ರಣದಲ್ಲಿ ಇಡಬಹುದು ಹಾಗೂ ಔಷಧಗಳ ಮೇಲಿನ ಅವಲಂಬನೆಯನ್ನೂ ಕಡಿಮೆ ಮಾಡಬಹುದು. ಹೀಗೆ ಅಧಿಕ ರಕ್ತದೊತ್ತಡದಿಂದ ಬಳಲುವವರಲ್ಲಿ ವ್ಯಾಯಾಮ ಇಬ್ಬಗೆಯಿಂದ ಫಲಕಾರಿ.

ಹೃದ್ರೋಗಿಗಳನ್ನೂ ಸೇರಿಸಿ, ವ್ಯಾಯಾಮವೆಂಬುದು ಯಾರಿಗೂ ಆಯ್ಕೆಯಲ್ಲ; ಅದು ಶರೀರದ ನಿರ್ವಹಣೆಯ ಕಡ್ಡಾಯ ಭಾಗ. ‘ಎಂತಹ, ಎಷ್ಟು ವ್ಯಾಯಾಮ ಮಾಡಬೇಕು’ ಎಂಬುದು ಮಾತ್ರ ಆಯಾ ಕಾಯಿಲೆಗಳನ್ನು ಅನುಸರಿಸಿ ನಿರ್ಧರಿಸಬೇಕಾದ ವೈಯಕ್ತಿಕ ಅಂಶ. ಆರೋಗ್ಯವೆಂಬುದು ಚಟುವಟಿಕೆಯ ದೇಹದಲ್ಲಿರುತ್ತದೆಯೇ ಹೊರತು ಅನಗತ್ಯ ಆರಾಮದಲ್ಲಿ ಇರುವುದಿಲ್ಲ. ನಿಯಮಿತ ವ್ಯಾಯಾಮ ಹೃದಯಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ಒಂದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT