ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಒತ್ತಡವೂ ಕ್ಯಾನ್ಸರ್‌ಗೆ ಪ್ರಚೋದಕವಾಗಬಹುದು, ಎಚ್ಚರ!

ಶಾಂತಲಿಂಗ ನಿಗುಡಗಿ
Published 28 ಆಗಸ್ಟ್ 2024, 8:27 IST
Last Updated 28 ಆಗಸ್ಟ್ 2024, 8:27 IST
ಅಕ್ಷರ ಗಾತ್ರ

ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚು ಕಾಡುತ್ತಿರುವ ಕಾಯಿಲೆಗಳ ಪೈಕಿ ಕ್ಯಾನ್ಸರ್‌ ಕೂಡ ಒಂದು. ಶ್ರೀಮಂತರ ಕಾಯಿಲೆಯಾಗಿದ್ದ ಕ್ಯಾನ್ಸರ್‌ ಇದೀಗ ವಯಸ್ಸು, ಅಂತಸ್ತಿನ ಭೇದಭಾವವಿಲ್ಲದೆ ಎಲ್ಲರನ್ನೂ ಕಾಡುತ್ತಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯೇ ಇದಕ್ಕೆ ಕಾರಣ ಎನ್ನಲಾಗುತ್ತಿತ್ತು. ಈ ಪಟ್ಟಿಯಲ್ಲಿ ಒತ್ತಡವೂ ಕೂಡ ಸೇರಿಕೊಂಡಿದೆ. ಹೌದು, ದೀರ್ಘಕಾಲದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗುವವರಲ್ಲೂ ಸಹ ಕ್ಯಾನ್ಸರ್‌ ಅಂಶಗಳು ಪತ್ತೆಯಾಗುತ್ತಿರುವುದು ಆತಂಕಕಾರಿ. ಕ್ಯಾನ್ಸರ್‌ ಬೆಳವಣಿಗೆಗೆ ಒತ್ತಡ ಹೇಗೆ ಕಾರಣವಾಗಲಿದೆ ಹಾಗೂ ಇದಕ್ಕೆ ಪರಿಹಾರವೇನು ಎಂಬುದನ್ನು ನೋಡೋಣ.

ದೀರ್ಘಕಾಲದ ಒತ್ತಡದ ಬಗ್ಗೆ ಇರಲಿ ಎಚ್ಚರ

ಹೆಚ್ಚು ಒತ್ತಡ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಹೈಪೋಥಾಲಾಮಿಕ್-ಪಿಟ್ಯುಟರಿ-ಅಡ್ರಿನಲ್ (hypothalamic-pituitary-adrenal (HPA)) ಸಕ್ರಿಯಗೊಳ್ಳಲಿದೆ. ಇದರಿಂದ ಒತ್ತಡದ ಹಾರ್ಮೋನ್‌ 'ಕಾರ್ಟಿಸೋಲ್' ಬಿಡುಗಡೆಯಾಗುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಈ ಕಾರ್ಟಿಸೋಲ್‌ ಬಿಡುಗಡೆಯಾದರೆ ಸಮಸ್ಯೆ ಇಲ್ಲ, ಆದರೆ, ಈ ಕೆಮಿಕಲ್‌ ಹೆಚ್ಚುಕಾಲ ದೇಹದಲ್ಲಿ ಸಕ್ರಿಯವಾಗಿದ್ದರೆ ದೇಹದ ಸೂಕ್ಷ್ಮ ಸಮತೋಲನವನ್ನು ಅಡ್ಡಿ ಪಡಿಸಲಿದೆ. ಈ ಕಾರ್ಟಿಸೋಲ್‌ ದೇಹದಲ್ಲಿ ಅಸಹಜ ಕೋಶಗಳನ್ನು ಬೆಳೆಸಲು ಸಹಕಾರಿಯಾಗಲಿದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಸಹ ಕುಂದಿಸಬಹುದು. ಹೆಚ್ಚು ಸಮಯ ಒತ್ತಡದಲ್ಲಿಯೇ ಜೀವನ ಮಾಡುವವರಿಗೆ ಬಿಪಿ, ಡಯಾಬಿಟಿಸ್‌ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳು ಉಲ್ಭಣವಾಗುವುದರ ಜೊತೆಗೆ ಕ್ಯಾನ್ಸರ್‌ಕಾರಕ ಅಂಶಗಳು ಸಹ ಬೆಳವಣಿಗೆಯಾಗಲು ಉತ್ತೇಜಿಸುತ್ತದೆ ಎನ್ನಲಾಗಿದೆ.

ಇದಷ್ಟೇ ಅಲ್ಲದೆ, ಕಾರ್ಟಿಸೋಲ್‌ ದೇಹದಲ್ಲಿ ಉರಿಯೂತವನ್ನೂ ಉತ್ತೇಜಿಸಲಿದೆ. ಉರಿಯೂತವು ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದು. ಏಕೆಂದರೆ ಇದು ಗಡ್ಡೆಯ ಬೆಳವಣಿಗೆಗೆ ಹಾಗೂ ಕ್ಯಾನ್ಸರ್‌ ಅಂಶ ಹರಡುವಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ.

ಉರಿಯೂತ ಎಂದರೇನು?

ದೇಹದ ಯಾವುದೇ ಅಂಗದಲ್ಲಾದರೂ ಸೋಂಕಿನಿಂದ ಆಗುವ ಒಳಗಾಯದಿಂದ ಒಳಗಿಂದೊಳಗೇ ಉರಿ ಮತ್ತು ಊತ ಕಾಣಿಸಿಕೊಳ್ಳುತ್ತದೆ. ಉರಿಯೂತವು ದೇಹದಲ್ಲಿ ದೀರ್ಘಕಾಲದವರೆಗೂ ಇದ್ದರೆ ರೋಗನಿರೋಧಕ ಶಕ್ತಿ ಕುಂದುತ್ತದೆ. ಜೊತೆಗೆ, ಹೃದಯದ ಸಮಸ್ಯೆ, ಪಾರ್ಕಿನ್ಸನ್ ಕಾಯಿಲೆ, ಅಲ್ಜಿಮರ್ ಕಾಯಿಲೆ, ಕ್ಯಾನ್ಸರ್ ಕಾಯಿಲೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಮನುಷ್ಯನಿಗೆ ದೀರ್ಘಕಾಲ ಕಾಡುವ ಉರಿಯೂತದ ಸಮಸ್ಯೆ ಯಾವುದೇ ಬಗೆಯ ಕಣ್ಣಿಗೆ ಕಾಣುವಂತಹ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ಅದರ ನೋವು ಹೆಚ್ಚು ಬಾಧಿಸುತ್ತದೆ. ಈ ರೋಗ ಲಕ್ಷಣಗಳನ್ನು ಕಂಡು ಹಿಡಿಯಲು ವೈದ್ಯರಿಗೂ ಬಹಳಷ್ಟು ಕಷ್ಟವಾಗುತ್ತದೆ. ಇನ್ನು, ದೇಹದಲ್ಲಿರುವ ಟೆಲೋಮಿಯರ್ (Telomere) ಎನ್ನುವ ಕೋಶವು ಹೆಚ್ಚು ಒತ್ತಡಕ್ಕೆ ಒಳಗಾಗುವುದರಿಂದ ಅದರ ಉದ್ದವು ಕಡಿಮೆಯಾಗುತ್ತಾ ಹೋಗುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಒತ್ತಡವು ಕೆಟ್ಟ ಚಟಗಳಿಗೂ ಕಾರಣವಾಗಬಹುದು!

ಸಾಕಷ್ಟು ಜನ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದೇ ಅದನ್ನು ಕಡಿಮೆ ಮಾಡಿಕೊಳ್ಳುವ ಆತುರದಲ್ಲಿ ಧೂಮಪಾನ, ಮದ್ಯಪಾನ, ತಂಬಾಕು ಅಥವಾ ಜಂಕ್‌ಫುಡ್‌ ಸೇವನೆಗೆ ದಾಸರಾಗುತ್ತಾರೆ. ಕೆಲವರು ಯಾವಾಗ ಒತ್ತಡವೆನಿಸುತ್ತದೆಯೋ ಕೂಡಲೇ ಸಿಗರೇಟು ಸೇದಲು ಮುಂದಾಗುತ್ತಾರೆ. ಈ ಎಲ್ಲಾ ಕೆಟ್ಟ ಚಟಗಳು ಕೂಡ ಕ್ಯಾನ್ಸರ್‌ ಉಲ್ಬಣಕ್ಕೆ ನೇರ ಕಾರಣವಾಗಲಿದೆ. ಒತ್ತಡವು ಈ ಕೆಟ್ಟ ಚಟಗಳಿಗೆ ದಾಸರಾಗುವಂತೆ ಮಾಡುವ ಮೂಲಕ ಕ್ಯಾನ್ಸರ್‌ಗೆ ಆಹ್ವಾನ ನೀಡುತ್ತದೆ.

ಒತ್ತಡ ನಿವಾರಣೆ ಹೇಗೆ?

ನಾವು ಇಂದು ಅನುಭವಿಸುತ್ತಿರುವ ಪ್ರತಿಯೊಂದು ರೋಗಕ್ಕೂ ಒತ್ತಡ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ. ಹೀಗಾಗಿ ಒತ್ತಡವನ್ನು ಸಾಧ್ಯವಾದಷ್ಟು ನಿಯಂತ್ರಣದಲ್ಲಿಡುವುದು ಅನಿವಾರ್ಯ. ಪ್ರತಿ ದಿನ ಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್‌ ಸೇರಿದಂತೆ ನಿಮ್ಮ ಮನಸ್ಸು, ಮೆದುಳು ಹಾಗೂ ದೇಹವನ್ನು ಪ್ರಶಾಂತಗೊಳಿಸುವ ಯಾವುದಾದರೊಂದು ವ್ಯಾಯಾಮದ ಅಭ್ಯಾಸ ಹೊಂದುವುದು ಅತೀ ಅವಶ್ಯ. ಮಕ್ಕಳಿಗೆ ಇಂದಿನಿಂದಲೇ ಮೆದುಳಿನ ವ್ಯಾಯಾಮ ಹೇಳಿಕೊಡುವ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿ ಇಡದೇ ಹೋದರೆ ಭವಿಷ್ಯದಲ್ಲಿ ಕ್ಯಾನ್ಸರ್‌ ಬೆಳವಣಿಗೆಗೂ ಕಾರಣವಾಗಬಹುದು.

-ಡಾ. ಶಾಂತಲಿಂಗ ನಿಗುಡಗಿ, ಸೀನಿಯರ್ ಕನ್ಸಲ್ಟೆಂಟ್ ರೇಡಿಯೇಶನ್/ಕ್ಲಿನಿಕಲ್ ಆಂಕೊಲಾಜಿಸ್ಟ್, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT