ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮಿಯೋಪಥಿ | ಹುಸಿ ನಂಬಿಕೆಗಳಿಗೆ ಹೊಸ ಪೆಟ್ಟು

Last Updated 25 ಮಾರ್ಚ್ 2023, 23:00 IST
ಅಕ್ಷರ ಗಾತ್ರ

ಜಗತ್ತಿನೆಲ್ಲೆಡೆ ಹೋಮಿಯೋಪಥಿಗೆ ಖ್ಯಾತಿ-ಕುಖ್ಯಾತಿ, ಬೆಂಬಲ-ವಿರೋಧ ಒಟ್ಟೊಟ್ಟಿಗೇ ಚಾಲ್ತಿಯಲ್ಲಿವೆ. ಅದು ವಿಜ್ಞಾನವಲ್ಲ, ಬರೀ ಢೋಂಗಿ ಎಂಬ ಆಪಾದನೆ ಅದರ ಮೇಲಿದೆ. ಢೋಂಗಿಯಾದರೂ ಪರಿಣಾಮಕಾರಿ. ಮೇಲಾಗಿ ಅಡ್ಡ ಪರಿಣಾಮಗಳಿಲ್ಲ ಎಂದು ನಂಬುವವರೂ ಇದ್ದಾರೆ. ಅಡ್ಡ ಪರಿಣಾಮದ ಬಗ್ಗೆ ಗೊತ್ತಿಲ್ಲದೆ ಕೋವಿಡ್ ಕಾಲದಲ್ಲಿ ಹೋಮಿಯೋಪಥಿ ಔಷಧ ಸೇವಿಸಿ ಲಿವರ್ ಕೆಟ್ಟು ಪ್ರಾಣಬಿಟ್ಟ ಉದಾಹರಣೆಗಳನ್ನು ಇದೀಗ ವೈದ್ಯ ಸಂಶೋಧಕರು ಪ್ರಕಟಿಸಿದ್ದಾರೆ. ಅದು ಅಪಾಯದ ಕಹಳೆಯೊ ಅಥವಾ ಅಪಪ್ರಚಾರದ ಬೊಗಳೆಯೊ?

ಒಂದು ಕತೆ ಹೀಗಿದೆ: ಗೂರಲು, ಆಸ್ತಮಾ ಕಾಯಿಲೆಯಿದ್ದ ಒಬ್ಬಾತ ನಸುಗತ್ತಲು ತುಂಬಿದ್ದ ಕಟ್ಟೆಯ ಮೇಲೆ ಕೂತು ಚಾ ಹೀರುತ್ತಿದ್ದ. ತುಟಿಗೆ ಅದೇನೊ ಗಟ್ಟಿವಸ್ತು ಅಡ್ಡ ಬಂದಂತಾಯಿತು. ಏನೆಂದು ನೋಡಿದರೆ ಕಪ್ಪುಬಣ್ಣದ ಜಿರಳೆ! ವ್ಯಾಕ್ ಎಂದು ಉಗುಳಿ, ಕೂಗಾಡಿ, ಲೋಟ ಬಿಸಾಕಿ ಹೋದ. ಆ ರಾತ್ರಿ ಆತನಿಗೆ ಉಬ್ಬಸ ಬರಲೇ ಇಲ್ಲ. ಹಾಯಾಗಿ ನಿದ್ರಿಸಿದ.

ಇಂದು ನಮ್ಮಲ್ಲಿ ಅದೆಷ್ಟೊ ಆಸ್ತಮಾ ಪೀಡಿತರು ಅದೇ ಜಿರಳೆಯ ಕಷಾಯವನ್ನು ಕುಡಿಯುತ್ತಿದ್ದಾರೆ. ಬ್ಲಾಟ್ಟಾ ಓರಿಯಂಟಾಲಿಸ್‌ ಹೆಸರಿನ ಅದು ಅತ್ಯಂತ ಜನಪ್ರಿಯ ಹೋಮಿಯೋಪಥಿ ಔಷಧ. ಆನ್ಲೈನ್‌ನಲ್ಲೂ ಸಿಗುತ್ತದೆ.

*****

‘ವಿಷವೇ ವಿಷಕ್ಕೆ ಔಷಧ’ ಎಂಬ ನಂಬುಗೆಯ ಮೇಲೆ ಹೋಮಿಯೋಪಥಿ ಚಿಕಿತ್ಸೆ ಪ್ರಪಂಚದ ಅನೇಕ ದೇಶಗಳಲ್ಲಿ ವ್ಯಾಪಿಸಿದೆ. ಜರ್ಮನಿಯ ಸ್ಯಾಮ್ಯುಯೆಲ್ ಹಾಃನೆಮನ್ ಎಂಬಾತ ಇದರ ಜನಕ. ಮೆಡಿಕಲ್ ಡಿಗ್ರಿ ಪಡೆದಿದ್ದರೂ ಅವನೇನೂ ವೈದ್ಯನಾಗಲಿಲ್ಲ; ಔಷಧವಿಜ್ಞಾನವನ್ನೂ ಓದಿಕೊಂಡಿಲ್ಲ. ಭಾಷಾತಜ್ಞನೆನಿಸಿ, ವಿಜ್ಞಾನ ಪುಸ್ತಕಗಳನ್ನು ತರ್ಜುಮೆ ಮಾಡುತ್ತ, ಹನ್ನೊಂದು ಮಕ್ಕಳ ಸಂಸಾರದೊಂದಿಗೆ ಊರೂರು ಸುತ್ತುತ್ತ ಪ್ಯಾರಿಸ್ಸಿಗೆ ಬಂದು ನೆಲೆಸಿದ.

ಸಿಂಕೋನಾ ಮರದ ತೊಗಟೆಯ ಕಷಾಯ ಕುಡಿದರೆ ಮಲೇರಿಯಾ ರೋಗ ವಾಸಿಯಾಗುತ್ತದೆ ಎಂದು ವಾಕ್ಯವನ್ನು ತರ್ಜುಮೆ ಮಾಡುತ್ತಿದ್ದಾಗ ತಾನೇ ಆ ಕಷಾಯವನ್ನು ಕುಡಿದು ನೋಡಿದ. ಸೊಳ್ಳೆಯಿಂದ ಕಚ್ಚಿಸಿಕೊಳ್ಳದಿದ್ದರೂ ಮಲೇರಿಯಾ ಲಕ್ಷಣವನ್ನೇ ಹೋಲುವ ಜ್ವರ ಅವನಿಗೆ ಬಂತು. ಜ್ವರ ಬರಿಸುವ ಈ ದ್ರವವೇ ಜ್ವರವನ್ನೂ ನಿವಾರಿಸುತ್ತದೆ ಎಂದು 1800ರಲ್ಲಿ ತಾನೇ ನಿರ್ಧರಿಸಿದ. ಅಂದಿನಿಂದ ನಾನಾ ಬಗೆಯ ವಿಷವಸ್ತುಗಳನ್ನೇ ತೀರ ದುರ್ಬಲಗೊಳಿಸಿ, ನಂಜಿನ ಅಂಶವೆಲ್ಲ ನಿರ್ಗುಣವಾಗುವಷ್ಟರ ಮಟ್ಟಿಗೆ ಕಲಕಿ ಅದನ್ನೇ ಔಷಧವೆಂದುಕೊಡುತ್ತ ಹೋದ. ಪ್ರಸಿದ್ಧಿ ಪಡೆದ. ಅವನ ಮೊಮ್ಮಗ ಇಂಗ್ಲೆಂಡಿಗೆ ಹೋಗಿ ಹೋಮಿಯೋಪಥಿ ವೈದ್ಯನಾಗಿ, ಕೀರ್ತಿಶೇಷನಾದ. ಇಂದು ಜರ್ಮನಿಯಲ್ಲಿ ಮತ್ತು ಫ್ರಾನ್ಸ್‌ನಲ್ಲಿ ಹೋಮಿಯೋಪಥಿಗೆ ಸರ್ಕಾರಿ ಮಾನ್ಯತೆ ಇಲ್ಲ. ಆದರೆ ಇಂಗ್ಲೆಂಡಿನಲ್ಲಿ ಅದಕ್ಕೆ ಜನಮಾನ್ಯತೆ ಇದೆ. ಸರ್ಕಾರಿ ಮಾನ್ಯತೆ ಇಲ್ಲ. ರಾಜಮನೆತನದ ಬೆಂಬಲ ಅದಕ್ಕಿದೆ. ಜಗತ್ತಿನೆಲ್ಲೆಡೆ ಹೋಮಿಯೋಪಥಿಗೆ ಖ್ಯಾತಿ-ಕುಖ್ಯಾತಿ, ಬೆಂಬಲ-ವಿರೋಧ ಒಟ್ಟೊಟ್ಟಿಗೇ ಚಾಲ್ತಿಯಲ್ಲಿವೆ. ಅಲೊಪಥಿ ಡಾಕ್ಟರ್‌ಗಳು ‘ಹೋಮಿಯೋಪಥಿ ಭಾರೀ ಮೋಸ’ ಎನ್ನುತ್ತಾರೆ. ಜನಸಾಮಾನ್ಯರು ಅದರತ್ತ ಮುಗಿಬೀಳುತ್ತಾರೆ. ‘ರೋಗಿಯ ನಂಬಿಕೆಯನ್ನೇ ಆಧರಿಸಿದ ಹುಸಿಚಿಕಿತ್ಸೆ’ ಎಂದು ವಿಜ್ಞಾನಿಗಳು ಹೇಳುತ್ತಾರೆ. ‘ಇಲ್ಲ ಸಾವಿರಾರು ರೋಗಿಗಳ ಮೇಲೆ ಸಂಶೋಧನೆ ನಡೆಸಿ ರೂಪುಗೊಂಡ ಚಿಕಿತ್ಸಾ ವಿಧಾನ ಇದು’ ಎಂದು ಹೋಮಿಯೋಪಥಿ ಬೆಂಬಲಿಗರು ಹೇಳುತ್ತಾರೆ. ‘ಅವೆಲ್ಲ ಸಂಶೋಧನೆಗಳೂ ಅವೈಜ್ಞಾನಿಕ’ ಎಂದು ವಿಜ್ಞಾನಿಗಳು ವಾದಿಸುತ್ತಾರೆ. ವಿವಾದ ಆಗಾಗ ಭುಗಿಲೇಳುತ್ತದೆ, ತಣ್ಣಗಾಗುತ್ತದೆ. ಈಗ ಮತ್ತೆ ಭುಗಿಲೇಳುವಂತಾಗಿದೆ.

2010ರಲ್ಲಿ ಇಂಗ್ಲೆಂಡ್‌ನ ‘10:23’ ಹೆಸರಿನ ಸಂಘಟನೆಯೊಂದು ‘ಹೋಮಿಯೋಪಥಿ ಎಂದರೆ ಢೋಂಗಿ ವಿಜ್ಞಾನ’ ಎಂದು ಪ್ರಚುರಪಡಿಸಲು ಮಾಲ್‌ಗಳಲ್ಲಿ ಸರಣಿ ಡ್ರಾಮಾ ಮಾಡಿತು. ಬರ್ಕ್ಲೆಯಲ್ಲಿ ನೂರಾರು ಮಂದಿ ಶೀಶೆಯಲ್ಲಿದ್ದ ಕಾಫಿಯಾ ಕ್ರೂಡಾ ಹೆಸರಿನ 80 ನಿದ್ದೆಮಾತ್ರೆಗಳನ್ನು (ಅತಿ ಸೇವನೆ ಅಪಾಯಕಾರಿ ಎಂಬ ಅದರ ಎಚ್ಚರಿಕೆಯ ಸೂಚನೆಯನ್ನು ಧಿಕ್ಕರಿಸಿ) ಒಮ್ಮೆಗೇ ನುಂಗಿ ಆತ್ಮಹತ್ಯೆಯ ನಾಟಕ ಆಡಿದರು. ಐದು ದೇಶಗಳಲ್ಲಿ ಏಕಕಾಲಕ್ಕೆ ನಡೆದ ಈ ಸಾಯೋ ಆಟದಲ್ಲಿ ‘ಯಾರೂ ಸಾಯಲಿಲ್ಲ’ ಎಂದು ನ್ಯೂಸೈಂಟಿಸ್ಟ್ ಪತ್ರಿಕೆ ವರದಿ ಮಾಡಿತು. ಎರಡು ವರ್ಷಗಳ ನಂತರ 30 ದೇಶಗಳ 70 ನಗರಗಳಲ್ಲಿ ಏಕಕಾಲಕ್ಕೆ ಇದೇ ಡ್ರಾಮಾ ನಡೆಯಿತು.

2015ರಲ್ಲಿ ಆಸ್ಟ್ರೇಲಿಯಾದ ಸಂಶೋಧಕರು ಹೋಮಿಯೋಪಥಿಯ 1800 ಸಂಶೋಧನಾ ಪ್ರಬಂಧಗಳ ವಿಶ್ಲೇಷಣೆ ಮಾಡಿದರು. ಅವುಗಳಲ್ಲಿ ಮುಕ್ಕಾಲು ಪಾಲು ಬೋಗಸ್ ಆಗಿದ್ದು, 225ರಷ್ಟು ಮಾತ್ರ ‘ಗಟ್ಟಿಕಾಳು ಹೌದು, ಆದರೆ ಏನೂ ಹುರುಳಿಲ್ಲ’ ಎಂದು ಘೋಷಿಸಿದರು. ಹೋಮಿಯೋಪಥಿ ಜೊಳ್ಳೆಂದು ಪ್ರತಿಪಾದಿಸಲು ಇಂಥ ಲೆಕ್ಕವಿಲ್ಲದಷ್ಟು ಪ್ರಬಂಧಗಳು ಪ್ರಕಟವಾಗಿವೆ. ‘ಇದು ನಂಬಿಕೆಯ ಪ್ರಶ್ನೆ’ ಎಂದು ಪ್ರತಿವಾದಿಗಳು ಹೇಳುತ್ತ ಬಂದಿದ್ದಾರೆ.

ರೋಗಿಯನ್ನು ನಂಬಿಸಿ ಬರೀ ಜೋಳದ ಹಿಟ್ಟಿನ ಮಾತ್ರೆಯನ್ನೇ ಕೊಟ್ಟರೂ ಜ್ವರ, ಮೈಕೈ ನೋವು ವಾಸಿಯಾಗುತ್ತದೆ. ಅಂಥ ಢೋಂಗಿ ಔಷಧಕ್ಕೆ ವೈದ್ಯವಿಜ್ಞಾನದಲ್ಲಿ ಮಾನ್ಯತೆಯೂ ಇದೆ. ಅದಕ್ಕೆ ‘ಪ್ಲಾಸೆಬೊ’ (ಸುಳ್ಳೌಷಧ) ಎನ್ನುತ್ತಾರೆ. ಹೋಮಿಯೋಪಥಿಯ ಹಾಲುಸಕ್ಕರೆಯ ಗುಳಿಗೆಗಳು ಸುಳ್ಳೇ ಆಗಿದ್ದರೂ ಏನಾಯ್ತೀಗ? ಅಲೊಪಥಿಯ ಅಸಲೀ ಮಾತ್ರೆ ನುಂಗಿ ಅಡ್ಡಪರಿಣಾಮಗಳ ಜೊತೆ ಏಗುವುದಕ್ಕಿಂತ, ಏನೂ ತೊಂದರೆ ಇಲ್ಲದ ಹೋಮಿಯೋಪಥಿ ಔಷಧಗಳನ್ನು ಸೇವಿಸುವುದೇ ವಾಸಿಯಲ್ಲವೆ -ಎಂದು ಹೇಳುತ್ತ ಕೆಲವರು ಕಿವಿಗೆ ಹೂ ಇಡುತ್ತಾರೆ, ಇನ್ನು ಕೆಲವರು ಹತ್ತಿ ಇಟ್ಟುಕೊಳ್ಳುತ್ತಾರೆ. ಸರಕಾರ ಆಯುಷ್ ಹೆಸರಿನಲ್ಲಿ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಜೊತೆಗೆ ಹೋಮಿಯೋಪಥಿಯನ್ನೂ ಜೋಡಿಸಿ 2014ರಲ್ಲಿ ಮಾನ್ಯತೆ ನೀಡಿದೆ. ಜಗತ್ತಿನ ಅತಿ ಹೆಚ್ಚು ಸಂಖ್ಯೆಯ ಹೋಮಿಯೋಪಥಿ ಬಳಕೆದಾರರು ಭಾರತದಲ್ಲೇ ಇದ್ದಾರೆ. ಇಲ್ಲಿ ನೋಂದಣಿ ಮಾಡಿಕೊಂಡ ಕ್ಲಿನಿಕ್‌ಗಳ ಸಂಖ್ಯೆಯೇ ಎರಡು ಲಕ್ಷಕ್ಕೂ ಹೆಚ್ಚು. ಒಟ್ಟೂ ವೈದ್ಯರು ಎಷ್ಟಿದ್ದಾರೊ? ಹೋಮಿಯೋಪಥಿಗೆ ನಿಷೇಧ ಹಾಕಿದರೆ, ಬದಲೀ ವೈದ್ಯಕೀಯ ವ್ಯವಸ್ಥೆ ಮಾಡಲು ಸರಕಾರಕ್ಕೆ ಸಾಧ್ಯವೆ?

ಬದಲೀ ವ್ಯವಸ್ಥೆ ಇಲ್ಲದಿದ್ದರೂ ಪರವಾಗಿಲ್ಲ; ಆದರೆ ಈ ‘ಸುಳ್ಳುಮಾತ್ರೆ, ಢೋಂಗಿ ಔಷಧಗಳನ್ನು ನಂಬಬೇಡಿ’ ಎಂದು ಈಗ ಕೂಗೆದ್ದಿದೆ. ನಿರುಪದ್ರವಿ ಎನಿಸಿದ ಹೋಮಿಯೋಪಥಿಯಲ್ಲೂ ಅಪಾಯವಿದೆ ಎಂಬ ಅಂಶ ಹೊರಬಿದ್ದಿದೆ. ಉದಾಹರಣೆಗೆ, ಆರಂಭದಲ್ಲಿ ಹೇಳಿದ ಆಸ್ತಮಾ ಕಷಾಯ (ಬ್ಲಾಟ್ಟಾ ಓರಿಯೆಂಟಾಲಿಸ್) ನೋಡಿ. ಅದರಲ್ಲಿ ಇರುವುದು ಶೇ 99.9ರಷ್ಟು ಬರೀ ಅಲ್ಕೊಹಾಲ್ ಮತ್ತು ಶುಂಠಿ ಮಾತ್ರ. ಜಿರಳೆ ಅಂಶ ಅನಂತಾಲ್ಪ ಅಷ್ಟೆ. ಅದಕ್ಕೆ ‘ಮದರ್ ಟಿಂಕ್ಚರ್’ ಎನ್ನುತ್ತಾರೆ. ಇದರ 30-40 ಹನಿಗಳನ್ನು ಅರ್ಧ ಲೋಟ ನೀರಿಗೆ ಬೆರೆಸಿ ಆಗಾಗ ಕುಡಿಯಬೇಕು. ಅಷ್ಟಾದರೆ ಪರವಾಗಿಲ್ಲ. ‘ಆದರೆ ಕೆಲವು ಡಾಕ್ಟರ್‌ಗಳು ಅದನ್ನೇ ನೇರವಾಗಿ ಕುಡಿಯುವಂತೆ ಹೇಳುತ್ತಾರೆ. ಪುಟ್ಟ ಮಗುವಿಗೂ ಹದಿಹುಡುಗಿಗೂ ಅದನ್ನು ಮತ್ತೆ ಮತ್ತೆ ದೀರ್ಘಕಾಲ ಕುಡಿಸುತ್ತಿದ್ದರೆ ಏನಾದೀತು ಯೋಚಿಸಿ’ ಎಂದು ಕೆಣಕುತ್ತಾರೆ, ಕೇರಳದ ಲಿವರ್ ತಜ್ಞ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್.

ಫಿಲಿಪ್ಸ್ ಮತ್ತು ಇತರ ಏಳು ವಿಜ್ಞಾನಿಗಳು ಈಚೆಗೆ ಪ್ರಕಟಿಸಿದ ಸಂಶೋಧನಾ ಲೇಖನದಲ್ಲಿ ಅನೇಕ ಆತಂಕಕಾರಿ ಸಂಗತಿಗಳಿವೆ. ಕೊಚ್ಚಿಯಲ್ಲಿರುವ ರಾಜಗಿರಿ ವೈದ್ಯ ಸಂಶೋಧನಾ ಸಂಸ್ಥೆಯಲ್ಲಿ ಯಕೃತ್ತಿನ ಕಾಯಿಲೆಗೆಂದು ಚಿಕಿತ್ಸೆ ಪಡೆಯುತ್ತಿದ್ದ 456 ರೋಗಿಗಳ ಚರಿತ್ರೆಯನ್ನು ಈ ತಂಡ ಅಧ್ಯಯನ ಮಾಡಿತು. ಒಂಬತ್ತು ರೋಗಿಗಳಿಗೆ ಹೋಮಿಯೋಪಥಿ ಔಷಧ ಸೇವನೆಯಿಂದಾಗಿಯೇ ಯಕೃತ್ತಿನ ಕಾಯಿಲೆ ಬಂದಿತ್ತೆಂಬುದು ಖಾತ್ರಿಯಾದ ನಂತರ ಅವರು ಸೇವಿಸಿದ್ದ 15 ಔಷಧಗಳನ್ನು ಮತ್ತೆ ತರಿಸಿ ಪರೀಕ್ಷೆ ಮಾಡಿದರು. ತೀರ ದುರ್ಬಲವೆಂದು ಹೇಳಲಾದ ಕಷಾಯದಲ್ಲೂ ಗಣನೀಯ ಪ್ರಮಾಣದಲ್ಲಿ ಸ್ಟೀರಾಯ್ಡ್, ಆಂಟಿಬಯಾಟಿಕ್ಸ್, ಔದ್ಯಮಿಕ ದ್ರಾವಕಗಳು, ಅಮಲು ಬರಿಸುವ ದ್ರವ್ಯಗಳು, ಕೆಮಿಕಲ್ ಅಫೀಮು, ನಂಜುಲೋಹಗಳು, ವಿಷಕಾರಿ ಸಸ್ಯಜನ್ಯ ಸಂಯುಕ್ತಗಳು ಇದ್ದವು. ಹಿಂದೆಂದೂ ಲಿವರ್ ಸಮಸ್ಯೆ ಇಲ್ಲದವರು ಕೋವಿಡ್ ಬಾರದಂತೆ ಆರ್ಸೆನಿಕಂ ಆಲ್ಬಮ್ ಸೇವನೆ ಮಾಡುತ್ತಿದ್ದರು; ಗ್ಯಾಸ್ಟ್ರಿಕ್ ಸಮಸ್ಯೆ, ಕಿಡ್ನಿಕಲ್ಲು ನಿವಾರಣೆಗೂ ಅಂಥದೇ ಹೋಮಿಯೋಪಥಿ ಔಷಧ ಸೇವಿಸಿದವರಿಗೆ ಲಿವರ್ ಕಾಯಿಲೆ ಬಂದಿದೆ; ನಾಲ್ವರು ತೀರಿಕೊಂಡಿದ್ದಾರೆ.

ಪರೀಕ್ಷೆಗೆಂದು ಜನಪ್ರಿಯ ಔಷಧಿಯೊಂದನ್ನು (ಅದರ ಹೆಸರು ಇಲ್ಲಿ ಬೇಡ) ಇವರ ತಂಡ ತರಿಸಿ ನೋಡಿದಾಗ, ‘ಅದರಲ್ಲಿ ವಿದೇಶೀ (ಶಿವಾಸ್ ರೀಗಲ್) ವ್ಹಿಸ್ಕಿಯಲ್ಲಿ ಇದ್ದಷ್ಟೇ ಸಾಂದ್ರತೆಯ, ಕಡಿಮೆ ಬೆಲೆಯ ದೇಶೀ ಮದ್ಯ ಇತ್ತು. ಮದ್ಯ ಬಿಟ್ಟು ಬೇರೇನೂ ಇರಲಿಲ್ಲ. ಅಷ್ಟೇಕೆ, ಕೊರಿಯರ್ ಮೂಲಕ ಈ ಶೀಶೆ ಆಸ್ಪತ್ರೆಗೇ ಬಂತು’ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ. ಮದ್ಯನಿಷೇಧ ಜಾರಿಯಲ್ಲಿರುವ ಬಿಹಾರ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹಾಗಿದ್ದರೆ ಈ ಔಷಧಕ್ಕೆ ಭಾರೀ ಬೇಡಿಕೆ ಇದ್ದೀತು.

ಅಲೊಪಥಿ, ಆಯುರ್ವೇದ ಔಷಧಗಳಲ್ಲೂ ಕಲಬೆರಕೆ ಇರುತ್ತವೆ. ಭಾರತದಲ್ಲಿ ತಯಾರಾದ ಕೆಮ್ಮಿನ ಕಷಾಯ ಸೇವಿಸಿ ಈಚೆಗೆ ಗಾಂಬಿಯಾ ದೇಶದ 72 ಮಕ್ಕಳು ಸಾವನ್ನಪ್ಪಿದವಲ್ಲ? ಉಜ್ಬೇಕಿಸ್ತಾನದಲ್ಲಿ ‘ಭಾರತದ ಸಿರಪ್ಪನ್ನು ಬಳಸಬೇಡಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆಯಲ್ಲ? ಔಷಧ ಉತ್ಪಾದಕರ ಎಡವಟ್ಟಿನಿಂದ ಗಂಭೀರ ಅಡ್ಡ ಪರಿಣಾಮ ಯಾವ ವೈದ್ಯ ಪದ್ಧತಿಯಲ್ಲೂ ಆಗಬಹುದು. ಆದರೂ ‘ಹೋಮಿಯೋಪಥಿಯ ಬಗ್ಗೆ ವಿಶೇಷ ಎಚ್ಚರಿಕೆ ಬೇಕು; ಏಕೆಂದರೆ ಅದು ನಿರಪಾಯಕಾರಿ ಎಂಬ ಭಾವನೆ ಎಲ್ಲರಲ್ಲಿದೆ’ ಎನ್ನುತ್ತಾರೆ, ಹಿಂದೊಮ್ಮೆ ಹೋಮಿಯೋಪಥಿ ವೈದ್ಯರೇ ಆಗಿದ್ದು ಈಗ ವಿಪಕ್ಷ ಸೇರಿದ ಇನ್ನೊಬ್ಬ ಸಂಶೋಧಕ ಡಾ. ಆರಿಫ್ ಹುಸೇನ್.

ಹೆಸರಾಂತ ಪತ್ರಕರ್ತೆ ಬರ್ಖಾ ದತ್ ಜೊತೆಗಿನ ಕಳೆದ ವಾರದ ಸಂದರ್ಶನದಲ್ಲಿ ಅವರು ಕೊಟ್ಟ ಹೋಲಿಕೆ ಹೀಗಿದೆ: ‘ನಿಮ್ಮೆದುರಿನ ಜಾಡಿಯಲ್ಲಿ ಕೆಲವು ಉಡುಗೊರೆ ಸಾಮಾನು ಇವೆ; ಅದರಲ್ಲಿ ಒಂದು ಜೀವಂತ ಚೇಳೂ ಇದೆ, ಹುಷಾರಾಗಿರಿ ಎಂದು ಹೇಳುತ್ತೇನೆ. ಅಪಾಯದ ಅರಿವಿದ್ದೂ ನೀವು ಕೈ ಹಾಕುತ್ತೀರಿ. ಚೇಳು ಕಚ್ಚಿದರೆ ಅದಕ್ಕೆ ಪ್ರತಿವಿಷದ ಸೇವನೆ ಮಾಡುತ್ತೀರಿ. ಇಂಥದೇ ಇನ್ನೊಂದು ಸನ್ನಿವೇಶದಲ್ಲಿ, ಒಳಗೆ ವಿಷಜಂತು ಇದೆಯೆಂದು ಗೊತ್ತಿಲ್ಲದೇ ಕೈಹಾಕಿ ಕಡಿಸಿಕೊಂಡರೆ ಎತ್ತ ಓಡುತ್ತೀರಿ ಹೇಳಿ’ ಎಂದು ಆರಿಫ್ ಕೇಳುತ್ತಾರೆ. ‘ಹೋಮಿಯೋಪಥಿ ಔಷಧವೆಂದರೆ ಸೌಮ್ಯ ಗುಣಗಳ ಪ್ಲಾಸಿಬೊ ಅಲ್ಲ’ ಎಂಬುದು ಇವರ ತಂಡದ ಸಂಶೋಧನ ಪ್ರಬಂಧದ ಮುಕ್ತಾಯದ ವಾಕ್ಯವಾಗಿದೆ.

ಆದರೂ ಯಾಕೆ ಜನ ಅದಕ್ಕೆ ಮುಗಿಬೀಳುತ್ತಾರೆ? ಈ ಪ್ರಶ್ನೆಗೆ ಸಂಶೋಧಕರ ವಾದ ಹೀಗಿದೆ: ಕೆಲವು ಕಾಯಿಲೆಗಳು ಔಷಧವಿಲ್ಲದೇ ತಂತಾನೇ ಗುಣವಾಗುತ್ತವೆ. ಅಂಥ ಕಾಯಿಲೆಗಳು ಯಾವುವೆಂದು ಹೋಮಿಯೋಪಥಿ ವೈದ್ಯರಿಗೆ ಗೊತ್ತಿರುತ್ತದೆ. ಅದಕ್ಕೆ ಅವರು ಉತ್ಸಾಹದಿಂದ ಹೋಮಿಯೋಪಥಿ ಔಷಧ ಕೊಟ್ಟು ಅದರ ಯಶಸ್ಸನ್ನೇ ಹಾಡಿ ಹೊಗಳುತ್ತಿರುತ್ತಾರೆ. ಅಂಥ ಯಶಸ್ಸೇ ಜನಜನಿತವಾಗಿರುತ್ತದೆ. ‘ಕೆಲವು ಕಾಯಿಲೆಗಳ ನಿವಾರಣೆ ಸಾಧ್ಯವೇ ಇಲ್ಲ. ಎರಡನೇ ಹಂತದ ಲಿವರ್ ಕ್ಯಾನ್ಸರನ್ನು ಅವರು ವಾಸಿ ಮಾಡಲಿ ನೋಡೋಣ. ಅಥವಾ ಬ್ಯಾಕ್ಟೀರಿಯಲ್ ನ್ಯೂಮೊನಿಯಾ ಅಥವಾ ಮಂಗನ ಕಾಯಿಲೆಗೆ ಅವರಲ್ಲಿ ಔಷಧವಿಲ್ಲ’ ಎನ್ನುತ್ತಾರೆ ಫಿಲಿಪ್ಸ್.

ಹೋಮಿಯೋಪಥಿ ಯಶಸ್ಸಿಗೆ ಇನ್ನೊಂದು ಸಾಧ್ಯತೆಯೂ ಇದೆ: ರೋಗ ವಾಸಿಗೆಂದು ಅನೇಕರು ಮೊದಲು ಅಲೊಪಥಿ, ಆಮೇಲೆ ಆಯುರ್ವೇದ ಸೇವನೆ ಮಾಡಿ, ಗುಣವಾಗಿಲ್ಲವೆಂದು ಕೊನೆಯದಾಗಿ ಹೋಮಿಯೋಪಥಿಗೆ ಬರುತ್ತಾರೆ. ಅಷ್ಟರಲ್ಲಿ ಹಿಂದೆ ಸೇವಿಸಿದ ಔಷಧ ನಿಧಾನವಾಗಿ ಫಲ ಕೊಡಲು ಆರಂಭಿಸುತ್ತದೆ ಅಥವಾ ಶರೀರವೇ ಅದನ್ನು ವಾಸಿಮಾಡಿರುತ್ತದೆ. ಆದರೆ ಶಾಭಾಸ್‌ಗಿರಿ ಸಿಗುವುದು ಹೋಮಿಯೋಪಥಿಗೆ.

ಶಾಭಾಸ್‌ಗಿರಿಯನ್ನು ನಮ್ಮ ಸರ್ಕಾರವೂ ಕೊಡುತ್ತಿದೆ. ಅದಕ್ಕೆಂದು ತೆರಿಗೆದಾರರ ಕೋಟಿಗಟ್ಟಲೆ ಹಣವನ್ನೂ ಸುರಿಯುತ್ತಿದೆ. ಪ್ರಶಸ್ತಿಗಳ ಸರಮಾಲೆಗಳನ್ನೇ ಕೆಲವರಿಗೆ ತೊಡಿಸಿ, ಅವರ ಮೂಲಕ ಈ ವೈದ್ಯಕೀಯದ ಜನಪ್ರಿಯತೆ ಮೇಲೇರುತ್ತಲೇ ಇರುವಂತೆ ಮಾಡುತ್ತಿದೆ. ಕೋವಿಡ್ ಕಾಲದಲ್ಲಿ ಸರ್ಕಾರವೇ ಇದರ ಪ್ರಚಾರ ಮಾಡಿತ್ತಲ್ಲ? ಹೋಮಿಯೋಪಥಿ ಡಿಗ್ರಿ ಕಾಲೇಜುಗಳು, ಸರ್ಕಾರಿ ಕ್ಲಿನಿಕ್‌ಗಳು ಎಲ್ಲ ಸೇರಿ ಜಗತ್ತಿನ ಅತಿದೊಡ್ಡ ವ್ಯವಸ್ಥೆ ಇಲ್ಲಿ ಬೇರೂರಿ ಹೆಮ್ಮರವಾಗಿದೆ. ‘ಇಂಥ ಅವೈಜ್ಞಾನಿಕ ವೈದ್ಯಪದ್ಧತಿಗೆ ಸರ್ಕಾರಿ ಅನುದಾನವನ್ನು ಸಂಪೂರ್ಣ ನಿಲ್ಲಿಸಿ ಅಷ್ಟೂ ಹಣವನ್ನು ಅಸಲೀ ವೈದ್ಯಕೀಯಕ್ಕೆ ನೀಡಬೇಕು’ ಎಂದು ಡಾ. ಫಿಲಿಪ್ಸ್ ವಾದಿಸುತ್ತಾರೆ. ಜರ್ಮನಿ, ಬ್ರಿಟನ್, ಫ್ರಾನ್ಸ್‌ ಈಗಾಗಲೇ ಹೋಮಿಯೋಪಥಿ ಪದ್ಧತಿಗೆ ಧನಸಹಾಯವನ್ನು ನಿಲ್ಲಿಸಿವೆ. ಯುರೋಪಿನ ಇನ್ನು ಕೆಲವು ದೇಶಗಳಲ್ಲಿ ಹೋಮಿಯೋಪಥಿ ಚಿಕಿತ್ಸೆಗೆ ವಿಮೆ ಹಣ ಸಿಗುವುದಿಲ್ಲ. ರಷ್ಯಾ ಮತ್ತು ಆಸ್ಟ್ರೇಲಿಯಾ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿವೆ. ಚೀನಾಕ್ಕಂತೂ ತನ್ನದೇ ಬದಲೀ ವ್ಯವಸ್ಥೆ ಇದೆ. ಅಲ್ಲೆಲ್ಲ ಏನಾದರಾಗಲಿ; ಇಲ್ಲಿ, ಭಾರತದಲ್ಲಿ ಈಗ ಅಪಸ್ವರ ಏಕೆ? ಅಲೊಪಥಿ ಔಷಧ ಕಂಪನಿಗಳೇ ಹೋಮಿಯೋಪಥಿಯ ವಿರುದ್ಧ ಮಸಲತ್ತು ಮಾಡುತ್ತ ಬಂದಿರಬಾರದೇಕೆ? ಈ ವೈದ್ಯಪದ್ಧತಿ ಅವೈಜ್ಞಾನಿಕವೇ ಹೌದೆಂದು ಒಪ್ಪಿಕೊಂಡರೂ ಏನಾಯ್ತೀಗ? ದೇವರನ್ನು ನಂಬುವುದೇ ಅವೈಜ್ಞಾನಿಕ ಎಂದು ಅದೆಷ್ಟೇ ವೈಜ್ಞಾನಿಕವಾಗಿ ವಾದಿಸಿದರೂ ದೇವರ ದರ್ಶನದ ಧಾವಂತದಲ್ಲಿ ಸಾವಿರಾರು ಜನರು ಸಾವಪ್ಪುತ್ತಿದ್ದರೂ ಜನರ ನಂಬಿಕೆಯನ್ನು ಅಳಿಸಲು ಸಾಧ್ಯವೆ? ಮತ್ತೆ ಯಾಕೆ ಈ ಲೇಖನ? ಅದೂ ಮೂರ್ಖರ ದಿನಕ್ಕೆ ಆರು ದಿನ ಹಾಗೂ ‘ವಿಶ್ವ ಹೋಮಿಯೋಪಥಿ ದಿನ’ಕ್ಕೆ 16 ದಿನ ಬಾಕಿ ಇರುವಾಗ, ಅದೂ ಕೇವಲ 9 ರೋಗಿಗಳ ಮೇಲಿನ ಅಧ್ಯಯನಕ್ಕೆ ಇಷ್ಟೆಲ್ಲ ಪ್ರಚಾರ ಯಾಕೆ?

ಅದಕ್ಕೆ ಉತ್ತರ ಇಲ್ಲಿದೆ: ವಿಜ್ಞಾನ ಎಂದರೆ ದೇವರ ಹಾಗಲ್ಲ. ಅದು ತನ್ನನ್ನು ತಾನೇ ಪರೀಕ್ಷೆಗೆ ಒಡ್ಡುತ್ತ, ರೂಢ ನಂಬಿಕೆಗಳನ್ನು ಪ್ರಶ್ನಿಸುತ್ತ, ತನ್ನ ತಪ್ಪನ್ನು ತಿದ್ದಿಕೊಳ್ಳುತ್ತ, ಅಗತ್ಯಬಿದ್ದರೆ ದೇವರನ್ನೆಲ್ಲ ಬಂಧನದಲ್ಲಿರಿಸಿ (ಕೋವಿಡ್ ದಿನಗಳಲ್ಲಿ ಆದಂತೆ) ಮನುಷ್ಯನನ್ನು ಸರ್ವಶಕ್ತನನ್ನಾಗಿ ಮಾಡಲು ಹೊರಟಿದೆ. ಭಾರತವಂತೂ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಬೇಕೆಂದು ಸಂವಿಧಾನದಲ್ಲೇ ಹೇಳಿಕೊಂಡ ಏಕೈಕ ರಾಷ್ಟ್ರ. ಅದು ಈಗ ವಿಶ್ವಗುರು ಪಟ್ಟಕ್ಕೇರುವ ಸನ್ನಾಹದಲ್ಲಿದೆ. ಹೋಮಿಯೋಪಥಿ ಢೋಂಗಿ ಎಂದು ಜಗತ್ತಿನ ವಿಜ್ಞಾನಿಗಳೆಲ್ಲ ಹೇಳುತ್ತಿರುವಾಗ, ಜಗತ್ತಿನ ಅತಿದೊಡ್ಡ ಹೋಮಿಯೋಪಥಿ ಆಡುಂಬೊಲ ಎನ್ನಿಸಿದ ಭಾರತದಲ್ಲಿ ವಿಜ್ಞಾನಿಗಳು ಪರೀಕ್ಷೆ ನಡೆಸಿದರೆ, ಆ ಯತ್ನವನ್ನು ಮುಚ್ಚಿಡಬಾರದು ತಾನೆ?

‘ನನಗೆ ಇದರಲ್ಲಿ ನಂಬಿಕೆ ಇಲ್ಲ; ಆದರೂ ಅದು ವರ್ಕಾಗುತ್ತದೆ’ ಎಂಬ ನಂಬಿಕೆಯ ಹಿಂದಿನ ನಿಗೂಢ ಸತ್ಯ ಏನೆಂದು ನಾಳಿನ ವಿಜ್ಞಾನಿಗಳಾದರೂ ಹುಡುಕುವಂತಾದರೆ ತಪ್ಪೇನು ಅದರಲ್ಲಿ?

ವೈದ್ಯರಂಗದ ರಾಮರ್ ಪಿಳ್ಳೈಗಳು

ಹೋಮಿಯೋಪಥಿ ಚರಿತ್ರೆಯಲ್ಲಿ ‘ಬೆನ್ವೆನಿಸ್ಟ್ ಹಗರಣ’ ಎಂದೇ ಖ್ಯಾತಿ ಪಡೆದ ಒಂದು ಘಟನಾಸರಣಿ ಹೀಗಿದೆ:

1988ರಲ್ಲಿ ಫ್ರೆಂಚ್ ವೈದ್ಯವಿಜ್ಞಾನಿ ಜಾಕಿಸ್ ಬೆನ್ವೆನಿಸ್ಟ್ ಎಂಬಾತ ಪ್ರಸಿದ್ಧ ‘ನೇಚರ್’ ಪತ್ರಿಕೆಗೆ ತನ್ನ ಒಂದು ಸಂಶೋಧನ ಪ್ರಬಂಧವನ್ನು ಕಳಿಸಿದ. ಮನುಷ್ಯನ ದೇಹದಲ್ಲಿನ ರೋಗನಿರೋಧಕ (ಆಂಟಿಬಾಡೀಸ್) ಕಣಗಳನ್ನು ತೀರಾತೀರಾ ದುರ್ಬಲ ದ್ರಾವಣವಾಗಿ ಮಾಡಿ ಅದರಲ್ಲಿ ಔಷಧೀಯ ಗುಣವನ್ನು ಹೆಚ್ಚಿಸಲು ಸಾಧ್ಯ ಎಂದು ಪ್ರತಿಪಾದಿಸಿದ. ‘ನೇಚರ್’ ಪತ್ರಿಕೆಗೆ ಸಂಶಯ ಬಂದು, ‘ಬೇರೆಯವರೂ ಈ ಪ್ರಯೋಗ ಮಾಡಲಿ’ ಎಂದಿತು. ಅದೇ ಪ್ರಕಾರ ಕೆನಡಾ, ಇಟಲಿ, ಇಸ್ರೇಲ್ ಮತ್ತು ಫ್ರಾನ್ಸ್ ದೇಶಗಳ ವಿಜ್ಞಾನಿಗಳನ್ನು ಸಹಲೇಖಕರನ್ನಾಗಿ ಮಾಡಿದ ನಂತರ ಲೇಖನ ಪ್ರಕಟವಾಯಿತು. ಆಗಲೂ ಸಂಶಯ ಬಂದು ಪತ್ರಿಕೆಯೇ ಒಂದು ತನಿಖಾ ಸಮಿತಿಯನ್ನು ನೇಮಕ ಮಾಡಿತು. ಅದರಲ್ಲಿ ಸ್ವತಃ ಸಂಪಾದಕ ಜಾನ್ ಮಡಾಕ್ಸ್, ಖ್ಯಾತ ಪವಾಡ ಪರೀಕ್ಷಕ ಜೇಮ್ಸ್ ರಾಂಡಿ, ಮೋಸಪರೀಕ್ಷಕ ವಾಲ್ಟರ್ ಸ್ಟೀವರ್ಟ್ ಮತ್ತು ಜೊತೆಗೆ ಬೆನ್ವೆನಿಸ್ಟ್ ತಂಡದ್ದೇ ಒಬ್ಬ ವಿಜ್ಞಾನಿಯ ಎದುರು ಅದೇ ಪ್ರಯೋಗ ನಡೆಯಿತು. ಫಲಿತಾಂಶ ಬೇರೆಯದೇ ಬಂತು! ಒಂದಲ್ಲ, ಏಳು ಬಾರಿ ಅದೇ ಪ್ರಯೋಗವನ್ನು ನಡೆಸಿದರೂ ಮೊದಲಿನ ಫಲಿತಾಂಶ ಬರಲಿಲ್ಲ.

ಹೋಮಿಯೋಪಥಿ ಬೆಂಬಲಿಗರ ಈಗಿನ ವಾದ ಏನೆಂದರೆ: ಸತ್ಯಾಸತ್ಯದ ಪರೀಕ್ಷೆ ಮಾಡಲು ಹೋಗಿದ್ದೇ ಆದರೆ ಸತ್ಯ ಕಣ್ತಪ್ಪಿಸಿಕೊಳ್ಳುತ್ತದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT