ಶನಿವಾರ, ಮೇ 30, 2020
27 °C

ಹೊಸ ನಿರೂಪದತ್ತ...

ನಾಗರಾಜ ವಸ್ತಾರೆ Updated:

ಅಕ್ಷರ ಗಾತ್ರ : | |

Prajavani

1. ವಾರದೊಪ್ಪತ್ತಿನಿಂದ ಸುತ್ತಿಕೊಂಡಿರುವ ಈ ಗಂಡಾಂತರಕ್ಕೊಂದು ನಿರೂಪವಿದೆಯೇ ಎಂದು, ಇವೊತ್ತು, ಒಂದೇ ಸಮ ತಲೆಕೆಡಿಸಿಕೊಂಡಿದ್ದೇನೆ. ಸಮತೆ- ಮಮತೆ ಅಂತೆಲ್ಲ ದೊಡ್ಡ ದೊಡ್ಡ ವಿಚಾರಗಳನ್ನು ಬಡಬಡಿಸುವ ಈ ಇಪ್ಪತ್ತೊಂದನೇ ಶತಮಾನದ ನಾನು, ಈಗ ನನ್ನ ಕೈಯೇ ನನಗೆ ಅಸ್ಪೃಶ್ಯವೆನ್ನಿಸಿ ಸಂದಿಗ್ಧಕ್ಕೀಡಾಗಿದ್ದೇನೆ.

ಏನನ್ನು ಮುಟ್ಟಬಹುದು, ಯಾವುದನ್ನು ಕೂಡದು... ಯಾವುದಕ್ಕೆ ನೋ ನೋ, ಇನ್ನಾವುದು ಓಕೆ... -ಈ ಪರಿಯ ಹೊಸ ಕಲಿಕೆಗಳು, ನನ್ನ ಎಚ್ಚರವನ್ನೇ ಎಚ್ಚರಿಸಿ ಇಟ್ಟಾಡಿಸುತ್ತಿವೆ. ಸೋಪು ಸೋಕಿಸದೆ ಏನೂ ತಾಕಕೂಡದೆಂಬುದು ನನ್ನೆಲ್ಲ ರಿಫ್ಲೆಕ್ಸುಗಳನ್ನೂ ಸೆಣಸಿದೆ. ದೇವರೇ... ನೋಡ ನೋಡುತ್ತಲೇ ಈ ಜಗತ್ತಿಗೆ ಏನಾಗಿಹೋಯಿತು? ಕಣ್ಣೊಳಗಿನ ಪಿಸುರು ಹೆಕ್ಕುವಂತಿಲ್ಲ. ಮೂಗೊಳಗೆ ಬೆರಳು ತಿರುಪುವಂತಿಲ್ಲ. ಎಂಜಿಲಿಗೇನೂ ತಾಕುವಂತಿಲ್ಲ. ಕಿವಿಯೊಳಗಿನ ಕೊಳಕು ಎಬ್ಬುವಂತಿಲ್ಲ. ಲಾಲೀಪಾಪು ನೆಕ್ಕುವಂತಿಲ್ಲ... ಒಂದೇ ಎರಡೇ?

ಕಡು ‘ಮಾನುಷ’ವಾಗಿ, ಅಂದರೆ ಮನುಷ್ಯಸಹಜವಾಗಿ ಮಾಡಬಹುದಾದುದೆಲ್ಲ ‘ಸಲ್ಲ’ವಂದುಬಿಟ್ಟಲ್ಲಿ ಮಾಡುವುದಾದರೂ ಏನನ್ನು? ನಾನು ನನಗೇ ಅಮಾನುಷವಾಗಿಬಿಟ್ಟೆನೇ? ಇದು ಗಂಡಾಂತರವಲ್ಲದೆ ಮತ್ತೇನು? ಗಂಡಾಂತರವೇ ಆಗಿದ್ದಲ್ಲಿ ಇದಕ್ಕೊಂದು ನೆರೇಟಿವುಂಟೆ? ಒಬ್ಬ ಬರಹಗಾರನಾಗಿ ಇದಕ್ಕೆ ಏನನ್ನಬಲ್ಲೆ? ಹಾಗೇ, ಒಬ್ಬ ಆರ್ಕಿಟೆಕ್ಟಾಗಿ ಈ ಸನ್ನಿವೇಶಕ್ಕೊಂದು ನಿರೂಪವುಂಟೆ? ಜಿಜ್ಞಾಸೆಯಾಗುತ್ತಿದೆ.

ಇದೇನು ಇಡೀ ಮನುಕುಲಕ್ಕೇ ಬಂದೊದಗಿರುವ ಕುತ್ತೇ? ವಿಪತ್ತೇ? ತಾನಲ್ಲದೆ ಇನ್ನೊಂದಿಲ್ಲವೆಂಬ ವಿಪ್ಲವವೇ?
ಇರಬಹುದು. ನನ್ನ ಕಣ್ಣೆದುರಿನ ಕಾಲಸಂದರ್ಭಗಳು ಕಂಡಿರುವ ಬಲು ದೊಡ್ಡ ಕಂಟಕವೇ ಇದಾಗಿರಬಹುದು. ನಾನೂ, ನನ್ನನ್ನು ಆಳುತ್ತಿರುವ ಮಂದಿಯೂ ಸದ್ಯಕ್ಕೆ ಕೈಕೊಂಡಿರುವ ಈ ನಿಮಿತ್ತಗಳೂ ನಿರ್ಣಯಗಳೂ- ನಾವು ಮುಂದೆ ಕಾಣಲಿಕ್ಕಿರುವ ದಿವಸಗಳ ಜಗತ್ತನ್ನೂ, ಅವುಗಳ ಸ್ವಾಸ್ಥ್ಯಾಕಾರವನ್ನೂ ನಿರ್ಧರಿಸಬಹುದು. ಹಾಗೇ- ನಾನು ಮತ್ತು ನೀವು ಆಗಿಕೊಂಡಿರುವ ಸಮಾಜವನ್ನೂ, ಕಟ್ಟಿರುವ ಸಂಸ್ಕೃತಿಯನ್ನೂ, ಆಯ್ದಿರುವ ಸರ್ಕಾರವನ್ನೂ, ಮಾಡಿರುವ ರಾಜಕಾರಣವನ್ನೂ, ಹೂಡಿರುವ ಅರ್ಥವ್ಯವಸ್ಥೆಯನ್ನೂ... -ನಮ್ಮ ಅಸ್ತಿತ್ವದ ಹತ್ತಾರು ಮಗ್ಗುಲುಗಳ ಭವಿಷ್ಯವನ್ನೂ, ಇವಿವೇ ನಿಮಿತ್ತ- ನಿರ್ಣಯಗಳು ಪುನರ್‌ ರೂಪಿಸಬಲ್ಲವು. ನನಗೆ ನಿಮಗೆ, ನಿಜಕ್ಕೂ ಬೇಕೋ ಬೇಡವೋ- ಪುನರ್‌ ನಿರೂಪಿಸುವುದಂತೂ ಸೈಯೆ.

ಇನ್ನು, ಸದ್ಯಸಂದರ್ಭದ ಅರ್ಜುಸರ್ಜು ಎಂತಿದೆಯೆಂದರೆ, ನಮ್ಮ ನಿರ್ಣಯಗಳು ಈಗಿಂದೀಗಲೇ ಆಗಿಬಿಡಬೇಕು. ತಪ್ಪೋ ಸರಿಯೋ- ಮಾಡದಿದ್ದರೆ ಮಡಿದೇವೆನ್ನುವ ತುರ್ತಿನಲ್ಲಿ ‘ಮಾಡಿ’ ಪೂರೈಸಬೇಕು. ಯೆಸ್ ಆರ್ ನೋ ಹೇಳುವುದಷ್ಟೇ ನಮ್ಮೆದುರಿಗಿರುವ ಆಯ್ಕೆ. ಹೀಗಿರುವಾಗ ನಾವೆಲ್ಲರೂ ಒಂದು ದೇಶವಾಗಿ, ಗಣತಂತ್ರವಾಗಿ- ಇಡೀ ದೇಶಕ್ಕೇ ಬೀಗ ಜಡಿಯುವುದನ್ನು ನಿರ್ಣಯಿಸಿಯಾಗಿದೆ. ಕಳೆದೊಂದು ವಾರದಿಂದ ನಾನೂ ಮನೆಯ ಮುಂಬಾಗಿಲಿಗೆ ಚಿಲಕವಿಕ್ಕಿಕೊಂಡು ಭದ್ರವಾಗಿ ಒಳಕುಳಿತಿದ್ದೇನೆ. ನೀವೂ ಇದನ್ನು ಮಾಡಿರಬಹುದು.

ಬಿಡುವೇ ಇದ್ದಿರದ ನನ್ನೆದುರು, ಸದ್ಯಕ್ಕೆ, ಇಡೀ ಜೀವಮಾನಕ್ಕಾಗುವಷ್ಟು ಬಿಡುವು-ಗಡುವು ಗುಡ್ಡೆಯಿಕ್ಕಿಕೊಂಡು ಕೂತಿದೆ. ಏನಾದರೂ ಮಾಡಿಕೋ... ಹೇಗಾದರೂ ಸವೆಸಿಕೋ... ಎಂದು ಕೆಣಕುತ್ತ, ತಣ್ಣಗಿರುವ ತಾನು ಸಣ್ಣಗಾಗುವುದನ್ನು ಎದುರು ನೋಡುತ್ತಿದೆ.

ಕಾಯುವುದೆಂದರೆ ಏನೆಂಬುದು ನನಗೆ ಈಗ ಅರ್ಥವಾಗುತ್ತಿದೆ. ಹಿಂದೆ ಶಬರಿಯೆಂದೊಬ್ಬಾಕೆ ಪುರುಷೋತ್ತಮನೆಂದೊಬ್ಬನಿಗಾಗಿ ಒಂದು ಜನುಮವಿಡೀ ಕಾದಳಂತಲ್ಲ, ಅದು ಸುಳ್ಳಲ್ಲವೆಂದು ಅನಿಸುತ್ತಿದೆ. ಎಷ್ಟಂತ ಕುಳಿತಲ್ಲೇ ಕೂರುವುದು? ಏನೆಷ್ಟಂತ ಮಾಡಿದ್ದೇ ಮಾಡುವುದು? ಏನೆಂದು ವಾಟ್ಸ್‌ಆ್ಯಪ್‌ ಮಾಡುವುದು? ಏನನ್ನು ಬಿಡುವುದು? ಅಮೆಜಾನ್-ನೆಟ್‍ಫ್ಲಿಕ್ಸ್‌ಗಳು ನನಗಲ್ಲವೆಂದು ಒಂದು ಜನುಮದ ಹಿಂದೆಯೇ ನನಗೆ ಮನವರಿಕೆಯಾಗಿದೆ. ಪುಸ್ತಕಗಳನ್ನು ನೋಡಿದರೆ ವಾಕರಿಕೆ ಬರುತ್ತದೆ. ಸಾಲದ್ದಕ್ಕೆ ನಾನೇ ಎಷ್ಟೆಲ್ಲ ಬರೆದು ಗುಡ್ಡೆ ಹಾಕಿದ್ದೇನೆ. ಯಾವುದಕ್ಕೆ? ಯಾವ ಪುರುಷಾರ್ಥಕ್ಕೆ?
ಅರಿಯೆ.

ಸದ್ಯದ ಕಂಟಕದಿಂದ ತಪ್ಪಿಸಿಕೊಳ್ಳಲಿಕ್ಕೆ, ಈ ದೇಶ ಫರಮಾನಿಸಿತೆಂದು ನಾನೂ- ಮನೆಯಲ್ಲಿರುವ ಇನ್ನಿಬ್ಬರೊಡನೆ ಮನೆಯ ದಿಗ್ಬಂಧನ ಹೇರಿಕೊಂಡು ಕುಳಿತಿದ್ದೇನೆ. ಮನೆಯು ಬೀದಿಯೊಡನೆಯೂ ಸಂವಹಿಸದ ಹಾಗೆ ಬಾಗಿಲು ಜಡಿದು ಬಂದೋಬಸ್ತ್‌  ಮಾಡಿದ್ದೇನೆ. ಮೂರು ಅಂತಸ್ತಿನ ಇರವು ನನ್ನದು. ಮೂರು ಕಡೆ ಮೂವರಿದ್ದೇವೆಂದರೂ ಮೂವರಿಗೂ ಹೆಚ್ಚು ವಿಪುಲವಾದ ಸಾಮಾಜಿಕ ಅಂತರ. ಅಂತಿಂತಲ್ಲದ ‘ಸೋಶಿಯಲ್ ಡಿಸ್ಟೆನ್ಸ್’ ನಮ್ಮ ನಡುವೆ. ಒಬ್ಬರನ್ನಿನ್ನೊಬ್ಬರು ಕರೆಯಲಿಕ್ಕೂ ಫೋನು ಬೇಕು, ಅಂತಹ ಹತ್ತಿರ ಮತ್ತು ದೂರ.

ಇರಲಿ. ಇದಕ್ಕೆ ನಾನು ಮೊದಲಿಂದಲೂ ಒಗ್ಗಿಹೋಗಿದ್ದೇನೆ. ನನ್ನ ನಾ ಹೊಕ್ಕು ಪ್ಯೂಪಸ್ಥ- ಕೋಶಸ್ಥವಿರುವುದು ನನಗೆ ಚೆನ್ನಾಗಿ ಗೊತ್ತು. ಕರ್ಫ್ಯೂ-ಗಿರ್ಫ್ಯೂ ಎಂದು ಯಾರೂ ನಿಷೇಧ ಹೇರದೆಯೂ ಹಾಗಿದ್ದು ಗೊತ್ತು. ಸ್ವ-ಇಚ್ಛೆಯಿಂದ, ಅಷ್ಟೇ ಸ್ವೇಚ್ಛೆಯಿಂದ ಅದನ್ನು ಅನುಭವಿಸಿಯೂ ಗೊತ್ತು. ಸೃಷ್ಟಿಕರ್ತನ ಗೊಡವೆಯಾದರೂ ಸೃಷ್ಟಿ ಮಾತ್ರವೆಂಬಷ್ಟು ಅನಿಸಿದ್ದನ್ನು ಸೃಜಿಸಿ ಸೃಜಿಸಿ ಗೊತ್ತು. ನನ್ನದೇ ಒಳದನಿಗಳೊಳಗೆ ಭಜಿಸಿ ಭಜಿಸಿ ಗೊತ್ತು. ಫೋನುರಿಂಗೂ ಅಡಚಣೆಯೆಂದನಿಸಿ ಸದಾ ಅದನ್ನು ಸದ್ದಡಗಿಸಿಟ್ಟು ಗೊತ್ತು. ಸುಮ್ಮನೆದೆ ಬಡಿಯುತ್ತದೆಂದು ಸುಮ್ಮನಾಗಿಸದೆ ಇರಗೊಟ್ಟು ‘ಇದ್ದೂ ಇದ್ದೂ’ ಸಹ ನನಗೆ ಗೊತ್ತು. ಈಗ ಯೋಚನೆಯಾಗುತ್ತಿದೆ. ಯೋಚನೆಯೆಂದರೆ ಸಾರ ಕಡಿಮೆ. ಜಿಜ್ಞಾಸೆಯೆಂಬುದು ಹೆಚ್ಚು ಸರಿ.

ಪ್ರಶ್ನೆಯಿಷ್ಟೆ: ದೊಣ್ಣೆಯ ಬೀಸು ತಪ್ಪಿಸಿಕೊಳ್ಳಲಿಕ್ಕೆ ತಲೆಯನ್ನೇನೋ ಕಳಚಿಟ್ಟಿದ್ದಾಯಿತು. ಆದರೆ, ಬೀಸು ಮುಗಿದ ಮೇಲೆ ತಲೆಯನ್ನು ವಾಪಸಳವಡಿಸಿಕೊಂಡಲ್ಲಿ ಈ ಮೊದಲಿನಷ್ಟೇ ಸರಿಯಿರುತ್ತದೆಯೇ? ಮೊದಲಿನಷ್ಟೇ ನೇರ್ಪಾಗಿ ಓಡುತ್ತದೆಯೇ?

ಜಗತ್ತನ್ನು ಬಾಧಿಸುತ್ತಿರುವ ಈ ವೈರಸ್ಸು ಸುದೈವದ ಮೇರೆಗೆ ಮುಗಿಯುತ್ತದೆಂದುಕೊಳ್ಳೋಣ. ಕಂಟಕವು ನೀಗಿತೆಂದು ಜಗತ್ತು ಭಯದ ನೆರಳಿನಿಂದ ಬಿಡಿಸಿಕೊಂಡು ಪುನರುದಿಸೀತೆಂದೂ ಅಂದುಕೊಳ್ಳೋಣ. ಮನುಕುಲದ ಸಕಲ ಬಾಧೆ ತಪ್ಪಿ, ನನ್ನನ್ನೂ ಒಳಗೊಂಡು ನಾವೆಲ್ಲರೂ ಉಳಿದೇವೆಂತಲೂ ಅಂದುಕೊಳ್ಳೋಣ. ಹಾಗೆ ಮಿಕ್ಕ ನಮ್ಮಗಳೊಡನೆ ಮಿಗಬಲ್ಲ ಜಗತ್ತು ಹೇಗಿರಬಹುದು? ಈ ಮೊದಲಿನಂತೆಯೇ ಇರುತ್ತದೆಯೇ?

ಇಲ್ಲ ಅಂತೆನ್ನುವುದು ಸದ್ಯಕ್ಕೆ ಯಾವುದೇ ಸೂಕ್ಷ್ಮಸಂವೇದಿಗೆ ಅನ್ನಿಸಬಹುದಾದ ಸಂಗತಿ. ಓದು ಮತ್ತು ನೌಕರಿಯೆಂದು ಶಹರಗಳಲ್ಲಿ ನೆಲೆಗೊಂಡಿರುವ ಎಲ್ಲರಿಗೂ ಅವಶ್ಯವಾಗಿ ಅನ್ನಿಸಬೇಕಾದ ಸಂಗತಿಯೇ ಹೌದು.

2. ಇಪ್ಪತ್ತನೇ ಶತಮಾನವು ಒತ್ತುಕೊಟ್ಟ ಓದು ಮತ್ತು ಅಕ್ಷರವಿಲ್ಲದ ಬದುಕು ನಗಣ್ಯವಂತೆನ್ನುವ ನಂಬುಗೆಯು- ಎಲ್ಲರನ್ನೂ ನೌಕರಿಯೆಂಬ ಪರ್ಯಾಯದತ್ತ ಗುಳೆ ಹೊರಡಿಸಿದ್ದು ನಿಜವಷ್ಟೆ? ಮೂವತ್ತು ವರ್ಷಗಳ ಹಿಂದೆ ಜಗತ್ತೇ ಒಂದು ಹಳ್ಳಿಯೆಂದು ನಂಬಿಸಿದ ಇನ್ನೊಂದು ಹುನ್ನಾರವೂ, ಎಲ್ಲರನ್ನೂ ಶಹರಗಳತ್ತ ತಂದು ಸುರಿದು- ಹೊಸಬಗೆಯ ‘ಶಾಹರಿಕತೆ’ಯನ್ನು ಸೃಜಿಸಿತಷ್ಟೆ? ಮತ್ತು ಈ ಶಾಹರಿಕತೆಯಾದರೂ ಎಂಥದ್ದು?

ಜಗತ್ತಿನಲ್ಲಿನ ಎಲ್ಲೆಡೆಯ ನಗರತನವೇ ಎಲ್ಲೆಲ್ಲೂ ಇರಬೇಕೆನ್ನುವುದನ್ನು ನಂಬಿ, ನಂಬಿಸಿ ಉಂಟಾದದ್ದು. ಜಗತ್ತನ್ನೇ ಕೈಯಲ್ಲುರುಟುವ ಗೋಳವೆಂಬಂತೆ ಕುಗ್ಗಿಸಿ ಮೈಸೂರು- ಬೆಂಗಳೂರಿನ ಅಂತರದಲ್ಲಿ ಎಲ್ಲವನ್ನೂ ಎಲ್ಲೆಡೆಗೆ ತಂದಿಟ್ಟಂಥದ್ದು. ಪರಸ್ಪರ ಸಂವಹನೆ ಸಂಪರ್ಕಗಳಿದ್ದರಷ್ಟೇ ಉದ್ಧಾರವೆಂದು ಎಲ್ಲರನ್ನೂ ಎಲ್ಲರೊಡನೆ ಬೆರೆಸಿ, ಕಲೆಸಿ, ಕಲಕಿ, ಕದಡಿ... ಇಟ್ಟಂಥದ್ದು. ದಿನದಿನಕ್ಕೂ ಹೊಸ ಸುಭಿಕ್ಷೆಯನ್ನು ಎದುರಿಗಿಟ್ಟು ಎಲ್ಲರಿಗೂ ಎಲ್ಲವೂ ಆಗಿಸುವುದನ್ನು ಕನಸಿದಂಥದ್ದು ಮತ್ತು ಆಗಿಸಿದಂಥದ್ದು. ಒಬ್ಬೊಬ್ಬರ ಕೈಗೂ ಸ್ಮಾರ್ಟ್‍ಫೋನಿತ್ತು, ಅದರೊಳಗಿನ ಸ್ಮಾರ್ಟುತನವನ್ನೇ ಎಲ್ಲರ ಮೇಲೂ ಆವಾಹಿಸಿಬಿಟ್ಟಂಥದ್ದು.

ಈ ಸ್ಮಾರ್ಟುತನದ ಮುಂದುವರಿಕೆಯೇ ಜಗತ್ತಿನ ಬೇರೆ ಬೇರೆ ದೇಶಗಳ ಸರ್ಕಾರಗಳು ಈಗಾಗಲೇ ಯೋಚಿಸಹತ್ತಿರುವ ‘ಸ್ಮಾರ್ಟ್-ಸಿಟಿ’ ಅಂತೆಂಬ ಪರಿಕಲ್ಪನೆ. ಅಂದರೆ ಆಡಳಿತದಿಂದ ಮೊದಲುಗೊಂಡು ಪೊಲೀಸುಗಿರಿಯನ್ನೂ ಒಳಗೊಂಡು- ಮನುಷ್ಯರ ಸೋಗುಸೋಂಕಿಲ್ಲದೆ ತಂತಾನೇ ಜರುಗಬಲ್ಲ ಒಂದು ಜಾಣನಗರೀ-ವ್ಯವಸ್ಥೆ. ಯಾರೂ ಯಾವುದಕ್ಕೂ ಹೊರಹೋಗುವಂತಿಲ್ಲ. ಹೋಗುವ ಅವಶ್ಯಕತೆಯೂ ಇಲ್ಲ. ಮಕ್ಕಳ ಓದೂ ಮನೆಯಲ್ಲೇ. ಆಟೋಟ-ಪಾಠವೂ ಮನೆಯಲ್ಲೇ. ದೊಡ್ಡವರ ಕೆಲಸವೂ ಮನೆಯಲ್ಲೇ. ಇರವೂ ಮನೆಯಲ್ಲೇ. ವಿರಾಮವೆನ್ನುವ ನಿದ್ರೆಯೂ, ಡೆಡ್‍ಲೈನ್ ಅಂತೆಂಬ ನಿದ್ದೆಗೇಡೂ- ಎರಡೂ ಮನೆಯಲ್ಲೇ. ಇನ್ನು, ಸಕಲ ಸಂವಹನೆಯೂ ಫೋನ್‌ ಮೂಲಕವೇ ಫೋನ್-ಕ್ಲಿಕ್ಕಿನಲ್ಲೇ ಆಗುವುದಾದರೆ ಹೊರಹೋಗುವ ಅವಶ್ಯಕತೆಯಾದರೂ ಏನು? ಯಾತಕ್ಕೆ? ಇದು ವರಸೆ.

ಹೀಗಾಗುವಾಗ ದೊಡ್ಡ ದೊಡ್ಡ ಕಟ್ಟಡಗಳ ಅವಶ್ಯಕತೆಯಿಲ್ಲ. ಆಫೀಸು-ಮನೆಯೆನ್ನುವ ಎರಡು ವಿಭಿನ್ನ ಠಾವು-ಠರಾವುಗಳಿಲ್ಲ. ಬ್ಯಾಂಕು-ಗೀಂಕುಗಳ ಗೋಜಿಲ್ಲ. ಶಾಪಿಂಗ್ ಎಂಬುದಕ್ಕೆ ಅರ್ಥವಿಲ್ಲ. ಎಲ್ಲವೂ ಆನ್‌ಲೈನ್. ಕ್ಲಿಕ್ಕು ಕ್ಲಿಕ್ಕಿಗೆ ಸಕಲ ಸುವಿಧೆಯೂ ಲಭ್ಯ. ಫೋನೊಳಗಿನ ಇಶಾರೆಯೇ ಸುಸಂಪನ್ನ ಸೌಭಾಗ್ಯ. ಹೊರಹೋಗುವುದೇ ಬೇಡವೆಂದ ಮೇಲೆ ಬೀದಿಗಿಳಿಯುವ ಅಗತ್ಯವಿಲ್ಲ. ಕಾರು-ಮೋಟಾರು ಬೇಕಾಗುವುದಿಲ್ಲ. ರಸ್ತೆಗಳೆಂಬ ಕಲ್ಪನೆಯೂ ಪುರಾತತ್ತ್ವದ ಸರಕು. ಆಹಾ ಮೋಡಿಯೇ?!

ಈಗ ಯೋಚಿಸಿ. ಇಪ್ಪತ್ತೊಂದು ದಿವಸಗಳ ಕಾಲ, ಯಾರೂ ಹೊರಹೋಗದೆಯೇ ನಮ್ಮ ನಮ್ಮ ಮನೆಗಳೊಳಗೇ- ನಮ್ಮಗಳ ಬದುಕಿರಲಿ, ಇಡೀ ದೇಶವೇ ಸುಭಗ- ಸುಸೂತ್ರವಾಗಿ ಜರುಗುತ್ತದೆಂದರೆ, ಇದಕ್ಕಿಂತ ಅನೂಹ್ಯವಾದ ಮಹಿಮೆಯುಂಟೇ? ಪವಾಡವುಂಟೇ?

ಇಂಥದೊಂದು ‘ಲಾಕ್‍ಡೌನ್’ ಅಥವಾ ಬಂದೋಬಸ್ತಿಗೆ, ನಮ್ಮನ್ನು ನಾವು, ಅನಿವಾರ್ಯವಾಗಿ ಒಡ್ಡಿಕೊಂಡ ಮೇಲೆ ಮತ್ತು ಹೀಗೊಂದು ಸಂದರ್ಭಕ್ಕೆ ನಾವುಗಳು ಒಗ್ಗಿಹೋದ ಮೇಲೆ- ಇದರ ಮುಂದಿನ ಸಾಧ್ಯತೆಯನ್ನೂ ಊಹಿಸಿಕೊಳ್ಳಿ.
‘ಸರ್ವೇಲೆನ್ಸ್’ ಅಂತೊಂದನ್ನು ನಮ್ಮ ಸುತ್ತಲಿನ ‘ನಾಗರಿಕ’ ಜಗತ್ತು ಈಗಾಗಲೇ ತನ್ನ ಮೇಲೆ ಆವಾಹಿಸಿಕೊಂಡಿದೆ. ಇದನ್ನು ಅಗ್ಗವಾಗಿ ‘ಕಣ್ಗಾವಲು’ ಎಂದು ಕನ್ನಡಿಸಿಕೊಂಡಿದ್ದೇವಾದರೂ, ಇದರ ಮೂಲಾರ್ಥ ‘ಕಾವಲು’ ಅಂತೇನಲ್ಲ. ಸರ್ವೇಲೆನ್ಸ್ ಅಂತಂದರೆ ‘ಸಂಗತಿಯೊಂದನ್ನು ಗಹನವಾಗಿ ಗಮನಿಸುವುದು’ ಎಂಬ ಸರಳಾರ್ಥ. ಬೇಹುಗಾರ-ಜನರು ತಾವಿದ್ದೇವೆಂದು ಜಗತ್ತಿಗೆ ತೋರಗೊಡದೆಯೇ ಅದನ್ನು ಗಮನಿಸುತ್ತಾರಲ್ಲ, ಆ ಬಗೆಯದು. ಸ್ಥೂಲವಾಗಿ ಸಿ.ಸಿ.-ಟಿ.ವಿ. ಕ್ಯಾಮೆರಾಗಳು ಈ ಕೆಲಸವನ್ನು ಮಾಡುತ್ತಿವೆಯೆಂಬುದು ಒಂದು ವ್ಯಕ್ತಸಂಗತಿ ಮಾತ್ರ. ಅಂದರೆ ಇದು ಪ್ರತ್ಯಕ್ಷವಾದ ಬೇಹುಗಾರಿಕೆ.

ಈ ಬಗೆಯ ‘ಗಮನಗಾರಿಕೆ’ಗೆ ನಾವು ಈಗಾಗಲೇ ಪರೋಕ್ಷವಾಗಿ ಈಡಾಗಿದ್ದೇವೆಂದೂ ನಮಗೆ ಗೊತ್ತು. ಯಾಕೆಂದರೆ, ನಮಗೇ ಗೊತ್ತಿರದೆ ನಮ್ಮ ಚಲನವಲನವಲ್ಲದಿದ್ದರೂ- ಇಂಟರ್‌ನೆಟ್‍ನಲ್ಲಿ ನಾವು ಹೆಚ್ಚು ಹೆಚ್ಚು ತೊಡಗಿಕೊಳ್ಳುವ ವಿಷಯಗಳನ್ನಾಧರಿಸಿ, ನಮ್ಮ ಕುಲಗೋತ್ರಾದಿ ಜಾತಕವನ್ನೆಲ್ಲ ಕಂಡುಕೊಂಡಿರುವ ಮತ್ತು ಶೇಖರಿಸಿಕೊಂಡಿರುವ ಕಂಪನಿ-ಜನವಿದ್ದಾರೆಂದು ನಮಗೆ ಗೊತ್ತಿದೆ. ನಾನು ಪದೇ ಪದೇ ಸಿನಿಮಾ ಬುಕಿಂಗ್ ಮಾಡುವ ಭರಾಟೆಯನ್ನು ಗಮನಿಸಿ- ನಾನೊಬ್ಬ ಸಿನಿಮಾಹೋಕನೆಂದೂ, ನನ್ನ ಸ್ವಿಗೀ-ಜ಼ೊಮ್ಯಾಟೋ ವಹಿವಾಟು ನೋಡಿ- ನಾನೊಬ್ಬ ತಿಂಡಿಪೋತನೆಂದೂ, ನನ್ನ ಅಮೆಜ಼ಾನ್ ಆರ್ಡರ್‌ಗಳನ್ನು ಆಧರಿಸಿ- ನಾನೊಬ್ಬ ಕೊಳ್ಳುಬಾಕನೆಂದೂ... -ಹೀಗೆ ನಾನು ಸಾಕ್ಷಾತ್ ಕಂಡುಗೊತ್ತಿರದ ಮಂದಿಗೆ ನನ್ನ ಬಗ್ಗೆ ಸಕಲಸಮಸ್ತವೂ ಗೊತ್ತಿರುವ ಸಾಧ್ಯತೆಯುಂಟಷ್ಟೆ? ನಾನು ಓದುವ ವಿಷಯವನ್ನಾಧರಿಸಿ ನನ್ನ ರಾಜಕೀಯ ನಿಲುವುಗಳನ್ನೂ, ನಾನೊಬ್ಬ ಲೆಫ್ಟೋ ರೈಟೋ ಎಂದೆಲ್ಲ ಗಣಿಕೆಗಳನ್ನೂ ಮಾಡತಕ್ಕ ವ್ಯವಸ್ಥೆಯೂ ಇರಬಹುದಷ್ಟೆ? ಒಳಮನೆಯಲ್ಲಿ ನಾನು ಕೈಕೊಳ್ಳುವ ರೀತಿರಿವಾಜುಗಳನ್ನು ವಿಶ್ಲೇಷಿಸಿ ನಾನಾವ ಜಾತಿಯೆಂಬುದನ್ನೂ ನಿರ್ಧರಿಸಬಹುದಷ್ಟೆ? ಅಂದರೆ ನಮ್ಮ ನಮ್ಮ ಕೈಗಳಲ್ಲಿರುವ ಸ್ಮಾರ್ಟ್‍ಫೋನು ಎಷ್ಟು ಜಾಣವೆಂದರೆ, ನಮಗೇ ಗೊತ್ತಿರದೆ ನಮ್ಮ ಕುರಿತಾದ ಅಂಕಿಅಂಶವನ್ನೆಲ್ಲ ಕಲೆಹಾಕಿರುತ್ತದೆ. ನಮ್ಮ ವ್ಯಕ್ತಿತ್ವವೇನೆಂದು ನಮ್ಮ ನಡೆನುಡಿಗೂ ಪ್ರತಿಯಾಗಿ ಟಂಕಿಸಿಟ್ಟಿರುತ್ತದೆ.

3. ಇವೆಲ್ಲ ಗೊತ್ತಿರುವ ಸಂಗತಿಯೇ ಆದ್ದರಿಂದ ಹೆಚ್ಚು ಬೆಳೆಸುವುದು ಬೇಡ. ಆದರೆ ಇದೇ ‘ಗಮನಗಾರಿಕೆ’ಯ ಹೊಸತೊಂದು ಬಗೆಯನ್ನು ಕುರಿತು ಜಗತ್ತಿನ ಕೆಲ-ಸರ್ಕಾರಗಳು ಈಗಾಗಲೇ ಚಿಂತಿಸಿವೆ. ಇನ್ನೇನು ರೂಢಿಗೂ ತರಲಿಕ್ಕಿವೆ. ‘ಟ್ಯಾಕ್ಟೈಲ್- ಸೆನ್ಸಿಟಿವ್- ಟೆಕ್ನಾಲೊಜಿ’ ಅಂದರೆ ‘ತ್ವಚಾಸಂವೇದೀ-ತಂತ್ರಜ್ಞಾನ’ ಎಂಬುದರ ಬಗ್ಗೆ ಈ ಕೆಲವರು ಆಲೋಚಿಸುತ್ತಿದ್ದಾರೆ. ಹಾಗೂ, ಇದರ ಮುಖೇನ ‘ಅಂಡರ್ ದಿ ಸ್ಕಿನ್ ಸರ್ವೇಲೆನ್ಸ್’ ಅಂದರೆ ‘ಚರ್ಮಯುಕ್ತ- ಗಮನಗಾರಿಕೆ’ ಅಂತೊಂದು ಹೊಸತನ್ನು ತರಲೆಣಿಸಿದ್ದಾರೆ.

ಹೀಗಂದರೇನೆಂದು ಸರಳವಾಗಿ ಹೇಳಬಯಸುತ್ತೇನೆ: ನಾವುಗಳು ನಮ್ಮ ನಮ್ಮ ಮೊಬೈಲು ತೆರೆಯ ಮೇಲೆ ಆಗಿಂದಾಗ ಬೆರಳಾಡಿಸುತ್ತೇವಷ್ಟೆ? ಅದರ ಮೈಯಲ್ಲಿ ಮೂಡುವ ಚಿತ್ರಗಳನ್ನೂ ಅಕ್ಷರಗಳನ್ನೂ ಬೆರಳಿನಿಂದ ಮೀಂಟಿ ಮೀಂಟಿ ಹಿಗ್ಗಿಸಿ ಬಗ್ಗಿಸಿ ಕುಗ್ಗಿಸುತ್ತೇವಷ್ಟೆ? ಈಗ ಹೀಗೊಂದು ಸಾಧ್ಯತೆಯನ್ನು ಊಹಿಸಿಕೊಳ್ಳಿ. ನಮ್ಮ ಈ ಪರಿಯ ಮೀಂಟುಗಳು ಜರುಗುವಲ್ಲಿನ ಸಣ್ಣ ಗಡುವಿನಲ್ಲಿಯೇ- ನಮ್ಮ ಸ್ಪರ್ಶಬಿಂಬಗಳನ್ನು ಬರೇ ಬೆರಳಚ್ಚಲ್ಲದೆ, ಅವೇ ಬೆರಳುಗಳೊಳಗಿನ- ಶೀತೋಷ್ಣವನ್ನೂ, ರಕ್ತದೊತ್ತಡವನ್ನೂ, ನಾಡಿಮಿಡಿತವನ್ನೂ, ಒಳದುಡಿಯನ್ನೂ... -ಹೀಗೆಲ್ಲವನ್ನೂ ಗ್ರಹಿಸಿಬಿಡುವ ತಂತ್ರಾಂಶವೊಂದು ಫೋನೊಳಗೆ ಇದ್ದ ಪಕ್ಷಕ್ಕೆ ಏನಾಗಬಹುದು? ಹಾಗೇ ನಮ್ಮ ಕಣ್ಣೊಳಗಿನ ರೆಟಿನಾವನ್ನೂ, ತೆರೆಯೊಳಗೆ ತೋರುವ ಮೋರೆಯನ್ನೂ ಈ ಸಾಫ್ಟ್‌ವೇರು ಹಿಡಿದುಕೊಂಡ ಮೇರೆಗೆ ಏನೆಲ್ಲ ಆಗಬಹುದು? ಅಬ್ಬಾ... ಅಂತನ್ನಿಸಿತಷ್ಟೆ?

ಕೊರೊನಾ-ಕೋವಿಡ್‍ಗಳ ಸದ್ಯದ ದುರಿತ ಸಂದರ್ಭದಲ್ಲಿ ‘ವಿದೇಶಿ’ ಸರ್ಕಾರವೊಂದು ಹೀಗೊಂದು ಯೋಚಿಸಿದೆಯಂತೆ. ಹೀಗೆ ಕಲೆಹಾಕಿದ ಮಾಹಿತಿಯನ್ನು ಆಧರಿಸಿ- ಅದು ತನ್ನ ದೇಶದೊಳಗಿನ ಜನಗಣದ ಸ್ವಾಸ್ಥ್ಯವನ್ನೂ, ಅದರ ಗುಣಮಟ್ಟವನ್ನೂ ನಿರ್ಧರಿಸಲಿದೆಯಂತೆ. ಅಲ್ಲದೆ, ಈ ಮುಂದೆ ಈ ಪರಿಯ ವೈರಸ್ಸ್-ವಿಪರೀತವುಂಟಾದ ಹೊತ್ತಿನಲ್ಲಿ, ಎಂಥದೇ ಮಹಾಮಾರಿಯನ್ನೂ, ಇವೊತ್ತಿನ ಹಾಗೆ ‘ಪ್ಯಾಂಡೆಮಿಕ್’ ಆಗಿ ಹಬ್ಬಗೊಡದೆ ತಡೆಯಬಹುದೆನ್ನುವ ಇರಾದೆ- ಆ ಸರ್ಕಾರಕ್ಕಿದೆಯಂತೆ. ಐಡಿಯಾವೇನೋ ಸೈಯೆ. ಆದರೆ ಇದರ ಇನ್ನೊಂದು ಮಗ್ಗುಲನ್ನು ಯೋಚಿಸುವಾಗ ದಿಗಿಲಾಗುತ್ತದೆ.

ಸ್ವಾಸ್ಥ್ಯವನ್ನು ಕುರಿತ ಇವಿವೇ ಮಾಹಿತಿಗಳು- ಮನುಷ್ಯನೊಬ್ಬನ ಪ್ರೀತ್ಯುತ್ಸಾಹವನ್ನೂ, ಕಾಮೋದ್ರೇಕವನ್ನೂ, ಖಿನ್ನತೆಯನ್ನೂ, ಆನಂದಾತಿರೇಕವನ್ನೂ... ಪರಿಪರಿಯ ಭಾವಾತಿಶಯವನ್ನೂ... ಸೂಚಿಸಬಲ್ಲವಾಗಿ, ನಮ್ಮಗಳ ಕೈಫೋನು ಇವನ್ನೆಲ್ಲ ಸೆರೆಹಿಡಿದ ಪಕ್ಷಕ್ಕೆ- ನಮ್ಮ ಖಾಸಗೀತನದ ಮೇಲೆ ಯಾವ ಬಗೆಯ ಉಲ್ಲಂಘನೆಯಾದೀತೆಂದು ಊಹಿಸಿಕೊಳ್ಳಿ. ನನ್ನನ್ನು ಹೊರಗಿನಿಂದ ಆಳುವ ಸರ್ಕಾರಕ್ಕೆ ನನ್ನ ಸಿಟ್ಟುಸೆಡಗು, ಪ್ರೀತಿಕಾಮ, ಗರ್ವದರ್ಪಗಳೆಲ್ಲ ಗೊತ್ತಾಗಿ ಹೋದಲ್ಲಿ- ನಾನೆಂಬ ನಾನು ಏನಾಗಿಹೋದೇನು? ಇಂತಹ ಆಳಿಕೆ ನನಗೆ ಬೇಕೆ? ಅಥವಾ ಅದು ಒಪ್ಪವೇ?

ಇವೇನೇ ಇರಲಿ, ಈ ದೇಶದಾದ್ಯಂತದ ‘ಲಾಕ್‍ಡೌನ್’ ಸನ್ನಿವೇಶದಲ್ಲಿ- ಒಬ್ಬ ಬರಹಗಾರನಾಗಿ ಮತ್ತು ಬರಹದಷ್ಟೇ ವೃತ್ತಿಯನ್ನೂ ನೆಚ್ಚಿಕೊಂಡಿರುವ ನನ್ನ ಮಟ್ಟಿಗಿನ ಮುಖ್ಯ ಸವಾಲು ಇಂತಿವೆ: ಈ ಕೊರೊನಾಮಾರಿಯ ಸಂದರ್ಭವು ಮನುಷ್ಯ- ಮನುಷ್ಯರ ನಡುವಿನ ಸಂಬಂಧವನ್ನು ಮಾರು ದೂರಕ್ಕೆ ತಂದಿರಿಸಿದ ಪಕ್ಷಕ್ಕೆ, ನಮ್ಮ ನಡುವಿನ ಸಾಂಘಿಕತೆಯೇನಾದೀತು? ಸಮಾಜವೆಂಬುದರ ಹೊಸ ಅರ್ಥವೇನು? ಸೋಪೆಂಬ ಸೋಪೊಂದು ನನ್ನ ಅಂಗೈ-ಮುಂಗೈಗಳ ಶುದ್ಧತೆಯನ್ನು ನಿಶ್ಚಯಿಸುವುದಾದರೆ ನಾನೆಂಬ ನನ್ನ ಮೈಯ ಅಸ್ತಿತ್ವವೇನು? ಯಾರೂ ಯಾರನ್ನೂ ಮುಟ್ಟಬಾರದೆಂಬುದಾದರೆ ನನ್ನ ಮುಂದಿನ ಜನ-ಜನಾಂಗಗಳ ಗತಿಯೇನು? ಸ್ಥಿತಿಯೇನು?

ಈ ಪ್ರಶ್ನೆಗಳ ವಿಸ್ತರಣೆಯಾಗಿ ಸಾಹಿತ್ಯವೆಂಬುದು ಈ ಪರಿಯ ಹೊಸ ಸಾಮಾಜಿಕತೆಯನ್ನು ಹೇಗೆ ಅರ್ಥೈಸಬಲ್ಲುದು? ಶಾಹರಿಕತೆಯೇ ತನ್ನ ಮೂಲೋದ್ದೇಶವಾಗಿಕೊಂಡಿರುವ ಆರ್ಕಿಟೆಕ್ಚರು ಈ ಸಂದರ್ಭವನ್ನು ಹೇಗೆ ಒಳಗೊಂಡೀತು? ಸಾಂಪ್ರದಾಯಿಕ ದೇವಸ್ಥಾನ, ಮಸೀದಿ, ಚರ್ಚುಗಳಿರಲಿ- ಹೊಸ ಕಾಲದ ಧರ್ಮಾತೀತ ಎಡೆಗಳಾದ ಮಾಲು, ಪಾರ್ಕು, ಮಲ್ಟಿಪ್ಲೆಕ್ಸ್, ಮೆಟ್ರೊ... ಟ್ರಾನ್ಸಿಟ್ ಹಬ್... ಇವುಗಳ ಸಾರ್ವಜನಿಕತೆಯನ್ನು ಅಲ್ಲಗಳೆಯುವುದೆಂತು? ಈ ಮುಂದೆ ‘ಪಬ್ಲಿಕ್-ನೆಸ್ಸ್’ ಅಂತಂದರೆ ಎರಡು ಮನುಷ್ಯರ ನಡುವೆ ಮಾರಂತರವುಳ್ಳ ಎಡೆಯೆಂತಲೇ? ಇದನ್ನು ಮಾಡಲಿಕ್ಕೆ ಎಷ್ಟು ಸ್ಥಳಾವಕಾಶ ಬೇಕಾಗಬಹುದು? ಆಗ ನಮ್ಮನ್ನು ಸಾಗಿಸುವ ಬಸ್ಸು ರೈಲು, ವಿಮಾನಗಳ ಗಾತ್ರವೇನಾಗಬಹುದು? ಇವುಗಳಿಗೆ ಅರ್ಥವಿದೆಯೇ? ಇವುಗಳ ಹೊಸ ಸ್ವರೂಪವೇನು? ನಿರೂಪವೇನು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು