ಶುಕ್ರವಾರ, ಜುಲೈ 1, 2022
24 °C

ಹಸಿರಿರಲಿ ಮನೆಯಲ್ಲಿ.. ಮುದವಿರಲಿ ಮನದಲ್ಲಿ

ಎಸ್ಸೆಚ್‌ Updated:

ಅಕ್ಷರ ಗಾತ್ರ : | |

ದೇಹದ ಆರೋಗ್ಯಕ್ಕೆ ಗಿಡಗಳ ಹಸಿರು ಸೊಪ್ಪು ಸೇವನೆ ಎಷ್ಟು ಮುಖ್ಯ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಆದರೆ ಈ ಹಸಿರಿನಿಂದ ನಳನಳಿಸುವ ಗಿಡಗಳು ಮಾನಸಿಕ ಆರೋಗ್ಯವನ್ನೂ ಕಾಪಾಡುತ್ತವೆ ಗೊತ್ತೇ? ಮನೆ ಮತ್ತು ಕಚೇರಿಯ ಒಳಗಡೆ ಕೆಲವು ಬಗೆಯ ಗಿಡಗಳ ಚೆಟ್ಟಿಯನ್ನು ಇಡುವುದು ಒಳಾಂಗಣ ಅಲಂಕಾರದ ದೃಷ್ಟಿಯಿಂದ ಇದ್ದರೂ ಮನಸ್ಸಿಗೆ ಆಹ್ಲಾದವನ್ನು ಕೂಡ ನೀಡುತ್ತವೆ ಎಂಬುದು ಅಷ್ಟೇ ನಿಜ.

ಜೊತೆಗೆ ಗಾಳಿಯಲ್ಲಿರುವ ಕಾರ್ಬನ್‌ ಡೈ ಆಕ್ಸೈಡ್‌ ಅನ್ನು ಹೀರಿಕೊಂಡು ಆಮ್ಲಜನಕ ಹೊರಸೂಸುವುದರಿಂದ ಇನ್ನಷ್ಟು ಅನುಕೂಲ. ಬಹುತೇಕ ಸಮಸ್ಯೆಗಳು ಮನೆ ಮತ್ತು ಕಚೇರಿಗಳಲ್ಲಿ ಎದುರಾಗುವ ಒತ್ತಡ ಮತ್ತು ಆತಂಕದಂತಹ ತೊಂದರೆಗಳಿಂದ ಶುರುವಾಗುತ್ತವೆ. ಇವು ದೈಹಿಕ ಅನಾರೋಗ್ಯಕ್ಕೆ ನಾಂದಿ ಹಾಡುತ್ತವೆ. ಕೆಲಸದ ಒತ್ತಡದಲ್ಲಿ ಇದರ ಬಗ್ಗೆ ಲಕ್ಷ್ಯ ಕೊಡುವವರೂ ಕಡಿಮೆ. ಹೀಗಾಗಿ ಈ ಎರಡೂ ಜಾಗಗಳಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಲು ಒಳಾಂಗಣದಲ್ಲಿ ಇಡುವಂತಹ ಕೆಲವು ಗಿಡಗಳ ಚೆಟ್ಟಿಗಳನ್ನು ಇಡಬಹುದು.

ತುಳಸಿ ಗಿಡ: ಭಾರತೀಯರಿಗೆ ಇದು ತೀರಾ ಪರಿಚಿತ. ಧಾರ್ಮಿಕ ದೃಷ್ಟಿಯಿಂದ ಇಟ್ಟುಕೊಳ್ಳುವುದು ಒಂದು ಅಂಶವಾದರೆ, ಒತ್ತಡ ಹಾಗೂ ವ್ಯಾಕುಲತೆ ಕಡಿಮೆ ಮಾಡುವಂತಹ ಇನ್ನೊಂದು ಮಹತ್ವದ ಅಂಶ ಇದರಲ್ಲಿದೆ. ದೇಹವು ಒತ್ತಡವನ್ನು ತಡೆದುಕೊಳ್ಳುವಂತೆ ಮಾಡುವ ಗುಣ ಇದರಲ್ಲಿದೆ.

ಮಲ್ಲಿಗೆ: ಅಂದ, ಸುಗಂಧ ಬೀರುವ ಹೂವುಗಳನ್ನು ಅರಳಿಸುವುದು ಮಾತ್ರವಲ್ಲ, ಒತ್ತಡದ ಮಟ್ಟವನ್ನು ಕಡಿಮೆ ಮಾಡುವ ಮಲ್ಲಿಗೆ ವಾತಾವರಣದಲ್ಲಿ ತಾಜಾತನ ತುಂಬುತ್ತದೆ. ಮನಸ್ಸಿಗೆ ಮುದ ತುಂಬಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಲೋಳೆಸರ: ಬಹುತೇಕರ ಮನೆಯಲ್ಲಿ ಇದಕ್ಕೆ ಅಗ್ರಸ್ಥಾನ. ಅದರಲ್ಲಿರುವ ಬಹುತೇಕ ಅಂಶಗಳು ಆರೋಗ್ಯಕ್ಕೆ ಸಹಕಾರಿ. ಹಾಗೆಯೇ ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಇಂತಹ ಪರಿಶುದ್ಧ ಗಾಳಿಯ ಉಸಿರಾಟ ಒತ್ತಡವನ್ನು ಕಡಿಮೆ ಮಾಡಬಲ್ಲದು.

ಸ್ನೇಕ್‌ ಪ್ಲ್ಯಾಂಟ್‌: ಈ ಗಿಡವನ್ನು ನಿಮ್ಮ ಮಲಗುವ ಕೊಠಡಿ, ಕಚೇರಿಯ ಡೆಸ್ಕ್ ಮೇಲಿಟ್ಟರೆ ವಾಯು ಮಾಲಿನ್ಯ ಕಡಿಮೆ ಮಾಡುತ್ತದೆ. ಅಪರೂಪದ ಈ ಗಿಡವನ್ನು ಸಣ್ಣ ಚೆಟ್ಟಿಯಲ್ಲಿಡಬಹುದು. ತಲೆನೋವು, ಕಣ್ಣುರಿಗೂ ಇದು ರಾಮಬಾಣ ಎನ್ನುತ್ತಾರೆ ತಜ್ಞರು.

ಲ್ಯಾವೆಂಡರ್‌: ಮನಸ್ಸಿಗೆ ಅತ್ಯಂತ ಸಮಾಧಾನ ನೀಡುವ ಈ ಗಿಡದ ಪರಿಮಳ ಆಹ್ಲಾದ ನೀಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ. ಹಾಗೆಯೇ ಇದರ ತಾಜಾ ಸುಗಂಧದಿಂದ ಚೆನ್ನಾಗಿ ನಿದ್ದೆ ಮಾಡಬಹುದು. ಇದರ ಸೌಂದರ್ಯವು ನಿಮ್ಮ ಮನೆಯ ಒಳಾಂಗಣದ ಅಲಂಕಾರವನ್ನು ಇಮ್ಮಡಿಗೊಳಿಸುತ್ತದೆ.

ಅರೇಕಾ ಪಾಮ್‌: ಇದು ಗಾಳಿಯನ್ನು ಶುದ್ಧೀಕರಿಸುವ ಗಿಡ. ಕಚೇರಿ ಹಾಗೂ ಮನೆ ಎರಡೂ ಕಡೆ ಇಡಬಹುದು. ಈ ಗಿಡಕ್ಕೆ ಹೆಚ್ಚು ಆರೈಕೆಯನ್ನೂ ಮಾಡಬೇಕಾಗಿಲ್ಲ. ಮನಸ್ಸಿಗೆ ಸಾಂತ್ವನ ನೀಡುವುದಲ್ಲದೇ ವ್ಯಾಕುಲತೆಯನ್ನು ಕಡಿಮೆ ಮಾಡುತ್ತದೆ.

ಪುದಿನ: ಇದರ ಪರಿಮಳ ಖಂಡಿತ ನಿಮ್ಮ ಬೇಸರವನ್ನು ಹೊಡೆದೋಡಿಸಬಲ್ಲದು. ಇಡೀ ದಿನ ಮನಸ್ಸು ಆಹ್ಲಾದಕರವಾಗಿರುವಂತೆ ನೋಡಿಕೊಳ್ಳುತ್ತದೆ. ಸಣ್ಣ ಪಾಟ್‌ನಲ್ಲಿ ನಿಮ್ಮ ಕಚೇರಿಯ ಮೇಜಿನ ಮೆಲೆ ಅಥವಾ ಮಲಗುವ ಕೊಠಡಿಯಲ್ಲಿ ಕಿಟಕಿಯ ಪಕ್ಕ ಇಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು