ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಾದ್ರೂ ಕೇಳ್ಬೋದು: ನಮಗೆ ನಾವೆಷ್ಟು ಅರ್ಥವಾಗಿದ್ದೇವೆ?

Last Updated 23 ಜುಲೈ 2021, 19:30 IST
ಅಕ್ಷರ ಗಾತ್ರ

l 20ರ ಯುವತಿ. ನನ್ನನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಇದ್ದಾನೆ. ಅವನನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ನಮ್ಮ ಪ್ರೀತಿಗೆ ಒಂದು ವರ್ಷವಾಗಿದೆ. ನನ್ನಿಂದ ಅವನಿಗೆ ಯಾವತ್ತೂ ಬೇಸರ ಆಗಬಾರದೆಂದು ಎಷ್ಟೇ ನಿರ್ಧರಿಸಿದರೂ ಸಾಧ್ಯವಾಗುತ್ತಿಲ್ಲ. ನನ್ನನ್ನು ಅವನು ಖುಷಿಯಾಗಿ ನೋಡಿಕೊಂಡರೂ ನನ್ನಿಂದ ಅವನ ನೆಮ್ಮದಿ ಹಾಳಾಗುತ್ತಿದೆ ಅನ್ನಿಸುತ್ತಿದೆ. ಪರಿಹಾರವೇನು?

ಪೂರ್ಣಿಮಾ, ಊರಿನ ಹೆಸರಿಲ್ಲ.

ಸ್ನೇಹಿತನನ್ನು ಖುಷಿಪಡಿಸಲಾಗದ ನೋವಿನಿಂದ ನಿಮ್ಮನ್ನೇ ಹಳಿದುಕೊಳ್ಳುತ್ತಿದ್ದೀರಲ್ಲವೇ? ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದು ಎನ್ನುವುದರ ಕುರಿತು ನಮ್ಮಲ್ಲಿ ಬಹಳ ತಪ್ಪುಕಲ್ಪನೆಗಳಿವೆ. ನಿಮಗೆ ನೀವೇ ಅರ್ಥವಾಗದಿದ್ದಾಗ ಬೇರೆಯವರನ್ನು ಹೇಗೆ ಅರ್ಥಮಾಡಿಕೊಳ್ಳುತ್ತೀರಿ? ನಿಮ್ಮಿಂದ ಅವನ ನೆಮ್ಮದಿ ಹಾಳಾಗುತ್ತಿದೆ ಎಂದು ಹೇಳಿದ್ದೀರಿ. ನಿಮ್ಮ ವರ್ತನೆಯ ಹಿಂದೆ ನಿಮ್ಮದೇ ಮಾನಸಿಕ ಹೋರಾಟಗಳಿಲ್ಲವೇ? ಇಂತಹ ಹೋರಾಟಗಳೇನು? ಅವುಗಳ ಮೂಲ ಎಲ್ಲಿದೆ? ಅವುಗಳನ್ನು ನಿಭಾಯಿಸಿಕೊಂಡು ಸ್ನೇಹ– ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆ? ಇವುಗಳನ್ನೆಲ್ಲಾ ನೀವು ಕಲಿಯದೆ ಇನ್ನೊಬ್ಬರನ್ನು ಖುಷಿಯಾಗಿ ಇಡುವುದೇ ಪ್ರೇಮ ಎಂದುಕೊಳ್ಳುವುದು ಸಿನಿಮಾ ಆಗಬಹುದೇ ಹೊರತು ನಿಜಜೀವನ ಆಗಲಾರದು. ಸದ್ಯಕ್ಕೆ ಸ್ನೇಹಿತನನ್ನು ಖುಷಿಯಾಗಿಡುವ ಜವಾಬ್ದಾರಿ ತೆಗೆದುಕೊಳ್ಳದೆ ನಿಮ್ಮ ನೋವು, ಬೇಸರ, ಸಿಟ್ಟು, ಹತಾಶೆ, ಅಸಹಾಯಕತೆಗಳ ಆಳಕ್ಕೆ ಹೋಗಲು ಪ್ರಯತ್ನಿಸಿ. ನಿಮ್ಮನ್ನು ಖುಷಿಯಾಗಿಡುವ ಜವಾಬ್ದಾರಿಯನ್ನು ಪ್ರಿಯಕರನಿಗೆ ಕೊಡಬೇಡಿ. ನಿಮ್ಮ ಸಂತೋಷ, ಸಮಾಧಾನಗಳನ್ನು ನೀವೇ ಕಂಡುಕೊಳ್ಳುತ್ತಾ ಹೋದಂತೆ ಸಂಬಂಧಗಳು ಸಹಜವಾಗುತ್ತವೆ. ಈ ಎಲ್ಲಾ ವಿಚಾರಗಳು ನಿಮ್ಮ ಸ್ನೇಹಿತನಿಗೂ ಅನ್ವಯಿಸುತ್ತವೆ.

lಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಮುಖದಲ್ಲಿ ಬಿಳಿಕೂದಲು ಹೆಚ್ಚಾಗಿದೆ. ಇದರಿಂದ ತುಂಬಾ ಆತಂಕವಾಗಿದೆ. ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಬಿಳಿ ಕೂದಲು ಹೆಚ್ಚಾಗಲು ಗಾಳಿ, ನೀರು, ಆಹಾರಗಳಲ್ಲಿರುವ ರಾಸಾಯನಿಕಗಳು, ಆನುವಂಶಿಕತೆ ಹೀಗೆ ಸಾಕಷ್ಟು ಕಾರಣಗಳಿರಬಹುದು. ಇವುಗಳಲ್ಲಿ ಹೆಚ್ಚಿನ ಕಾರಣಗಳು ನಿಮ್ಮ ಹಿಡಿತವನ್ನು ಮೀರಿದ್ದಾಗಿದೆ. ಆದರೆ ನಿಮ್ಮ ಹಿಡಿತದಲ್ಲಿರುವ ಮಾನಸಿಕ ಒತ್ತಡ ಮತ್ತು ಆತಂಕಗಳೂ ಪ್ರಮುಖ ಕಾರಣವಾಗಿರುವ ಸಾಧ್ಯತೆಯಿದೆ. ನಿಮ್ಮ ಇಡೀ ವ್ಯಕ್ತಿತ್ವ ಮತ್ತು ಭವಿಷ್ಯ ಮುಖದ ಬಿಳಿ ಕೂದಲಿನಲ್ಲಿದೆ ಎಂದುಕೊಂಡಿದ್ದೀರಾ? ಎದುರಿಗಿರುವ ವ್ಯಕ್ತಿ ಒಂದೇ ಕ್ಷಣ ನಿಮ್ಮ ಬಿಳಿಕೂದಲನ್ನು ಗಮನಿಸಿ ಮರೆಯುತ್ತಾನೆ. ಆದರೆ ನೀವು ಮಾತ್ರ ಅದನ್ನು ನಿರಂತರವಾಗಿ ತಲೆಯಲ್ಲಿ ತುಂಬಿಕೊಂಡಿದ್ದೀರಿ. ಇದರ ಅರ್ಥವೇನು? ಕೂದಲು ಬಿಳಿಯಾದರೂ ನಿಮ್ಮೊಳಗೆ ಹುದುಗಿರುವ ಪ್ರತಿಭೆಗಳು, ಸ್ನೇಹಪರತೆ, ಪರಿಶ್ರಮ, ಒಳ್ಳೆಯತನ ಮುಂತಾದವು ನಾಶವಾಗಿಲ್ಲ ಅಲ್ಲವೇ? ಅವುಗಳನ್ನು ಉಳಿಸಿ ಬೆಳೆಸುವುದು ಹೇಗೆಂದು ಯೋಚಿಸಿದ್ದೀರಾ? ಬದಲಿಸಲಾಗದ ವಿಷಯಗಳನ್ನು ಪೂರ್ಣ ಮನಸ್ಸಿನಿಂದ ಸ್ವೀಕರಿಸುವುದು ಸಾಧ್ಯವಾದರೆ ಆತಂಕ ತಾನಾಗಿಯೇ ಹಿಂದೆ ಸರಿಯುತ್ತದೆ.

l ಪದವಿ ಓದುವಾಗಲೇ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜಾತಿ ಬೇರೆ. ಈಗ ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇವೆ. ನಮಗಿಬ್ಬರಿಗೂ ಮುಂದೆ ಮದುವೆಯಾಗುವ ಆಸೆಯಿದೆ. ಮನೆಯಲ್ಲಿ ಯಾವಾಗ ಹೇಳಬೇಕು ಎಂದು ತಿಳಿಯುತ್ತಿಲ್ಲ. ಪರಿಹಾರವೇನು?

ಹೆಸರು, ಊರು ಇಲ್ಲ.

ಮನೆಯಲ್ಲಿ ಹೇಳಲು ನಿಮಗಿರುವ ಹಿಂಜರಿಕೆಯನ್ನು ನೋಡಿದರೆ ಅವರು ಜಾತಿಯ ಕಾರಣಕ್ಕೆ ಒಪ್ಪಲಾರರು ಎಂದು ನಿಮಗೀಗಾಲೇ ತಿಳಿದಿದೆ ಎಂದರ್ಥವಲ್ಲವೇ? ಮನೆಯವರ ವಿರೋಧವನ್ನು ತಡೆದುಕೊಳ್ಳುವಷ್ಟು ನಿಮ್ಮ ಪ್ರೀತಿ ಗಟ್ಟಿಯಾಗಿದೆಯೇ? ಸ್ವಂತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಆರ್ಥಿಕ, ಸಾಮಾಜಿಕ ಭದ್ರತೆ ಸದ್ಯಕ್ಕೆ ನಿಮಗಿದೆಯೇ? ಮೊದಲು ನಿಮ್ಮ ಸಂಬಂಧ ಮತ್ತು ಜೀವನದ ಭದ್ರತೆಗಳ ಕಡೆ ಹೆಚ್ಚು ಗಮನಹರಿಸಿ. ಪೋಷಕರ ವಿರೋಧವನ್ನು ಎದುರಿಸುವುದು ಇಬ್ಬರ ಜವಾಬ್ದಾರಿಯೂ ಆಗಿರುತ್ತದೆಯಲ್ಲವೇ? ಇಬ್ಬರೂ ಸೇರಿ ಇಂತಹ ಸಂದರ್ಭಗಳನ್ನು ಹೇಗೆ ಎದುರಿಸುವುದು ಎಂದು ತೀರ್ಮಾನಿಸಿ. ಕೇವಲ ವೈಭವೀಕೃತ ಸಿನಿಮೀಯ ಕಲ್ಪನೆಗಳನ್ನಿಟ್ಟುಕೊಳ್ಳದೆ ವಾಸ್ತವದ ನೆಲೆಯಲ್ಲಿ ಯೋಚಿಸಿ ನಿರ್ಧರಿಸಿ.

27ರ ಅವಿವಾಹಿತ ಯುವಕ. ಮೊದಲು ಓದುವ ಹವ್ಯಾಸವಿತ್ತು. ನನ್ನ ಕೆಲಸವನ್ನು ಮಾಡುತ್ತಾ ಮಾನಸಿಕವಾಗಿ ಸಮಾಧಾನದಲ್ಲಿದ್ದೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡವಾಗುತ್ತಿದೆ. ಯಾವ ಕೆಲಸದಲ್ಲಿಯೂ ಆಸಕ್ತಿ ಮೂಡುತ್ತಿಲ್ಲ. ಮನಸ್ಸು ಚಂಚಲವಾಗುತ್ತಿದೆ. ಇದರಿಂದ ಹೊರಬರಲಾಗದೆ ಬೇಸರಗೊಂಡಿದ್ದೇನೆ. ಪರಿಹಾರವೇನು?

ಹೆಸರು ತಿಳಿಸಿಲ್ಲ, ಬೆಂಗಳೂರು.

ನಿಮ್ಮ ಪತ್ರದಲ್ಲಿ ಸಾಕಷ್ಟು ವಿಚಾರಗಳನ್ನು ಸ್ಪಷ್ಟವಾಗಿ ಬರೆಯದೆ ಸೂಚ್ಯವಾಗಿ ಹೇಳಿದ್ದೀರಿ. ಮನಸ್ಸು ಚಂಚಲವಾಗುವುದು ಎಂದರೆ ಕಾಮಾಸಕ್ತಿ ಮೂಡುತ್ತಿದೆ ಎಂದರ್ಥವೇ? ಅದನ್ನು ತಡೆಯಲು ನಿಮ್ಮ ಮೇಲೆ ಒತ್ತಡ ಹಾಕಿಕೊಳ್ಳುತ್ತಿರಬೇಕಲ್ಲವೇ? ಪ್ರಕೃತಿ ನಿಯಮದಂತೆ ದೇಹ, ಮನಸ್ಸುಗಳು ತಮ್ಮ ಅಗತ್ಯಗಳನ್ನು ಬೇಡುವುದು ಚಂಚಲತೆ ಹೇಗಾಗುತ್ತದೆ? ಮದುವೆಯಾಗಿಲ್ಲವೆಂದಾದರೆ ನಿಮಗೆ ಆಕರ್ಷಕ ಎನ್ನಿಸುವ ಸಂಗಾತಿಯನ್ನು ಹುಡುಕಬಾರದೇಕೆ? ಮದುವೆಯಾಗಿದ್ದರೆ ಪತ್ನಿಯನ್ನು ಪ್ರಿಯತಮೆಯನ್ನಾಗಿಯೂ ಮಾಡಿಕೊಳ್ಳುವುದು ಹೇಗೆಂದು ಯೋಚಿಸಿ. ಪ್ರಕೃತಿ ನಿಯಮಗಳನ್ನು ಮೀರುವ ಪ್ರಯತ್ನವೇ ಮಾನಸಿಕ ಒತ್ತಡ, ನಿರಾಸಕ್ತಿ, ಬೇಸರಗಳಿಗೆ ಕಾರಣವಾಗುತ್ತದೆ.

30 ವರ್ಷದ ಅವಿವಾಹಿತ ಬ್ಯಾಂಕ್‌ ಉದ್ಯೋಗಿ. ಸರ್ಕಾರಿ ಉದ್ಯೋಗಕ್ಕೆ ಸೇರುವ ಉದ್ದೇಶವಿದೆ. ಓದುವ ಆಸಕ್ತಿಯಿದೆ. ಆದರೆ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ಕಾಮದ ಆಸಕ್ತಿ ಕೆರಳುತ್ತದೆ. ಕಾಮದ ಆಸಕ್ತಿಯನ್ನು ಕಡಿಮೆ ಮಾಡಿಕೊಂಡು ಏಕಾಗ್ರತೆಯಿಂದ ಓದುವುದು ಹೇಗೆ?

ಹೆಸರು, ಊರು ತಿಳಿಸಿಲ್ಲ.

ಪ್ರಕೃತಿ ಮಾನವರನ್ನು ಸುಮಾರು 16-18 ವರ್ಷವಾಗುವ ಹೊತ್ತಿಗೆ ಸಂತಾನೋತ್ಪತ್ತಿಗೆ ಸಿದ್ಧಪಡಿಸಿ ಹಾರ್ಮೋನ್‌ಗಳ ಮೂಲಕ ಪರಸ್ಪರ ಆಕರ್ಷಣೆ ಮೂಡಿಸುತ್ತದೆ. ಇಂತಹ ಆಕರ್ಷಣೆಯನ್ನು ನೀವು ಈಗಾಗಲೇ 10-12 ವರ್ಷ ಸಮರ್ಥವಾಗಿ ನಿಭಾಯಿಸಿದ್ದೀರಿ. ಇನ್ನು ಕಾಮದ ಆಸಕ್ತಿಯನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯವಾದರೂ ಏನಿದೆ? ನಿಮ್ಮ ಕನಸು, ಕಲ್ಪನೆಗಳಿಗೆ ಸ್ಪಂದಿಸಬಲ್ಲ ಸಂಗಾತಿಯನ್ನೇಕೆ ಹುಡುಕಬಾರದು? ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಸಂಗಾತಿ ಹೇಗೆ ಅಡ್ಡಿಯಾಗುತ್ತಾಳೆ? ಬದಲಾಗಿ ಇಂತಹ ಸಂಗಾತಿಯಿಂದ ನಿಮ್ಮ ಸರ್ಕಾರಿ ನೌಕರಿ ಪಡೆಯುವ ಪ್ರಯತ್ನಗಳು ಬೇಗ ಯಶಸ್ವಿಯಾಗಲೂಬಹುದಲ್ಲವೇ?

21ರ ಯುವಕ. ಪ್ರತಿನಿತ್ಯ ಹಸ್ತಮೈಥುನದ ಚಟದಲ್ಲಿ ಮುಳುಗಿದ್ದೇನೆ. ಇದರಿಂದ ಮದುವೆಯಾದ ಮೇಲೆ ಮಕ್ಕಳಾಗುವುದಿಲ್ಲ ಎನ್ನಿಸುತ್ತದೆ. ಇದನ್ನು ಬಿಡಲು ಮಾರ್ಗದರ್ಶನ ಮಾಡಿ.

ಹೆಸರು, ಊರು ತಿಳಿಸಿಲ್ಲ.

ಯುವಕ. ಎಷ್ಟೇ ಪ್ರಯತ್ನಿಸಿದರೂ ಹಸ್ತಮೈಥುನವನ್ನು ನಿಲ್ಲಿಸಲು ಆಗುತ್ತಿಲ್ಲ. ಎರಡು ತಿಂಗಳು ಹಿಡಿತದಲ್ಲಿಟ್ಟರೆ ಸ್ವಪ್ನಸ್ಖಲನವಾಗುತ್ತದೆ. ಏನಾದರೂ ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಇಂತಹ ಪ್ರಶ್ನೆಗಳಿಗೆ ಹಿಂದೆ ಹಲವಾರು ಬಾರಿ ಉತ್ತರಿಸಲಾಗಿದೆ. ಹಸ್ತಮೈಥುನದಿಂದ ಯಾವುದೇ ಹಾನಿಯಾಗುವುದಿಲ್ಲ. ಇದು ಕೆಟ್ಟಚಟವಲ್ಲ, ಸಂಪೂರ್ಣ ಆರೋಗ್ಯಕರ ಅಭ್ಯಾಸ. ಮದುವೆಯಾಗುವವರೆಗೆ ನಿಮ್ಮ ಲೈಂಗಿಕ ಒತ್ತಡವನ್ನು ನಿಭಾಯಿಸಲು ಸಹಾಯಮಾಡುತ್ತದೆ. ದೇಹದಲ್ಲಿ ವೀರ್ಯಾಣುಗಳನ್ನು ಶೇಖರಿಸಿ ಇಡಲಾಗುವುದಿಲ್ಲ. ಎಲ್ಲ ಜೀವಕೋಶಗಳಂತೆ ಹಳೆಯದು ಸತ್ತು ಹೊಸದು ಸೃಷ್ಟಿಯಾಗುತ್ತಲೇ ಇರುತ್ತದೆ. ಹಾಗಾಗಿ ಮಕ್ಕಳಾಗುವುದಕ್ಕೂ ಹಸ್ತಮೈಥುನಕ್ಕೂ ಸಂಬಂಧವಿಲ್ಲ. ಸ್ವಪ್ನಸ್ಖಲನ ಕೂಡ ಹದಿವಯಸ್ಸಿನಲ್ಲಿ ಸಾಮಾನ್ಯ. ಈ ಎಲ್ಲಾ ವಿಷಯಗಳಲ್ಲಿ ನಕಲಿ ಔಷಧ ತಯಾರಕರು ನಿಮ್ಮನ್ನು ದಾರಿತಪ್ಪಿಸುತ್ತಾರೆ. ನೈರ್ಮಲ್ಯ ಮತ್ತು ಖಾಸಗೀತನವನ್ನು ಕಾಪಾಡಿಕೊಳ್ಳಿ. ನಿಮ್ಮ ವಿದ್ಯಾಭ್ಯಾಸ ಉದ್ಯೋಗಗಳ ಕಡೆ ಸಂಪೂರ್ಣ ಗಮನ ಹರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT