ಮಂಗಳವಾರ, ಏಪ್ರಿಲ್ 13, 2021
23 °C

ಒತ್ತಡದಿಂದ ಬಿಡುಗಡೆ: ಪರಿಹಾರಕ್ಕೆ ಇಲ್ಲಿದೆ ಸರಳ ದಾರಿಗಳು...

ಲಾವಣ್ಯಗೌರಿ ವೆಂಕಟೇಶ್‌ Updated:

ಅಕ್ಷರ ಗಾತ್ರ : | |

Prajavani

ಜೀವನ ಸುಖಮಯವಾದಷ್ಟೂ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡ ಅಥವಾ ಸ್ರ್ಟೆಸ್ ಎಂದು ಯಾವುದಕ್ಕೆ ಕರೆಯುತ್ತೇವೆಯೋ ಅದನ್ನು ಈ ಪೀಳಿಗೆಯಲ್ಲಿ ಅನುಭವಿಸದವರೇ ಇಲ್ಲ ಎನ್ನಬಹುದು.

ಒತ್ತಡದಿಂದ ಮುಕ್ತಿಯೇ ಇಲ್ಲವೇ? ಒತ್ತಡ ಹೇಗೆ ಬರುತ್ತದೆ?

ಒತ್ತಡರಹಿತ ಜೀವನ ಖಂಡಿತ ಸಾಧ್ಯವಿದೆ. ಎಷ್ಟೇ ಭಾರವಾದರೂ, ಹೇರಿಕೆಯಾದರೂ ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಹಾಗೂ ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ನಮ್ಮ ಒತ್ತಡದ ಪ್ರಮಾಣ ಅವಲಂಬಿತವಾಗಿರುತ್ತದೆ. ಹಿಂದಿನ ಕಾಲದಲ್ಲಿ ದೈಹಿಕ ಕೆಲಸವನ್ನು ಮಾಡಿ ಅದಕ್ಕೆ ತಕ್ಕಂತೆ ವಿಶ್ರಾಂತಿಯನ್ನು ಪಡೆಯುತ್ತಿದ್ದರು. ಸಲ್ಲದ ಚಿಂತೆ ಮಾಡಲು ಅವರು ಅವಕಾಶವನ್ನೇ ಕೊಡುತ್ತಿರಲಿಲ್ಲ. ಆದರೀಗ ತಂತ್ರಜ್ಞಾನದ ಸಹಾಯದಿಂದ ದೈಹಿಕ ಕೆಲಸ ಕಡಿಮೆ ಹಾಗೂ ಮಾನಸಿಕ ಕೆಲಸ ಹೆಚ್ಚು! ಅಂದುಕೊಂಡದ್ದು ಸಿಗದಾದಾಗ ಆಗುವ ಹತಾಶೆಯೇ ಒತ್ತಡ. ಪ್ರತಿಯೊಂದಕ್ಕೂ ಒಂದು ಮಿತಿ ಇರುತ್ತದೆ. ಅದು ಮೀರಿದಾಗ ಒತ್ತಡ ಉಂಟಾಗುತ್ತದೆ. ದೇಹದ ಮೇಲಾಗಲೀ, ಮನಸ್ಸಿನ ಮೇಲಾಗಲೀ ಅದು ತಡೆಯುವಷ್ಟು ಮಾತ್ರ ಭಾರ ಅಥವಾ ಶ್ರಮವನ್ನು ಹಾಕಬೇಕು. ಹೆಚ್ಚಾದಾಗ ಒತ್ತಡವು ಕೋಪ, ದುಃಖ, ಖಿನ್ನತೆಯ ರೂಪದಲ್ಲಿ ಹೊರಗೆ ಬರುತ್ತದೆ.

ಹಾಗಾದರೆ ಇದಕ್ಕೆ ಪರಿಹಾರವೇನು?

ಒತ್ತಡವಾಗಲೀ, ಸಂತೋಷವಾಗಲೀ ನಮ್ಮೊಳಗೇ ಇದೆ. ಇದರ ಅರಿವಾದಲ್ಲಿ ಮನಸ್ಸಿನ ನಿಯಂತ್ರಣ ನಮ್ಮ ಕೈಲಿರುತ್ತದೆ. 

ಉಸಿರಾಟ

ಒತ್ತಡದಲ್ಲಿದ್ದಾಗ ನಿಮ್ಮ ಉಸಿರಾಟವನ್ನು ಗಮನಿಸಿ. ಉಸಿರಾಟ ತೀವ್ರವಾಗಿರುತ್ತದೆ. ರಕ್ತದೊತ್ತಡವೂ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ದೀರ್ಘವಾದ ಉಚ್ಛ್ವಾಸ ಹಾಗೂ ನಿಃಶ್ವಾಸವನ್ನು ಮಾಡಬೇಕು. ಇದರಿಂದ ರಕ್ತ ಪರಿಚಲನೆ ಸರಿಯಾಗಿ ಆಗುತ್ತದೆ. ಆಗ ನರಗಳ ಬಿಗಿತ ಕಡಿಮೆಯಾಗಿ ಮಸ್ತಿಷ್ಕ ಪ್ರಶಾಂತವಾಗುತ್ತದೆ. 

ವ್ಯಾಯಾಮ

ವ್ಯಾಯಾಮ ಮಾಡುವುದರಿಂದಲೂ ಒತ್ತಡವನ್ನು ಕಡಿಮೆ ಮಾಡಬಹುದು. ಒತ್ತಡ ದೇಹಕ್ಕಾಗಲೀ ಅಥವಾ ಮನಸ್ಸಿಗಾಗಲೀ ಆದಾಗ ದೇಹದ ಮಾಂಸಖಂಡಗಳ ಬಿಗಿತ ಉಂಟಾಗುತ್ತದೆ. ವ್ಯಾಯಾಮದಿಂದ ದೇಹದ ಮಾಂಸಖಂಡಗಳು ಸಡಿಲಗೊಳ್ಳುತ್ತವೆ. ಆಗ ಒತ್ತಡದ ನಿವಾರಣೆಯಾಗುತ್ತದೆ.

ಹವ್ಯಾಸಗಳು

ನಮ್ಮಿಷ್ಟದ ವಿರುದ್ಧದ ಕೆಲಸ ಅಥವಾ ಚಿಂತೆ ಮಾಡಿದಾಗ ಒತ್ತಡ ಹೆಚ್ಚಾಗುತ್ತದೆ. ಒತ್ತಡವಾದಾಗ, ನಿಮಗಿಷ್ಟವಾದ ಕೆಲಸವನ್ನು ಮಾಡಿ. ನಿಮಗಿಷ್ಟವಾದ ಹವ್ಯಾಸವನ್ನು ರೂಢಿಸಿಕೊಳ್ಳಿ. ಅದೇನೇ ಆಗಿರಲಿ, ಹಾಡು, ನರ್ತನ, ಅಡುಗೆ, ಚಿತ್ರಕಲೆ, ಓದು, ಬರೆಹ – ಹೀಗೆ ಯಾವುದು ನಿಮಗಿಷ್ಟವೋ ಅದನ್ನು ಮಾಡಿ.

ಧೂಮಪಾನ, ಮದ್ಯಪಾನ, ಕೆಫೇನ್‍ನಿಂದ ದೂರವಿರಿ

ಒತ್ತಡವಾದಾಗ ಬಹಳಷ್ಟು ಜನರು ಹೆಚ್ಚಾಗಿ ತೆಗೆದುಕೊಳ್ಳುವ ಬೇಡದ ವಸ್ತುಗಳು ಇವು. ಆ ನಿಮಿಷಕ್ಕೆ ನಿಮ್ಮನ್ನು ಒತ್ತಡದ ಚಿಂತೆಯ ಹೇರಿಕೆಯಿಂದ ದೂರವಿಟ್ಟರೂ, ಇವು ಅಪಾಯಕಾರಿ! ಇವುಗಳ ಸೇವನೆಯಿಂದ ಒತ್ತಡ ಹೆಚ್ಚಾಗುತ್ತದೆ.

ನಿದ್ರೆ

ನಿದ್ರಾಹೀನತೆ ಕೂಡ ಒತ್ತಡಕ್ಕೆ ಎಡೆಮಾಡಿಕೊಡುತ್ತದೆ. ವಿಪರ್ಯಾಸವೆಂದರೆ ಒತ್ತಡದಿಂದ ನಿದ್ರಾಹೀನತೆ ಉಂಟಾಗುತ್ತದೆ! ಒತ್ತಡವಾದಾಗ ಬಾಧಿಸುವ ಚಿಂತೆಗಳಿಂದ ನಿದ್ರಾಹೀನತೆ ಬರುತ್ತದೆ. ಒತ್ತಡದ ಚಿಂತೆಗಳಿಂದ ನಮ್ಮ ಗಮನವನ್ನು ಬೇರೆಡೆಗೆ ಹರಿಸಿದಾಗ ನಿದ್ರೆ ಬರುತ್ತದೆ. ಈ ನಿಟ್ಟಿನಲ್ಲಿ ಗಮನ ಯಾವಾಗಲೂ ಧನಾತ್ಮಕವಾಗಿರಬೇಕು. ಸಕಾರಾತ್ಮಕ ಚಿಂತನೆಯಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ಶಾಂತಿ ಸಿಗುತ್ತದೆ. ಆಗ ನಿದ್ರೆ ತಾನಾಗೇ ಬರುತ್ತದೆ.

ವಿಶ್ವಾಸದಿಂದಿರಿ

ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ನಿಮ್ಮ ದೈಹಿಕ ಬಲದ ಅರಿವು ನಿಮಗಿರಲಿ. ಅತಿಯಾದ ಕೆಲಸದಿಂದಲೂ ಒತ್ತಡ ಉಂಟಾಗುತ್ತದೆ. ನಿಮಗೆ ಸಾಕು ಎಂದೆನ್ನಿಸಿದಾಗ ನಿಲ್ಲಿಸಿ. ಬೇರೆಯವರ ಒತ್ತಾಯಕ್ಕಾಗಿ ಕೆಲಸವನ್ನು ಮಾಡಬೇಡಿ. ಬೇಡವೆನ್ನಿಸಿದಾಗ ‘ಬೇಡ’ ಎಂದು ಹೇಳುವುದನ್ನು ರೂಢಿಸಿಕೊಳ್ಳಿ.

ನಗು

ಹಿತೈಷಿಗಳೊಂದಿಗೆ ಒಳ್ಳೆಯ ಸಮಯವನ್ನು ಕಳೆಯಿರಿ. ನಗುವ ಅವಕಾಶವನ್ನು ಕಳೆದುಕೊಳ್ಳಬೇಡಿ.

ಚಿಂತೆ ಬಿಡಿ

ಚಿಂತೆ ಎನ್ನುವುದು ತೂಗುವ ಕುರ್ಚಿಯಿದ್ದಂತೆ, ಏನೋ ಒಂದು ಕೆಲಸವನ್ನು ಮಾಡುತ್ತಿದ್ದರೂ, ನಾವು ಇದ್ದಲ್ಲೇ ಇರುತ್ತೇವೆ. ಆದ್ದರಿಂದ ಆ ಸಮಯದಲ್ಲಿ ಚಿಂತೆಯಿಂದ ಮುಕ್ತಿ ಪಡೆಯಲು ನಮಗಿಷ್ಟವಾದ ಕೆಲಸದ ಬಗ್ಗೆ, ಇಷ್ಟವಾದ ಜನರ ಬಗ್ಗೆ ಮನನ ಮಾಡಬೇಕು. ನಮ್ಮ ಗಮನವನ್ನು ಬೇರೆಡೆಗೆ ಹರಿಸಬೇಕು. ಏಕಾಗ್ರತೆಯಿಂದ ಧ್ಯಾನ ಮಾಡುವುದರಿಂದಲೂ ಒತ್ತಡವನ್ನು ಕಡಿಮೆ ಮಾಡಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.