ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚರ್ಮದ ಕಾಂತಿಗೆ ಹೈಡ್ರಾಫೇಶಿಯಲ್‌

Published 15 ಆಗಸ್ಟ್ 2024, 1:13 IST
Last Updated 15 ಆಗಸ್ಟ್ 2024, 1:13 IST
ಅಕ್ಷರ ಗಾತ್ರ

ಕಾಂತಿಯುತ ಹಾಗೂ ಯಾವುದೇ ಕಲೆಗಳಿಲ್ಲದ ಚರ್ಮ ಇರಬೇಕು ಎಂಬುದು ಪ್ರತಿಯೊಬ್ಬರ ಆದ್ಯತೆ. ಇತ್ತೀಚೆಗೆ ನಡೆದ ಆವಿಷ್ಕಾರಗಳಲ್ಲಿ ಹೈಡ್ರಾಫೇಶಿಯಲ್‌ ಕೂಡ ಉತ್ತಮ ಚಿಕಿತ್ಸೆಯಾಗಿದ್ದು, ಚರ್ಮಕ್ಕೆ ಕಾಂತಿ ತಂದುಕೊಡುವಲ್ಲಿ ಮಹತ್ತರ ಚಿಕಿತ್ಸೆ ಎಂದೇ ಪರಿಗಣಿಸಲಾಗಿದೆ.

ಏನಿದು ಹೈಡ್ರಾಫೇಶಿಯಲ್?

ಚರ್ಮವನ್ನು ಆಳವಾಗಿ ಶುದ್ಧೀಕರಿಸಿ, ಎಕ್ಸ್‌ಫೋಲಿಯೇಷನ್‌ ಪ್ರಕ್ರಿಯೆಯಲ್ಲಿ ಪೆನ್‌ನಂಥ ಸಾಧನ ಬಳಸಿ ಚರ್ಮದ ರಂಧ್ರಗಳಿಗೆ ಆಳವಾದ ಸೀರಮ್‌ಗಳನ್ನು ಬಿಟ್ಟು, ಹೈಡ್ರೀಕರಿಸಲಾಗುತ್ತದೆ.
ಸಾಮಾನ್ಯವಾಗಿ ಇದನ್ನು ‘ಹೈಡ್ರಾ ಡರ್ಮಾಬ್ರೇಷನ್‌’ ಎಂದೇ ಕರೆಯಲಾಗುತ್ತದೆ. ಮೈಕ್ರೋಡರ್ಮಾಬ್ರೇಷನ್‌ ಅನ್ನು ಹೈಡ್ರೇಟಿಂಗ್‌ ಸೀರಮ್‌ನ ಸಂಯೋಜನೆಯೊಂದಿಗೆ ರೂಪಿಸಲಾಗಿರುವ ಅತ್ಯುತ್ತಮ ಚಿಕಿತ್ಸೆ ಇದು.ವೈದ್ಯಕೀಯ ಸ್ಪಾ ಹಾಗೂ ಚರ್ಮರೋಗತಜ್ಞ ಚಿಕಿತ್ಸಾಲಯಗಳಲ್ಲಿ ಈ ಚಿಕಿತ್ಸೆ ಲಭ್ಯವಿರುತ್ತದೆ.

ಎಲ್ಲ ಬಗೆಯ ಚರ್ಮಗಳಿಗೂ ಒಗ್ಗಿಕೊಳ್ಳುವ ಈ ಚಿಕಿತ್ಸೆಯಿಂದ ಚರ್ಮಕ್ಕೆ ಹಾನಿಯಾಗುವುದು ತೀರಾ ಕಡಿಮೆ. ಸಾಮಾನ್ಯವಾಗಿ ಚರ್ಮ ಚಿಕಿತ್ಸೆಯಲ್ಲಿ ಬಹುಹಂತಗಳೇ ಹೆಚ್ಚಿರುವುದರಿಂದ ಸಮಯ ಹಿಡಿಯುತ್ತದೆ.ಇದಕ್ಕಾಗಿಯೇ ಹೆಚ್ಚಿನವರು ಚರ್ಮದ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಆದರೆ ಹೈಡ್ರಾಫೇಶಿಯಲ್‌ ಒಂದೇ ಸಿಟ್ಟಿಂಗ್‌ನಲ್ಲಿ ಮುಗಿಯುವಂಥ ಚಿಕಿತ್ಸೆಯಾಗಿರುತ್ತದೆ. ಮತ್ತು ವೇಗವಾಗಿ ಫಲಿತಾಂಶ ಸಿಗುತ್ತದೆ. ಆಧುನಿಕ ಕಾಲಕ್ಕೆ ಇದೊಂದು ಜನಪ್ರಿಯ ತ್ವಚೆ ಆರೈಕೆ ಪದ್ಧತಿಯೆಂದೇ ಹೇಳಬಹುದು.

ಪ್ರಕ್ರಿಯೆ ಹೇಗಿರುತ್ತದೆ?

ತ್ವಚೆಯಲ್ಲಿ ಇರುವ ಹೆಚ್ಚುವರಿ ಎಣ್ಣೆ ಮತ್ತು ನಶಿಸಿದ ಚರ್ಮದ ಕೋಶಗಳನ್ನು ಸಂಪೂರ್ಣವಾಗಿ ಮೊದಲಿಗೆ ತೆಗೆದುಹಾಕಲಾಗುತ್ತದೆ.ಚರ್ಮದ ರಂಧ್ರಗಳಲ್ಲಿರುವ ಕೊಳಕು, ಎಣ್ಣೆಯ ಅಂಶಗಳನ್ನು ತೆಗೆಯಲಾಗುತ್ತದೆ. ನಂತರ ಸ್ಯಾಲಿಸಿಲಿಕ್‌ ಮತ್ತು ಗ್ಲೈಕೊಲಿಕ್‌ ಆಮ್ಲಗಳ ಮಿಶ್ರಣವನ್ನು ಮುಖಕ್ಕೆ ಲೇಪಿಸಲಾಗುತ್ತದೆ. ಹೈಡ್ರಾಪೀಲ್‌ ಮಾಡುವುದರಿಂದ ಕಪ್ಪು ಕಲೆಗಳು, ಅತಿಯಾದ ಎಣ್ಣೆಯ ಅಂಶವು ಹೋಗುತ್ತದೆ. ನಂತರ ಆ್ಯಂಟಿ ಆಕ್ಸಿಡೆಂಟ್‌ಗಳು, ಪೆಪ್ಟೈಡ್‌ಗಳು ಮತ್ತು ಹೈಲುರಾನಿಕ್‌ ಆಮ್ಲ ಬಳಸಿ, ತ್ವಚೆಯ ತೇವಾಂಶವನ್ನು ಉಳಿಸಲಾಗುತ್ತದೆ. ಜತೆಗೆ ಚರ್ಮಕ್ಕೆ ಅಗತ್ಯವಿರುವ ಪೋಷಕಾಂಶಗಳ ಸೀರಮ್‌ಗಳನ್ನು ಬಳಸುವುದರಿಂದ ಚರ್ಮಕ್ಕೆ ಹೊಳಪು ಮತ್ತು ಹೊಸತನ ಬರುತ್ತದೆ. ಹೈಡ್ರಾಫೇಶಿಯಲ್ ಮಾಡಿಸಿಕೊಂಡ ಸುಮಾರು ನಾಲ್ಕರಿಂದ ಆರು ವಾರಗಳಲ್ಲಿ ಚರ್ಮ ಪುನಶ್ಚೇತನಗೊಳ್ಳುತ್ತದೆ. ಜತೆಗೆ ನಿಯಮಿತವಾಗಿ ಆರೈಕೆ ಮಾಡಿಕೊಂಡರೆ ಫಲಿತಾಂಶ ಇನ್ನಷ್ಟು ಉತ್ತಮವಾಗಿರುತ್ತದೆ.

ಅಡ್ಡಪರಿಣಾಮಗಳ ಪ್ರಮಾಣ ಅತಿ ಕಡಿಮೆ ಇರುವ ಚಿಕಿತ್ಸೆ ಇದಾಗಿದ್ದು, ಹೈಟೆಕ್‌ ಸತ್ವಗಳಿರುವ ಸೀರಮ್‌ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮ ಸದಾ ಹೈಡ್ರೇಟ್‌ ಆಗಿರುವುದರಿಂದ ಸುಕ್ಕಾಗದು. ಚರ್ಮದ ಆಳಕ್ಕೆ ಹೋಗಿ ತೇವಾಂಶವನ್ನು ಹಿಡಿದಿಡುವಂತೆ ಮಾಡುವುದರಿಂದ ಚರ್ಮದ ಟೋನ್ ಮತ್ತು ವಿನ್ಯಾಸದಲ್ಲಿ ಉತ್ತಮ ಬದಲಾವಣೆ ಕಾಣಬಹುದು. ನಯವಾದ ಮತ್ತು ಕಾಂತಿಯುತ ಚರ್ಮವನ್ನು ಪಡೆಯಬಹುದು.

ಹರೆಯದಲ್ಲಿ ಮೊಡವೆಗಳು ಸಾಮಾನ್ಯ. ಇಂಥವರಿಗೆ ಹೈಡ್ರಾಫೇಷಿಯಲ್‌ ಉತ್ತಮ ಚಿಕಿತ್ಸೆ. ತೈಲ ಉತ್ಪಾದನೆಯನ್ನು ನಿಯಂತ್ರಿಸುವುದಲ್ಲದೇ, ಚರ್ಮದ ಆರೈಕೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುತ್ತದೆ.

ಮೊಡವೆಗಳಿಂದ ಉಂಟಾದ ರಂಧ್ರಗಳನ್ನು ಮುಚ್ಚುತ್ತದೆ. ಮೇದೋಗ್ರಂಥಿಗಳ ಸ್ರಾವವನ್ನು ತಡೆಯುತ್ತದೆ. ಜತೆಗೆ ಚರ್ಮವನ್ನು ಬಿಗಿಗೊಳಿಸುವುದರಿಂದ ರಂಧ್ರದ ಗಾತ್ರವು ಕಡಿಮೆಯಾಗುತ್ತದೆ. ಚರ್ಮ ನಯಗೊಳ್ಳುತ್ತದೆ.

ಇತರೆ ಫೇಶಿಯಲ್‌ನಂತೆಯೇ ಈ ಚಿಕಿತ್ಸೆಯು ಇರುವುದರಿಂದ, ದೈನಂದಿನ ಚಟುವಟಿಕೆಗಳಿಗೆ ಬಹುಬೇಗ ಮರಳಬಹುದು. ಮೊಡವೆಗಳ ನಿವಾರಣೆಗೆ ಪುರುಷರೂ ಹೆಚ್ಚಾಗಿ ಹೈಡ್ರಾಫೇಶಿಯಲ್‌ ಚಿಕಿತ್ಸೆ ಪಡೆಯುತ್ತಿರುವುದು ವಿಶೇಷ.

ಡಾ. ರಾಜೇಂದ್ರ ಎಸ್‌. ಗುಜ್ಜಲನವರ್‌, ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಸಾಕ್ರಾ ವರ್ಲ್ಡ್‌ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT