ಬುಧವಾರ, ಸೆಪ್ಟೆಂಬರ್ 23, 2020
27 °C

ಲಕ್ಷಣ ಸಹಿತ ಪ್ರಕರಣಗಳು ಹೆಚ್ಚಳ; ಬಿ.‍‍ಪಿ, ಮಧುಮೇಹ ಸಮಸ್ಯೆ ಇರುವವರಿಗೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದ ಪರಿಣಾಮ ಸೋಂಕಿತರ ಸಂಪರ್ಕ ‍ಪತ್ತೆಗೆ ಹಿನ್ನಡೆ ಉಂಟಾಗಿದೆ. ಇದೇ ವೇಳೆ ಜ್ವರ, ಕೆಮ್ಮು ಸೇರಿ ಸೋಂಕಿನ ವಿವಿಧ ಲಕ್ಷಣಗಳನ್ನು ಹೊಂದಿರುವವರ ಪ್ರಮಾಣ ಶೇ 21ಕ್ಕೆ ಏರಿಕೆಯಾಗಿದೆ.

‌ರಾಜ್ಯದಲ್ಲಿ ಜೂನ್ ಅಂತ್ಯಕ್ಕೆ ಪ್ರಕರಣಗಳ ಸಂಖ್ಯೆ 15 ಸಾವಿರ ದಾಟಿತ್ತು. ಆದರೆ, ಆ ವೇಳೆಗೆ ಶೇ 96 ರಷ್ಟು ಪ್ರಕರಣಗಳಲ್ಲಿ ಕೋವಿಡ್ ರೋಗ‌ ಲಕ್ಷಣಗಳೇ ಗೋಚರಿಸಿರಲಿಲ್ಲ. ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರು ಹಾಗೂ ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಪರೀಕ್ಷೆ ನಡೆಸಿದ ಬಳಿಕ ಕೆಲವರು ಸೋಂಕಿತರಾಗಿರುವುದು ದೃಢಪಡುತ್ತಿತ್ತು.

ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಪರಿಣಾಮ ಅವರೊಂದಿಗೆ ಸಂಪರ್ಕ ಹೊಂದಿದ್ದವರಿಗೆ ಅಷ್ಟಾಗಿ ಅಪಾಯ ಇರಲಿಲ್ಲ. ಆದರೆ, ಲಾಕ್‌ಡೌನ್ ಸಡಿಲಿಸಿದ ಬಳಿಕ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಇನ್ನೊಂದೆಡೆ ಲಕ್ಷಣ ರಹಿತ ಪ್ರಕರಣಗಳ ಪ್ರಮಾಣ ಶೇ 79ಕ್ಕೆ ಇಳಿಕೆಯಾಗಿದೆ.

ರಾಜ್ಯ ಕೋವಿಡ್ ವಾರ್‌ ರೂಮ್ ವಿಶ್ಲೇಷಣೆಯ ಪ್ರಕಾರ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವವರಿಗೆ ಹೆಚ್ಚಿನ ಅಪಾಯವಿದೆ. ಅದೇ ರೀತಿ, ಅವರೊಂದಿಗೆ ಸಂಪರ್ಕ ಹೊಂದಿದ್ದವರು ಕೂಡ ಸೋಂಕಿತರಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಕೋವಿಡ್‌ ಲಕ್ಷಣರಹಿತ ಅಧಿಕ ಪ್ರಕರಣಗಳು ಚಿತ್ರದುರ್ಗದಲ್ಲಿ (ಶೇ 36.8) ವರದಿಯಾಗಿವೆ. ಚಿಕ್ಕಬಳ್ಳಾಪುರದಲ್ಲಿ ಶೇ 3.6ರಷ್ಟು ಪ್ರಕರಣಗಳಲ್ಲಿ ಮಾತ್ರ ಲಕ್ಷಣಗಳು ಕಾಣಿಸಿಕೊಂಡಿವೆ.

‘ಕೆಮ್ಮು, ನೆಗಡಿ, ಜ್ವರ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಕೊರೊನಾ ಸೋಂಕು ತಗುಲಿದೆ ಎಂದು ಆತಂಕ ಪಡಬೇಕಿಲ್ಲ’ ಎಂದು ನಾರಾಯಣ ಹೆಲ್ತ್‌ ಸಿಟಿಯ ಆಂತರಿಕ ಔಷಧಿ ಸಲಹೆಗಾರ ಡಾ. ಮಹೇಶ್ ಕುಮಾರ್ ಸೂಚಿಸಿದ್ದಾರೆ.

ಕಾಯಿಲೆ ಇದ್ದವರಿಗೆ ಹೆಚ್ಚಿನ ಅಪಾಯ
ಸದ್ಯ ರಾಜ್ಯದಲ್ಲಿ ಪ್ರತಿ 10 ಲಕ್ಷ ಜನರಲ್ಲಿ ಶೇ 55.3ರಷ್ಟು ಮಂದಿ ಮೃತಪಡುತ್ತಿದ್ದಾರೆ. 20ರಿಂದ 40 ವರ್ಷದೊಳಗಿನವರು ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ. ಆದರೆ, ಮರಣ ಪ್ರಕರಣಗಳನ್ನು ಗಮನಿಸಿದಲ್ಲಿ 40 ವರ್ಷ ಮೇಲ್ಪಟ್ಟವರ ಜೀವಕ್ಕೆ ಹೆಚ್ಚಿನ ಅಪಾಯವಿದ್ದು, ಮೃತಪಟ್ಟವರಲ್ಲಿ ಬಹುತೇಕರು ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಇದ್ದವರಾಗಿದ್ದಾರೆ.

‘ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಹೃದಯ, ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಮಕ್ಕಳು, ಗರ್ಭಿಣಿಯರು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರಲಿದೆ. ಅವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ವಿಕ್ರಮ್ ಆಸ್ಪತ್ರೆಯ ಆಂತರಿಕ ಔಷಧಿ ಸಲಹೆಗಾರ ಡಾ.ಕೆ.ಎನ್. ಮಂಜುನಾಥ್ ಅವರು ಸೂಚಿಸಿದ್ದಾರೆ.

ಕೋವಿಡ್‌ನಿಂದ ಸಿದ್ದರಾಮಯ್ಯ ಗುಣಮುಖ
ಬೆಂಗಳೂರು:
ಕೋವಿಡ್‌ ದೃಢಪಟ್ಟ ಕಾರಣ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಣಮುಖರಾಗಿ ಗುರುವಾರ ಬಿಡುಗಡೆಯಾದರು.‘ಎರಡನೇ ಬಾರಿಗೆ ನಡೆದ ಕೋವಿಡ್‌ ಪರೀಕ್ಷೆಯಲ್ಲೂ ನೆಗೆಟಿವ್ ಬಂದಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ಶಾಸಕ ಲಾಲಾಜಿ ಮೆಂಡನ್‌ಗೆ ಕೋವಿಡ್‌
ಪಡುಬಿದ್ರಿ:
ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಲಾಲಾಜಿ ಅರ್. ಮೆಂಡನ್ ಅವರಿಗೆ ಕೋವಿಡ್-19 ದೃಢಪಟ್ಟಿದೆ.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ನನ್ನ ಆಪ್ತ ಕಾರ್ಯದರ್ಶಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿತ್ತು. 7 ದಿನಗಳಿಂದ ಹೋಂ ಕಾರಂಟೈನ್‌ನಲ್ಲಿದ್ದೆ. ಪರೀಕ್ಷೆ ಮಾಡಿಸಿದಾಗ ಕೋವಿಡ್ ಇರುವುದು ದೃಢಪಟ್ಟಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು