ಸೋಮವಾರ, ಆಗಸ್ಟ್ 8, 2022
24 °C

ಗರ್ಭಿಣಿಯರಲ್ಲಿ ಹೊಟ್ಟೆನೋವು ಸಹಜವೇ?

ಡಾ. ವೀಣಾ ಎಸ್‌. ಭಟ್‌ Updated:

ಅಕ್ಷರ ಗಾತ್ರ : | |

1) ನನ್ನ ಅಕ್ಕನಿಗೆ 26 ವರ್ಷ. ಅವಳು ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಳೆ. ಈಗ 6 ತಿಂಗಳ ಗರ್ಭಿಣಿ. ಅವಳು ಪದೇ ಪದೇ ಹೊಟ್ಟೆನೋವು ಎನ್ನುತ್ತಾಳೆ. ರಾತ್ರಿ ಆಗಾಗ ಮೂತ್ರ ಮಾಡಲು ಎದ್ದು ಹೋಗುತ್ತಾಳೆ. ತಿಂಗಳು ತಿಂಗಳು ವೈದ್ಯರ ಹತ್ತಿರ ಪರೀಕ್ಷೆಗೆ ಹೋಗುತ್ತಿದ್ದಾರೆ. ತೊಂದರೆ ಏನಿರಬಹುದು?

ಸುಶ್ಮಿತ, ಚಿಕ್ಕಮಗಳೂರು

ಉತ್ತರ: ಸುಶ್ಮಿತಾ ಅವರೇ, ಗರ್ಭಿಣಿಯರಿಗೆ ಸಣ್ಣ ಪುಟ್ಟ ಹೊಟ್ಟೆನೋವು ಆಗಾಗ ಕಾಡುವುದು ಸಹಜ. ಮೊದಲನೆಯದಾಗಿ ಗರ್ಭಿಣಿಯರಲ್ಲಿ ಬೆಳೆಯುತ್ತಿರುವ ಮಗುವಿನಿಂದ ಗರ್ಭಕೋಶ ಹಿಗ್ಗುತ್ತಿರುತ್ತದೆ ಮತ್ತು ಗರ್ಭಕೋಶದ ಸ್ನಾಯುಗಳು ಆಗಾಗ ಸಂಕುಚನ ಹಾಗೂ ವಿಕಸನಗೊಳ್ಳುತ್ತಿರುತ್ತವೆ. ಇದು ಸಹಜವಾಗಿದ್ದು ಇಂತಹ ಸಣ್ಣಪುಟ್ಟ ನೋವೇ ದಿನ ತುಂಬಿದಾಗ ತೀವ್ರತರವಾಗಿ ಹೆರಿಗೆ ನೋವು ಅನಿಸಿಕೊಳ್ಳುತ್ತದೆ. ಹಾಗಾಗಿ ಗಾಬರಿಯಾಗುವುದು ಬೇಡ. ನಿಜವಾದ ಹೆರಿಗೆ ನೋವು ಅಥವಾ ಗರ್ಭಪಾತವಾಗುವಾಗ ಆಗುವ ನೋವು 2-3 ನಿಮಿಷಕ್ಕೊಮ್ಮೆ ಬಂದು ಸುಮಾರು 45ಸೆಕೆಂಡ್‌ಗಳ ಕಾಲ ಹಾಗೆಯೇ ಇರುತ್ತದೆ. ಈ ವಿಷಯ ಪ್ರತಿ ಗರ್ಭಿಣಿಯರಿಗೂ ತಿಳಿದಿರಬೇಕು. ಗರ್ಭಕೋಶವು ಮೂತ್ರಕೋಶ ಹಾಗೂ ಮಲಕೋಶದ ಮಧ್ಯೆ ಇರುವುದರಿಂದ ಮಲಬದ್ಧತೆಯಾದರೂ ಆಗಾಗ ಗರ್ಭಿಣಿಯರಿಗೆ ಹೊಟ್ಟೆನೋವು ಬರುತ್ತದೆ. ಮಲಬದ್ಧತೆ ಆಗದ ಹಾಗೆ ಸಾಕಷ್ಟು ನಾರಿನಾಂಶದ ಆಹಾರವನ್ನು (ಹಸಿರು ಸೊಪ್ಪು, ತರಕಾರಿ) ಸೇವಿಸಬೇಕು. ಮೊದಲ ಮೂರು ತಿಂಗಳು ಬೆಳೆಯುತ್ತಿರುವ ಗರ್ಭಕೋಶದಿಂದ ಮೂತ್ರಕೋಶದ ಮೇಲೆ ಒತ್ತಡ ಬೀಳುವುದರಿಂದ ಪದೇ ಪದೇ ಮೂತ್ರವಿಸರ್ಜನೆಯನ್ನು ಮಾಡಬೇಕೆನ್ನಿಸುವುದು ಸಹಜ. ಗರ್ಭಧಾರಣೆಯ ಕೊನೆಯ ಅವಧಿಯಲ್ಲಿ ಶಿಶುವಿನ ತಲೆ ಕೆಳಗೆ ಬಂದು ಮೂತ್ರಕೋಶದ ಮೇಲೆ ಒತ್ತಿದ ಹಾಗಾಗುವುದರಿಂದ ಪದೇಪದೇ ಮೂತ್ರ ಮಾಡಬೇಕು ಎನಿಸಬಹುದು. ಆದರೆ ನಿಮ್ಮ ಅಕ್ಕ ಆರನೇ ತಿಂಗಳಲ್ಲೂ ಪದೇಪದೇ ಮೂತ್ರಕ್ಕೆ ಹೋಗುತ್ತಾಳೆ ಮತ್ತು ಹೊಟ್ಟೆನೋವೆಂದರೆ ಅದು ಮೂತ್ರಕೋಶದ ಸೋಂಕಿನಿಂದಲೂ ಆಗಿರಬಹುದು. ಯಾಕೆಂದರೆ ಗರ್ಭಿಣಿಯರಲ್ಲಿ ಬೇರೆ ಮಹಿಳೆಯರಿಗಿಂತ ಮೂತ್ರಕೋಶಕ್ಕೆ ಸೋಂಕು ಬೇಗನೇ ತಗಲುತ್ತದೆ ಮತ್ತು ಇದನ್ನು ನಿರ್ಲಕ್ಷಿಸಿದರೆ ಇದರಿಂದ ಅವಧಿಗೆ ಮುನ್ನವೇ ಶಿಶುಜನನವಾಗಿ (ಅಕಾಲಿಕ ಹೆರಿಗೆ) ಮಗು ಹಾಗೂ ತಾಯಿ ಇಬ್ಬರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಅವರಿಗೆ ಮೂತ್ರಕೋಶದ ಸೋಂಕು ಇದೆಯೇ ಇಲ್ಲವೇ ಎಂಬುದನ್ನ ಖಾತ್ರಿ ಮಾಡಿಕೊಳ್ಳಲು ಮೂತ್ರ ಪರೀಕ್ಷೆ ಹಾಗೂ ಅಗತ್ಯವಿದ್ದರೆ ತಳಿಪರೀಕ್ಷೆ (ಕಲ್ಚರ್‌) ಮಾಡಿಸಿಕೊಂಡು ಸೂಕ್ತ ಆ್ಯಂಟಿಬಯೋಟಿಕ್ ವೈದ್ಯರ ಸಲಹೆಯ ಮೇರೆಗೆ, ವರದಿಯ ಆಧಾರದ ಮೇಲೆ ಸೇವಿಸಬೇಕಾಗುವುದು. ಈ ವಿಷಯವಾಗಿ ನೀವು ತೋರಿಸುತ್ತಿರುವ ತಜ್ಞರ ಹತ್ತಿರ ಚರ್ಚಿಸಿ ಪರೀಕ್ಷಿಸಿಕೊಳ್ಳಿ. ನಿರ್ಲಕ್ಷಿಸಬೇಡಿ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯ ಒಳಗೆ 3–4 ಲೀಟರ್ ನೀರು ಸೇವಿಸಿದರೆ ರಾತ್ರಿ ಮೂತ್ರ ವಿಸರ್ಜನೆಗಾಗಿ ಪದೇಪದೇ ಏಳುವ ಪ್ರಮೆಯ ಬರುವುದಿಲ್ಲ.


–ಡಾ. ವೀಣಾ ಎಸ್‌. ಭಟ್‌

2) ನನಗೆ ಹೆರಿಗೆಯಾಗಿ 4 ತಿಂಗಳು. ನಾರ್ಮಲ್ ಹೆರಿಗೆಯಾಗಿ ಸೂಚರ್ ಆಗಿದೆ. ನನಗಿನ್ನೂ ಹೆರಿಗೆಯ ನಂತರ ಪತಿಯೊಂದಿಗೆ ಲೈಂಗಿಕ ಸಂಪರ್ಕ ಆಗಿಲ್ಲ. ನನಗೆ ಹೊಲಿಗೆ ಬಿಚ್ಚಿಕೊಳ್ಳುತ್ತದೆ ಎನ್ನುವ ಹೆದರಿಕೆ. ಏನು ಮಾಡಲಿ? ಎಲ್ಲರಿಗೂ ನಾರ್ಮಲ್ ಹೆರಿಗೆಯಾದರೂ ಸೂಚರ್ ಆಗುತ್ತದೆಯೇ?

–ಅಂಜನಾ, ಹಿರಿಯೂರು

ಉತ್ತರ: ಅಂಜನಾರವರೇ, ಹೆರಿಗೆ ಒಂದು ಸಹಜ ಪ್ರಕ್ರಿಯೆ. ಎಲ್ಲಾ ಸಹಜ ಹೆರಿಗೆಗೂ ಸೂಚರ್ ಅಥವಾ ಎಪಿಸಿಯಾಟಮಿ ಆಗಬೇಕೆಂದೇನೂ ಇಲ್ಲ. ಅದನ್ನು ವೈದ್ಯರು ನಿರ್ಧರಿಸುತ್ತಾರೆ. ಎಷ್ಟೋ ಬಾರಿ ಮನೆಯಲ್ಲೇ ಸಹಜ ಹೆರಿಗೆಯಾಗುತ್ತದೆ. ಈಗ ಸಹಜ ಹೆರಿಗೆಗಳೇ ಕಡಿಮೆಯಾದರೂ, ಹೆಚ್ಚಿನ ಹೆರಿಗೆಯ ಸಂದರ್ಭದಲ್ಲಿ ಯೋನಿಮಾರ್ಗದಿಂದ ಮಗು ಹೊರಬರುವಾಗ ಪೆರಿನಿಯಂ ಅಥವಾ ಗುದಮುಂದಣದಲ್ಲಿ ಸಣ್ಣದಾಗಿ ಕತ್ತರಿಸಿ ಹೊಲಿಗೆ ಹಾಕುವುದರಿಂದ ಈ ಭಾಗದಲ್ಲಾಗುವ ಅತಿಯಾದ ಹಿಗ್ಗುವಿಕೆ ಅಥವಾ ಹರಿದುಕೊಳ್ಳುವುದು, ಇದರಿಂದ ಮುಂದಾಗುವ ಸಂಭವನೀಯ ತೊಂದರೆಗಳನ್ನು (ಗರ್ಭಕೋಶ, ಮಲಕೋಶ, ಮೂತ್ರಕೋಶ ಜಾರುವಿಕೆ, ಮಲದ್ವಾರವರೆಗೂ ಹರಿದುಹೋಗಿ ಮಲವಿರ್ಸಜನೆಗೆ ತೊಂದರೆಯಾಗುವುದು, ಯೋನಿಮಾರ್ಗ ಸಡಿಲವಾಗಿ ತೃಪ್ತಿಕರ ಲೈಂಗಿಕ ಸಂಪರ್ಕವಾಗದೇ ಇರುವುದು ಇತ್ಯಾದಿ) ತಪ್ಪಿಸಲು ವೈದ್ಯರು ಅಥವಾ ದಾದಿಯರು ಸೂಚರ್ ಹಾಕುವ ಅಗತ್ಯ ಬರುತ್ತದೆ. ಆ ಸಂದರ್ಭದಲ್ಲಿ ಕತ್ತರಿಸಿ ಹೊಲಿಗೆ ಹಾಕಬೇಕೇ ಬೇಡವೇ ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಇದೊಂದು ಸರಳವಾದ ಶಸ್ತ್ರಚಿಕಿತ್ಸೆಯಾಗಿದ್ದು ಸ್ಥಳೀಯ ಅರಿವಳಿಕೆ (ಲೋಕಲ್ ಅನಸ್ತೇಶಿಯಾ) ಕೊಟ್ಟು ತಾನಾಗಿಯೇ ಕರಗಿಹೋಗುವ ಉತ್ತಮ ದರ್ಜೆಯ ದಾರಗಳಿಂದ ಹೊಲಿಗೆ ಹಾಕುತ್ತಾರೆ ಮತ್ತು ಒಂದೆರಡು ವಾರಗಳಲ್ಲೇ ಗಾಯ ಒಣಗಿ ಹೊಲಿಗೆ ಉದುರಿ ಹೋಗುತ್ತದೆ. ನೋವೆಲ್ಲ ಸಂಪೂರ್ಣ ಕಡಿಮೆಯಾಗಲು ಕೇವಲ ಆರು ವಾರಗಳು ಸಾಕು. ಹಾಗಾಗಿ ನೀವು ಭಯಪಡದೆ ಧೈರ್ಯದಿಂದಿರಿ. ಗರ್ಭಿಣಿಯರಲ್ಲಾಗುವ ಹೆಚ್ಚಿನ ಬದಲಾವಣೆಗಳು ಆರು ವಾರದೊಳಗೆ ಸಹಜ ಸ್ಥಿತಿಗೆ ಬರುವುದರಿಂದ ಬಾಣಂತನ ಕೇವಲ ಆರು ವಾರವಷ್ಟೆ. ಹಂತಹಂತವಾಗಿ ನೀವು ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ಅಷ್ಟೇ ಅಲ್ಲ, ನಿಮ್ಮ ಪತಿಯೊಡನೆ ಲೈಂಗಿಕ ಸಂಪರ್ಕಕ್ಕೂ ಯಾವುದೇ ತೊಂದರೆ ಇಲ್ಲ. ನೀವು ಸಹಜವಾಗಿ ಮೊದಲಿನ ಹಾಗೆ ಇರಬಹುದು. ಆದರೆ ನಿಯಮಿತವಾಗಿ ನೀವು ಕೆಗಲ್ಸ್ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.

ಸ್ಪಂದನ...
ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.in ಗೆ ಕಳಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು