ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಂದಿರು ಪಾಲಿಷ್‌ ಅಕ್ಕಿ ಸೇವಿಸಿದರೆ ಶಿಶುವಿಗೆ ಅಪಾಯ

ಜಯದೇವ ಹೃದ್ರೋಗ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೃಢ
Last Updated 11 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಷ್‌ ಮಾಡಿದ (ಬಿಳಿ) ಅಕ್ಕಿಯ ಅನ್ನವನ್ನು ಸೇವಿಸುವ ತಾಯಂದಿರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಪ್ರಮಾಣ ಕಡಿಮೆ ಇರುತ್ತದೆ. ತಾಯಂದಿರು ಪಾಲಿಷ್‌ ಮಾಡಿದ ಅಕ್ಕಿಯ ಅನ್ನ ಊಟಮಾಡಿದರೆ, ಅವರ ಎದೆ ಹಾಲುಣ್ಣುವ ಆರು ತಿಂಗಳೊಳಗಿನ ಶಿಶುಗಳಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂಬುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.

ಸಂಸ್ಥೆಯ ಮಕ್ಕಳ ಹೃದ್ರೋಗ ತಜ್ಞರಾದ ಡಾ. ಉಷಾ, ಡಾ. ಜಯರಂಗನಾಥ್ ನೇತೃತ್ವದ ವೈದ್ಯರ ತಂಡವು ‘ಪಾಲಿಷ್‌ ಮಾಡಲಾದ ಅಕ್ಕಿ, ಆಹಾರ ಸೇವನೆ ಕುರಿತ ನಿರ್ಬಂಧಗಳು ಮತ್ತು ಶಿಶುಗಳಲ್ಲಿ ಹೃದಯ ವೈಫಲ್ಯ’ ಕುರಿತು ಅಧ್ಯಯನ ನಡೆಸಿದೆ. ಆರು ತಿಂಗಳುಗಳ ಒಳಗಿನ 250 ಶಿಶುಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಆ ಶಿಶುಗಳು ವೇಗವಾಗಿ ಉಸಿರಾಡುವುದು, ವಾಂತಿ ಮತ್ತು ಸ್ತನ್ಯಪಾನ ಮಾಡಲು ಸಮಸ್ಯೆ ಎದುರಿಸುತ್ತಿದ್ದವು. ಇದರಲ್ಲಿ ಹಲವು ಶಿಶುಗಳಿಗೆ ತೀವ್ರ ನಿಗಾ ಘಟಕದಲ್ಲಿ ಹಾಗೂ ಕೆಲವು ಶಿಶುಗಳಿಗೆ ಕೃತಕ ಉಸಿರಾಟದ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗಿತ್ತು.

ಅಧ್ಯಯನ ವೇಳೆ ಶಿಶುಗಳ ಹೃದಯದ ಬಲಭಾಗದಲ್ಲಿ ಹಾಗೂ ಶ್ವಾಸಕೋಶದ ರಕ್ತನಾಳಗಳ ಮೇಲೆ ಒತ್ತಡ ಉಂಟಾಗಿರುವುದು ದೃಢಪಟ್ಟಿದೆ. ಇದನ್ನು ಶ್ವಾಸಕೋಶದ ಅಧಿಕ ರಕ್ತದೊತ್ತಡ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ತಾಯಂದಿರ ಎದೆಹಾಲಿನಲ್ಲಿನ ವಿಟಮಿನ್ ಬಿ1 ಅಥವಾ ಥಯಾಮೈನ್‌ ಕೊರತೆಯಿಂದ ಶಿಶುಗಳು ಸಮಸ್ಯೆ ಎದುರಿಸುತ್ತಿರುವುದು ತಿಳಿದುಬಂದಿದೆ. 250 ಶಿಶುಗಳಿಗೂ ಅಗತ್ಯ ವಿಟಮಿನ್ ಬಿ1‌ ಪ್ರಮಾಣವನ್ನು ಒದಗಿಸಲಾಯಿತು. 230 ಶಿಶುಗಳು ಶೀಘ್ರ ಚೇತರಿಸಿಕೊಂಡವು ಎಂದು ಸಂಸ್ಥೆ ತಿಳಿಸಿದೆ.

ಶಿಶುಗಳಿಗೆ ಹೇಗೆ ಅಪಾಯ?:ಶಿಶುಗಳ ಯೋಗಕ್ಷೇಮದಲ್ಲಿ ತಾಯಂದಿರ ಆಹಾರ ಪದ್ಧತಿಯೂ ಪ್ರಮುಖ ಪಾತ್ರವಹಿಸುತ್ತದೆ. ದೇಶದ ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಪಾಲಿಷ್‌ ಮಾಡಿದ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಪಾಲಿಷ್‌ ಮಾಡುವ ವೇಳೆ ಈ ಅಕ್ಕಿಯ ಮೇಲ್ಪದರ ನಾಶವಾಗುತ್ತದೆ. ಆ ಮೇಲ್ಪದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ1 ಇರುತ್ತದೆ ಎಂಬ ಅಂಶದ ಮೇಲೆ ಅಧ್ಯಯನವು ಬೆಳಕು ಚೆಲ್ಲಿದೆ.

ಹೆಚ್ಚಾಗಿ ಬಾಣಂತಿಯರಿಗೆ ಮೊದಲ ಮೂರು ತಿಂಗಳು ಪಥ್ಯದ ಅವಧಿಯಲ್ಲಿ ಕೇವವ ಅನ್ನವನ್ನು ಮಾತ್ರ ನೀಡಲಾಗುತ್ತದೆ. ಬೇಳೆ–ಕಾಳು, ಕಾಯಿಪಲ್ಲೆಗಳ ಸೇವನೆ ನಿರ್ಬಂಧಿಸಲಾಗುತ್ತದೆ. ಪಾಲಿಷ್‌ ಮಾಡಿದ ಅಕ್ಕಿಯ ಅನ್ನವನ್ನು ಊಟಕ್ಕೆ ಬಳಸುವ ತಾಯಂದಿರ ಎದೆಹಾಲಿನಲ್ಲಿ ವಿಟಮಿನ್ ಬಿ1 ಕೊರತೆಯಾಗಿ, ಶಿಶು ಸಮಸ್ಯೆ ಎದುರಿಸುತ್ತದೆ. ಪಾಲಿಷ್‌ ಮಾಡದ ಅಕ್ಕಿಯ ಅನ್ನದ ಜತೆಗೆ ಬೇಳೆ ಕಾಳು ಹಾಗೂ ತರಕಾರಿಯನ್ನೊಳಗೊಂಡ ಊಟವನ್ನು ಒದಗಿಸಿದಲ್ಲಿ ಈ ರೀತಿಯ ಸಮಸ್ಯೆ ಆಗುವುದಿಲ್ಲಎಂದು ಅಧ್ಯಯನದಲ್ಲಿ ಹೇಳಲಾಗಿದೆ.

***

ಬಾಣಂತಿಯರಿಗೆ ಕೆಂಪು ಅಕ್ಕಿ, ರಾಗಿ, ತರಕಾರಿಗಳು ಸೇರಿದಂತೆ ಜೀವಸತ್ವಗಳು ಒಳಗೊಂಡ ಊಟ ಒದಗಿಸಬೇಕು. ಆಗ ಎದೆಹಾಲಿನ ಗುಣಮಟ್ಟವೂ ಸುಧಾರಿಸಲಿದೆ

- ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT