ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Kidney Stones | ನಿರ್ಲಕ್ಷ್ಯ ಬೇಡ, ಜಾಗೃತಿ ಇರಲಿ!

ಮೂತ್ರಪಿಂಡದಲ್ಲಿ ಕಲ್ಲು: ಪಕ್ಕೆ ನೋವು ಗ್ಯಾಸ್ಟ್ರಿಕ್ ಆಗಿರಲಾರದು, ಕಿಡ್ನಿ ಸ್ಟೋನ್ ಇರಬಹುದು
ಡಾ. ಶ್ರೇಯಸ್ ಎನ್.
Published 16 ಡಿಸೆಂಬರ್ 2023, 11:30 IST
Last Updated 16 ಡಿಸೆಂಬರ್ 2023, 11:30 IST
ಅಕ್ಷರ ಗಾತ್ರ

ಪ್ರತಿಯೊಬ್ಬರ ದೇಹದ ಪ್ರಮುಖ ಅಂಗಾಂಗಗಳಲ್ಲಿ ಕಿಡ್ನಿ ಕೂಡ ಒಂದು. ದಿನದ 24 ಗಂಟೆಗಳು ದಣಿವಿಲ್ಲದೆ ದುಡಿಯುವ ಪ್ರಮುಖ ಅಂಗಾಂಗಗಳ ಪಟ್ಟಿಗೆ ಇವುಗಳು ಸೇರುತ್ತವೆ. ಪ್ರಮುಖವಾಗಿ ರಕ್ತದಲ್ಲಿರುವಂತಹ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕ ಹೊರಗೆ ಹಾಕುವ ಕೆಲಸದ ಜೊತೆಗೆ ರಕ್ತದೊತ್ತಡದ ನಿರ್ವಹಣೆ ಹಾಗೂ ಕೆಂಪು ರಕ್ತಕಣಗಳ ಉತ್ಪತ್ತಿಯಲ್ಲಿ ಕಿಡ್ನಿಗಳ ಪಾತ್ರ ದೊಡ್ಡದು. ಈ ಕಿಡ್ನಿಗಳು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದರೆ, ಕೆಲವರ ಆರೋಗ್ಯ ಕ್ರಮಗಳಿಂದಾಗಿ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗುತ್ತದೆ. ಯಾರಲ್ಲಿ ಕಿಡ್ನಿ ಸ್ಟೋನ್‌ ಕಂಡುಬರಬಹುದು ಹಾಗೂ ಇದಕ್ಕೆ ಚಿಕಿತ್ಸೆ ಏನು ಎಂಬುದರ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ.

ಕಿಡ್ನಿ ಕಲ್ಲುಗಳ ವಿಧಗಳು

ಮೂತ್ರಪಿಂಡದ ಕಲ್ಲುಗಳನ್ನು ಮೂತ್ರಪಿಂಡದ ಕ್ಯಾಲ್ಕುಲಿ (calculi) ಎಂದೂ ಕರೆಯಲಾಗುತ್ತದೆ. ಈ ಕಲ್ಲುಗಳಲ್ಲಿ ಕ್ಯಾಲ್ಸಿಯಂ ಕಲ್ಲುಗಳು, ಯೂರಿಕ್ ಆಸಿಡ್ ಕಲ್ಲು, ಸ್ಟ್ರುವೈಟ್ ಕಲ್ಲು ಮತ್ತು ಸಿಸ್ಟೀನ್ ಸ್ಟೋನ್ಸ್ ಎಂದು ನಾಲ್ಕು ವಿಧಗಳಿವೆ. ಮೊದಲೆರಡು ವಿಧಗಳು ಸಾಮಾನ್ಯವಾಗಿ ಕಡಿಮೆ ನೀರು ಕುಡಿಯುವುದರಿಂದ ಹಾಗೂ ಅತಿ ಹೆಚ್ಚು ಕೆಂಪು ಮಾಂಸ ತಿನ್ನುವುದರಿಂದ ಕಾಣಿಸಿಕೊಳ್ಳುತ್ತವೆ. ಸ್ಟ್ರುವೈಟ್ ಮತ್ತು ಸಿಸ್ಟೀನ್ ಸ್ಟೋನ್‌ ಮೂತ್ರಪಿಂಡದ ಸೋಂಕಿನಿಂದ ಹಾಗೂ ಅನುವಂಶಿಕವಾಗಿ ಬರುವ ಸ್ಟೋನ್‌ಗಳಾಗಿವೆ. ಹೀಗಾಗಿ ನಿಮಗೆ ಯಾವ ಕಾರಣಕ್ಕೆ ಕಿಡ್ನಿಯಲ್ಲಿ ಸ್ಟೋನ್‌ ಆಗಿದೆ ಎಂಬುದನ್ನು ಮೊದಲು ಪತ್ತೆ ಮಾಡಬೇಕಾಗುತ್ತದೆ.

ಮೂತ್ರಪಿಂಡದಲ್ಲಿ ಸ್ಟೋನ್ - ಲಕ್ಷಣಗಳು

ಕಿಡ್ನಿ ಸ್ಟೋನ್‌ ಇದ್ದಾಗ ಸಾಮಾನ್ಯವಾಗಿ ಸಹಿಸಲಸಾಧ್ಯವಾದ ಪಕ್ಕೆ ನೋವು ಕಾಣಿಸುತ್ತದೆ. 120 ಡಿಗ್ರಿಗಿಂತ ಹೆಚ್ಚಿನ ಜ್ವರ, ವಾಂತಿ, ವಾಕರಿಕೆ, ಮೂತ್ರದಲ್ಲಿ ಸೋಂಕು, ಮೂತ್ರ ಮಾಡುವ ವೇಳೆ ಉರಿ ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣಗಳು. ಕೆಲವರು ಈ ಪಕ್ಕೆ ನೋವನ್ನು ಗ್ಯಾಸ್ಟ್ರಿಕ್‌ ಎಂದು ಅಪಾರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ಮಾತ್ರೆ ತೆಗೆದುಕೊಳ್ಳುತ್ತಿರುತ್ತಾರೆ. ಇದು ಕಲ್ಲಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಪಕ್ಕೆ ನೋವು ಕಾಣಿಸಿಕೊಂಡು, ಅತಿಯಾದ ಜ್ವರವಿದ್ದರೆ, ಅನುಮಾನವಿಲ್ಲದೇ ಕಿಡ್ನಿ ಸ್ಟೋನ್‌ ಪರೀಕ್ಷೆ ಮಾಡಿಸಿಕೊಳ್ಳಿ.

ಕಾರಣಗಳೇನು?

ಮೂತ್ರಪಿಂಡದಲ್ಲಿ ಕಲ್ಲು ಆಗಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಹೆಚ್ಚು ಕ್ಯಾಲ್ಸಿಯಂ, ಫಾಸ್ಟೇಟ್‌ ಹಾಗೂ ಯೂರೇಟ್‌ ಇರುವ ಆಹಾರಗಳನ್ನು ಸೇವಿಸುವುದು. ಈ ಆಹಾರಗಳು ಅಜೀರ್ಣವನ್ನುಂಟು ಮಾಡುತ್ತವೆ. ಈ ಅಜೀರ್ಣವೂ ಕ್ರಮೇಣ ಕಿಡ್ನಿಯಲ್ಲಿ ಕಲ್ಲಾಗಿ ಉತ್ಪತ್ತಿ ಮಾಡುತ್ತದೆ. ಜೊತೆಗೆ, ಕಡಿಮೆ ನೀರು ಕುಡಿಯುವುದರಿಂದ ಈ ಆಹಾರದ ಅಜೀರ್ಣತೆ ಇನ್ನಷ್ಟು ಹೆಚ್ಚಿಸಲಿದೆ. ಮತ್ತೊಂದು ಕಾರಣವೆಂದರೆ, ಕಿಡ್ನಿ ನ್ಯೂನತೆ. ಕೆಲವರು ಆನುವಂಶಿಕವಾಗಿ ಅಥವಾ ಹುಟ್ಟುತ್ತಲೇ ಕಿಡ್ನಿ ನ್ಯೂನತೆ ಇರಬಹುದು. ಈ ಸಂದರ್ಭದಲ್ಲಿ ಮೂತ್ರ ಪಿಂಡದ ಫಿಲ್ಟರ್‌ ಭಾಗವೂ ಸರಿಯಾಗಿ ಕೆಲಸ ನಿರ್ವಹಿಸದೇ ಅಲ್ಲಿಯೇ ಹೆಚ್ಚು ಸಂಗ್ರಹವಾಗುತ್ತದೆ. ಇದು ಕ್ರಮೇಣ ಕಲ್ಲಾಗಿ ಮಾರ್ಪಡಲಿದೆ. ಈ ಎರಡು ಪ್ರಮುಖ ಕಾರಣದಿಂದ ಕಿಡ್ನಿ ಸ್ಟೋನ್‌ ಆಗುತ್ತದೆ.

ಯಾವ ವಯಸ್ಸಿನಲ್ಲಿ?

ಕಿಡ್ನಿ ಸ್ಟೋನ್‌ಗೆ ಯಾವುದೇ ವಯಸ್ಸಿನ ಹಂಗಿಲ್ಲ. ಅಪೌಷ್ಟಿಕತೆ ಇರುವ ಮಕ್ಕಳ ಮೂತ್ರಕೋಶದಲ್ಲಿ ಕಲ್ಲು ಆಗುವ ಸಾಧ್ಯತೆ ಇರುತ್ತದೆ. ಇನ್ನು ದೊಡ್ಡವರಲ್ಲಿ ಅವೈಜ್ಞಾನಿಕ ಡಯೆಟ್‌ ಹಾಗೂ ಸೂಕ್ತ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದೇ ಇರುವುದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದರಿಂದ ಕಿಡ್ನಿಯಲ್ಲಿ ಕಲ್ಲು ಉತ್ಪತ್ತಿಯಾಗಲಿದೆ. ಇದಕ್ಕೆ ಪುರುಷ ಹಾಗೂ ಮಹಿಳೆ ಎನ್ನುವ ಭೇದವಿಲ್ಲ.

ಮುಂಜಾಗ್ರತೆ ಕ್ರಮವೇನು? ಚಿಕಿತ್ಸೆ ಏನು?

ಅತ್ಯಂತ ಸಾಮಾನ್ಯ ಚಿಕಿತ್ಸೆ ಎಂದರೆ, ಪ್ರತಿನಿತ್ಯ ನಾಲ್ಕರಿಂದ ಐದು ಲೀಟರ್‌ ನೀರು ಕುಡಿಯುವುದು. ಹೌದು, ನೀರು ಕುಡಿಯುವುದರಿಂದ ಕಿಡ್ನಿ ಸಂಪೂರ್ಣ ಶುದ್ಧವಾಗಲಿದೆ. ನೀರು ಅಥವಾ ಜ್ಯೂಸ್‌ಗಳನ್ನು ಸೇವಿಸಬಹುದು. ಇದು ಆರೋಗ್ಯಕ್ಕೂ ಹೆಚ್ಚು ಉಪಯುಕ್ತ. ಇದರ ಜೊತೆಗೆ, ಆಹಾರ ಕ್ರಮದಲ್ಲಿ ಕ್ಯಾಲ್ಸಿಯಂ, ಫಾಸ್ಟೇಟ್‌ ಹಾಗೂ ಯೂರೇಟ್‌ ಇರುವ ಪದಾರ್ಥಗಳನ್ನು ಕಡಿಮೆ ಮಾಡುವುದರಿಂದ ಕಿಡ್ನಿ ಸ್ಟೋನ್‌ ಕಾಣಿಸಿಕೊಳ್ಳುವುದಿಲ್ಲ.

ಈಗಾಗಲೇ ಕಿಡ್ನಿ ಸ್ಟೋನ್‌ ಆಗಿದ್ದಲ್ಲಿ, ವೈದ್ಯರ ಬಳಿ ತೆರಳಿ, ಸ್ಕ್ಯಾನ್‌ ಮಾಡಿಸಿ, ಕಲ್ಲಿನ ಗಾತ್ರದ ಬಗ್ಗೆ ತಿಳಿದುಕೊಳ್ಳಿ. ಗಾತ್ರವನ್ನು ಆಧರಿಸಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಮತ್ತೊಮ್ಮೆ ಕಿಡ್ನಿ ಸ್ಟೋನ್‌ ಆಗದಂತೆ ಕಾಪಾಡಿಕೊಳ್ಳಲು, ಈ ಮೊದಲು ಕಿಡ್ನಿ ಸ್ಟೋನ್‌ ಆಗಲು ಕಾರಣವೇನೆಂಬುದನ್ನು ತಿಳಿದುಕೊಂಡು ಮತ್ತೊಮ್ಮೆ ಆ ತಪ್ಪು ಆಗದಂತೆ ಆರೋಗ್ಯದ ಮೇಲೆ ಎಚ್ಚರಿಕೆ ವಹಿಸುವುದು ಒಳಿತು. ಪದೇ ಪದೇ ಸ್ಟೋನ್‌ ಆಗುವುದರಿಂದ ಕಿಡ್ನಿ ವೈಫಲ್ಯದ ಅಪಾಯ ಎದುರಾಗಬಹುದು ಅಥವಾ ಕಿಡ್ನಿಯು ಕಳಪೆಯಾಗಿ ಕೆಲಸ ನಿರ್ವಹಿಸಬಹುದು.

ಲೇಖಕರು: ಮೂತ್ರಶಾಸ್ತ್ರಜ್ಞ, ಫೋರ್ಟಿಸ್ ಆಸ್ಪತ್ರೆ, ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT