ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದ ಗುಟ್ಟು ಆಹಾರದಲ್ಲಿ

ಚೈತ್ರ ಕೆ. ಆಚಾರ್ಯ
Published 11 ಡಿಸೆಂಬರ್ 2023, 23:30 IST
Last Updated 11 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ
ಭಾರತದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದ್ಧತಿಗಳಿವೆ. ಪೂರ್ವಜರು ನಮ್ಮ ಸಂಸ್ಕೃತಿ, ಭೌಗೋಳಿಕ ವಿಚಾರಗಳಿಗೆ ಅನುಗುಣವಾಗಿ ಇದನ್ನು ರೂಪಿಸಿಕೊಂಡು ಬಂದಿದ್ದಾರೆ. ಕರ್ನಾಟಕ
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಯಾ ಸಾಂಪ್ರದಾಯಿಕ ಆಹಾರ ಪದ್ಧತಿ ಇರುವುದೇ ವಿಶೇಷ..

‘ಆ ರೋಗ್ಯವೇ ಭಾಗ್ಯ’ ಎಂಬ ನಾಣ್ಣುಡಿ ಇದೆ. ಆರೋಗ್ಯದ ಗುಟ್ಟು ಆಹಾರದಲ್ಲಿದೆ. ಇದಕ್ಕೆ ನಮ್ಮ ಪೂರ್ವಜರೇ ಸಾಕ್ಷಿ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಕೆಲಸದ ಒತ್ತಡ, ಸಮಯದ ಅಭಾವ, ಹಣ ಸಂಪಾದನೆಯ ಭರದಲ್ಲಿ ನಿಜವಾದ ಸಂಪತ್ತಾಗಿರುವ ಆರೋಗ್ಯದ ಬಗ್ಗೆ ಅರಿವೇ ಇರುವುದಿಲ್ಲ.

ಸರಿಯಾದ ಸಮತೋಲನ ಆಹಾರ ಪದ್ಧತಿಯಿಂದ ಆರೋಗ್ಯ ರಕ್ಷಣೆ ತುಂಬಾ ಸುಲಭ, ‘ಆಹಾರ ಪದ್ಧತಿ’ ಅಥವಾ ‘ಡಯಟ್’ಅನ್ನು ಸರಳವಾಗಿ, ನಿತ್ಯ ಸೇವಿಸುವ ಆಹಾರ ಎನ್ನಬಹುದು. ಡಯಟ್ ಎಂದರೆ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು ಎಂಬ ತಪ್ಪು ಕಲ್ಪನೆಯು ಕೆಲವರಲ್ಲಿ ಇದೆ. ಮುಖ್ಯವಾಗಿ, ‘ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದಾಗಿದೆ.

ಡಯಟ್ ಕೇವಲ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅಲ್ಲದೇ, ದೇಹವು ರೋಗದ ವಿರುದ್ಧ ಹೋರಾಡಲು, ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಲು, ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸಲು, ಸಮತೂಕವನ್ನು ಕಾಪಾಡಲು, ದೇಹದ ಎಲ್ಲಾ ಪ್ರಕ್ರಿಯೆಯನ್ನು ಉತ್ತೇಜಿಸಲು ಅದೇ ರೀತಿ ಮಾನಸಿಕವಾಗಿ ದೇಹವನ್ನು ಅಭಿವೃದ್ಧಿಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

‘ಆಹಾರ ಸೇವನೆಯ ಕ್ರಮ ಸರಿ ಇಲ್ಲದೇ ಇದ್ದರೆ ಔಷಧಗಳು ಪ್ರಯೋಜನಕ್ಕೆ ಬಾರವು’ ಎಂದು ಆಯುರ್ವೇದ ಗ್ರಂಥ ಚರಕಸಂಹಿತೆಯಲ್ಲೂ ಉಲ್ಲೇಖಿಸಿದ್ದಾರೆ. ಇದು ಔಷಧ ಸೇವನೆಗಿಂತ ಆಹಾರ ಕ್ರಮದ ಪರಿಪಾಲನೆಯ ಮಹತ್ವವನ್ನು ತಿಳಿಸುತ್ತದೆ.

ಭಾರತದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಹಾರ ಪದ್ಧತಿಗಳಿವೆ. ಪೂರ್ವಜರು ನಮ್ಮ ಸಂಸ್ಕೃತಿ, ಭೌಗೋಳಿಕ ವಿಚಾರಗಳಿಗೆ ಅನುಗುಣವಾಗಿ ಇದನ್ನು ರೂಪಿಸಿಕೊಂಡು ಬಂದಿದ್ದಾರೆ. ಕರ್ನಾಟಕ
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಯಾ ಸಾಂಪ್ರದಾಯಿಕ ಆಹಾರ ಪದ್ಧತಿ ಇರುವುದೇ ವಿಶೇಷ. ನಾನು ಮೂಲತಃ ಕರಾವಳಿ ಪ್ರದೇಶದವಳು; ಅಲ್ಲಿ ಕುಚ್ಚಲಕ್ಕಿಯಿಂದ ತಯಾರಿಸಿದ ಗಂಜಿ ದೇಹಕ್ಕೆ ತಂಪು. 

ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಅವುಗಳ ಚಿಕಿತ್ಸಾ ಗುಣಗಳು, ತಯಾರಿಸುವ ರೀತಿ, ಆಹಾರ ಸಂಸ್ಕರಣೆ ಮತ್ತು ಶೇಖರಿಸುವ ವಿಧಾನಗಳೆಲ್ಲವೂ ತಲೆಮಾರುಗಳಿಂದ ಬಂದ ಬಳುವಳಿಯಾಗಿವೆ. 

ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ತಿಂಡಿ ತಿನಿಸುಗಳು,  ಖಾದ್ಯ, ರಸಾಯನ, ಪಲ್ಯ, ಅಂಬಲಿ, ಕಷಾಯ ಮತ್ತು ಪಾನೀಯಗಳು. ಮಣ್ಣಿನ ಪಾತ್ರೆಯಲ್ಲಿ ತಯಾರಿಸಿ, ಆಹಾರವನ್ನು ಬಾಳೆಎಲೆ ಮೇಲೆ ಬಡಿಸಿ ನೆಲದ ಮೇಲೆ ಕುಳಿತು ಊಟಮಾಡುವ ಪದ್ಧತಿಯಿತ್ತು. ಅದರ ಮಹತ್ವವೇ ಬೇರೆ. ಆದರೆ, ಈಗಿನ ಪೀಳಿಗೆ ಆಧುನಿಕತೆ ಮತ್ತು ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವದಿಂದಾಗಿ ನಾಲಿಗೆಯ ರುಚಿಗಷ್ಟೆ ಬೆಲೆಕೊಟ್ಟು ಸಾಂಪ್ರದಾಯಿಕ ಆಹಾರದ ಉಪಯುಕ್ತತೆಯ ಕುರಿತು ಅರಿವೇ ಇಲ್ಲ.

ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಆಹಾರವೇ ಔಷಧಿಯಾಗಿತ್ತು. ಇಂದು ಔಷಧಿಯೇ ಆಹಾರವಾಗಿದೆ!. ಜನರು ರುಚಿಕರ ಆಹಾರದ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಮತ್ತು ಆಹಾರದ ಗುಣಮಟ್ಟದ ಬಗ್ಗೆ ಗಮನಹರಿಸುವುದಿಲ್ಲ. ಜಂಕ್‌ಪುಡ್, ಫಾಸ್ಟ್‌ಫುಡ್‌ಗಳಲ್ಲಿ ಪೋಷಕಾಂಶಗಳಿಗಿಂತ ರುಚಿಗಾಗಿ ಅಥವಾ ಶೇಖರಣೆಗಾಗಿ ಸೇರಿಸುವ ರಾಸಾಯನಿಕ ಪದಾರ್ಥಗಳೇ ಅಧಿಕ. ಅತಿ ಹೆಚ್ಚು ಕ್ಯಾಲೋರಿ, ಸೋಡಿಯಂ, ಆರೋಗ್ಯಕರವಲ್ಲದ ಕೊಬ್ಬು (ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು) ಹೊಂದಿರುವುದರಿಂದ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಬೊಜ್ಜಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹುಟ್ಟುವ ಮಗುವಿನಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ದೇಹದ ಪ್ರತಿಯೊಂದು ಭಾಗಕ್ಕೂ ಪೋಷಕಾಂಶದ ಅಗತ್ಯವಿದೆ. ದೇಹಕ್ಕೆ ಅಗತ್ಯವಿರುವ ಕಾರ್ಬೋ ಹೈಡ್ರೇಟ್‌ಗಳು, ನಿತ್ಯ ಸೇವಿಸುವ
ಧಾನ್ಯಗಳಲ್ಲಿ ಅಡಕವಾಗಿವೆ. ಇದು ದೇಹಕ್ಕೆ ಶಕ್ತಿ ನೀಡಿ, ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ. ಅದೇ ರೀತಿ ಶಾರೀರಿಕ ಬೆಳವಣಿಗೆ ಮತ್ತು ವಿಶೇಷವಾಗಿ ಮೂಳೆಗಳು, ಸ್ನಾಯುಗಳು, ಚರ್ಮ, ಹಾರ್ಮೋನುಗಳು, ಕಿಣ್ವಗಳು ಮತ್ತು ರಾಸಾಯನಿಕಗಳನ್ನು ಉತ್ಪಾದಿಸಲು ಪ್ರೊಟೀನ್ ಅತ್ಯಗತ್ಯ.

ಸಸ್ಯ ಮೂಲಗಳಾದ ದ್ವಿದಳ ಧಾನ್ಯಗಳು, ಕಾಳುಗಳಲ್ಲಿ ಅದೇ ರೀತಿ ಪ್ರಾಣಿ ಮೂಲಗಳಾದ ಹಾಲು, ಹಾಲಿನ ಉತ್ಪನ್ನಗಳಲ್ಲಿ, ಮೊಟ್ಟೆ, ಮೀನು, ಕೋಳಿ ಇವುಗಳಲ್ಲಿ ಹೇರಳವಾಗಿದೆ. ಎಲ್ಲಾ ಕೊಬ್ಬು ಕೆಟ್ಟದ್ದಲ್ಲ.ಬೀಜಗಳು, ಸಸ್ಯಜನ್ಯ ಎಣ್ಣೆಗಳು ಹಾಗೂ ಮೀನುಗಳಲ್ಲಿ ಲಭಿಸುವ ಕೊಬ್ಬುಗಳಲ್ಲಿ, ಓಮೆಗಾ 3 ಹಾಗೂ ಓಮೆಗಾ 6 ಎಂಬ ಉತ್ತಮ ಕೊಬ್ಲಿನಾಮ್ಲಗಳನ್ನೊಳಗೊಂಡು, ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಸಮತೋಲನ ಆಹಾರ ಪದ್ಧತಿಯಲ್ಲಿ ಸರಿಯಾದ ಆಹಾರದ ಆಯ್ಕೆ ತುಂಬಾ ಮುಖ್ಯ. ಸಂಸ್ಕರಿಸಿದ ಧಾನ್ಯಗಳು (ಮೈದಾ), ಸಂಸ್ಕರಿಸಿದ ಸಕ್ಕರೆ, ಹುರಿದ ಆಹಾರ ಪದಾರ್ಥಗಳು, ಜಂಕ್‌ಪುಡ್‌ಗಳು, ತ್ವರಿತ ಆಹಾರಗಳು ಸೇರಿ ಇನ್ನಿತರ ಅನಾರೋಗ್ಯಕರ ಆಹಾರಗಳಿಂದ ದೂರವಿರಬೇಕು.

ದೇಹಕ್ಕೆ ಅಗತ್ಯವಾದ ಆಹಾರವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುತ್ತಾ ಹೋಗುವುದು ಕಷ್ಟವಲ್ಲ ಮತ್ತು ದುಬಾರಿಯೂ ಅಲ್ಲ. ಆದರೆ, ಅದರ ಕುರಿತು ಅರಿವು ತುಂಬಾ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT