ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಕರದೇ ಒತ್ತಡ ಮುಕ್ತಿಗೆ ಮಾರ್ಗ!

Last Updated 13 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮನೆಯ ಮುಂದಿರುವ ಪಾರ್ಕ್‌ನಲ್ಲಿ ಕಳೆದ 3–4 ವರ್ಷಗಳ ಹಿಂದೆ ‘ಲಾಫ್ಟರ್‌ ಕ್ಲಬ್‌’ ಸದಸ್ಯರು ಸೇರಿ ಪ್ರತಿ ದಿನ ಬೆಳಿಗ್ಗೆ 10 ನಿಮಿಷಗಳ ಕಾಲ ನಗುವಿನ ಬುಗ್ಗೆ ಎಬ್ಬಿಸಿಕೊಂಡು ಖುಷಿಯಿಂದ ಮನೆಗೆ ತೆರಳುವುದು ರೂಢಿಯಾಗಿತ್ತು. ಆದರೆ ಕ್ರಮೇಣ ಈ ಕ್ಲಬ್‌ನ ಸದಸ್ಯರ ಸಂಖ್ಯೆ ಕುಸಿಯುತ್ತ ಹೋಗಿ ಆ ‘ಹಾಹಾ.. ಹೋಹೋ..’ ಎಂಬ ನಗುವಿನ ಅಲೆಯ ಸದ್ದು ಅಡಗಿ ಹೋಗಿತ್ತು. ಈ ನಗುವಿಗೆ ತಮ್ಮ ಧ್ವನಿ ಸೇರಿಸುತ್ತಿದ್ದ ಸುತ್ತಮುತ್ತಲಿನ ಮನೆಗಳ ನಿವಾಸಿಗಳಿಗೂ ಏನನ್ನೋ ಕಳೆದುಕೊಂಡ ಬೇಸರ.

ಆದರೆ ಈ ಕೋವಿಡ್‌–19 ಆರಂಭವಾದಾಗ ಲಾಕ್‌ಡೌನ್‌ ನಂತರ ಪಾರ್ಕ್‌ಗಳನ್ನು ಪುನಃ ತೆರೆಯಲಾಯಿತು. ಆರಂಭದಲ್ಲಿ ಒಂದೆರಡು ಗಂಟೆಗಳ ಅವಕಾಶ ನೀಡಿ ಕ್ರಮೇಣ ಮಾಮೂಲು ಅವಧಿಯವರೆಗೆ ಪಾರ್ಕ್‌ಗಳಲ್ಲಿ ಅವಕಾಶ ನೀಡಲಾಯಿತು. ಮನೆಯ ಮುಂದಿನ ಪಾರ್ಕ್‌ನಲ್ಲಿ ಕೂಡ ಚಟುವಟಿಕೆ ಶುರುವಾದ ಜೊತೆಗೆ ಬೆಳಿಗ್ಗೆ ನಗುವಿನ ಸದ್ದು ಮತ್ತೆ ಕೇಳಲಾರಂಭಿಸಿ ಒಂದು ರೀತಿಯ ಪುಳಕ ಎಬ್ಬಿಸಿದ್ದಂತೂ ನಿಜ. ಮೊದಲು ಹಿರಿಯ ನಾಗರಿಕರು ಮಾತ್ರ ಈ ನಗುವಿನ ವ್ಯಾಯಾಮ ಮುಗಿಸಿಕೊಂಡು ಹೋಗುವುದು ರೂಢಿಯಾಗಿತ್ತು. ಆದರೆ ಈಗ ಮುಂಜಾವಿನ ವಾಕಿಂಗ್‌ ಮುಗಿಸಿದವರು, ಆಗತಾನೇ ನಡಿಗೆ ಆರಂಭಿಸಿದವರು, ಪಾರ್ಕ್‌ನಲ್ಲಿ ಆಟದಲ್ಲಿ ನಿರತರಾದ ಪುಟ್ಟ ಮಕ್ಕಳು ಎಲ್ಲರೂ ಸೇರಿಕೊಂಡು ಈ ನಗುವಿನ ವ್ಯಾಯಾಮದಲ್ಲಿ ಪಾಲ್ಗೊಳ್ಳುತ್ತಿರುವುದು ಹೊಸ ಬೆಳವಣಿಗೆ.

ಸದ್ಯಕ್ಕಂತೂ ಯಾವಾಗ ಕೊನೆಯಾಗುತ್ತದೆ ಎಂದು ಗೊತ್ತಿಲ್ಲದ, ಒಂದು ರೀತಿಯ ನಿರಾಶೆ, ಮಾನಸಿಕ ತೊಳಲಾಟ ಮೂಡಿಸಿಬಿಟ್ಟಿರುವ ಈ ಕೊರೊನಾ ಸೋಂಕಿನಿಂದಾಗಿ ಬಹುತೇಕರು ಖಿನ್ನತೆಗೆ ಜಾರುತ್ತಿದ್ದಾರೆ. ಇದಕ್ಕೆಲ್ಲ ಮನಃಶಾಸ್ತ್ರಜ್ಞರು, ಆಪ್ತಸಮಾಲೋಚಕರು ನೀಡುತ್ತಿರುವ ಸಲಹೆಗಳಲ್ಲಿ ಒಂದು ನಗುವಿನ ಚಿಕಿತ್ಸೆ.

ಹಾಸ್ಯ ಪ್ರಸಂಗಗಳು..

ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಂತೂ ಎಲ್ಲ ಸಂಕಟಗಳನ್ನು ಮರೆಯಲು ಒಂದಿಷ್ಟು ನಗುವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುವುದು, ಇರುವ ಅನಾರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಯಾರಿಗೆ ಬೇಕು ಹೇಳಿ? ಜಪಾನ್‌ನಲ್ಲಿ ನಡೆದ ಅಧ್ಯಯನದ ಪ್ರಕಾರ ಈ ನಗು ಎನ್ನುವುದು ದೀರ್ಘಾಯುಷ್ಯಕ್ಕೂ ಕಾರಣವಂತೆ. ಅದೂ ಮಹಿಳೆಯರಲ್ಲಿ ನಗು ಮತ್ತು ದೀರ್ಘಾಯುಷ್ಯಕ್ಕೆ ಒಂದಕ್ಕೊಂದು ನಂಟಿದೆಯಂತೆ. ಮನಃಪೂರ್ತಿ ನಕ್ಕರೆ ಹೃದ್ರೋಗದ ಸಾಧ್ಯತೆಯೂ ಕಡಿಮೆ ಎನ್ನುತ್ತದೆ ಅಧ್ಯಯನದ ವರದಿ.

ಆದರೆ ಈ ನಗು ಸುಮ್ಮನೆ ಹಾಹಾ ಎಂಬುದಕ್ಕಷ್ಟೇ ಸೀಮಿತವಾಗಿರಬಾರದು ಎಂಬುದು ಬೆಂಗಳೂರಿನ ವೈದ್ಯ ಡಾ.ಸತೀಶ್‌ ಎಂ. ಸಲಹೆ. ಹೊಟ್ಟೆ ಬಿರಿಯುವಂತಹ ನಗು ಎನ್ನುತ್ತಾರಲ್ಲ, ಆ ರೀತಿ ನಗಬೇಕು, ಕಣ್ಣಲ್ಲಿ ನೀರು ಬರುವಷ್ಟು ನಗು ಉಕ್ಕಬೇಕು ಎನ್ನುತ್ತಾರೆ ಅವರು. ಹಾಸ್ಯವಾಗಿ ಮಾತನಾಡುವುದು, ಹಾಸ್ಯ ಪ್ರಸಂಗ ಹೇಳಿಕೊಂಡು ನಗುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಭಾವನೆ ಕಡಿಮೆಯಾಗುತ್ತದೆ ಎಂಬುದು ಗೊತ್ತೇ ಇದೆ. ಹಾಗೆಯೇ ಈ ಕೋವಿಡ್‌ ಸಂದರ್ಭದಲ್ಲಂತೂ ನಮ್ಮ ಮನಸ್ಸು ಚೇತರಿಸಿಕೊಳ್ಳುವುದು ಇಂತಹ ನಗುವಿನಿಂದಲೇ.

ಹಾಸ್ಯ ಎಲ್ಲಿ ಹುಡುಕುವುದು ಎಂಬ ಚಿಂತೆ ಬೇಡ. ಈ ಚಿಂತೆ ಬಿಡುವುದೇ ಮುಖ್ಯ ಗುರಿ ಅಲ್ಲವೇ? ಲಾಕ್‌ಡೌನ್‌ ಸಂದರ್ಭ ನಡೆದ ಕೆಲವು ಘಟನೆಗಳನ್ನೇ ನೆನಪಿಸಿಕೊಂಡು ಅದರಲ್ಲಿ ಹಾಸ್ಯ ಹುಡುಕಬಹುದು. ಅದರಿಂದ ಒಂದಿಷ್ಟು ಆತಂಕವೂ ಮಾಯವಾಗಲು ಸಾಧ್ಯ. ಕಾಮಿಡಿ ಶೋಗಳು ಟಿವಿಯಲ್ಲಿ ಪ್ರಸಾರವಾಗುತ್ತವೆ. ಅದನ್ನು ನೋಡಬಹುದು. ಸ್ನೇಹಿತರಿಗೆ ವಾಟ್ಸ್‌ಆ್ಯಪ್‌ ಮೂಲಕ ಜೋಕ್‌ಗಳನ್ನು ಕಳಿಸಬಹುದು. ಒಟ್ಟಿನಲ್ಲಿ ಹಾಸ್ಯ ನಗು ಮೂಡಿಸುವಂತಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT