ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಿಷ್ಟು ತಿಳಿಯೋಣ: ಚೇತರಿಕೆ ನಂತರ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡಿ

Last Updated 23 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ, ಉಪಚಾರದ ನಂತರ ನೆಗೆಟಿವ್ ಫಲಿತಾಂಶ ಬಂದ ಮೇಲೂ ಶಕ್ತಿ ಮತ್ತು ಆರೋಗ್ಯವನ್ನು ಮರಳಿ ಪಡೆಯಲು ಸಾಕಷ್ಟು ಸಮಯ ಬೇಕಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಗಳಿಸಲು ಪೌಷ್ಟಿಕಾಂಶದ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ದೇಹದ ವಿವಿಧ ಭಾಗಗಳಲ್ಲಿ ಬರುವ ನೋವು ಮತ್ತು ಆಯಾಸ ನಿಯಂತ್ರಿಸಲು ಸರಳ ಯೋಗ, ಪ್ರಾಣಾಯಾಮ, ಧ್ಯಾನ ಸಹಕಾರಿ.

‘ಚೇತರಿಕೆಯ ಪ್ರಕ್ರಿಯೆಯಲ್ಲಿ ಯೋಗವು ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಾಡಾಸನ, ಅರ್ಧ ಚಕ್ರಾಸನ, ಪಾದ ಹಸ್ತಾಸನ, ತ್ರಿಕೋಣಾಸನ, ವೀರಭದ್ರಾಸನ, ಬದ್ಧ ಕೋಣಾಸನ, ಪರ್ವತಾಸನ, ಅರ್ಧ ಉಷ್ಟಾçಸನ, ಉತ್ತಿತ ಏಕಪಾದಾಸನ, ಸೇತುಬಂಧ, ಪವನ ಮುಕ್ತಾಸನ, ಸರ್ವಾಂಗಾಸನ, ಮಕರಾಸನ, ಸುಪ್ತ ವೀರಾಸನ, ಭುಜಂಗಾಸನ, ಅಧೋಮುಖ ಶ್ವಾನಾಸನ, ಶವಾಸನವನ್ನು ದಿನಕ್ಕೆ ಮೂರು ಬಾರಿ ಮಾಡಿದರೆ ಚೇತರಿಕೆಗೆ ಅನುಕೂಲ’ ಎನ್ನುತ್ತಾರೆ ಯೋಗ ತರಬೇತುದಾರ ಮಂಗಳೂರಿನ ಗೋಪಾಲಕೃಷ್ಣ ದೇಲಂಪಾಡಿ.

ಪ್ರಾಣಾಯಾಮಗಳಲ್ಲಿ ಮುಖ್ಯವಾಗಿ ಸುಖಪ್ರಾಣಾಯಾಮ, ನಾಡೀಶುದ್ಧಿ ಪ್ರಾಣಾಯಾಮ, ಭ್ರಾಮರಿ ಪ್ರಾಣಾಯಾಮ, ಉಜ್ಜಯೀ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗಲು ಸಹಕಾರಿ ಹಾಗೂ ಇದರಿಂದ ಶ್ವಾಸಾಂಗವ್ಯೂಹದ ವ್ಯವಸ್ಥೆಯು ಸುಧಾರಿಸುತ್ತದೆ. ಪ್ರಾಣಾಯಾಮದಿಂದ ಮೂಗಿನ ವಾಯು ಸಂಚಾರದ ಮಾರ್ಗ ಬಲಗೊಂಡು ಶ್ವಾಸನಾಳಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ. ಅದರಲ್ಲಿ ಮುಖ್ಯವಾಗಿ ಉಸಿರಾಟದ ವ್ಯಾಯಾಮ, ಮೊಲ ಉಸಿರಾಟ (ಶಶಾಂಕಾಸನ) ಮಾಡಿದರೆ ಹೆಚ್ಚಿನ ಆಮ್ಲಜನಕವನ್ನು ಶ್ವಾಸಕೋಶ ಹೀರಿಕೊಳ್ಳುತ್ತದೆ ಎನ್ನುತ್ತಾರೆ ದೇಲಂಪಾಡಿ.

ಇದನ್ನೆಲ್ಲಾ ಜಾಗರೂಕತೆಯಿಂದ ಗುರುಮುಖೇನ ಕಲಿತು ಅಭ್ಯಾಸ ಮಾಡಿ. ಆರಂಭದಲ್ಲಿ ಯಾವುದು ಮಾಡಲು ಸುಲಭವೋ ಅಂತಹ ಆಸನಗಳನ್ನು, ಪ್ರಾಣಾಯಾಮವನ್ನು ಅಭ್ಯಾಸ ಮಾಡಿ. ಜೊತೆಗೆ ತಲಾ ಹತ್ತು ನಿಮಿಷಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಧ್ಯಾನ ಮಾಡಿ. ದೇಹದ ಅಂಗಾಂಗಗಳನ್ನು ಸಡಿಲಗೊಳಿಸುವ ವ್ಯಾಯಾಮಗಳನ್ನು ಮಾಡಬಹುದು.

ಆರಂಭದಲ್ಲಿ ಕುರ್ಚಿಯಲ್ಲಿ ಕುಳಿತು ಮಾಡುವ ವ್ಯಾಯಾಮಗಳನ್ನು ಮಾಡಿ. ಆಮೇಲೆ ಮಲಗಿ ಮಾಡುವ ಸರಳ ವ್ಯಾಯಾಮಗಳನ್ನು ಮಾಡಿ. ಕಣಕಾಲು, ಮೊಣಕಾಲು, ಸೊಂಟ, ಬೆನ್ನು, ಮಣಿಕಟ್ಟು, ಮೊಣಕೈ, ಭುಜ ಮತ್ತು ಕತ್ತಿನಂತಹ ಎಲ್ಲಾ ನಿರ್ಣಾಯಕ ಕೀಲುಗಳನ್ನು ಚಲಿಸುವುದರಿಂದ ರಕ್ತ ಪರಿಚಲನೆಯನ್ನು ಸುಧಾರಿಸಲು ಮತ್ತು ದೇಹದ ನೋವು ಕಡಿಮೆ ಮಾಡಲು ಸಹಾಯವಾಗುತ್ತದೆ. ಇದರೊಂದಿಗೆ ಒತ್ತಡ ನಿರ್ವಹಣೆ ಸಹ ಚೇತರಿಕೆಗೆ ಅವಶ್ಯಕ. ಯೋಗವು ಮೆದುಳಿನ ವಿಶ್ಲೇಷಣಾತ್ಮಕ ಭಾಗಕ್ಕೆಪ್ರಯೋಜನವನ್ನು ನೀಡುತ್ತದೆ.

ಯೋಗದಿಂದ ಉತ್ಪತ್ತಿಯಾಗುವ ಕೆಲವು ಹಾರ್ಮೋನ್‌ಗಳು ನಿಮಗೆ ಏಕಾಗ್ರತೆ, ಸಕಾರಾತ್ಮಕ ಯೋಚನೆ ಮಾಡಲು ಮತ್ತು ಲವಲವಿಕೆಯಿಂದಿರಲು ಸಹಾಯ ಮಾಡುತ್ತವೆ. ಯೋಗಾಸನವು ಸೌಮ್ಯವಾದ ವ್ಯಾಯಾಮವಾಗಿದ್ದು ಅದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ನಿದ್ರಾಹೀನತೆ, ಮೈಗ್ರೇನ್, ಮಲಬದ್ಧತೆ ಮುಂತಾದ ಸಾಮಾನ್ಯ ಕಾಯಿಲೆಗಳನ್ನು ಯೋಗಾಭ್ಯಾಸದಿಂದ ತಡೆಗಟ್ಟಬಹುದು ಅಥವಾ ಗುಣಪಡಿಸಬಹುದು ಎನ್ನುತ್ತಾರೆ ಗೋಪಾಲಕೃಷ್ಣ ದೇಲಂಪಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT