ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕಲಿಸಿದ ಪಾಠ: ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ

Last Updated 31 ಆಗಸ್ಟ್ 2020, 6:41 IST
ಅಕ್ಷರ ಗಾತ್ರ

ಕೋವಿಡ್ ಮಹಾಮಾರಿಯು ಒಂದು ವೈರಾಣುವಿನ ಸೋಂಕಾಗಿದ್ದು ಕೆಮ್ಮುವುದರಿಂದ, ಸೀನುವುದರಿಂದ ಹೊರಬರುವ ಉಸಿರಾಟದ ಹನಿಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಬಾಯಿಯಲ್ಲಿ ಸ್ರವಿಸುವ ಉಗುಳಿನಲ್ಲಿ ಈ ವೈರಾಣುವಿನ ಸಂಖ್ಯೆಯು ಸೋಂಕಿತ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುವುದು. ಬಾಯಿಯಲ್ಲಿ ಅನೇಕ ತರಹದ ಸೂಕ್ಷ್ಮಜೀವಿಗಳನ್ನು ಅದರಲ್ಲಿಯೂ ಬ್ಯಾಕ್ಟೀರಿಯಾವನ್ನು ನಾವು ಕಾಣಬಹುದಾಗಿದೆ. ವಸಡಿನ ಸೋಂಕು ಅಥವಾ ಇತರೆ ಬಾಯಿಯ ಸೋಂಕಿನಿಂದ ಬಾಯಿಯ ಬ್ಯಾಕ್ಟೀರಿಯಾ ಅಂಶವು ಹೆಚ್ಚುತ್ತದೆ.

ಬಾಯಿಯ ಸ್ವಚ್ಛತೆ ಹಾಗೂ ಕೋವಿಡ್

ಬಾಯಿಯ ಸ್ವಚ್ಛತೆಯು ಕಡಿಮೆಯಾದಲ್ಲಿ ಇಂತಹ ಬ್ಯಾಕ್ಟೀರಿಯಾದ ಅಂಶವು ಹೆಚ್ಚುತ್ತದೆ. ಇಂತಹ ಸಂದರ್ಭದಲ್ಲಿ ವೈರಾಣುವಿನಿಂದ ಆಗುವ ಸೋಂಕಿನ ಸಂಕೀರ್ಣತೆಗಳು ಸಹ ಹೆಚ್ಚುತ್ತದೆ ಎಂಬುದು ಅಧ್ಯಯನಗಳ ವರದಿ. ವಸಡಿನ ಸಮಸ್ಯೆಯಿರುವವರಲ್ಲಿ ಸೋಂಕಿಗೆ ಕಾರಣವಾದ ಬ್ಯಾಕ್ಟೀರಿಯಾ ಅಂಶವು ಹೆಚ್ಚಿರುತ್ತದೆ. ಇಂತಹ ಬ್ಯಾಕ್ಟೀರಿಯಾಗಳು ಸ್ರವಿಸುವ ಕೆಲ ಅಂಶಗಳಾದ ಇನ್‍ಟರ್‍ಲ್ಯೂಕಿನ್ (interleukin - IL) ಹಾಗೂ ಅಂಗಾಂಶವನ್ನು ನಾಶಮಾಡುವ (tissue necrosis factor-TNF) ಎಂಜಲಿನ ಮೂಲಕ ಹೆಚ್ಚಾಗಿ ಶ್ವಾಸಕೋಶವನ್ನು ತಲುಪಿ ಸೋಂಕನ್ನು ತೀವ್ರಗೊಳಿಸುತ್ತವೆ. ಆದ್ದರಿಂದ ಬಾಯಿಯ ಆರೋಗ್ಯವು ಉಸಿರಾಟದ ಸೋಂಕನ್ನು ಕಡಿಮೆ ಮಾಡಲು ಹಾಗೂ ಕೋವಿಡ್-19 ರ ಸಂಕೀರ್ಣತೆಯನ್ನು ಕಡಿಮೆ ಮಾಡಲು ಅತ್ಯವಶ್ಯಕ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆಗಳು, ಅತಿಯಾದ ತೂಕ ಹಾಗೂ ಸ್ವಚ್ಛವಿಲ್ಲದ ಬಾಯಿ ಮುಂತಾದವುಗಳಿಂದ ಕೋವಿಡ್-19 ಸೋಂಕಿನ ತೀವ್ರತೆಯು ಹೆಚ್ಚಾಗಬಹುದಾಗಿದೆ.

ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು?

• ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಎದ್ದೊಡನೆ ಹಾಗೂ ರಾತ್ರಿ ಊಟವಾದ ನಂತರ ಟೂತ್‍ಬ್ರಷ್ ಹಾಗೂ ಪೇಸ್ಟ್‌ನೊಂದಿಗೆ ಕನಿಷ್ಠ 3-4 ನಿಮಿಷ ಉಜ್ಜಬೇಕು.

• ಹಲ್ಲುಜ್ಜಿದ ನಂತರ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ಸೇವಿಸುವುದರಿಂದ ದೂರ ಉಳಿಯಬೇಕು.

• ಹಲ್ಲುಜ್ಜಿದ ನಂತರ ಡೆಂಟಲ್ ಫ್ಲಾಸ್‍ನ್ನು ಬಳಸಿ ಹಲ್ಲಿನ ಸಂದುಗಳನ್ನು ಸ್ವಚ್ಛಗೊಳಿಸಬೇಕು.

• ವಸಡುಗಳನ್ನು ನವಿರಾಗಿ ಮಸಾಜ್ ಮಾಡಬೇಕು.

• ಟೂತ್ ಬ್ರಷ್‍ಗಳನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು ಅಥವಾ ಬ್ರಷ್‍ನ ಬ್ರಿಸಲ್‌ಗಳು ಸವೆದರೆ ಬದಲಾಯಿಸಬಹುದಾಗಿದೆ.

• ಕೋವಿಡ್‍ನಿಂದ ಸೋಂಕಿತರಾಗಿದ್ದವರು ಕಾಯಿಲೆ ಗುಣಮುಖವಾದೊಡನೆ ಬ್ರಷ್‍ನ್ನು ಬದಲಾಯಿಸಬೇಕು.

• ಬಾಯಿಯನ್ನು ಸ್ವಚ್ಛವಾಗಿಡಲು ಹಾಗೂ ಬ್ಯಾಕ್ಟೀರಿಯ ಪ್ರಮಾಣವನ್ನು ಕಡಿಮೆ ಮಾಡಲು ಬಾಯಿ ಮುಕ್ಕಳಿಸುವ ದ್ರವವನ್ನು ಬಳಸಬಹುದಾಗಿದೆ.

• ಗಂಟಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಬೆಚ್ಚಗಿನ ನೀರಿನಲ್ಲಿ ಅಥವಾ ಉಪ್ಪಿನ ನೀರಿನಲ್ಲಿ ಗಾರ್ಗಲ್ ಮಾಡುವುದು ಅವಶ್ಯಕ.

• ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಮತೋಲನವಾದ ಆಹಾರ, ನಾರಿನಾಂಶವಿರುವ ಆಹಾರ ಹಾಗೂ ಸಕ್ಕರೆ ಅಂಶ ಕಡಿಮೆಯಿರುವ ಪದಾರ್ಥಗಳನ್ನು ಸೇವಿಸುವುದು ಅತ್ಯವಶ್ಯಕ.

• ದಿನಕ್ಕೆ 2-3 ಲೀಟರ್ ನೀರನ್ನು ಸೇವಿಸುವುದರಿಂದ ಬಾಯಿಯ ಸ್ವಚ್ಛತೆಗೆ ಅದು ಪೂರಕ.

• ಕೃತಕ ದಂತ ಪಂಕ್ತಿಗಳನ್ನು ಹೊಂದಿರುವವರು ಬಾಯಿಯ ಸ್ವಚ್ಛತೆಯ ಬಗ್ಗೆ ಅತ್ಯಂತ ಜಾಗರೂಕರಾಗಿರುವುದು ಅತ್ಯವಶ್ಯಕ. ಕೃತಕ ದಂತ ಪಂಕ್ತಿಗಳನ್ನು ಸ್ವಚ್ಛಗೊಳಿಸುವ ದ್ರವಗಳಲ್ಲಿ ಮುಳುಗಿಸಿ ಇಡಬಹುದಾಗಿದೆ.

• ಆರು ತಿಂಗಳಿಗೊಮ್ಮೆ ದಂತ ವೈದ್ಯರೊಂದಿಗೆ ಸಮಲೋಚನೆಗೆ ಒಳಪಡುವುದು ಅವಶ್ಯಕ.

ಯಾವುದನ್ನು ತಪ್ಪಿಸಬೇಕು

• ಟೂತ್ ಬ್ರಷ್‍ಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು.

• ಟೂತ್ ಬ್ರಷ್‍ಗಳನ್ನು ಕ್ಯಾಪ್‍ನೊಂದಿಗೆ ಕವರ್ ಮಾಡುವುದರಿಂದ ಸ್ವಚ್ಛವಾಗಿಡಬಹುದಾಗಿದೆ.

• ಟೂತ್ ಪೇಸ್ಟ್ ಹಾಗೂ ಬ್ರಷ್‍ಗಳನ್ನು ಟಾಯ್ಲೆಟ್ ಪಾಟ್‍ಗಳಿಂದ ಕನಿಷ್ಠ 6 ಅಡಿ ದೂರದಲ್ಲಿಡಬೇಕು ಹಾಗೂ ಟಾಯ್ಲೆಟ್ ಪಾಟ್‍ಗಳನ್ನು ಉಪಯೋಗಿಸಿದ ನಂತರ ಮುಚ್ಚಬೇಕು.

• ಸವೆದ ಬ್ರಷ್‍ಗಳನ್ನು ಬಳಸುವುದನ್ನು ತಪ್ಪಿಸಬೇಕು.

• ಟೂತ್ ಬ್ರಷ್ , ಪೇಸ್ಟ್, ಟವೆಲ್ ಮುಂತಾದ ವಸ್ತುಗಳನ್ನು ಇಡುವ ಸ್ಥಳಗಳನ್ನು ಸ್ವಚ್ಛವಾಗಿಡಬೇಕು.

ಆದುದರಿಂದ ಬಾಯಿಯ ಸ್ವಚ್ಛತೆ ಕೋವಿಡ್-19 ತೀವ್ರತೆಯನ್ನು ಕಡಿಮೆಮಾಡಲು ಅತ್ಯವಶ್ಯಕ. ಹೀಗಾಗಿ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಈ ಸೋಂಕಿನ ಸಂಕೀರ್ಣತೆಗಳನ್ನು ಕಡಿಮೆ ಮಾಡಲು ಬೇಕಾಗಿರುವ ಅಂಶ ಎಂಬುದನ್ನು ನಾವೆಲ್ಲರೂ ಮನಗಾಣಬೇಕು.

ಲೇಖಕರು: ಡಾ. ಸ್ಮಿತಾ ಜೆ.ಡಿ., ಹಿರಿಯ ದಂತ ವೈದ್ಯಾಧಿಕಾರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT