ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ತುಡಿತದಲ್ಲಿ ರಾಗಭಾವ

Last Updated 7 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

ಈ ಎರಡು–ಮೂರು ವರ್ಷದಲ್ಲಿ ನಮ್ಮನ್ನು ಕಾಡಿದ ಈ ಒತ್ತಡ, ಪ್ರಾಯಶಃ ಶತಮಾನದಲ್ಲಿ ಕಾಡಿಲ್ಲವೇನೋ! ಪ್ರತಿ ಕುಟುಂಬದ, ಸ್ನೇಹಿತರ ಗುಂಪಿನಲ್ಲಿ ಸಾವು–ನೋವಿನಿಂದ ಕಣ್ಮರೆಯಾದವರ ಸುದ್ದಿ ಬಂದಾಗಲೆಲ್ಲ ಮನಸ್ಸು ಮೂಕವಾಗುತ್ತಿತ್ತು. ಆದರೂ ಮನುಷ್ಯನ ಬದುಕಿನ ಛಲ ದೊಡ್ಡದು. ನಮ್ಮ ಬದುಕುಗಳು ಒತ್ತಡದ ನಡುವೆಯೂ ಬೆಳಕನ್ನು ಅರಸಿದ ರೀತಿ ಚೇತೋಹಾರಿ. ಮನ ತಣಿಸುವ ಸಂಗೀತ, ಸುತ್ತಲ ಬದುಕುಗಳ ಕತೆ ಹೇಳುವ ಪುಸ್ತಕಪ್ರಪಂಚ, ಮನಸ್ಸು ಮತ್ತು ದೇಹ ಎರಡನ್ನೂ ಸಂತೈಸುವ ಹೂದೋಟ, ಅಕ್ಕರೆಯಿಂದ ಬೇಯಿಸಿದಾಗ ಅಮೃತವೆನಿಸುವ ಆಹಾರ ಅಡುಗೆ, ಅನಿವಾರ್ಯವಾದರೂ ಮನೆಯಿಂದಲೇ ಕೆಲಸ ಮಾಡಿದ ಹೊಸ ಅನುಭವ – ಈ ಎಲ್ಲ ಹತ್ತು ಹಲವು ದಾರಿಗಳು ಈ ಒತ್ತಡದ ವೈರಿಯಾಗಿ ಹೋರಾಡಿದ್ದು ನಮ್ಮೊಳಗಿನ ಬದುಕಿನೆಡೆಗಿನ ತುಡಿತವನ್ನು ಹೇಳುತ್ತವೆ.

ಸ್ವರಗಳ ಲೋಕದ ಯಾನ. ಇದು ಮನುಷ್ಯನನ್ನು ಲೌಕಿಕ ಅಲೌಕಿಕಗಳ ನಡುವೆ ಸೇತುವೆಯಂತೆ ಕೈ ಹಿಡಿದು ಸಂತೈಸುವ ಅದ್ಭುತ ಮಾರ್ಗ. ಸಂಗೀತದೊಂದಿಗೆ ಮನುಷ್ಯನ ಸಂಬಂಧ, ಲೋಕದ ವಿಕಾಸದೊಂದಿಗೆ ವಿಕಾಸ ಕಂಡಿದೆ. ಇಹಕ್ಕೆ ಇಂಪು ತುಂಬುವ ಪರಕ್ಕೂ ದಾರಿ ತೋರುವ ಸ್ವರಸಂಗೀತ ಮನದ ಸಣ್ಣ ಗೀರನ್ನೂ ಮಾಯಿಸುವ ಮುಲಾಮೂ ಆಗಬಹುದು. ‘ಪರ’ದ ಹಂಗೇ ಬೇಡವೆಂದರೂ ಈ ಲೋಕದ ಪ್ರತಿಕ್ಷಣವನ್ನು ರಸಮಯವಾಗಿಸುವ, ಮೈಮರೆಸಿ ಹಗುರವಾಗಿಸುವ ಶಕ್ತಸಾಧನವದು.

ಅಕ್ಷರಲೋಕವಂತೂ ಸಂಗೀತದಂತೆಯೇ ನಮ್ಮನ್ನು ಮೈದಡವಿ ಸದ್ದಿಲ್ಲದೇ ನಮ್ಮೊಂದಿಗೆ ಇರುವ ಭಾವಲೋಕ. ಪುಸ್ತಕಗಳು ತಮ್ಮೊಡಲಲ್ಲಿ ಹುದುಗಿಸಿಟ್ಟುಕೊಂಡ ಅನುಭವದ ಜೀವಂತಿಕೆ, ಓದುವಾಗ ನಮ್ಮನ್ನು ಮುಟ್ಟದೇ ತಟ್ಟದೇ ಇದ್ದೀತೇ!

ಇಷ್ಟೇ ಅನೂಹ್ಯವಾದ, ದಿನದಿಂದ ದಿನಕ್ಕೆ ನಮ್ಮನ್ನು ನೈಜ ಅಚ್ಚರಿಗೆ ತಳ್ಳುವ ಇನ್ನೊಂದು ಲೋಕವೆಂದರೆ, ಗಾರ್ಡನಿಂಗ್ ಎಂಬ ಮೈಕೈ ಮಣ್ಣಾಗಿಸುವ ಕಾಯಕದ ಲೋಕ. ಸ್ವಲ್ಪ ಮಣ್ಣು, ಸ್ವಲ್ಪ ತೇವ ಕೊಟ್ಟು ಹಸಿರಿನ ಮೂಲವನ್ನು ಊರಿ ನೋಡಿ, ‘ನೀನೊಲಿದರೆ ಕೊರಡು ಕೊನರುವುದಯ್ಯ’ ಎಂದು ಅಕ್ಕ ಹಾಡಿದಂತೆ ನೋಡನೋಡುತ್ತಿದ್ದಂತೇ ಪುಟ್ಟ ಪಾಟಿನಲ್ಲಿಯೂ ಹಸಿರೊಡೆಯುತ್ತದೆ. ಇನ್ನು ನಮ್ಮ ಸೂರ್ಯದೇವನ ಒಲವೂ ಸೇರಿದರೆ ಕುಂಡದಲ್ಲೂ ಬಣ್ಣಬಣ್ಣದ ಹೂಗಳು ಪ್ರತ್ಯಕ್ಷ.

ಸಂಗೀತ, ಅಕ್ಷರ ಮತ್ತು ಗಾರ್ಡನಿಂಗ್ ಇಂತಹ ಅನೇಕ ಮಾಯಕದ ಲೋಕಗಳಿಗೆ ಪ್ರವೇಶ ತೆಗೆದುಕೊಂಡರೆ ನಮ್ಮನ್ನು ಆಗೊಮ್ಮೆ ಈಗೊಮ್ಮೆ ಕಾಡುವ ನಿತ್ಯದ ಒತ್ತಡ, ನೀರಬೊಬ್ಬುಳಿಯಂತೆ ಮಾಯವಾಗುವುದರಲ್ಲಿ ಸಂದೇಹವೇ ಇಲ್ಲ.

ಒತ್ತಡ; ಇದು ಬದುಕಿನ ಒಂದು ಅನಿವಾರ್ಯ ಭಾಗ. ಅದನ್ನು ಜೀವನಪ್ರೀತಿಯೊಳಗಿನ ಕೆಲವೊಂದು ಸೂತ್ರಗಳಿಂದ ನಮ್ಮ ಹೆಜ್ಜೆಗಳಿಗೆ ಅಡ್ಡಿಯಾಗದಂತೇ ಅತ್ತ ಅಟ್ಟಬಹುದು. ಬದುಕಿಗೆ ಅತಿ ಅಗತ್ಯವಾದ ಆರ್ಥಿಕಶಕ್ತಿಯನ್ನು ಶ್ರಮದಿಂದ ಸಂಪಾದಿಸಿ ಜಾಗರೂಕತೆಯಿಂದ ಬಳಸುವುದು ಒಂದು ಜಾಣ ಹೆಜ್ಜೆ; ಬದುಕಿನ ವಾಸ್ತವವನ್ನು ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವುದೂ ಇನ್ನೊಂದು ಪ್ರಬುದ್ಧ ಹೆಜ್ಜೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಅನಿವಾರ್ಯವಲ್ಲದ ಅನಗತ್ಯ ಖರ್ಚು ಮಾಡದೇ ಆಹಾರ, ಬಟ್ಟೆಬರಗಳಲ್ಲಿ ಆದಷ್ಟು ಸರಳತೆಯನ್ನು ಮೈಗೂಡಿಸಿಕೊಳ್ಳುವುದು ಉತ್ತಮವೇ.

ಮಂಕು ಬಡಿಯುವಂತೇ ಇರುವ ಈ ಪರಿಸ್ಥಿತಿಯಲ್ಲಿ ಆದಷ್ಟು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವುದು ಜಾಣನಡೆ. ತೀರಾ ಮುಂದಿನ ಅಲ್ಲದಿದ್ದರೂ ಅಲ್ಪಕಾಲದ ಗುರಿಗಳಿಗಾಗಿ ಸಮಯ ಹಾಳು ಮಾಡದೇ ಸಕಾರಾತ್ಮಕವಾಗಿ ಶ್ರಮ ಪಡೋಣ. ಹಿತಮಿತವಾದ, ಆರೋಗ್ಯಪೂರ್ಣ ಆಹಾರ ನಮ್ಮದಾಗಿದ್ದರೆ ಒತ್ತಡ ಎನ್ನುವ ಸುಳಿಯಿಂದ ಸುಲಭದಲ್ಲಿ ದೂರ ದೂರಕ್ಕೆ ಈಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT