ಸೋಮವಾರ, ಮಾರ್ಚ್ 27, 2023
29 °C

ಏನಾದ್ರೂ ಕೇಳ್ಬೋದು: ಒಲ್ಲದ ಪ್ರೀತಿಗೆ ಒತ್ತಾಯವೇಕೆ?

ನಡಹಳ್ಳಿ ವಸಂತ್‌ Updated:

ಅಕ್ಷರ ಗಾತ್ರ : | |

*ಯುವತಿ. 3 ವರ್ಷದಿಂದ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದೇನೆ. ಹೊರ ಊರಿನಲ್ಲಿ ಕೆಲಸ ಮಾಡುತ್ತಿದ್ದವನು ನನಗಾಗಿಯೇ ಊರಿಗೆ ಬಂದಿದ್ದೇನೆ ಅಂತ ಹೇಳುತ್ತಿದ್ದ. ಮನೆಯಲ್ಲಿಯೂ ಒಪ್ಪಿಸಿದ್ದೇನೆ ಎಂದು ಹೇಳಿದ್ದವನು ಈಗ ಜಾತಿ, ದೇವರು ಎಂದು ಹೇಳಿಕೊಂಡು ದೂರಮಾಡುತ್ತಿದ್ದಾನೆ. ನನ್ನನ್ನು ಮರೆತುಬಿಡು ಎಂದು ಹೇಳುತ್ತಿದ್ದಾನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಸಲಹೆನೀಡಿ.

ಹೆಸರು, ಊರು ತಿಳಿಸಿಲ್ಲ.

–ನಿಮ್ಮ ಪ್ರೀತಿ ಪ್ರಾಮಾಣಿಕವಾಗಿತ್ತು. ಹಾಗಾಗಿ ನಿಮಗೆ ಅದನ್ನು ಮರೆಯುವುದು ಸಂಬಂಧವನ್ನು ಕಡಿದುಕೊಳ್ಳುವುದು ಬಹಳ ನೋವುಂಟು ಮಾಡುತ್ತಿದೆಯಲ್ಲವೇ? ಇಲ್ಲಸಲ್ಲದ ನೆವಗಳನ್ನು ಹೇಳುತ್ತ ನನ್ನನ್ನು ಮರೆತುಬಿಡು ಎನ್ನುವವನ ಪ್ರೀತಿ ಪ್ರಾಮಾಣಿಕವಾಗಿರಲು ಸಾಧ್ಯವೇ? ಅಪ್ರಾಮಾಣಿಕನನ್ನು ಪ್ರೀತಿಸಿದ್ದಕ್ಕೆ ನಿಮಗೆ ನಂಬಿಕೆ ದ್ರೋಹವಾಗಿರುವುದು ಸತ್ಯ. ಆದರೆ ಸ್ಥಿರವಾದ ಮನಸ್ಸು ಸ್ವಂತಬುದ್ಧಿ ಇಲ್ಲದವರೊಡನೆ ಜೀವಮಾನವೆಲ್ಲಾ ಬದುಕುವುದು ನಿಮಗೆ ಸುಖ ಸಂತೋಷಗಳನ್ನು ಕೊಡಬಲ್ಲದೇ? ನಿಮ್ಮ ಸ್ವಂತಿಕೆ, ವ್ಯಕ್ತಿತ್ವ, ವಿದ್ಯೆ, ಆರ್ಥಿಕ ಸ್ವಾವಲಂಬನೆ, ಹವ್ಯಾಸ, ಸ್ನೇಹಿತರ ಕಡೆ ಗಮನ ಹರಿಸಿ. ನಿಮ್ಮನ್ನು ಬಯಸಿ ಬರುವವನು ಮುಂದೆ ಸಿಗಲೇಬೇಕಲ್ಲವೇ?

* 31ರ ಯುವಕ. ಎಂಎ, ಬಿಎಡ್‌ ಓದಿ ಖಾಸಗಿ ಉದ್ಯೋಗ ಮಾಡುತ್ತಿದ್ದೇನೆ. ಅತ್ತಿಗೆಯ ತಂಗಿಯನ್ನು ಪ್ರೀತಿಸುತ್ತಿದ್ದು ಮದುವೆಯಾಗಬೇಕೆಂದಿದ್ದೇನೆ. ಆದರೆ ಮನೆಯವರು ನನಗಿಂತ 12 ವರ್ಷ ಚಿಕ್ಕವಳಾದ ಅಕ್ಕನ ಮಗಳನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ಕಡೆ ಪ್ರೇಯಸಿ ಇನ್ನೊಂದು ಕಡೆ ಮನೆಯವರು, ಯಾರನ್ನೂ ಬಿಡಲಾಗುತ್ತಿಲ್ಲ. ಜೊತೆಗೆ ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕೆಗೆ ತಯಾರಿ ನಡೆಸಿದ್ದೇನೆ. ಆದರೆ ಮನಸ್ಸು ಸರಿಯಿಲ್ಲ. ಪರಿಹಾರವೇನು.

ಹೆಸರು, ಊರು ತಿಳಿಸಿಲ್ಲ.

ಮನೆಯವರನ್ನು ಪ್ರೀತಿಸುವುದು ಗೌರವಿಸುವುದು ಎಂದರೆ ಅವರ ಇಚ್ಚೆಗಳಿಗೆ ತಲೆಬಾಗುವುದು ಎನ್ನುವುದು ನಿಮ್ಮ ತಿಳಿವಳಿಕೆಯೇ? ಹಾಗಿದ್ದರೆ ಪ್ರೀತಿಗೂ ದಾಸ್ಯಕ್ಕೂ ವ್ಯತ್ಯಾಸವಾದರೂ ಎಲ್ಲಿರುತ್ತದೆ? ಇಂತಹ ಸ್ಥಿತಿಯಲ್ಲಿ ನಿಮ್ಮ ಭಾವನೆಗಳು ಆಸೆ ಆಸಕ್ತಿ ಕನಸುಗಳನ್ನು ಏನು ಮಾಡುತ್ತೀರಿ? ನಾವೆಲ್ಲ ಬೆಳೆಯುತ್ತ ಬಂದಂತೆ ನಮ್ಮ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಲ್ಲವೇ? ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ನಿಮ್ಮ ನಿರ್ಧಾರದ ಕುರಿತು ಮನೆಯವರಲ್ಲಿ ತಿಳಿಸಿ. ಅವರ ಪ್ರೀತಿ ಮಮತೆಗಳನ್ನು ತಿರಸ್ಕರಿಸುತ್ತಿಲ್ಲ ಮತ್ತು ಮುಂದೆಯೂ ಅವರ ಜೊತೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಳ್ಳುವ ನಿಮ್ಮ ಮನದಿಂಗಿತದ ಬಗೆಗೂ ಮಾತನಾಡಿ. ನಿಮ್ಮ ಪ್ರೀತಿ ಕನಸುಗಳಿಗೆ ಹೆಚ್ಚಿನ ಆದ್ಯತೆ ನೀಡದಿದ್ದರೆ ನಿಮ್ಮನ್ನು ನೀವೇ ಕಳೆದುಕೊಳ್ಳುತ್ತೀರಲ್ಲವೇ? ನಂತರ ಸುಖ ಸಮಾಧಾನಗಳು ಹೇಗೆ ಸಿಗಬಲ್ಲದು?

* 32ರ ವಿವಾಹಿತ ಯುವಕ. ಎಂ.ಎಸ್ಸಿ, ಬಿ.ಇಡಿ ಓದಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದೇನೆ. ಕೋವಿಡ್‌ನಿಂದಾಗಿ ಶಾಲೆಗಳು ಸರಿಯಾಗಿ ನಡೆಯದೆ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸಬೇಕೆಂದಿದ್ದೇನೆ. ಕೆಲಸ ಮತ್ತು ಪರೀಕ್ಷೆಯ ತಯಾರಿ ಎರಡನ್ನೂ ಹೇಗೆ ನಿಭಾಯಿಸುವುದು ತಿಳಿಯುತ್ತಿಲ್ಲ. ಸಲಹೆ ನೀಡಿ.

ಮಂಜು, ಊರಿನ ಹೆಸರಿಲ್ಲ.

ಪತ್ರದ ಧಾಟಿಯನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿ ಇನ್ನೂ ಹಲವಾರು ಆತಂಕಗಳಿರುವಂತಿದೆ. ಏರುತ್ತಿರುವ ವಯಸ್ಸು, ವಿದ್ಯಾರ್ಹತೆಗೆ ದೊರಕದ ಸೂಕ್ತ ಉದ್ಯೋಗ, ಕುಟುಂಬದ ಜವಾಬ್ದಾರಿಗಳು, ನಿಶ್ಚಿತ ಆದಾಯವಿಲ್ಲದಿರುವುದು ಮುಂತಾದ ವಿಷಯಗಳೂ ನಿಮ್ಮನ್ನು ಕಾಡುತ್ತಿರಬಹುದೇ? ಎಲ್ಲವನ್ನೂ ಒಟ್ಟಾಗಿ ನಿಭಾಯಿಸುವ ಪ್ರಯತ್ನದಲ್ಲಿ ನೀವು ಒತ್ತಡವನ್ನು ಆಹ್ವಾನಿಸಿಕೊಳ್ಳುತ್ತಿರಬಹುದಲ್ಲವೇ? ನಿಮ್ಮ ಜೀವನದ ಹಾದಿಯನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳದೆ ನಿಮ್ಮದೇ ಪರಿಸ್ಥಿತಿಗಳ ಮೂಲಕ ಗುರುತಿಸಿಕೊಳ್ಳಿ. ಅಗತ್ಯವಿರುವಲ್ಲಿ ಪತ್ನಿ ಮನೆಯವರು ಮತ್ತು ಸ್ನೇಹಿತರ ಸಹಕಾರ ಪಡೆಯಿರಿ. ಒಂದೊಂದೇ ಮೆಟ್ಟಿಲೇರುವ ಪ್ರಯತ್ನ ಮಾಡುತ್ತ ಹೋಗಿ. ಮನಸ್ಸು ತಿಳಿಯಾಗತೊಡಗುತ್ತದೆ.

20ರ ಬಿಕಾಂ ಪದವೀಧರ. ಒಂದು ವರ್ಷ ಉದ್ಯೋಗ ಮಾಡಿ ಈಗ ಜೀವನದ ಭದ್ರತೆಗಾಗಿ ಸರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿದ್ದೇನೆ. ನಿನಗೆ ವಯಸ್ಸಾಗುತ್ತಾ ಇದೆ, ಯಾವುದಾದರೂ ಕೆಲಸಕ್ಕೆ ಸೇರು ಎಂದು ಮನೆಯವರು ಹೇಳುತ್ತಿದ್ದಾರೆ. ನಾನು ಯಾವ ಕ್ಷೇತ್ರವನ್ನು ಆರಿಸಿಕೊಂಡರೆ ಒಳ್ಳೆಯದು? ಕೋವಿಡ್‌ನಿಂದಾಗಿ ಅವಕಾಶಗಳು ಕಡಿಮೆಯಿದೆ. ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಉದ್ಯೋಗಾವಕಾಶಗಳ ಕುರಿತು ಸಲಹೆ ನೀಡುವ ಅಂಕಣ ಇದಲ್ಲ. ನಿಮ್ಮ ಪತ್ರದಲ್ಲಿ ನಿಮ್ಮ ಆಸಕ್ತಿ ಕನಸುಗಳ ಮಾತೇ ಇಲ್ಲವಲ್ಲ. ಇದೇ ನಿಮ್ಮ ಆಯ್ಕೆಯ ಗೊಂದಲದ ಮೂಲವಿರಬಹುದೇ? ಮೊದಲು ನನ್ನ ಮನಸ್ಸು ಎಂತಹ ವೃತ್ತಿಯಲ್ಲಿ ತಲ್ಲೀನವಾಗಬಲ್ಲದು ಎಂದು ಹುಡುಕಿಕೊಳ್ಳಿ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆಯುವುದು ಮತ್ತು ಹೊಸ ಸಾಧ್ಯತೆಗಳನ್ನು ಹುಡುಕುವುದು ಸುಲಭವಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು