ಸೋಮವಾರ, ಏಪ್ರಿಲ್ 19, 2021
23 °C

ಅರೋಗ್ಯ: ಬೇಸಿಗೆ, ಇರಲಿ ಎಚ್ಚರ

ಡಾ. ಮೈತ್ರಿ ಅಡಿಗ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು
ಬಂತಲ್ಲ ಬೇಸಿಗೆ, ‘ಕೆಟ್ಟಬಿಸಿಲ್’ ಎಂದರು
ಮಳೆ ಬಿತ್ತೊ, ‘ಬಿಡದಲ್ಲ ಶನಿ!’ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

ಪ್ರತಿಯೊಂದು ಕಾಲ ಬದಲಾದಾಗಲೂ ಕೆ. ಎಸ್‌. ನರಸಿಂಹಸ್ವಾಮಿಯವರ ಈ ಪದ್ಯ ನೆನಪಾಗುತ್ತದೆ.

ಕಾಲ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ, ಬಟ್ಟೆ, ಜೀವನಶೈಲಿಯನ್ನು ಬದಲಾಯಿಸಿಕೊಂಡರೆ ಎಲ್ಲ ಕಾಲವನ್ನೂ ಸಂತೋಷದಿಂದ ಬರ ಮಾಡಿಕೊಂಡು ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಬೇಸಿಗೆಯ ಬೇಗೆ ಏರುತ್ತಿರುವಾಗ ಮನೆಯಲ್ಲಿ ನಾವು ತೆಗೆದುಕೊಳ್ಳಬಹುದಾದ ಕೆಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿದುಕೊಳ್ಳೋಣ.

* ವಯಸ್ಸಾದಂತೆ ಚಳಿ ಅಥವಾ ಸೆಖೆಯನ್ನು ತಡೆದುಕೊಳ್ಳುವ ಶಕ್ತಿ ಕುಗ್ಗುತ್ತದೆ. ಆದ್ದರಿಂದ 55 ವರ್ಷ ಮೇಲ್ಪಟ್ಟವರು ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಬಿಸಿಲಿನಲ್ಲಿ ಓಡಾಡುವುದು ಒಳಿತಲ್ಲ. ಹೊರ ಹೋಗುವಾಗ ಟೋಪಿ, ಸನ್‌ಗ್ಲಾಸನ್ನು ಧರಿಸಿ ಹೋಗುವುದರಿಂದ ಬಿಸಿಲಿನಿಂದಾಗುವ ತಲೆನೋವನ್ನು ಬರದಂತೆ ನೋಡಿಕೊಳ್ಳಬಹುದು. ಹೀಟ್‌ ಸ್ಟ್ರೋಕನ್ನು ತಪ್ಪಿಸಿಕೊಳ್ಳಲು ಪ್ರತಿದಿನ 2-3 ಲೀ.ಗಳಷ್ಟು ನೀರು/ಮನೆಯಲ್ಲಿ ತಯಾರಿಸಿದ ಲಿಂಬೆ, ಪುದಿನ ಪಾನಾಕ/ಹಣ್ಣಿನ ರಸ ಸೇವಿಸಬೇಕು. ಕಲ್ಲಂಗಡಿ, ಕರಬೂಜ ಮುಂತಾದ ನೀರಿನಂಶ ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಬೇಕು. ತೆಳುಹತ್ತಿಯ ಬಟ್ಟೆಗಳನ್ನು ಧರಿಸಬೇಕು. ತಂಪಾದ ಜಾಗದಲ್ಲಿ ಸಮಯ ಕಳೆಯಬೇಕು.

* ಬಿಸಿಲಿನಲ್ಲಿ ಹೂವಿನ ಪರಾಗಗಳು ಗಾಳಿಯಲ್ಲಿ ಹೆಚ್ಚಾಗಿರುತ್ತವೆ. ಆದ್ದರಿಂದ ಅಲರ್ಜಿ ಜಾಸ್ತಿ ಇರುವವರು ಬೇಸಿಗೆಯಲ್ಲಿ ಗಿಡಗಳ ಹತ್ತಿರ ಹೋಗದಿರುವುದು, ಹೂವು ಕೀಳದಿರುವುದು ಒಳಿತು. ಹೆ ಫೀವರ್‌ ಕಾಣಿಸಿಕೊಳ್ಳಬಹುದು; ಕಣ್ಣಿನ ತುರಿಕೆ, ನೀರಾಡುವುದು, ಹೆಚ್ಚು ಸೀನುವುದು ಇದರ ಲಕ್ಷಣಗಳು. ಅಲರ್ಜಿ ದೇಹದವರಲ್ಲಿ ಅಸ್ತಮಾ ತರಹದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು. ಮನೆಯ ಹೊರಗೆ ಮಾಸ್ಕ್ ಧರಿಸಿ ಓಡಾಡಿದರೆ ಪರಾಗ ಹಾಗೂ ಕೊರೊನಾ ಎರಡರಿಂದಲೂ ರಕ್ಷಿಸಿಕೊಳ್ಳಬಹುದು.

* ಚಳಿಗಾಲದಲ್ಲಿ ಚರ್ಮ ಒಡೆಯದಂತೆ ಕಾಪಾಡಿ ಸುಸ್ತಾಗಿದ್ದಾಗಲೇ ಬೇಸಿಗೆಯ ಬಿಸಿಗೆ ಚರ್ಮ ಸುಟ್ಟುಹೋಗದಂತೆ ಕಾಪಾಡಬೇಕು. ಸನ್‌ಸ್ಕ್ರೀನ್‌ ಲೋಷನ್ ಅನ್ನು ಸೂರ್ಯನ ಬಿಸಿಗೆ ಚರ್ಮ ತಾಕಿಸುವ 20 ನಿಮಿಷ ಮುನ್ನ ಮುಖ, ಕೈ, ಕಾಲುಗಳಿಗೆ ಲೇಪಿಸಿಕೊಂಡು ನಂತರ ಹೊರ ಹೊರಟರೆ ಚರ್ಮಕ್ಕೆ ಮನಸ್ಸಿಗೆ ಎರಡಕ್ಕೂ ಹಿತ.

* ಬಿಸಿಲ ಬೇಗೆ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಜಾಗ್ರತೆ ಇಲ್ಲದೆ ಈಜುಕೊಳಕ್ಕೆ ಹೋದರೆ ಅಪಾಯವೇ ಜಾಸ್ತಿ. ಜನ ಜಾಸ್ತಿಯಾದಂತೆ ಸಾರ್ವಜನಿಕ ಈಜುಕೊಳ ಬ್ಯಾಕ್ಟೀರಿಯಾಗಳ ಅಡಗುತಾಣವಾಗುತ್ತದೆ. ಈಜುವಾಗ ಗೊತ್ತಿಲ್ಲದೇ ಕುಡಿದ ನೀರು ಭೇದಿ, ಹೊಟ್ಟೆನೋವು  ಮುಂತಾದ ಹಲವು ಸಮಸ್ಯೆಗಳಿಗೆ ದಾರಿಮಾಡುತ್ತದೆ. ನೀರು ಕಿವಿಯೊಳಗೆ ಹೋದರೆ, ಕಿವಿಗೆ ಸೋಂಕು ತಗುಲಿ ಕಿವಿನೋವು, ಕಿವಿ ಸೋರುವುದು ಮುಂತಾದ ಸಮಸ್ಯೆಗಳು ಎದುರಾಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು