ಶುಕ್ರವಾರ, ಡಿಸೆಂಬರ್ 3, 2021
24 °C

ಅರ್ಥಪೂರ್ಣ ದಿನಕ್ಕಿರಲಿ ಆರೋಗ್ಯಕರ ಹವ್ಯಾಸ..

ಸುಕೃತ ಎಸ್‌. Updated:

ಅಕ್ಷರ ಗಾತ್ರ : | |

Prajavani

ದಿನ ದೂಡುವುದು ಎನ್ನುವ ಮಾತೊಂದಿದೆ. ಸುಮ್ಮನೆ ಕುಳಿತು ದಿನ ದೂಡಬಹುದು. ಇದು ನಮ್ಮ ಸುಂದರ ಬದುಕಿನ ವ್ಯರ್ಥ ಕ್ಷಣಗಳೇ ಸರಿ. ಪ್ರತಿ ಕ್ಷಣವನ್ನು ಪ್ರತಿ ದಿನವನ್ನು ನಾವು ಜೀವಿಸಬೇಕು, ಅರ್ಥಪೂರ್ಣವಾಗಿ. ಪ್ರತಿ ದಿನವೂ ನಮ್ಮ ಜೀವನದ ಮತ್ತೊಂದು ಕ್ರಿಯಾಶೀಲ ದಿನವಾಗಿರಬೇಕು. ನಮ್ಮ ಉನ್ನತಿಗೆ ಪ್ರತಿ ದಿನವೂ ಪೂರಕವಾಗಿರಬೇಕು.

ಕ್ರಿಯಾಶೀಲವಾಗಿ, ಚಟುವಟಿಕೆಯಿಂದ ಹೇಗೆ ದಿನವನ್ನು ಅರ್ಥಪೂರ್ಣವಾಗಿ ಅನುಭವಿಸಬಹುದು? ಅದು ವ್ಯಕ್ತಿಯಿಂದ ವ್ಯಕ್ತಿಗೆ, ಪ್ರದೇಶದಿಂದ ಪ್ರದೇಶಕ್ಕೆ, ಆಸಕ್ತಿ ಹೀಗೆ ನಾನಾ ಕಾರಣಗಳ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ನಮ್ಮ ಕಚೇರಿ ಕೆಲಸಗಳ ಮಧ್ಯೆಯೂ ನಾವು ಅರ್ಥಪೂರ್ಣವಾಗಿ ನಮ್ಮ ಉಳಿದ ಸಮಯವನ್ನು ಜೀವಿಸಬಹುದು. ರಜಾ ದಿನಗಳನ್ನಂತೂ ಕೇವಲ ಮಲಗುವುದು, ಟಿ.ವಿ ನೋಡುವುದು, ಸುತ್ತಾಡುವುದರಲ್ಲೇ ಕಳೆಯಬೇಕಾಗಿಲ್ಲ. ಮನೆಯಲ್ಲೇ ಇದ್ದು ಅರ್ಥಪೂರ್ಣವಾಗಿ ದಿನವನ್ನು ಅನುಭವಿಸಬಹುದು.

ಅರ್ಥಪೂರ್ಣ ದಿನಕ್ಕೆ ಬೆಳಿಗ್ಗೆಯ ನಮ್ಮ ಚಟುವಟಿಕೆಗಳೇ ನಾಂದಿ. ಬೆಳಿಗ್ಗೆ ಬೇಗನೆ ಎದ್ದು ಉದಯಿಸಿದ ಸೂರ್ಯನನ್ನು ನೋಡಿ, ಎಳೆ ಕಿರಣಗಳನ್ನು ಅನುಭವಿಸುವುದೇ ಒಂದು ಸುಖಕರ ಅನುಭವ. ಇದಕ್ಕಿಂದ ಒಳ್ಳೆಯ ಪ್ರಾರಂಭ ಬಹುಶಃ ಇಲ್ಲ. ನಿತ್ಯಕರ್ಮಗಳನ್ನು ಮುಗಿಸಿ, ಕೆಲವು ನಿಮಿಷಗಳನ್ನು ನಾವು ನಮಗಾಗಿ ಕಳೆಯಬೇಕು. ಕೆಲವು ನಿಮಿಷಗಳ ವ್ಯಾಯಾಮ, ಧ್ಯಾನ, ನಡಿಗೆ.. ಇದು ದಿನದ ಉತ್ತಮ ಆರಂಭ.

ಇವೆಲ್ಲ ಆದ ಬಳಿಕ, ಈ ದಿನದ ನಮ್ಮ ಕೆಲಸ ಕಾರ್ಯಗಳನ್ನು ಒಮ್ಮೆ ಯೋಚಿಸಿ, ಮನಸ್ಸಿನಲ್ಲೇ ಯೋಜನೆ ರೂಪಿಸುವುದು. ಅಗತ್ಯವಾಗಿ, ತಕ್ಷಣದಲ್ಲಿ ಆಗಬೇಕಾದ ಕೆಲಸ ಏನು, ಹೇಗೆ ಮಾಡುವುದು ಇತ್ಯಾದಿ. ಆದ್ಯತೆಯ ಮೇರೆಗೆ ನಮ್ಮ ಕೆಲಸ ಕಾರ್ಯಗಳನ್ನು ರೂಪಿಸಿಕೊಂಡು ಮುಂದೆ ಸಾಗಬೇಕು.

ಕನಿಷ್ಠ ರಜಾ ದಿನಗಳಲ್ಲಾದರೂ ಆಹಾರವನ್ನು ಕೇವಲ ಇಂಧನದಂತೆ ಸೇವಿಸದೇ ನಿಧಾನವಾಗಿ ಸ್ವಾದವನ್ನು ಸವಿಯುತ್ತಾ ತಿನ್ನುವುದು ಉತ್ತಮ. ತಿನ್ನುವಾಗ ಟಿ.ವಿ ನೋಡುವುದು, ಮೊಬೈಲ್‌ ನೋಡುವುದು ಅಥವಾ ಏನನ್ನೋ ಓದುವುದನ್ನು ನಿಲ್ಲಿಸಿದರೆ ಆರೋಗ್ಯಕ್ಕೂ ಒಳ್ಳೆಯದು. ಜೊತೆಗೆ ಆಹಾರವನ್ನು ಆಸ್ವಾದಿಸಬಹುದು. ಅಡುಗೆ ಮಾಡಿದವರಿಗೆ ಒಂದು ಧನ್ಯವಾದವನ್ನೂ ಹೇಳಬಹುದು!

ಪುಸ್ತಕ ಓದುವುದು ಮನುಷ್ಯನ ಬೌದ್ಧಿಕ ಬೆಳವಣಿಗೆಗೆ ಬಹಳ ಸಹಕಾರಿ. ಓದು ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುತ್ತದೆ. ಅದು ಯಾವುದೇ ಪುಸ್ತಕವಾಗಿರಬಹುದು. ಅದು ಅವರವರ ಅಭಿರುಚಿಗೆ ಬಿಟ್ಟದ್ದು.

ಸಂಜೆ ವೇಳೆ ಮನೆಯಿಂದ ಹೊರಬಿದ್ದು, ವಾಯುವಿಹಾರ ಮಾಡಬಹುದು. ಮನೆಗೆ ಹತ್ತಿರದ ಉದ್ಯಾನವನ್ನು ಒಮ್ಮೆ ಸುತ್ತಿಬಂದು ಮನಸ್ಸನ್ನು ಇನ್ನಷ್ಟು ಚೈತನ್ಯಪೂರ್ಣವನ್ನಾಗಿಸಿಕೊಳ್ಳಬಹುದು. ಸಮುದ್ರ ತಟದವರಾಗಿದ್ದರೆ, ಸಮುದ್ರಕ್ಕೆ ಮುಖ ಮಾಡಿ ಕೂತು, ಅಲೆಗಳಿಗೆ ಕಿವಿಯಾಗಿ, ಕಣ್ಣಾಗಿ ಮನಸ್ಸಿನ ಆಯಾಸವನ್ನು ತಣಿಸಿಕೊಳ್ಳಬಹುದು.

ಇಷ್ಟದ ಸಿನಿಮಾ ನೋಡಬಹುದು. ಮನೆಯವರೆಲ್ಲಾ ಕೂತು ಒಂದು ಸಿನಿಮಾ ನೋಡುವುದು, ನೋಡಿದ ನಂತರ ಸಿನಿಮಾ ಕುರಿತು ಸಣ್ಣ ಚರ್ಚೆ ಮಾಡುವುದು ಮನೆಯ ವಾತಾವರಣವನ್ನು ಆತ್ಮೀಯವಾಗಿಸುತ್ತದೆ. ಮನೆಯ ಸದಸ್ಯರ ನಡುವಿನ ಸಂಬಂಧವನ್ನು ಬಿಗಿಯಾಗಿಸುತ್ತದೆ. ಸಿನಿಮಾ ಚರ್ಚೆ ಅಂತಲ್ಲಾ, ಯಾವುದಾದರೂ ವಿಷಯದ ಕುರಿತು ಮನೆಮಂದಿಯಲ್ಲಾ ದಿನಕ್ಕೆ ಒಂದು ಬಾರಿಯಾದರೂ ಒಟ್ಟಿಗೆ ಕೂತು ಚರ್ಚಿಸುವ, ಹರಟುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ ನಡವಳಿಕೆ.

ಏನೋ ಒಂದು ಯೋಜನೆ ಹಾಕಿಕೊಂಡಿರಬಹುದು. ಅದರ ಪ್ರಾರಂಭಕ್ಕೆ ಉತ್ತಮ ಘಳಿಗೆ ದಿನಕ್ಕಾಗಿ ಕಾಯುವ ಬದಲು, ಇಂದೇ ಪ್ರಾರಂಭಿಸಿ. ಒಳ್ಳೆಯ ಯೋಚನೆ ಕೆಲಸಗಳಿಗೆ ದಿನ ದೂಡದೇ ಇಂದೇ ನಾಂದಿ ಆಡಬಹುದು.

ದಿನವನ್ನು ಹೀಗೆ ಕಳೆಯಬೇಕು, ಇದೇ ಅರ್ಥಪೂರ್ಣ ಮಾರ್ಗ ಎನ್ನುವ ಮಾರ್ಗಸೂಚಿ ಎಲ್ಲೂ ಇಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ, ಇಂಥ ಕೆಲವು ಅಭ್ಯಾಸಗಳು ನಮ್ಮ ದಿನವನ್ನು ಅರ್ಥಪೂರ್ಣವಾಗಿಸುತ್ತವೆ; ನಮ್ಮ ಬದುಕನ್ನೂ ಕೂಡ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು