ಮಂಗಳವಾರ, ಸೆಪ್ಟೆಂಬರ್ 21, 2021
21 °C

ಉಪದೇಶದ ಹಾವಳಿ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಅಲೆಗಿಂತ ಬಹಳ ವೇಗವಾಗಿ ಹರಡಿದ್ದು ಉಪದೇಶಗಳ ಅಲೆ! ಆರೋಗ್ಯದ ವಿಷಯವಾಗಿ ಇನ್ನೊಬ್ಬರಿಗೆ ಉಪದೇಶವನ್ನು ಕೊಡುವ ಮೊದಲು ಸಾವಿರ ಸಲ ಯೋಚಿಸಬೇಕು. ನಾವು ಉಪದೇಶವನ್ನು ಕೊಡದಿರುವುದೇ ಲೇಸು.

***

ಜಗದ ಡೊಂಕನ್ನು ನೀವೇಕೆ ತಿದ್ದುವಿರಿ - ಎಂದು ಅಣ್ಣನವರು ಕೇಳಿದ್ದರೂ ಆ ‘ತಿದ್ದುವ’ ಡೊಂಕು ಕೂಡ ಜಗತ್ತಿನ ಮೂಲಸ್ವಭಾವವೇ ಆಗಿ ಉಳಿದುಬಿಟ್ಟಿದೆ. ಅದರಲ್ಲೂ ‘ಮಿತ್ರಸಂಹಿತೆ’ಯ ಹೆಸರಿನಲ್ಲಿ ಮೂಗಿಗೆ ಹುಳಿ ಹಿಂಡುವುದರಿಂದ ಮೊದಲ್ಗೊಂಡು ಯಾವ ಕಾಯಿಲೆಗೆ ಯಾವ ಪೌಷ್ಟಿಕಾಂಶ / ವಿಟಮಿನ್ ಸೇವಿಸಬೇಕು ಎಂದು ಸೂಚಿಸುವವರ ಪಟ್ಟಿ ದೊಡ್ಡದೇ ಇದೆ. ಅದರಲ್ಲಿಯೂ ಕೊರೊನಾ ಅಲೆಗಿಂತ ಬಹಳ ವೇಗವಾಗಿ ಹರಡಿದ್ದು ಉಪದೇಶಗಳ ಅಲೆ! ಮುಖ್ಯವಾಗಿ ಇಂತಹ ಉಪದೇಶಿಗರು ಅವುಗಳನ್ನು ತಾವೇ ಪಾಲಿಸದಿದ್ದರೂ ಇತರರಿಗೆ ಸರಾಗವಾಗಿ ಅವುಗಳನ್ನು ನೀಡಿಬಿಡುತ್ತಾರೆ. ವೈದ್ಯರು, ವಿಷಯತಜ್ಞರು, ಆಯಾಕ್ಷೇತ್ರದ ಪರಿಣತರು ತಮ್ಮ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದಂತಹ ಕ್ರಮಗಳನ್ನು, ಎಚ್ಚರಿಕೆಗಳನ್ನು, ಸಲಹೆಗಳನ್ನು ನೀಡುತ್ತಾರೆ. ಅಷ್ಟು ಸಾಕು, ಜೀವನ ನಡೆಸಲು.

‘ಪುಸ್ತಕದಿ ದೊರೆತರಿವು ಮಸ್ತಕವಿ ತಳೆದ ಮಣಿ.... ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ’ ಎಂದು ಹೇಳುವ ಕಗ್ಗದ ಸಾಲಿನಲ್ಲಿ ‘ಶಾಸ್ತ್ರಿತನದಿಂದಲ್ಲ’ ಎಂಬುದನ್ನು ‘ಉಪದೇಶದಿಂದಲ್ಲ’ ಎಂದು ಓದಿಕೊಳ್ಳಲು ಅಡ್ಡಿಯಿಲ್ಲ. ತರ್ಕ, ಕುತರ್ಕಗಳಿಂದ ಪ್ರಯೋಜನವಿಲ್ಲ, ಬದುಕು ಪ್ರಾಯೋಗಿಕವಾಗಿರಬೇಕು ಎಂಬುದು ಇದರ ತಾತ್ಪರ್ಯ. ತಾನು ಮಾಡದ್ದನ್ನು, ಆಚರಿಸದ್ದನ್ನು ಮತ್ತೊಬ್ಬರಿಗೆ ಹೇಳಬಾರದು ಎಂಬುದೇ ನೀತಿ. ಜೊತೆಗೆ ಅವರವರ ದೇಹ, ಮನಸ್ಸುಗಳು ಅವರವರಿಗೆ ಮಾತ್ರ ತಿಳಿದಿರುವಂತಹವು.

ನನ್ನ ಮಿತ್ರವಲಯದ ದಂಪತಿಗಳು ಒಬ್ಬ ಆಯುರ್ವೇದಪಂಡಿತರಲ್ಲಿ ಔಷಧೋಪಚಾರ ಪಡೆಯುತ್ತಿದ್ದರು. ಒಮ್ಮೆ ಒಂದು ಕಾಯಿಲೆಗೆ ವೈದ್ಯರು ಪತ್ನಿಗೆ ಒಂದು ಔಷಧವನ್ನು ಸೂಚಿಸಿದರು. ಅದಾದ ಕೆಲವು ತಿಂಗಳ ಬಳಿಕ ಆತನಿಗೆ ಅದೇ ಸಮಸ್ಯೆ ತಲೆದೋರಿದಾಗ ಆ ಔಷಧದ ತದ್ವಿರುದ್ಧ ಗುಣ ಬಿಂಬಿಸುವ ಔಷಧವನ್ನು ವೈದ್ಯರು ಸೂಚಿಸಿದ್ದನ್ನು ಕಂಡು ಗೆಳೆಯ ಅಚ್ಚರಿ ವ್ಯಕ್ತಪಡಿಸಿದಾಗ ವೈದ್ಯರು, ‘ಹೌದು, ನಿಮ್ಮ ದೇಹಪ್ರಕೃತಿ ಹಾಗೇ. ಅವರಿಗೆ ಸೂಚಿಸಿದ ಔಷಧಿ ಅವರ ದೇಹಪ್ರಕೃತಿಗೆ’ ಎಂದರಂತೆ. ಹೀಗೆ ಪ್ರತಿಯೊಬ್ಬರೂ ಭಿನ್ನವೇ ಆಗಿರುವಾಗ ತಮಗೆ ಸರಿಯೆನಿಸಿದ್ದನ್ನು ಇಡೀ ಜಗತ್ತಿಗೆ ಅಳವಡಿಸಹೊರಟರೆ ಅದು ದಡ್ಡತನವಾದೀತು. ಇಹರೋಗ ವೈದ್ಯರಂತೆ ಭವರೋಗ ವೈದ್ಯರೂ ಜನರ ಭಾವ, ಸ್ವಭಾವಗಳಿಗೆ ತಕ್ಕಂತೆ ಔಷಧ-ಪಥ್ಯವನ್ನೂ ಸೂಚಿಸುತ್ತಾರೆ. ವಚನವೇದದಲ್ಲಿ ಶ್ರೀರಾಮಕೃಷ್ಣರು ಹೇಳುತ್ತಾರೆ:

‘ಯಾರದು ಯಾವ ಭಾವವೋ ಅದನ್ನು ನಾನು ಸಂರಕ್ಷಿಸಲು ಪ್ರಯತ್ನಿಸುತ್ತೇನೆ. ವೈಷ್ಣವನಿಗೆ ವೈಷ್ಣವರ ಭಾವದಲ್ಲಿಯೆ ಮುಂದುವರೆಯುವಂತೆ ಹೇಳುತ್ತೇನೆ. ಶಾಕ್ತನಿಗೆ ಶಾಕ್ತರ ಭಾವ. ‘ನಮ್ಮ ಮಾರ್ಗವೇ ಸರಿ ಸತ್ಯ, ಉಳಿದವರದೆಲ್ಲ ಮಿಥ್ಯ’ ಎಂದು ಹೇಳಬೇಡಿ. ಹಿಂದೂ ಮುಸಲ್ಮಾನ ಕ್ರೈಸ್ತ ವಿವಿಧ ಮಾರ್ಗದಿಂದ ಒಂದೇ ಸ್ಥಳಕ್ಕೆ ಹೋಗಿ ಸೇರುತ್ತಾರೆ.’

ಇತರರ ತಪ್ಪನ್ನು ತಿದ್ದಲು ಮುಂದಾಗುವ, ಉಪದೇಶ ನೀಡಲು ಮುಂದಾಗುವ ನಮಗೆ ಕ್ರಿಸ್ತನ ಮಾತು ನೆನಪಾಗಬೇಕು. ‘ಯಾರು ತಪ್ಪು ಮಾಡಿಲ್ಲವೊ ಅವರು ಮೊದಲು ಕಲ್ಲೆಸೆಯಿರಿ’ ಎಂದ ಮಹಾತ್ಮರು ಅವರು. ಜನ ಹೀಗೇಕೆ ಅಯಾಚಿತ ಉಪದೇಶಗಳನ್ನು ಮಾಡುತ್ತಾರೆ ಎಂಬುದನ್ನೂ ನಾವು ಪರಿಶೀಲಿಸಬೇಕು. ಒಂದು, ತಮಗೆ ತಿಳಿದದ್ದನ್ನು ತಕ್ಷಣ ಬೇರೆಯವರಿಗೆ ತಿಳಿಸಬೇಕೆಂಬ ಆತುರ. ಮತ್ತೊಂದು, ತಮ್ಮ ಅಭಿಪ್ರಾಯವನ್ನು ಇತರರು ಸ್ವೀಕರಿಸಲಿ ಎಂಬ ಧೋರಣೆ. ಇವೆರಡೂ ದೋಷವೇ. ಮೊದಲನೆಯದು-ನಾವು ತಿಳಿದುಕೊಂಡದ್ದೆಲ್ಲ ಅಂತಿಮ ಸತ್ಯವಲ್ಲ. ಎರಡನೆಯದು-ಇತರರು ನಮ್ಮ ಅಭಿಪ್ರಾಯವನ್ನು ಒಪ್ಪಬೇಕೆಂಬ ನಿಯಮವಿಲ್ಲ. ಅತಿ ಹತ್ತಿರದವರಿಗೂ ಹೇಳಬೇಕೆನಿಸಿದ್ದನ್ನು ಹೇಳಿ, ‘ಇಷ್ಟರ ಬಳಿಕ ನಿನ್ನಿಷ್ಟ’ ಎಂಬುದು ಒಳ್ಳೆಯದು. ಭಗವದ್ಗೀತೆಯನ್ನು ಬೋಧಿಸಿದ ಕೃಷ್ಣನೂ ಕೊನೆಗೆ ಅರ್ಜುನನಿಗೆ ‘ಇನ್ನು ನಿನಗೆ ತಿಳಿದಂತೆ ಮಾಡು’ ಎನ್ನುತ್ತಾನೆ. ಜನ ನಮ್ಮನ್ನು ಒಪ್ಪಿಕೊಳ್ಳಲಿ, ನಮ್ಮ ಮಾತುಗಳನ್ನು ಕೇಳಲಿ ಇತ್ಯಾದಿ ಧೋರಣೆಗಳು ನಮ್ಮ ದೌರ್ಬಲ್ಯ ಸೂಚಕಗಳು. ನಮ್ಮ ಅಸ್ತಿತ್ವ, ನಮ್ಮ ಸಂತೋಷ ಇತರರ ಒಪ್ಪಿಗೆಯ ಮೇಲೆ ನಿಲ್ಲಬಾರದು. ಅವರು ನಮ್ಮ ಮಾತುಗಳನ್ನು ಕೇಳಲಿ, ಪಾಲಿಸಲಿ ಎಂದು ಭಾವಿಸದೆ ನಮ್ಮ ನಮ್ಮ ಮಿತಿಗಳೊಳಗೆ ಸೌಹಾರ್ದಯುತ ಬದುಕನ್ನು ಕಟ್ಟಿಕೊಳ್ಳಬೇಕು. ಈ ಲೇಖನವೂ ಒಂದು ಉಪದೇಶವೇ! ಆದರೆ ಇದೊಂದು ಅಕ್ಷರ ಸ್ವಗತ. ಇದನ್ನು ಯಾರೂ ಒಪ್ಪಿಕೊಳ್ಳಬೇಕೆಂಬ ವರಾತವಿಲ್ಲ. ಇದೊಂದು ಉಪಯುಕ್ತ ಚಿಂತನೆಯೆಂದು ಭಾವಿಸಿ ಹಂಚಿಕೊಳ್ಳುವ ಪ್ರಯತ್ನ. ಯಾರೇ, ಎಷ್ಟೇ ಹತ್ತಿರದವರಾದರೂ ಅವರಾಗಿ ಕೇಳಿದ ಹೊರತು ನಮ್ಮ ಸಲಹೆಗಳನ್ನು, ಅಭಿಪ್ರಾಯಗಳನ್ನು ನೀಡದಿರುವು ಸೌಜನ್ಯತೆಯ ಲಕ್ಷಣ. ಅದರಲ್ಲೂ ಆರೋಗ್ಯದ ವಿಷಯವಾಗಿ ಇನ್ನೊಬ್ಬರಿಗೆ ಉಪದೇಶವನ್ನು ಕೊಡುವ ಮೊದಲು ಸಾವಿರ ಸಲ ಯೋಚಿಸಬೇಕು. ನಾವು ಉಪದೇಶವನ್ನು ಕೊಡದಿರುವುದೇ ಲೇಸು. ನಾವು ಕೊಡಬಹುದುದಾದ ಉಪದೇಶ ಎಂದರೆ, ‘ತಜ್ಞರನ್ನು ಭೇಟಿಯಾಗಿ’.

ಕೋವಿಡ್‌ನ ಮೂರನೆಯ ಅಲೆ ಬರುತ್ತಿರುವಂತಿದೆ ಎಂದು ತಜ್ಞರು ಹೇಳಲು ಆರಂಭಿಸಿದ್ದಾರೆ. ಕೊರೊನಾ ವಿಷಯದಲ್ಲಿ ಉಪದೇಶಗಳನ್ನು ಕೊಡುವುದಕ್ಕೂ ಸ್ವೀಕರಿಸುವುದಕ್ಕೂ ಮೊದಲು ಎಚ್ಚರ ಇರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು