ಉಲ್ಲಾಸವಿಲ್ಲದ ಧೈರ್ಯ ಅರ್ಥಹೀನ. ಧೈರ್ಯವಿಲ್ಲದ ಧ್ಯೇಯ ನಿರ್ಜೀವ. ಉಲ್ಲಾಸವಿಲ್ಲದೆ ಸಾಗುವ ಜೀವನದ ಪಯಣ ಕಠಿಣವೂ ದುರ್ಬಲವೂ ಆಗುತ್ತದೆ.

ಬದುಕು ಎಂದರೆ ಕೇವಲ ಕಾಲ ಕಳೆಯುವಿಕೆ ಅಲ್ಲ. ಅದು ಒಂದು ಪ್ರಯಾಣ – ಅಂತರಂಗದಿಂದ ಬಹಿರಂಗಕ್ಕೆ, ಎಂದರೆ ಜೀವನರಂಗಕ್ಕೆ ಚಲಿಸಿ ಜಗತ್ತಿನ ಮುಂದೆ ವ್ಯಕ್ತವಾಗುವ ಆಂತರಿಕ ಶಕ್ತಿಯ ಅಭಿವ್ಯಕ್ತಿ. ಇದರ ಮೂಲಇಂಧನ ಉಲ್ಲಾಸ. ಇದು ಮನಸ್ಸಿಗೆ ಪ್ರಜ್ವಲನೆಯನ್ನು ನೀಡುವ ಶಕ್ತಿ.

ಇಂದು ನಾವು ನೋಡುತ್ತಿರುವ ಧಾವಂತದ ಯುಗದಲ್ಲಿ ಬಹುಪಾಲು ಜನರು ಹೊರಗಿನಿಂದ ಸಂಭ್ರಮಿಸುತ್ತಿದ್ದಾರೆ. ಆದರೆ ಒಳಗೆ ಬಾಡಿದ್ದಾರೆ. ನೋವು, ವಿಫಲತೆ, ಅಥವಾ ಭಯದ ಭಾವನೆ – ಇವೆಲ್ಲವೂ ಜೀವನೋತ್ಸಾಹವನ್ನು ಕುಗ್ಗಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಉಲ್ಲಾಸವೊಂದು ಔಷಧದಂತಿದೆ. ಉಲ್ಲಾಸವಿಲ್ಲದ ಮನಸ್ಸು, ಬುದ್ಧಿಯನ್ನು ಶಕ್ತಿಯುತವಾಗಿ ಬಳಸಲು ಸಾಧ್ಯವಾಗುವುದಿಲ್ಲ. ಬದುಕು ಉತ್ಸಾಹವಿಲ್ಲದೆ ಹೈರಾಣಾಗುತ್ತದೆ.

ನಿಜವಾದ ಚೈತನ್ಯ

ಉಲ್ಲಾಸ ಎಂದರೆ ಕೇವಲ ಖುಷಿ ಅಲ್ಲ; ಆನಂದವೂ ಅಲ್ಲ. ಅದು ಆನಂದದ ಮೂಲ. ಉಲ್ಲಾಸ ಎಂಬುದು ಸಕಾರಾತ್ಮಕ ಮನೋಭಾವ, ಆತ್ಮವಿಶ್ವಾಸದ ಬೆಳಕು, ಜೀವನವನ್ನು ಪ್ರೀತಿಸುವ ದೃಷ್ಟಿ. ಖಲೀಲ್ ಗಿಬ್ರಾನ್ ಈ ಶಕ್ತಿಯ ಮಹತ್ವವನ್ನು ಸ್ಪಷ್ಟವಾಗಿ ಹೇಳಿದ್ದಾನೆ: ‘ಉತ್ಸಾಹವೆಂಬುದು ಜ್ವಾಲಾಮುಖಿ, ಅದರ ಮುಖದಲ್ಲಿ ಅನಿಶ್ಚಿತತೆ ಎಂಬ ಗರಿಕೆ ಬೆಳೆಯುವುದಿಲ್ಲ.’ ಬದುಕೆಂಬ ತ್ರಿಭುಜದಲ್ಲಿ ಧ್ಯೇಯ, ಧೈರ್ಯ, ಉಲ್ಲಾಸಗಳು ಮೂರು ಮುಖಗಳಾಗಿ ನಮ್ಮನ್ನು ಬಿಂಬಿಸುತ್ತವೆ.

ಉಲ್ಲಾಸವಿಲ್ಲದ ಧೈರ್ಯ ಅರ್ಥಹೀನ. ಧೈರ್ಯವಿಲ್ಲದ ಧ್ಯೇಯ ನಿರ್ಜೀವ. ಉಲ್ಲಾಸವಿಲ್ಲದೆ ಸಾಗುವ ಜೀವನದ ಪಯಣ ಕಠಿಣವೂ ದುರ್ಬಲವೂ ಆಗುತ್ತದೆ. ಆದ್ದರಿಂದ ಜೀವನದಲ್ಲಿ ಉಲ್ಲಾಸವು ಆಳವಾದ ಶ್ರದ್ಧೆಯ ಮೂಲವಾಗಬೇಕು. ಇದು ದಾರಿ ತೋರಿಸುವ ದೀಪದಂತೆ ಕೆಲಸ ಮಾಡುತ್ತದೆ. ಗೀತೆಯ ಸಂದೇಶ: ‘ಸಮತ್ವಂ ಯೋಗ ಉಚ್ಯತೇ’. ಸಮಚಿತ್ತತೆಯೆಂದರೆ ಮನಸ್ಸನ್ನು ಬದಲಾವಣೆಗಳಿಂದ ವಿಚಲಿತ ಮಾಡದ ಶಕ್ತಿ. ಆದರೆ ಈ ಸಮಚಿತ್ತತೆಯ ಹಿಂದಿರುವ ಶಕ್ತಿ ಉಲ್ಲಾಸ. ‘ಅನಂದೋ ಭವತಿ ವಿಜ್ಞಾನಾತ್’– ‘ಜ್ಞಾನದಿಂದ ಆನಂದ ಹುಟ್ಟುತ್ತದೆ’ ಎಂಬ ಮಾತಿದೆ. ಜ್ಞಾನವನ್ನು ಜೀವನದಲ್ಲಿ ಸಚೇತನಗೊಳಿಸಲು ಬೇಕು ಉಲ್ಲಾಸ.

ಶ್ರೀರಾಮಕೃಷ್ಣರು ತೋರಿದ ಭಕ್ತಿ ಮಾರ್ಗದಲ್ಲಿ ಉಲ್ಲಾಸ ಒಂದು ಮೂಲಭೂತವಾದ ಅಂಶ. ಅಲ್ಲಿ ಪೂಜೆಯೂ ಸಂಭ್ರಮ, ಸಂತೋಷ. ದೇವರಲ್ಲಿ ಭಯವಲ್ಲ, ಪ್ರೇಮ ಇರಬೇಕು. ಆ ಪ್ರೀತಿಯಂತೆ ಹರಿಯುವ ನಗುವೇ – ನಿಜವಾದ ಉಲ್ಲಾಸ. ನಗುವಲ್ಲಿ ಭಕ್ತಿ ಇದೆ, ಉಲ್ಲಾಸವಿದೆ, ಪ್ರಜ್ಞೆಯ ಶುದ್ಧತೆ ಇದೆ.

ಕುಣಿಯೋಣು ಬಾ! ಬೇಂದ್ರೆಯವರ ಕನ್ನಡದ ಜನಪ್ರಿಯ ‘ಕುಣಿಯೋಣು ಬಾ’ ಗೀತೆಯಲ್ಲಿ ಬರುವ ‘ಇದ್ದದ್ದು ಮರೆಯೋಣ, ಇಲ್ಲದ್ದು ತೆರೆಯೋಣ; ಹಾಲ್ಜೇನು ಸುರಿಯೋಣು, ಕುಣಿಯೋಣು ಬಾ!’ ಈ ಸಾಲುಗಳು ಬದುಕಿನ ಸಂಭ್ರಮಕ್ಕೆ, ಸಾಕ್ಷಿ. ಅದು ಬದುಕಿನ ಉಲ್ಲಾಸವನ್ನು ಎತ್ತಿಹಿಡಿಯುತ್ತದೆ. ಜೀವನದ ಹಿಂದಿನ ನೋವನ್ನು ಮರೆಯುವ ಶಕ್ತಿ, ಹೊಸದನ್ನು ಮೆಚ್ಚುವ ಭಾವನೆ – ಇವೆರಡೂ ಉಲ್ಲಾಸದಿಂದಲೇ ಸಾಧ್ಯ.

ಬದುಕನ್ನು ಹಬ್ಬದಂತೆ ಮಾಡುವ ಸಂಕಲ್ಪಕ್ಕೆ ಈ ಪದ್ಯ ಆಮಂತ್ರಣ.ಇರುವ ನೋವನ್ನು ಮರೆತು, ಬರುವ ಭಾಗ್ಯಗಳ ನೆನೆದು, ಹಾಲಿಗೆ ಜೇನನ್ನು ಸುರಿದಂತೆ ನಾನು-ನೀನುಗಳು ಸೇರಿ ತಾನಾಗುವ ತನನನದ ಅನಾಹತವನ್ನು, ಪ್ರೇಮವೇ ದೇವರೆಂಬ ಓಂಕಾರವನ್ನು ಸಾಕ್ಷಾತ್ಕರಿಸಿಕೊಳ್ಳುವ ಜೀವರಸಬಿಂಬವನ್ನು ಈ ಪದ್ಯದಲ್ಲಿ ಕಾಣಬಹುದು. ಆದುದರಿಂದ, ‘ಬಾ ಕುಣಿಯೋಣ’ ಎನ್ನುತ್ತಾರೆ, ವರಕವಿ.

ಶಿಕ್ಷಣದಲ್ಲಿ

ಇಂದಿನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಉದ್ಯೋಗಸ್ಥರಿಗೆ – ಎಲ್ಲರಿಗೂ ಕಾರ್ಯಕ್ಷಮತೆಯತ್ತ ಹೆಚ್ಚು ದೃಷ್ಟಿ ನೆಟ್ಟಿದೆ. ಬದುಕಿನ ಮೂಲಸತ್ವವೇ ಉಲ್ಲಾಸವೆನ್ನುವಾಗ ಶಿಕ್ಷಣದಲ್ಲಿ ಅದರ ಕೊರತೆಯನ್ನು ಸಹಿಸುವುದು ಹೇಗೆ? ತರಗತಿಗೊಬ್ಬ ಮಾನಸಿಕ ಸಲಹಾಗಾರರನ್ನು ನೇಮಿಸಿದರೂ ಪಠ್ಯದಲ್ಲಿ, ಪಾಠ ಮಾಡುವ ಕ್ರಮದಲ್ಲಿ ಉಲ್ಲಾಸ ಬೆರೆಯದಿದ್ದರೆ ಪ್ರಯೋಜನವಿಲ್ಲ. ನಕಾರಾತ್ಮಕ ಪಠ್ಯಗಳು, ನಕಾರಾತ್ಮಕ ವ್ಯಕ್ತಿಗಳು ಶಿಕ್ಷಣದ ಭಾಗವಾಗಬಾರದು. ಉಲ್ಲಾಸವಿಲ್ಲದ ಶಿಕ್ಷಣ ನಿರರ್ಥಕ. ಉಲ್ಲಾಸವಿಲ್ಲದ ಬೋಧನೆ ಒಣ ದನಿಯಂತೆ. ಒಂದು ನಗು, ಒಂದು ಶ್ಲೋಕ, ಒಂದು ಉತ್ಸಾಹದ ಕಣ್ಣ ಹೊಳಪು – ವಿದ್ಯಾರ್ಥಿಗಳ ಮನಸ್ಸಿಗೆ ಮುದ ನೀಡಬಹುದು. ತರಗತಿಯಲ್ಲಿ ಕನಿಷ್ಠ ಹದಿನೈದು ನಿಮಿಷಕ್ಕೊಮ್ಮೆ ನಗೆಯ ಬುಗ್ಗೆ ಏಳದಿದ್ದರೆ, ಗದ್ದಲ ಕೇಳಿಸದಿದ್ದರೆ ಅಲ್ಲಿ ಶಿಕ್ಷೆ ನಡೆಯುತ್ತಿದೆ, ಶಿಕ್ಷಣವಲ್ಲ ಎಂದು ತಿಳಿಯಬೇಕು.

ಹೊಸಹುಟ್ಟು

ಪ್ರತಿಯೊಂದು ಹಗಲೂ ಹೊಸಹುಟ್ಟು. ಉಲ್ಲಾಸದಿಂದ ಎದ್ದವನು ಗೆದ್ದ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡರೂ, ಉಲ್ಲಾಸವೊಂದನ್ನು ಉಳಿಸಿಕೊಂಡರೆ ಮನುಷ್ಯ ಮತ್ತೆ ಏಳಬಲ್ಲ. ಆದರೆ ಉಲ್ಲಾಸವಿಲ್ಲದೆ ಬೃಹತ್ ಸಂಪತ್ತು ಹೊಂದಿದ್ದರೂ ಅದು ನಿರರ್ಥಕ. ಬಾಳಿಗೆ ಉಲ್ಲಾಸ ಒಂದು ಅಗತ್ಯ ಆಹಾರ – ಆತ್ಮದ ತೃಪ್ತಿ, ಮನಸ್ಸಿನ ತಾಜಾ ಶಕ್ತಿ. ನಮ್ಮ ನಡೆ ಕುಣಿತವಾಗಬೇಕಾದರೆ ಮೊಗದಲ್ಲಿ ನಗು ಇರಬೇಕು, ನಗು ಇರಬೇಕಾದರೆ ಮನಸ್ಸಿನಲ್ಲಿ ಉಲ್ಲಾಸ ತುಂಬಿರಬೇಕು. ಜೀವನದ ಪ್ರತಿ ಕ್ರಿಯೆಯನ್ನು ಆನಂದಿಸಲು ಉಲ್ಲಾಸ ಬೇಕು; ಕೇವಲ ಪ್ರತಿಕ್ರಿಯಿಸಲು ಬರಡು ಮನಸ್ಸಿದ್ದರೆ ಸಾಕು. ಆಯ್ಕೆ ನಮ್ಮದು. ಬಾಳನ್ನು ನೃತ್ಯವಾಗಿಸಿ, ಮನಸ್ಸಿಗೆ ಉಲ್ಲಾಸ ನೀಡಿ, ನಗುವಿನ ನೆರಳು ಬೀರುವ ಉತ್ಸಾಹದ ಬೆಳಕನ್ನು ಹರಡೋಣ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.