ಶುಕ್ರವಾರ, ಮೇ 20, 2022
19 °C

ಆಧುನಿಕ ಪ್ರಪಂಚದ ಮಾನಸಿಕ ಸ್ವಾಸ್ಥ್ಯಕ್ಕೆ ಬೇಕು 'ಬಹುಪೀಳಿಗೆಯ ಬದುಕು': ಏನಿದು?

ಡಾ. ಸ್ಮಿತಾ ಜೆ.ಡಿ. Updated:

ಅಕ್ಷರ ಗಾತ್ರ : | |

ಆಧುನಿಕ ಬದುಕು, ವೃತ್ತಿಪರತೆ, ಸ್ವತಂತ್ರ ಜೀವನ, ಆರ್ಥಿಕ ಸ್ವಾತಂತ್ರ‍್ಯ ಇವೆಲ್ಲವೂ ಮಕ್ಕಳಿಗೆ ತಮ್ಮ ತಂದೆ ತಾಯಂದಿರ ಮೇಲಿನ ಅವಲಂಬನೆಯನ್ನು ಹಾಗೂ ಭಾವನಾತ್ಮಕ ಭಾಂದವ್ಯದ ಕೊರತೆಯನ್ನು ಮೂಡಿಸುತ್ತಿದೆ.

ಮಕ್ಕಳು ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಅಥವಾ ಸಮಾಜದಲ್ಲಿ ಅವರನ್ನು ಅಗಲಿ ವಿದೇಶಗಳಿಗೆ ಹೋಗುವ ಸಂದರ್ಭಗಳನ್ನು ನಾವು ಸಮಾಜದಲ್ಲಿ ಕಾಣುತ್ತಿದ್ದೇವೆ. ಅಂತೆಯೇ ಅನೇಕ ಪುಟ್ಟ ಮಕ್ಕಳು ತಮ್ಮ ತಂದೆ ತಾಯಂದಿರನ್ನು ಅಗಲಿ ಅನಾಥಾಶ್ರಮವನ್ನು ಸೇರುವ ಸಂದರ್ಭಗಳನ್ನು, ಅದರಲ್ಲಿಯೂ ಈ ಕೋವಿಡ್‌ನ ಸಂದರ್ಭದಲ್ಲಿ ಹೆಚ್ಚಾಗಿ ಕಂಡಿದ್ದೇವೆ. ಮಕ್ಕಳು ಹತ್ತಿರವಿಲ್ಲದೆ ಕೊರಗುವ ತಂದೆತಾಯಂದಿರಿಗೆ ಹಾಗೂ ತಂದೆತಾಯಂದಿರು ಇಲ್ಲದೆ ಕೊರಗುವ ಮಕ್ಕಳಿಗೆ ಆಶಾದೀಪವಾಗಬಹುದು ಈ ‘ಬಹುಪೀಳಿಗೆಯ ಬದುಕು’.

ಏನಿದು ಬಹುಪೀಳಿಗೆಯ ಬದುಕು?

ಮಕ್ಕಳ ಆಶ್ರಯವನ್ನು ತೊರೆದು ವೃದ್ಧಾಶ್ರಮಕ್ಕೆ ಬಂದ ತಂದೆ ತಾಯಂದಿರು ಹಾಗೂ ತಂದೆ ತಾಯಂದಿರ ಆಸರೆಯಿಲ್ಲದೆ ಉಳಿದಿರುವ ಅನಾಥಾಶ್ರಮವನ್ನು ಒಂದುಗೂಡಿಸುವ ಈ ಪರಿಕಲ್ಪನೆಯೇ ಬಹುಪೀಳಿಗೆಯ ಬದುಕು.
ಪ್ರಥಮವಾಗಿ ಕೆನಡಾ ದೇಶದಲ್ಲಿ ಉಗಮವಾದ ಈ ಪರಿಕಲ್ಪನೆ, ಈಗ ಭಾರತದಲ್ಲೂ ಪ್ರಚಲಿತವಾಗುತ್ತಿದೆ.

ದೆಹಲಿಯಲ್ಲಿನ ಕೆಲವು ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಸೇರಿ ಒಂದು ಆ್ಯಪ್‌ನ ಮೂಲಕ ಈ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅದನ್ನು ‘ಮೈತ್ರಿ’ ಎಂಬ ಹೆಸರಿನಲ್ಲಿ ನಾವು ಕಾಣಬಹುದಾಗಿದೆ.
ಆಸರೆಯಿಲ್ಲದ ಮಕ್ಕಳಿಗೆ ಹಾಗೂ ತಂದೆತಾಯಂದಿರ ಪೋಷಣೆಯಿಂದ ವಂಚಿತರಾದವರಿಗೆ ಈ ಪರಿಕಲ್ಪನೆಯಿಂದ ತಂದೆ ತಾಯಂದಿರ ಲಾಲನೆಪಾಲನೆಯ ಅನುಭವ ಹಾಗೂ ಬಾಂಧವ್ಯ ಮೂಡುತ್ತದೆ.

ಮಕ್ಕಳಿಂದ ದೂರಾದ ವೃದ್ಧರಿಗೆ ಮಕ್ಕಳು, ಕೂಡುವ ಆಟಪಾಠಗಳ ಅನುಭವವನ್ನು ಮೂಡಿಸುತ್ತದೆ.
ವೃದ್ಧರಲ್ಲಿ ಹಾಗೂ ಮಕ್ಕಳಲ್ಲಿನ ಮಾನಸಿಕ, ಆಂತರಿಕ, ಖಿನ್ನತೆಗಳು ದೂರವಾಗಿ ಆರೋಗ್ಯಕರ ವಾತಾವರಣ ಈ ಪರಿಕಲ್ಪನೆಯಿಂದ ಸೃಷ್ಟಿಯಾಗುತ್ತದೆ.

ವೃದ್ಧರಲ್ಲಿನ ಏಕಾಂಗಿತನ, ಏಕತಾನತೆ ದೂರವಾಗಿ ತಮ್ಮ ಕೊನೆಯ ದಿನಗಳನ್ನು ಆಹ್ಲಾದಕರವಾಗಿ ಕಳೆಯುವಂತಾಗುತ್ತದೆ. ಮಕ್ಕಳಿಗೂ ಸಹ ತಾತಾ ಅಜ್ಜಿಯರೊಂದಿಗೆ ಕಾಲಕಳೆಯುವ ಅನುಭವವನ್ನು ನೀಡುತ್ತದೆ.

ಆದ್ದರಿಂದ ಮಕ್ಕಳು ತಾವು ಬೆಳೆದ ಸ್ಥಳಗಳನ್ನು ತೊರೆದು ಜೀವನಕ್ಕಾಗಿ ನಗರ ಸೇರುವುದಿರಬಹುದು, ಜೀವನ ಶೈಲಿಯ ಬದಲಾವಣೆಗಳಿರಬಹುದು , ದೀರ್ಘಕಾಲದ ಕಾಯಿಲೆಯಿಂದ ಬಳಲುವ ಪೋಷಕರನ್ನು ನೋಡಿಕೊಳ್ಳಲಾಗದ ಪರಿಸ್ಥಿತಿಯಿರಬಹುದು, ಅಥವಾ ಹಿರಿಯರು ತಮ್ಮ ಧೋರಣೆಗಳನ್ನು ಬಿಟ್ಟು ಹೊಸತನಕ್ಕೆ ಹೊಂದಿಕೊಳ್ಳಲಾಗದ ಪರಿಸ್ಥಿತಿಯಿರಬಹುದು, ಆಧುನಿಕ ಮನೋಭಾವಕ್ಕೆ ಬದಲಾದ ಮಕ್ಕಳು, ಸೊಸೆಯರೊಂದಿಗೆ ಹೊಂದಿಕೊಳ್ಳಲಾಗದ ಮೊಂಡುತನವಿರಬಹುದು, ವಿವಿಧ ಮನಸ್ಥಿತಿಗಳನ್ನು ಅನುಸರಿಸಲಾಗದ ಪರಿಸ್ಥಿತಿಗಳಿರಬಹುದು ಈ ಎಲ್ಲಾ ಕಾರಣಗಳಿಂದ ದಿನದಿಂದ ದಿನಕ್ಕೆ ವೃದ್ಧಾಶ್ರಮಗಳ ಸಂಖ್ಯೆಯು ಏರುತ್ತಿದೆ. ಇದು ದೇಶದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಬಹುದಾಗಿದೆ. ಆದ್ದರಿಂದ ಮಾನಸಿಕ ಸ್ವಾಸ್ಥ್ಯಕ್ಕೆ ಹಾಗೂ ಸಹಬಾಳ್ವೆಗೆ ಬಹುಪೀಳಿಗೆಯ ಬದುಕು ಸಹಾಯವಾಗಲಿದೆ.

– ಲೇಖಕರು ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.