ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಕ್ಯಾನ್ಸರ್‌ ಜಾಗೃತಿ ದಿನ ನ.7; ಭಯ ಬೇಡ, ಅರಿವು ಮೂಡಿಸಿ

Last Updated 6 ನವೆಂಬರ್ 2020, 6:50 IST
ಅಕ್ಷರ ಗಾತ್ರ
ADVERTISEMENT
"ಡಾ.ಬಿ.ಆರ್‌.ಪಾಟೀಲ, ಕ್ಯಾನ್ಸರ್‌ ತಜ್ಞ, ಹುಬ್ಬಳ್ಳಿ"
"ಡಾ.ವಿನಯ್ ಮುತ್ತಿಗೆ, ಹುಬ್ಬಳ್ಳಿ"
"ರವೀಂದ್ರ ಹೊಂಬಳ, ಗ್ರಾಮ ಶಿಕ್ಷಣ ಚಾರಿಟಿ ಫೌಂಡೇಷನ್‌ ಮುಖ್ಯ ಟ್ರಸ್ಟಿ, ಹುಬ್ಬಳ್ಳಿ"

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಪ್ರತಿ ವರ್ಷ ನವೆಂಬರ್‌ 7ರಂದು ಆಚರಿಸಲಾಗುತ್ತಿದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹಾಗೂ ಈ ರೋಗವನ್ನು ನಿರ್ಲಕ್ಷ್ಯ ಮಾಡದೇ ಹೇಗೆ ನಿಭಾಯಿಸಬೇಕು, ರೋಗ ಲಕ್ಷಣಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲುಈ ದಿನ ಆಚರಿಸಲಾಗುತ್ತಿದೆ. ವಿಶೇಷವಾಗಿ ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಕುರಿತು ಜಾಗೃತಿ, ಉಚಿತ ಕ್ಯಾಂಪ್‌ಗಳ ಆಯೋಜನೆ, ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಗುರುತಿಸುವಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ...

‘ಕ್ಯಾನ್ಸರ್‌’ ಅಥವಾ ಕನ್ನಡದಲ್ಲಿ ಅರ್ಬುದ ರೋಗ...
–ಸದಾಕಾಲ ಎಲ್ಲರನ್ನೂ ಕಾಡುವ/ಕಾಡಿಸುವ ಪದವಿದು. ಕ್ಯಾನ್ಸರ್ ಕಾಣಿಸಿಕೊಂಡರೆ ಸಾವು ಬದುಕಿನ ನಡುವಿನ ಹೋರಾಟವೆಂದೇ ಬಿಂಬಿತವಾಗಿರುವುದರಿಂದ ಹಾಗೂ ಬಹಳಷ್ಟು ಸಲ ಅದರಿಂದ ಹೊರಬರುವುದು ಕಷ್ಟಸಾಧ್ಯವಾಗಿರುವುದರಿಂದ ಈಗಲೂ ಜನಮಾನಸದಲ್ಲಿ ಅದೊಂದು ಭಯಾನಕ ರೋಗ/ಕಣ್ಮುಂದೆ ಸಾವಿನ ನರ್ತನ. ಕ್ಯಾನ್ಸರ್‌ ಆರಂಭಿಕ ಹಂತದಲ್ಲಿದ್ದರೆ ಗುಣಪಡಿಸಬಹುದಾದ ಕಾಯಿಲೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಮನುಷ್ಯ ಸಹಜ ಭಯದಿಂದಾಗಿ ಯಾರು ಏನೇ ಹೇಳಿದರೂ ಅದರಿಂದ ಹೊರಬರುವುದು ಅಷ್ಟು ಸುಲಭವೇನಲ್ಲ.

ಅಷ್ಟಕ್ಕೂ ವೈದ್ಯಕೀಯ ಭಾಷೆಯಲ್ಲಿ ಕ್ಯಾನ್ಸರ್‌ ಎಂದರೆ ಬೇರೇನೂ ಅಲ್ಲ. ದೇಹದಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆ. ಬಳಿಕ ದೇಹದ ಇತರ ಕೋಶಗಳ ಮೇಲೂ ಆಕ್ರಮಣ ಮಾಡಿ ತನ್ನ ತೆಕ್ಕೆಯೊಳಗೆ ತೆಗೆದುಕೊಂಡು ಪರಿಣಾಮ ಬೀರುವ ವ್ಯಾಧಿ. ಹೃದ್ರೋಗದ ಬಳಿಕ ಅತಿ ಹೆಚ್ಚು ಜನರು ಸಾವಿಗೀಡಾಗುವುದು ಕ್ಯಾನ್ಸರ್‌ ನಿಂದ ಎನ್ನಲಾಗುತ್ತಿದೆ. ವೈದ್ಯಲೋಕದ ಮಾಹಿತಿಯ ಪ್ರಕಾರ ನಮ್ಮ ದೇಶದಲ್ಲಿ ವರ್ಷಕ್ಕೆ 10 ಲಕ್ಷ ಜನರು ಕ್ಯಾನ್ಸರ್‌ ತುತ್ತಾಗುತ್ತಿದ್ದಾರೆ. 2.25 ಕೋಟಿ ಮಂದಿ ಕ್ಯಾನ್ಸರ್‌ನೊಂದಿಗೆ ಜೀವಿಸುತ್ತಿದ್ದಾರೆ. ಪ್ರತಿ ಎಂಟು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೋಶ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾಳೆ. ತಂಬಾಕು ಸೇವನೆಯಿಂದಾಗಿ ಉಂಟಾಗುವ ಕ್ಯಾನ್ಸರ್‌ಗೆ ಪ್ರತಿದಿನ 3,500 ಮಂದಿ ಸಾವನ್ನಪ್ಪುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ ಹಾಗೂ ಗರ್ಭಕೋಶದ ಕ್ಯಾನ್ಸರ್‌ ಬಹಳಷ್ಟು ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇವುಗಳಿಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡಿದಲ್ಲಿ ಗುಣವಾಗುವ ಪ್ರಮಾಣ ಅಧಿಕ. ಹೀಗಾಗಿ ಜನಜಾಗೃತಿ ಮುಖ್ಯ ಎನ್ನುತ್ತಾರೆ ವೈದ್ಯರು.

ಕೊರೊನಾ ಇದೆ, ಕ್ಯಾನ್ಸರೂ ಇದೆ; ಕಡೆಗಣಿಸಬೇಡಿ...

’‘ಇತ್ತೀಚಿನ ಜೀವನಶೈಲಿಯಿಂದಾಗಿ ಕ್ಯಾನ್ಸರ್‌ ಹೆಚ್ಚುತ್ತಿದ್ದೆ. ಎಲ್ಲರಿಗೂ ಈ ರೋಗದ ಬಗ್ಗೆ ಅರಿವು ಬೇಕಾಗಿದೆ. ಅಷ್ಟೇ ಅಲ್ಲ, ಈಗಂತೂ ಎಲ್ಲೆಡೆ ಕೊರೊನಾ ಇದೆ. ಹಾಗಂತ ಕ್ಯಾನ್ಸರ್‌ ಅನ್ನು ಕಡೆಗಣಿಸಬೇಡಿ. ಮಾಸ್ಕ್‌ ಹಾಕಿಕೊಂಡು, ಅಂತರ ಕಾಪಾಡಿಕೊಂಡು ವೈದ್ಯರ ಬಳಿಗೆ ಬನ್ನಿ. ಬಹಳಷ್ಟು ಜನರು ಕೊರೊನಾ ಕಾರಣದಿಂದ ವೈದ್ಯರ ಬಳಿಗೆ ತಪಾಸಣೆಗೆ ಬರದೇ ಕೊನೆಯ ಹಂತದಲ್ಲಿ ನಮ್ಮ ಬಳಿಗೆ ಬರುತ್ತಿದ್ದಾರೆ. ಇದು ಸರಿಯಲ್ಲ’ ಎನ್ನುತ್ತಾರೆ ಹುಬ್ಬಳ್ಳಿ ನವನಗರದ ಕರ್ನಾಟಕ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಹಾಗೂ ಕ್ಯಾನ್ಸರ್ ತಜ್ಞ ಡಾ. ಬಿ.ಆರ್‌.ಪಾಟೀಲ.

ಡಾ. ಬಿ.ಆರ್‌.ಪಾಟೀಲ

ಮುಖ್ಯವಾಗಿ ದೇಹದ ಯಾವುದಾದರೂ ಭಾಗದಲ್ಲಿ ಗಂಟು, ನೋವಿಲ್ಲದೇ ರಕ್ತಸ್ರಾವ, ನಿರಂತರ ಕೆಮ್ಮು, ನುಂಗುವಾಗ ಕಷ್ಟವಾಗುವುದು ಇವು ಕ್ಯಾನ್ಸರ್‌ನ ಆರಂಭಿಕ ಹಂತಗಳಾಗಿವೆ. ಹೀಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ತಡಮಾಡದೇ ವೈದ್ಯರನ್ನು ಕಾಣಬೇಕು. ಇದಕ್ಕೆ ಹೆದರಿಕೊಂಡು ವಿಳಂಬ ಮಾಡಬಾರದು. ಈ ಬಗ್ಗೆ ಜನಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ಅವರು.

ಕ್ಯಾನ್ಸರ್‌: ಭಯವೇ ಹೆಚ್ಚು...

‘ಕ್ಯಾನ್ಸರ್‌ ಬಗ್ಗೆ ಜನಸಾಮಾನ್ಯರ ಜೊತೆಗೆ ವೈದ್ಯಕೀಯ ಕ್ಷೇತ್ರದಲ್ಲಿಯೂ ಜಾಗೃತಿ ಕಡಿಮೆ ಇದೆ. ಅಂಕಾಲಜಿಯಲ್ಲಿ ಕೆಲಸ ಮಾಡುವ ವೈದ್ಯರ ಹೊರತಾಗಿ ಇತರೆ ವಿಭಾಗಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ರೋಗಿಯೊಬ್ಬರಿಗೆ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್‌ ಇದೆ ಎನ್ನುವುದನ್ನು ಪತ್ತೆ ಮಾಡಲು ಸಾಧ್ಯವಾದಾಗ ನಾವು ಗೆದ್ದೆವು ಎನ್ನಬಹುದು‘ ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಸಿಜಿ ಎನ್ಎಂಆರ್ ಕ್ಯಾನ್ಸರ್ ಸೆಂಟರ್‌ ತಜ್ಞ ಡಾ.ವಿನಯ ಮುತ್ತಗಿ ಅವರು.

ಡಾ.ವಿನಯ ಮುತ್ತಗಿ

ವೈದ್ಯಕೀಯ ಕ್ಷೇತ್ರ ಎಷ್ಟೇ ಮುಂದುವರಿದರೂ ಕೂಡ ಈಗಲೂ ವೈದ್ಯರಿಗೆ ಕೂಡ ಕ್ಯಾನ್ಸರ್‌ ಅಂದರೆ ಭಯವಿದೆ. ಜನಸಾಮಾನ್ಯರಿಗಂತೂ ಕ್ಯಾನ್ಸರ್‌ ಅಂದರೆ ಸಾವು ಕಣ್ಣಮುಂದೆ. ವಿಜ್ಞಾನ ಮುಂದುವರಿದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ. ಕ್ಯಾನ್ಸರ್‌ ಕುರಿತು ಭಯವೇ ಹೆಚ್ಚು; ಅರಿವು ಕಡಿಮೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ ಪತ್ತೆಯಾದರೆ ಗುಣವಾಗುವ ಪ್ರಮಾಣ ಹೆಚ್ಚು. ಹೀಗಾಗಿ ಜನರಲ್ಲಿ ಕ್ಯಾನ್ಸರ್‌ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅವಶ್ಯಕತೆಯಿದೆ‘ ಎಂದು ಅವರು ಹೇಳುತ್ತಾರೆ.

ವಿಶೇಷವಾಗಿ ಹುಬ್ಬಳ್ಳಿ–ಧಾರವಾಡದಲ್ಲಿ ಎರಡು ವೈದ್ಯಕೀಯ ಕಾಲೇಜುಗಳಿವೆ. ಆದರೂ ಕೂಡ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜನರ ಪ್ರಮಾಣ ಕಡಿಮೆ. ಬಾಯಿ ಕ್ಯಾನ್ಸರ್‌ ಹಾಗೂ ಅನ್ನನಾಳದ ಕ್ಯಾನ್ಸರ್‌ ಈ ಭಾಗದಲ್ಲಿ ಹೆಚ್ಚು. ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್‌ ಸೇವನೆ ಬಾಯಿ ಕ್ಯಾನ್ಸರ್ ಬರುವುದಕ್ಕೆ ಕಾರಣ. ಇನ್ನು ಅತಿಯಾದ ಖಾರದ ಸೇವನೆಯಿಂದ ಅನ್ನನಾಳದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಭಾಗದಲ್ಲಿ ಇವೆರಡೂ ಹೆಚ್ಚು ಎನ್ನುತ್ತಾರೆ ವೈದ್ಯರು.

ಧೈರ್ಯ ತುಂಬುವ ಕೆಲಸ ಅತ್ಯಗತ್ಯ...

ಹುಬ್ಬಳ್ಳಿಯಲ್ಲಿ ‘ಗ್ರಾಮ ಶಿಕ್ಷಣ ಚಾರಿಟಿ ಫೌಂಡೇಷನ್‌’ ಎಂಬ ಸ್ವಯಂಸೇವಾ ಸಂಸ್ಥೆಯಿದ್ದು ಕ್ಯಾನ್ಸರ್‌ ಜಾಗೃತಿ ಕೆಲಸದಲ್ಲಿ ತೊಡಗಿಕೊಂಡು ದಶಕಗಳು ಕಳೆದಿವೆ. ಕ್ಯಾನ್ಸರ್ ಬಗ್ಗೆ ತಿಳಿವಳಿಕೆ, ಉಚಿತ ತಪಾಸಣೆ, ಅವುಗಳ ಪತ್ತೆ, ಕ್ಯಾನ್ಸರ್‌ ಲಕ್ಷಣಗಳು ಕಂಡು ಬಂದಲ್ಲಿ ಅಗತ್ಯ ಸ್ಕ್ಯಾನಿಂಗ್‌, ಸ್ಕ್ರೀನಿಂಗ್‌ ಟೆಸ್ಟ್‌, ಬಯಾಪ್ಸಿ, ಅಗತ್ಯ ಚಿಕಿತ್ಸೆವರೆಗೂ ಮಾಹಿತಿ ನೀಡುವುದರ ಜೊತೆಗೆ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಈ ಸಂಸ್ಥೆ ರಾಜ್ಯವ್ಯಾಪಿ ಮಾಡುತ್ತ ಬಂದಿದೆ.

ರವೀಂದ್ರ ಹೊಂಬಳ, ಗ್ರಾಮ ಶಿಕ್ಷಣ ಚಾರಿಟಿ ಫೌಂಡೇಷನ್‌ ಮುಖ್ಯ ಟ್ರಸ್ಟಿ, ಹುಬ್ಬಳ್ಳಿ


‘ಕೋವಿಡ್‌ ನಿಂದಾಗಿ ನಾವು ಬಹಳಷ್ಟು ಕಾರ್ಯಕ್ರಮಗಳನ್ನು ಮಾಡಲಾಗುತ್ತಿಲ್ಲ. ಎಸ್‌ಡಿಎಂ ಮತ್ತು ಕಿಮ್ಸ್‌ನಲ್ಲಿರುವ ಸ್ನಾತಕೋತ್ತರರನ್ನು ಕರೆದುಕೊಂಡು ಹೋಗಿ ತರಬೇತಿ ನೀಡುತ್ತಿದ್ದೆವು. ರಾಜ್ಯವ್ಯಾಪಿ ಸುಮಾರು 16 ವೈದ್ಯಕೀಯ ಕಾಲೇಜಿನ ನೆರವು ಪಡೆದಿದ್ದೇವೆ. ಸ್ಥಳೀಯ ಎನ್‌ಜಿಒ ಗಳಿಂದ ಹಳ್ಳಿ ಹಳ್ಳಿಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆದರೆ ಈ ಬಾರಿ ಬಹಳಷ್ಟು ಕೆಲಸ ಮಾಡಲು ಸಾಧ್ಯವಾಗಿಲ್ಲ. ಕ್ಯಾನ್ಸರ್‌ ಸದಾಕಾಲವೂ ಜನರನ್ನು ಹೆದರಿಸುವ ರೋಗವೇ. ಹೀಗಾಗಿ ಧೈರ್ಯ ತುಂಬುವುದರೊಂದಿಗೆ, ಜನಜಾಗೃತಿ ಮೂಡಿಸುವುದು ಬಹಳ ಅಗತ್ಯವಾಗಿದೆ’ ಎಂದು ಗ್ರಾಮ ಶಿಕ್ಷಣ ಚಾರಿಟಿ ಫೌಂಡೇಷನ್‌ ಮುಖ್ಯ ಟ್ರಸ್ಟಿ ರವೀಂದ್ರ ಹೊಂಬಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT